ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟನೆಗೆ ಶಾಲೆ ಮಕ್ಕಳ ಬಳಕೆ ವಿಚಾರ: ಗೊಂದಲ ಮೂಡಿಸಿದ ಆದೇಶ

Last Updated 9 ಡಿಸೆಂಬರ್ 2018, 20:45 IST
ಅಕ್ಷರ ಗಾತ್ರ

ಮಂಗಳೂರು: ಪ್ರತಿಭಟನೆ, ಮೆರವಣಿಗೆಗಳಿಗೆ ಶಾಲಾ ಮಕ್ಕಳನ್ನು ಬಳಸಿಕೊಳ್ಳುವುದನ್ನು ತಡೆಯಲು ಶಾಲಾ ಮುಖ್ಯಸ್ಥರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸೂಚಿಸಿದ್ದಾರೆ.

ಈ ಆದೇಶವು ಕೆಲವು ಸಂಘಟನೆಗಳ ಅತೃಪ್ತಿಗೆ ಕಾರಣವಾಗಿದೆ.

‘ಕೆಲವು ಬುದ್ಧಿಜೀವಿಗಳು, ಪ್ರಗತಿಪರರು, ವಿಚಾರ ಸರಣಿಯವರು ತಮ್ಮ ಸ್ವಾರ್ಥದ ರಾಜಕೀಯ ಪ್ರೇರಿತ ಕಾರ್ಯಕ್ರಮ ಪ್ರತಿಭಟನೆ, ಮೆರವಣಿಗೆಗಳಿಗೆ ಶಾಲಾ– ಕಾಲೇಜು ವಿದ್ಯಾರ್ಥಿಗಳನ್ನು ಉಪಯೋಗಿಸಿಕೊಂಡು ತಮ್ಮ ಸ್ವಾರ್ಥ ಸಾಧನೆ ಮಾಡಿಕೊಳ್ಳುತ್ತಿದ್ದಾರೆ. ಶಾಲಾ ಮಕ್ಕಳನ್ನು ಯಾವುದೇ ಕಾರಣಕ್ಕೂ ಖಾಸಗಿ ವ್ಯಕ್ತಿಗಳ ಸ್ವಾರ್ಥ ಸಾಧನೆಗೆ ದುರ್ಬಳಕೆಯಾಗದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು’ ಎಂದು ಹಿಂದೂ ಜನಜಾಗೃತಿ ಸಮಿತಿ ಪತ್ರ ಬರೆದಿತ್ತು.

ಡಿಡಿಪಿಐ ಅವರು ಈ ಪತ್ರವನ್ನು ಉಲ್ಲೇಖಿಸಿ, ‘ಪ್ರಸ್ತುತ ಸಪ್ತಾಹ ಅಭಿಯಾನದ ನಿಮಿತ್ತ ಪ್ರತಿಭಟನೆ, ಮೆರವಣಿಗೆಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳಿಂದ ನಡೆಯುವ ಪ್ರತಿಭಟನೆ, ಮುಷ್ಕರ ಮುಂತಾದ ಕಾರ್ಯಕ್ರಮಗಳಲ್ಲಿ ಶಾಲಾ ಮಕ್ಕಳು ಭಾಗವಹಿಸದಂತೆ ಮುಖ್ಯ ಶಿಕ್ಷಕರ ಹಂತದಲ್ಲಿ ಎಚ್ಚರಿಕೆ ವಹಿಸುವಂತೆ ತಿಳಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಗತ್ಯ ಕ್ರಮ ವಹಿಸಲು ಸೂಚಿಸಲಾಗಿದೆ. ಹಾಗೂ ಇಂತಹ ಕಾರ್ಯಕ್ರಮಗಳಲ್ಲಿ ಶಾಲಾ ಮಕ್ಕಳು ಭಾಗವಹಿಸಿದರೆ ಮುಂದಾಗುವ ಅನಾಹುತಗಳಿಗೆ ಸಂಬಂಧಿಸಿದ ಮುಖ್ಯಶಿಕ್ಷಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನೇ ನೇರ ಹೊಣೆ ಮಾಡಲಾಗುವುದು’ ಎಂಬ ಸುತ್ತೋಲೆಯನ್ನು ಹೊರಡಿಸಿದ್ದಾರೆ.

ಡಿಡಿಪಿಐ ಅವರ ಈ ಸುತ್ತೋಲೆ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಿಚಾರವಾದಿ ನರೇಂದ್ರ ನಾಯಕ್‌, ‘ ಶಾಲಾ ಮಕ್ಕಳನ್ನು ಪ್ರತಿಭಟನೆ, ಮತ್ತಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕರೆದೊಯ್ಯುವುದು ಸಮಂಜಸವಲ್ಲ ಎಂಬ ಮಾತನ್ನು ಒಪ್ಪಬಹುದು. ಆದರೆ ಈ ನಿಯಮ ಎಲ್ಲ ಕಾರ್ಯಕ್ರಮಗಳಿಗೂ ಅನ್ವಯವಾಗಬೇಕು. ಉತ್ಸವಗಳಿಗೆ, ಚರ್ಚ್‌, ಮಸೀದಿ, ದೇವಸ್ಥಾನದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕರೆದೊಯ್ಯುವುದೂ ಸರಿಯಲ್ಲ. ಇದನ್ನು ವಿಚಾರವಾದಿ, ಬುದ್ಧಿಜೀವಿಗಳಿಗೇ ಮಾತ್ರ ಅನ್ವಯಿಸಿ ಯಾಕೆ ಹೇಳಲಾಗಿದೆ ಎನ್ನುವುದು ಅರ್ಥವಾಗುತ್ತಿಲ್ಲ’ ಎಂದು ಹೇಳಿದರು.

ಮಕ್ಕಳ ಸುರಕ್ಷೆ

‘ನನ್ನ ಅನುಪಸ್ಥಿತಿಯಲ್ಲಿ ಈ ಸುತ್ತೋಲೆ ಜಾರಿಯಾಗಿದೆ. ಸುತ್ತೋಲೆಯಲ್ಲಿ ಮನವಿಯನ್ನು ಉಲ್ಲೇಖಿಸಿದ್ದರಿಂದ ಅಭಾಸವಾಗಿರಬಹುದು. ಆದರೆ ಬುದ್ಧಿಜೀವಿಗಳು, ಪ್ರಗತಿಪರರು ಪ್ರತಿಭಟನೆಗಳಿಗೆ ಮಕ್ಕಳನ್ನು ಎಂದೂ ಕರೆದೊಯ್ದಿಲ್ಲ. ಮಕ್ಕಳ ಸುರಕ್ಷತೆ ವಹಿಸಿ ಎಂದು ಶಾಲೆಗಳಿಗೆ ಮತ್ತೊಮ್ಮೆಸೂಚನೆ ನೀಡುವುದಷ್ಟೇ ಸುತ್ತೋಲೆಯ ಆಶಯ. ಹಿಂದೆಯೂ ಇಂತಹ ಸೂಚನೆಗಳನ್ನು ಆಗಾಗ ಶಾಲೆಗಳಿಗೆ ನೀಡಲಾಗಿತ್ತು’ ಎಂದುಡಿಡಿಪಿಐ ವೈ. ಶಿವರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT