ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂವರಿಗೆ ಡಿಸಿಎಂ ಪಟ್ಟ? ಈಶ್ವರಪ್ಪ, ಕಾರಜೋಳ, ಅಶ್ವತ್ಥನಾರಾಯಣಗೆ ಸ್ಥಾನ

Last Updated 24 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಕಟ್ಟಿಹಾಕಲು ಮುಂದಾಗಿರುವ ಬಿಜೆಪಿ ವರಿಷ್ಠರು ಮೂರು ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಸುವಂತೆ ಕಟ್ಟಪ್ಪಣೆ ವಿಧಿಸಿದ್ದಾರೆ.

ಸಚಿವರಾಗಿರುವ ಗೋವಿಂದ ಕಾರಜೋಳ, ಕೆ.ಎಸ್‌. ಈಶ್ವರಪ್ಪ ಹಾಗೂ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಸದ್ಯದ ಲೆಕ್ಕಾಚಾರದಂತೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ಗಿಟ್ಟಿಸಲಿದ್ದಾರೆ.

ವರಿಷ್ಠರನ್ನು ನವದೆಹಲಿಯಲ್ಲಿ ಯಡಿಯೂರಪ್ಪ ಶುಕ್ರವಾರ ಭೇಟಿಯಾದ ವೇಳೆ, ಈ ಪ್ರಸ್ತಾವವನ್ನು ಮುಂದಿಡಲಾಯಿತು. ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಗೆ ಯಡಿಯೂರಪ್ಪ ಒಪ್ಪಲಿಲ್ಲ. ಪಕ್ಷದ ನಿರ್ದೇಶನ ಪಾಲಿಸಲೇಬೇಕು ಎಂಬ ಸೂಚನೆ ನೀಡಲಾಯಿತು ಎಂದು ಬಿಜೆಪಿ ಮೂಲಗಳು ಹೇಳಿವೆ.

ಆದರೆ, ವರಿಷ್ಠರು ಸೂಚಿಸಿದ ಪಟ್ಟಿಯಲ್ಲಿ ಲಕ್ಷ್ಮಣ ಸವದಿ ಹೆಸರಿತ್ತು. ‘ಸವದಿ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿರುವುದಕ್ಕೆ ಅಸಮಾಧಾನ ಕುದಿಯುತ್ತಿದೆ. ಅವರನ್ನು ಉಪಮುಖ್ಯಮಂತ್ರಿ ಮಾಡಿದರೆ ಸರ್ಕಾರ ನಡೆಸುವುದು ಕಷ್ಟ’ ಎಂದು ಯಡಿಯೂರಪ್ಪ ಪ್ರತಿಪಾದಿಸಿದರು. ಆಗ, ತಮ್ಮ ಆಪ್ತ ಕೆ.ಎಸ್.ಈಶ್ವರಪ್ಪ ಹೆಸರನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮುಂದಿಟ್ಟರು. ಇದನ್ನು ಯಡಿಯೂರಪ್ಪ ಒಪ್ಪಿಕೊಂಡರು.

ತಮಗೂ ಉಪ ಮುಖ್ಯಮಂತ್ರಿ ಸ್ಥಾನ ಬೇಕು ಎಂದು ಜಗದೀಶ ಶೆಟ್ಟರ್, ಬಿ.ಶ್ರೀರಾಮುಲು ಬೇಡಿಕೆ ಮಂಡಿಸಿದ್ದಾರೆ. ಇದು ಪಕ್ಷ ಹಾಗೂ ಸಚಿವ ಸಂಪುಟದಲ್ಲಿ ಗೊಂದಲ ಸೃಷ್ಟಿಸಿದೆ.

‘ಇಂಧನ ಖಾತೆ ಬೇಕು ಎಂದು ಮನವಿ ಮಾಡಿದ್ದು, ಅದು ಸಿಗುವ ವಿಶ್ವಾಸವಿದೆ’ ಎಂದು ಸಚಿವ ಎಚ್.ನಾಗೇಶ್ ಹೇಳಿದರು.

‘ಗೊಂದಲಗಳು ಮುಗಿದಿವೆ, ಖಾತೆ ಹಂಚಿಕೆ ಆದೇಶ ಸೋಮವಾರ ಹೊರಬೀಳಲಿದೆ’ ಎಂದು ಯಡಿಯೂರಪ್ಪ ಸುದ್ದಿಗಾರರಿಗೆ ತಿಳಿಸಿದರು.

ಶಾಸಕ ಕತ್ತಿ– ಸಚಿವ ಸವದಿ ಕಿತ್ತಾಟ

ಸಚಿವ ಲಕ್ಷ್ಮಣ ಸವದಿ ಹಾಗೂ ಬಿಜೆಪಿ ಶಾಸಕ ಉಮೇಶ ಕತ್ತಿ ಪರಸ್ಪರ ಕಿತ್ತಾಡಿಕೊಂಡಿದ್ದಾರೆ.

‘ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಸಿಟ್ಟಾಗಿರುವ ಕತ್ತಿ, ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ‘ಧವಳಗಿರಿ’ ನಿವಾಸಕ್ಕೆ ಬಂದಿದ್ದರು. ಅದೇ ಹೊತ್ತಿಗೆ ಸವದಿ ಕೂಡ ಅಲ್ಲಿಗೆ ಬಂದರು. ಇಬ್ಬರನ್ನೂ ಕೂರಿಸಿಕೊಂಡ ಯಡಿಯೂರಪ್ಪ, ‘ಸಚಿವ ಸಂಪುಟ ವಿಸ್ತರಣೆಯಲ್ಲಿ ವರಿಷ್ಠರ ಸೂಚನೆ ಪಾಲಿಸಬೇಕಾಯಿತು. ಮುಂದಿನ ದಿನಗಳಲ್ಲಿ ನಿಮಗೂ ಅವಕಾಶ ಸಿಗಲಿದೆ’ ಎಂದು ಕತ್ತಿಗೆ ಹೇಳಿದರು’ ಎಂದು ಮೂಲಗಳು ತಿಳಿಸಿವೆ.

‘ಆಗ ಮಧ್ಯ ಪ್ರವೇಶಿಸಿದ ಸವದಿ, ‘ನನ್ನನ್ನು ಗುರುತಿಸಿದ ಹೈಕಮಾಂಡ್‌ ಸ್ಥಾನ ಕೊಟ್ಟಿದೆ. ನನ್ನ ಮೇಲೆ ನಿನಗೆ ಯಾಕೆ ಸಿಟ್ಟು’ ಎಂದು ಪ್ರಶ್ನಿಸಿದರು. ಅದರಿಂದ ಆಕ್ರೋಶಗೊಂಡ ಕತ್ತಿ, ‘ನಿನ್ನಿಂದಲೇ ಎಲ್ಲವೂ ಆಗಿದ್ದು, ಹೈಕಮಾಂಡ್ ಮಟ್ಟದಲ್ಲಿ ಲಾಬಿ ಮಾಡಿ ಮಂತ್ರಿಗಿರಿ ಗಿಟ್ಟಿಸಿದ್ದಿ. ನನಗೂ ರಾಜಕೀಯ ಗೊತ್ತು’ ಎಂದು ಹೇಳಿದ ಕತ್ತಿ, ಅಲ್ಲಿಂದ ಹೊರಟರು’ ಎಂದು ಮೂಲಗಳು ಹೇಳಿವೆ.

‘ಸವದಿ ಜತೆ ಜಗಳ ಆಡಿಲ್ಲ. ಮುಂದಿನ ವಾರ ಮತ್ತೆ ಸಂಪುಟ ವಿಸ್ತರಣೆಯಾಗಲಿದ್ದು, ಬಾಲಚಂದ್ರ ಜಾರಕಿಹೊಳಿ ಹಾಗೂ ನನಗೆ ಸ್ವಲ್ಪ ಕಾಯಿರಿ ಎಂದು ವರಿಷ್ಠರು ಹೇಳಿದ್ದಾರೆ’ ಎಂದುಬೆಳಗಾವಿಯಲ್ಲಿ ಸುದ್ದಿಗಾರರ ಕತ್ತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT