ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಿನಾರರ ಮಗಳೇ ತಂದೆಯ ಕೊಂದಳು: ‘ಅಪ್ಪ ಅಲ್ಲ, ವೈರಿ ಕೊಂದಿದ್ದೇನೆ, ನಿಮಗೇನು?’

ವ್ಯಾಪಾರಿ ಹತ್ಯೆ ಪ್ರಕರಣ l ಬಾಲಕಿ, ಆಕೆಯ ಪ್ರಿಯಕರ ಬಂಧನ
Last Updated 20 ಆಗಸ್ಟ್ 2019, 4:45 IST
ಅಕ್ಷರ ಗಾತ್ರ

ಬೆಂಗಳೂರು: ರಾಜಾಜಿನಗರದ ಬಟ್ಟೆ ವ್ಯಾಪಾರಿ ಜೈಕುಮಾರ್ ಜೈನ್ (40) ಅವರನ್ನು ಹದಿನಾರರ ಹರೆಯದ ಮಗಳೇ ತನ್ನ ಪ್ರಿಯಕರನ ಜೊತೆ ಸೇರಿ ಬರ್ಬರವಾಗಿ ಹತ್ಯೆ ಮಾಡಿರುವ ಸಂಗತಿ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

‘ದಿಲೀಪ್ ಅಪೇರಲ್ಸ್’ ಹೋಲ್‌ಸೇಲ್ ಬಟ್ಟೆ ಅಂಗಡಿ ಮಾಲೀಕ ಜೈಕುಮಾರ್ ಶವ ಮನೆಯ ಶೌಚಾಲಯದಲ್ಲಿ ಅರೆ ಸುಟ್ಟ ಸ್ಥಿತಿಯಲ್ಲಿ ಶನಿವಾರ ರಾತ್ರಿ ಪತ್ತೆಯಾಗಿತ್ತು. ಚುರುಕಿನ ತನಿಖೆ ಕೈಗೊಂಡು, ಜೈಕುಮಾರ್ ಮಗಳು ಹಾಗೂ ಆಕೆಯ ಪ್ರಿಯಕರ ರಾಜಾಜಿನಗರದ ಒಂದನೇ ಹಂತದ ನಿವಾಸಿ ಪ್ರವೀಣ್ (19) ಎಂಬಾತನನ್ನು ಬಂಧಿಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದರು.

‘ಪ್ರವೀಣ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ಕೋರಲಿದ್ದೇವೆ. ಮಗಳನ್ನು ಬಾಲ ನ್ಯಾಯಮಂಡಳಿ ಎದುರು ಹಾಜರುಪಡಿಸುತ್ತೇವೆ’ ಎಂದರು.

‘ಬಾಲಕಿಯು 10ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಪ್ರವೀಣ್ ಬಿ.ಕಾಂ ಮೊದಲ ವರ್ಷದ ವಿದ್ಯಾರ್ಥಿ. ಒಂದೇ ಶಾಲೆಯಲ್ಲಿ ಓದಿದ್ದಇಬ್ಬರೂ ಇತ್ತೀಚಿನ ದಿನಗಳಲ್ಲಿ ಪರಸ್ಪರ ಪ್ರೀತಿಸಲಾರಂಭಿಸಿದ್ದರು. ಸಲುಗೆಯಿಂದ ಇದ್ದ ಅವರು ಎಲ್ಲೆಂದರಲ್ಲಿ ಸುತ್ತಾಡುತ್ತಿದ್ದರು. ಅದು ಗೊತ್ತಾಗುತ್ತಿದ್ದಂತೆ ಜೈಕುಮಾರ್, ಮಗಳಿಗೆ ಬುದ್ಧಿವಾದ ಹೇಳಿದ್ದರು’ ಎಂದು ಮಾಹಿತಿ ನೀಡಿದರು.

‘ಪ್ರವೀಣ್ ಜೊತೆ ಓಡಾಡದಂತೆ, ಮನೆಯಲ್ಲೇ ಕುಳಿತು ಅಭ್ಯಾಸ ಮಾಡುವಂತೆಯೂ ಹೇಳಿದ್ದರು. ಅಷ್ಟಕ್ಕೇ ಸಿಟ್ಟಾಗಿದ್ದ ಮಗಳು, ಸಂಚು ರೂಪಿಸಿ ಪ್ರಿಯಕರನ ಜೊತೆ ಸೇರಿ ತಂದೆಯನ್ನು ಕೊಂದಿದ್ದಾಳೆ’ ಎಂದು ವಿವರಿಸಿದರು.

ನಿದ್ದೆ ಮಾತ್ರೆ ಬೆರೆಸಿದ್ದ ಜ್ಯೂಸ್ ಕುಡಿಸಿದ್ದಳು: ‘ಪ್ರವೀಣ್‌ನನ್ನು ಕದ್ದುಮುಚ್ಚಿ ಭೇಟಿಯಾಗುತ್ತಿದ್ದ ಬಾಲಕಿ, ‘ತಂದೆವಿಪರೀತ ಕಿರುಕುಳ ನೀಡುತ್ತಿದ್ದಾನೆ. ಮೊಬೈಲ್ ಸಹ ಕಿತ್ತುಕೊಂಡಿದ್ದಾನೆ. ಆತನನ್ನು ಮುಗಿಸಲೇಬೇಕು. ಆ ರೀತಿ ಮಾಡಿದರೆ ಮಾತ್ರ ನಾವಿಬ್ಬರೂ ಎಲ್ಲೆಂದರಲ್ಲಿ ಸುತ್ತಾಡಬಹುದು’ ಎಂದು ಹೇಳಿದ್ದಳು. ಅದಕ್ಕೆ ಪ್ರವೀಣ್ ಸಹ ಒಪ್ಪಿದ್ದ. ಬಳಿಕ ಮಗಳೇ ಕೊಲೆಗೆ ಸಂಚು ರೂಪಿಸಿದ್ದಳು’ ಎಂದು ಪೊಲೀಸರು ಹೇಳಿದರು.

‘ತಾಯಿ ಹಾಗೂ ತಮ್ಮ ಪುದುಚೇರಿಗೆ ಹೊರಡುವುದು ಬಾಲಕಿಗೆ ಮೊದಲೇ ಗೊತ್ತಿತ್ತು. ತಾನು ಹಾಗೂ ತಂದೆ ಮನೆಯಲ್ಲಿದ್ದ ವೇಳೆ ಕೊಲೆ ಮಾಡೋಣವೆಂದು ಸ್ನೇಹಿತನಿಗೆ ಹೇಳಿದ್ದಳು. ಆತನ ಜೊತೆಗೆ ಮಾಗಡಿ ರಸ್ತೆಯಲ್ಲಿರುವ ಔಷಧಿ ಅಂಗಡಿಗೆ ಹೋಗಿ ನಿದ್ದೆ ಮಾತ್ರೆ ಖರೀದಿಸಿ ಮನೆಯಲ್ಲಿ ತಂದಿಟ್ಟುಕೊಂಡಿದ್ದಳು’ ಎಂದರು.

‘ಶನಿವಾರ ಬೆಳಿಗ್ಗೆಯೇ ತಾಯಿ–ತಮ್ಮನನ್ನು ರೈಲಿಗೆ ಹತ್ತಿಸಿ ವಾಪಸ್ ಬಂದಿದ್ದಳು. ರಾತ್ರಿ ಕೆಲಸ ಮುಗಿಸಿ ಜೈಕುಮಾರ್ ಮನೆಗೆ ಬಂದಿದ್ದರು. ಊಟದ ನಂತರಮಗಳೇ ಅವರಿಗೆ ನಿದ್ದೆ ಮಾತ್ರೆ ಬೆರೆಸಿದ್ದಜ್ಯೂಸ್‌ ಕುಡಿಸಿದ್ದಳು’ ಎಂದು ಪೊಲೀಸರುವಿವರಿಸಿದರು.

ಜೈಕುಮಾರ್
ಜೈಕುಮಾರ್

ಚಾಕುವಿನಿಂದ 25 ಬಾರಿ ಇರಿದರು: ‘ಜೈಕುಮಾರ್‌ ಮಲಗಿದ ಎರಡು ಗಂಟೆಬಳಿಕ ಪ್ರವೀಣ್‌ನನ್ನು ಮನೆಗೆ ಕರೆಸಿಕೊಂಡಿದ್ದಳು. ತಂದೆಯ ಹೊಟ್ಟೆ ಮೇಲೆಕುಳಿತು, ತಾನೇ ಮೊದಲಿಗೆ ಚಾಕುವಿನಿಂದ ಕತ್ತು ಹಾಗೂ ಬಾಯಿಗೆ ಇರಿದಿದ್ದಳು’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಇಬ್ಬರೂ ಸೇರಿಕೊಂಡು ದೇಹದ 25 ಕಡೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಂದಿದ್ದಾರೆ. ಆರೋಪಿಗಳ ಬಟ್ಟೆಗೂ ಹಾಗೂ ಗೋಡೆಗೂರಕ್ತದ ಕಲೆಗಳು ಸಿಡಿದಿದ್ದವು. ಜೈಕುಮಾರ್ ಮೃತಪಟ್ಟಿದ್ದನ್ನು ಖಾತ್ರಿಪಡಿಸಿಕೊಂಡ ಆರೋಪಿಗಳು, ಶವವನ್ನು ಎಳೆದೊಯ್ದು ಶೌಚಾಲಯದಲ್ಲಿ ಹಾಕಿದ್ದರು’.

‘ಮನೆಯಲ್ಲಿದ್ದ ಎರಡು ನೀರಿನ ಬಾಟಲಿಯನ್ನು ತೆಗೆದುಕೊಂಡು ಹೋಗಿದ್ದ ಪ್ರವೀಣ್, ಅವುಗಳಲ್ಲೇ ಪೆಟ್ರೋಲ್ ತಂದಿದ್ದ. ಇಬ್ಬರೂ ಸೇರಿಯೇ ಶವದ ಮೇಲೆ ಪೆಟ್ರೋಲ್ ಸುರಿದು ಬೆಂಕಿಹಚ್ಚಿದ್ದರು. ಅದೇ ವೇಳೆ ಆರೋಪಿಗಳಿಗೂ ಬೆಂಕಿ ತಗುಲಿ ಸಣ್ಣ ಗಾಯವೂ ಆಗಿತ್ತು’ ಎಂದರು.

‘ಮನೆಯ ಚಾವಣಿಗೆ ಹೋಗಿದ್ದ ಬಾಲಕಿ, ‘ಕಾಪಾಡಿ... ಕಾಪಾಡಿ... ಬೆಂಕಿ... ಬೆಂಕಿ..’ ಎಂದು ಕೂಗಾಡಿದ್ದಳು. ಸಹಾಯಕ್ಕೆ ಹೋದ ಸ್ಥಳೀಯರು ಬಾಲಕಿಯನ್ನು ಆಸ್ಪತ್ರೆಗೆ ಕಳುಹಿಸಿದ್ದರು.

‘ಕೃತ್ಯ ನಡೆದ ಸ್ಥಳ ಪರಿಶೀಲನೆ ನಡೆಸಿದಾಗ, ಇದೊಂದು ಕೊಲೆ ಎಂಬುದು ಗೋಚರಿಸುತ್ತಿತ್ತು. ಆದರೆ, ಯಾರು ಮಾಡಿದ್ದು ಎಂಬುದು ಮಾತ್ರ ನಿಗೂಢವಾಗಿತ್ತು’ ಎಂದು ಡಿಸಿಪಿ ಶಶಿಕುಮಾರ್ ಹೇಳಿದರು.

‘ಕೊಠಡಿಯಲ್ಲೆಲ್ಲ ರಕ್ತದ ಕಲೆಗಳಿದ್ದವು. ಮಗಳ ಕೈ ಮೇಲೂ ಗಾಯದ ಗುರುತುಗಳಿದ್ದವು. ಹೀಗಾಗಿ, ಆಕೆ ಮೇಲೆಯೇ ಅನುಮಾನ ಇತ್ತು. ತಂದೆಯೇ ಬೆಂಕಿ ಹಚ್ಚಿಕೊಂಡು ಮೃತಪಟ್ಟಿದ್ದಾರೆ ಎಂದು ಮಗಳು ಹೇಳಿದ್ದಳು.ಗಂಟೆ ಬಳಿಕ ಹೇಳಿಕೆ ಬದಲಿಸಿ, ರಾತ್ರಿ ಸ್ನೇಹಿತರೊಬ್ಬರ ಜೊತೆ ತಂದೆ ಮನೆಗೆ ಬಂದಿದ್ದರು. ಇಬ್ಬರೂ ಪಾರ್ಟಿ ಮಾಡಿದ್ದರು. ಅವರ ಮೇಲೆ ಅನುಮಾನವಿದೆ ಎಂಬುದಾಗಿಯೂ ಹೇಳಿದ್ದಳು.’

‘ಸ್ನೇಹಿತರನ್ನು ವಿಚಾರಿಸಿದಾಗ ಯಾವುದೇ ಸುಳಿವು ಸಿಗಲಿಲ್ಲ. ನಂತರ, ಬಾಲಕಿಯ ಪ್ರಿಯಕರನ ಬಗ್ಗೆ ಮಾಹಿತಿ ಸಿಕ್ಕಿತ್ತು. ಅದನ್ನೇ ಬಳಸಿಕೊಂಡು ಬಾಲಕಿಯನ್ನು ವಿಚಾರಿಸಿದಾಗ ತಪ್ಪೊಪ್ಪಿಕೊಂಡಳು’ ಎಂದು ಶಶಿಕುಮಾರ್ ಹೇಳಿದರು.

‘ತಂದೆಯಲ್ಲ, ವೈರಿ ಕೊಂದಿದ್ದೇನೆ, ನಿಮಗೇನು?’–ಪೊಲೀಸರಿಗೇ ಪ್ರಶ್ನೆ

‘ನನ್ನ ತಂದೆಯನ್ನು ನಾನು ಕೊಂದಿದ್ದೇನೆ. ನಿಮಗೇನು’ ಎಂದು ಪೊಲೀಸರನ್ನೇ ಪ್ರಶ್ನಿಸಿದ್ದ ಬಾಲಕಿ, ‘ಆತ ತಂದೆಯಲ್ಲ, ವೈರಿ. ನನ್ನ ಸ್ವಾತಂತ್ರ್ಯವನ್ನೇ ಕಿತ್ತುಕೊಂಡಿದ್ದ. ಹೀಗಾಗಿಯೇ ಆತನನ್ನು ಕೊಂದೆ’ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ. ‘ಸ್ನೇಹಿತರನ್ನು ಭೇಟಿಯಾಗಲು, ಅವರ ಜೊತೆ ಮಾರುಕಟ್ಟೆಗೆ ಹೋಗಲು ಬಿಡುತ್ತಿರಲಿಲ್ಲ. ಪ್ರತಿ ಬಾರಿಯೂ ಅನುಮಾನದಿಂದಲೇ ನೋಡುತ್ತಿದ್ದರು. ಇತ್ತೀಚೆಗೆ ಮೊಬೈಲ್ ಸಹ ಕಸಿದುಕೊಂಡು ಮುಚ್ಚಿಟ್ಟಿದ್ದರು. ಅದನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆಯೇ ಹಲ್ಲೆ ಮಾಡಿದ್ದರು’ ಎಂದು ಆಕೆ ತಿಳಿಸಿರುವುದಾಗಿ ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT