ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಜನಾಥ್ ಪಾಟೀಲ್ ನಿಧನಕ್ಕೆ ಮುಖ್ಯಮಂತ್ರಿ ಸೇರಿ ಗಣ್ಯರ ಸಂತಾಪ

Last Updated 2 ನವೆಂಬರ್ 2019, 6:14 IST
ಅಕ್ಷರ ಗಾತ್ರ

ಬೆಂಗಳೂರು:ಮಾಜಿ ಸಚಿವ, ಕಲ್ಯಾಣ ಕರ್ನಾಟಕದ ಶ್ರೇಯೋಭಿವೃದ್ಧಿಗಾಗಿ ಜೀವನವನ್ನೇ ಮುಡಿಪಾಗಿಟ್ಟ ವೈಜನಾಥ್ ಪಾಟೀಲ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವುಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ವೈಜನಾಥ ಪಾಟೀಲರ ನಿಧನದಿಂದ ತೀವ್ರ ದುಃಖವಾಗುತ್ತದೆ, ಕಲ್ಯಾಣ ಕರ್ನಾಟಕಕ್ಕೆ ಸಂವಿಧಾನದ 371(ಜೆ) ವಿಧಿಯ ಮುಖಾಂತರ ವಿಶೇಷ ಸ್ಥಾನಮಾನ ದೊರಕಿಸುವ ನಿಟ್ಟಿನಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು. ಈ ಭಾಗದ ಅಭಿವೃದ್ಧಿಯ ಕುರಿತ ಅವರು ತೋರಿದ ಕಾಳಜಿ ಅನನ್ಯವಾದುದು. ಶಾಸಕರಾಗಿ ಹಾಗೂ ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ತೋಟಗಾರಿಕಾ ಸಚಿವರಾಗಿ ಮತ್ತು ದೇವೇಗೌಡರ ಸಂಪುಟದಲ್ಲಿ ನಗರಾಭಿವೃದ್ಧಿ ಸಚಿವರಾಗಿ ಅವರ ಕೊಡುಗೆಯೂ ಸ್ಮರಣೀಯ ಎಂದು ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಅವರ ನಿಧನದಿಂದ ಒಬ್ಬ ನೇರ ನಡೆ, ನುಡಿಯ ಹೋರಾಟಗಾರ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ ಎಂದಿರುವ ಮುಖ್ಯಮಂತ್ರಿಗಳು, ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ. ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಯಡಿಯೂರಪ್ಪ ತಮ್ಮ ಸಂತಾಪದಲ್ಲಿ ಸೂಚಿಸಿದ್ದಾರೆ.

ಮಾಜಿ ಸಚಿವರಾದ ವೈಜನಾಥ್ ಪಾಟೀಲರು ಅಗಲಿದ ಸುದ್ದಿ ಕೇಳಿ ದುಃಖವಾಗಿದೆ. ಪಾಟೀಲರು ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದು ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇನೆ. ಅವರ ಕುಟುಂಬವರ್ಗ ಹಾಗೂ ಅಭಿಮಾನಿಗಳಿಗೆ ಭಗವಂತ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಸಂತಾಪ ವ್ಯಕ್ತಪಡಿಸಿದ್ದಾರೆ.

ಆತ್ಮೀಯರಾಗಿದ್ದ ಮಾಜಿ ಸಚಿವ ವೈಜನಾಥ ಪಾಟೀಲ್ ನಿಧನದಿಂದ ಆಘಾತವಾಗಿದೆ. ಉತ್ತರ ಕರ್ನಾಟಕದ ಅಭಿವೃದ್ದಿಗಾಗಿ ಹೋರಾಟ ನಡೆಸುತ್ತಾ ಬಂದಿದ್ದ ಪಾಟೀಲ್,ಹೈದರಾಬಾದ್ ಕರ್ನಾಟಕಕ್ಕೆ ವಿಶೇಷಸ್ಥಾನಮಾನ ಪಡೆಯಲು ಪ್ರಮುಖ ಪಾತ್ರ ವಹಿಸಿದ್ದರು.
ಅವರ ಕುಟುಂಬವರ್ಗಕ್ಕೆ ನನ್ನ ಸಂತಾಪಗಳು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

ಮಾಜಿ ಸಚಿವ, 371ಜೆ ವಿಧಿ ಹೋರಾಟಗಾರ ವೈಜನಾಥ ಪಾಟೀಲರ ನಿಧನ ತೀವ್ರ ಬೇಸರ ತರಿಸಿದೆ.ಈಗಿನ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸದಾ ಮಿಡಿಯುತ್ತಿದ್ದರು.ಈ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲು ಎರಡು ದಶಕಗಳ ಹಿಂದೆ ಧ್ವನಿ ಎತ್ತಿ ಹೋರಾಟ ಆರಂಭಿಸಿದ್ದೇ ಪಾಟೀಲರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟ್ವೀಟ್‌ ಮೂಲಕ ಸಂತಾಪ ಸೂಚಿಸಿದ್ದಾರೆ.

ಸಾಮಾಜಿಕ ಹೋರಾಟಗಾರ ,ಮಾಜಿ ಸಚಿವರಾದ ಶ್ರೀ ವೈಜನಾಥ ಪಾಟೀಲ್ ಅವರಿಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT