ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈ.ಕ. ಸಂಸದರು ದನಿ ಎತ್ತಿದ್ದರೆ 1973ರಲ್ಲೇ ವಿಶೇಷ ಸ್ಥಾನಮಾನ: ವೈಜನಾಥ ಪಾಟೀಲ

Last Updated 2 ನವೆಂಬರ್ 2019, 3:56 IST
ಅಕ್ಷರ ಗಾತ್ರ

ಕಲಬುರ್ಗಿ: ಅಂದಿನ ಹೈದರಾಬಾದ್‌ ಕರ್ನಾಟಕ ಭಾಗದ ಸಂಸದರು ಸಂಸತ್ತಿನಲ್ಲಿ ಧ್ವನಿ ಎತ್ತಿದ್ದರೆ 1973ರಲ್ಲಿಯೇ ಈ ಭಾಗಕ್ಕೆ ಕೇಂದ್ರ ಸರ್ಕಾರ ವಿಶೇಷ ಸ್ಥಾನ ಮಾನ ನೀಡುತ್ತಿತ್ತು ಎಂದು ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ, ಹಿರಿಯ ರಾಜಕಾರಣಿ ವೈಜನಾಥ ಪಾಟೀಲ ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ‘ಮನದಾಳದ ಮಾತು’ ಕಾರ್ಯಕ್ರಮದಲ್ಲಿ ತಮ್ಮ ಬದುಕಿನ ವಿವಿಧ ಮಜಲುಗಳನ್ನು ವಿವರಿಸಿದ ಅವರು, ‘ನಿಜಾಮರ ಆಳ್ವಿಕೆಯ ಪ್ರದೇಶವಾದ ಆಂಧ್ರಪ್ರದೇಶದ ಕೆಲ ಭಾಗಗಳಿಗೆ ವಿಶೇಷ ಸ್ಥಾನ ಮಾನ ಸಿಕ್ಕಿತ್ತು. ಹೈ–ಕ ವ್ಯಾಪ್ತಿಯ ಬೀದರ್‌, ಕಲಬುರ್ಗಿ ಅಥವಾ ರಾಯಚೂರಿನ ಸಂಸದರು ಈ ಬಗ್ಗೆ ಅಂದು ಸಂಸತ್ತಿನಲ್ಲಿ ಈ ಉದಾಹರಣೆಯನ್ನು ಇಟ್ಟುಕೊಂಡು ಪ್ರಶ್ನಿಸಿದ್ದರೆ ತಕ್ಷಣವೇ ಸ್ಥಾನಮಾನ ಲಭಿಸುತ್ತಿತ್ತು’ ಎಂದರು.

‘ವಿಧಾನಪರಿಷತ್‌ ಸದಸ್ಯನಾಗಿದ್ದಾಗಲೇ ಅಂದು ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಅವರಿಗೆ ಹೈದರಾಬಾದ್‌ ಕರ್ನಾಟಕ ಅಭಿವೃದ್ಧಿ ಮಂಡಳಿ ರಚಿಸುವಂತೆ ಒತ್ತಾಯ ಮಾಡಿದ್ದೆ. ಹಲವು ತಿಂಗಳಾದರೂ ಅವರು ನನ್ನ ಮನವಿಗೆ ಓಗೊಡಲಿಲ್ಲ. ಇದರಿಂದ ಬೇಸತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ’ ಎಂದು ಸ್ಮರಿಸಿದರು.

ಸೋಷಲಿಸ್ಟ್ ಪಕ್ಷ, ಸಂಸ್ಥಾ ಕಾಂಗ್ರೆಸ್‌, ಜನತಾ ಪಕ್ಷ, ಕಾಂಗ್ರೆಸ್‌ ಪಕ್ಷ ಸೇರಿದಂತೆ ಹಲವಾರು ಪಕ್ಷಗಳಲ್ಲಿ ಕೆಲಸ ಮಾಡಿದ್ದೇನೆ. ನನ್ನಷ್ಟು ಪಕ್ಷಾಂತರ ಮಾಡಿದವರು ಈ ಭಾಗದಲ್ಲಿ ಯಾರೂ ಇರಲಿಕ್ಕಿಲ್ಲ. ಹಲವು ಬಾರಿ ನಾನು ಸೋಲುಂಡಿದ್ದೇನೆ. ಗೆದ್ದಾಗ ನಾನು ಅಂದಾಜು ಸಮಿತಿ ಅಧ್ಯಕ್ಷನಾಗಿದ್ದೆ. ಇಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿರುವ ಜೆ.ಸಿ.ಮಾಧುಸ್ವಾಮಿ ಅವರು ಸಮಿತಿ ಸದಸ್ಯರಿದ್ದರು. ತುಂಡು ಗುತ್ತಿಗೆ ಕೊಡುವ ನಿರ್ಧಾರವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಶಿಫಾರಸು ಮಾಡೋಣವೇ ಎಂದು ಸದಸ್ಯರು ಕೇಳಿದ್ದರು. ಶಿಫಾರಸು ಮಾಡಿರಿ ಎಂದಿದ್ದೆ. ಆದರೆ, ಕೊನೆಗೆ ಅದು ಎಚ್‌.ಡಿ.ದೇವೇಗೌಡ ಅವರಿಗೆ ಉರುಳಾಯಿತು. ವಾಸ್ತವವಾಗಿ ಅವರ ವಿರುದ್ಧ ಕೆಲಸ ಮಾಡಬೇಕೆನ್ನುವ ಉದ್ದೇಶ ಇರಲಿಲ್ಲ. ತುಂಡು ಗುತ್ತಿಗೆ ಕೊಡುವ ನಿರ್ಧಾರ ಈಗಲೂ ಲೋಕಾಯುಕ್ತದಲ್ಲಿದೆ’ ಎಂದು ಹೇಳಿದರು.

ಅಧಿಕಾರಿಗಳ ಟಿಪ್ಪಣಿ ಒಪ್ಪುವ ಅಗತ್ಯವಿಲ್ಲ: ಯಾವುದೇ ಕಡತಗಳಲ್ಲಿ ಅಧಿಕಾರಿಗಳು ಬರೆದ ಟಿಪ್ಪಣಿಯನ್ನು ಸಚಿವರು ಒಪ್ಪಿಕೊಳ್ಳಬೇಕಾದ ಅಗತ್ಯವಿಲ್ಲ. ಹೈದರಾಬಾದ್‌ ಕರ್ನಾಟಕಕ್ಕೆ ವಿಶೇಷ ಸ್ಥಾನ ಮಾನ ನೀಡುವ ಬಗ್ಗೆ ಪಿಳ್ಳೈ ಎಂಬ ಗೃಹ ಕಾರ್ಯದರ್ಶಿ ತಕರಾರು ತೆಗೆದಿದ್ದರು. ಆ ಬಗ್ಗೆ ಗೃಹ ಸಚಿವರು ನಿರ್ಧಾರ ಕೈಗೊಳ್ಳಬೇಕಿತ್ತು. ಗೃಹ ಕಾರ್ಯದರ್ಶಿ ಅವರ ಸಲಹೆಯನ್ನೂ ಮೀರಿ ನಿರ್ಧಾರ ಕೈಗೊಳ್ಳುವ ಅಧಿಕಾರ ಸಚಿವರಿಗೆ ಇದೆ. ಇಲ್ಲದಿದ್ದರೆ ಆ ಸ್ಥಾನದಲ್ಲಿ ಯಾಕಾದರೂ ಇರಬೇಕು. ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಇಂತಹ ಹಲವಾರು ಸಲಹೆಗಳನ್ನು ಮೀರಿ ಹಲವು ಕೆಲಸಗಳಿಗೆ ಅನುಮೋದನೆ ನೀಡಿದ್ದೆ ಎಂದರು.

ಬೀದರ್‌ನಲ್ಲಿ ಬಾಂಬ್‌ ಹಾರಿಸಲು ಯತ್ನ‌!

ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿಯನ್ನು ಸೋಷಲಿಸ್ಟ್‌ ಪಕ್ಷ ಹಾಗೂ ಆರ್‌ಎಸ್‌ಎಸ್‌ ತೀವ್ರವಾಗಿ ವಿರೋಧಿಸಿ ಹೋರಾಟಕ್ಕಿಳಿದಿದ್ದವು. ಈ ಸಂದರ್ಭದಲ್ಲಿ ನಾನು ಸೋಷಲಿಸ್ಟ್‌ ಪಕ್ಷದಲ್ಲಿದ್ದೆ. ಜಾರ್ಜ್ ಫೆರ್ನಾಂಡೀಸ್‌ ಅವರು ಭೂಗತರಾಗಿದ್ದುಕೊಂಡೇ ಕಾರ್ಯಾಚರಣೆ ಮಾಡುತ್ತಿದ್ದರು. ಬರೋಡಾದಲ್ಲಿ ತಯಾರಾದ ಬಾಂಬುಗಳನ್ನು ಗಣ್ಯರು ಬರುವ ಸಂದರ್ಭದಲ್ಲಿ ಉಡಾಯಿಸಬೇಕು ಎಂದು ಸೋಷಲಿಸ್ಟ್‍ಪಕ್ಷದಿಂದ ಸೂಚನೆ ಇತ್ತು. ಆದರೆ, ಈ ಬಾಂಬುಗಳಿಂದ ಯಾರಿಗೂ ತೊಂದರೆಯಾಗಬಾರದು ಎಂಬ ನಿರ್ದೇಶನವಿತ್ತು. ಅದರಂತೆ ಬರೋಡಾದಿಂದ ಬೆಂಗಳೂರಿಗೆ ತಂದ ಬಾಂಬನ್ನು ನಾನು ಬಸ್‌ನಲ್ಲಿ ಚಿಂಚೋಳಿಗೆ ತಂದೆ. ಮುಖ್ಯಮಂತ್ರಿ ಅವರು ಬೀದರ್‌ಗೆ ಬರುವ ಕಾರ್ಯಕ್ರಮವಿತ್ತು. ಅಲ್ಲಿ ಬಾಂಬ್‌ ಉಡಾಯಿಸಬೇಕು ಎಂದು ಯೋಜಿಸಿದ್ದೆವು. ಇದು ಮನೆಯವರಿಗೆ ಗೊತ್ತಾಗಿ ದೊಡ್ಡ ರಾದ್ಧಾಂತವೂ ಆಯಿತು. ಅಷ್ಟರಲ್ಲೇ ತುರ್ತು ಪರಿಸ್ಥಿತಿ ಮುಗಿದಿದ್ದರಿಂದ ಬಾಂಬ್ ಹಾಕುವ ಪ್ರಯತ್ನ ಕೈಬಿಟ್ಟೆವು ಎಂದು ವೈಜನಾಥ ಪಾಟೀಲ ಸ್ಮರಿಸಿದರು.

‘ಕಾಶ್ಮೀರಕ್ಕೆ ವಿಶೇಷ ಸ್ಥಾನ ರದ್ದು ಸರಿಯಲ್ಲ’

ಕಾಶ್ಮೀರಕ್ಕೆ ನೀಡಿದ್ದ 370 ವಿಶೇಷ ಸ್ಥಾನವನ್ನು ರದ್ದು ಮಾಡಿದ್ದು ಸರಿಯಲ್ಲ. ಇದರಿಂದ ಒಕ್ಕೂಟ ವ್ಯವಸ್ಥೆಯ ಅರ್ಥವೇ ಕಳೆದುಕೊಂಡಂತಾಗಿದೆ. ದೇಶದೊಳಗಿನ ರಾಜ್ಯಗಳು ಪ್ರತ್ಯೇಕ ಸಂವಿಧಾನ ಹೊಂದುವುದು ತಪ್ಪಲ್ಲ. ಅಮೆರಿಕದಲ್ಲಿ ಇರುವ 50 ರಾಜ್ಯಗಳಿಗೂ ಪ್ರತ್ಯೇಕ ಸಂವಿಧಾನಗಳಿವೆ. ಹಾಗೆಂದ ಮಾತ್ರಕ್ಕೆ ಅಮೆರಿಕದ ಅಸ್ತಿತ್ವಕ್ಕೆ ಧಕ್ಕೆ ಬಂದಿಲ್ಲ. ವಿಶೇಷ ಸ್ಥಾನ ರದ್ದತಿಯಿಂದಾಗಿ ಅಲ್ಲಿನ ಜನರು ಪ್ರತಿಭಟನೆಯ ಹಾದಿ ತುಳಿಯುವುದರಿಂದ ಹೆಚ್ಚು ತೆರಿಗೆ ಹಣವನ್ನು ಮಿಲಿಟರಿಗೆ ವೆಚ್ಚ ಮಾಡಬೇಕಾಗುತ್ತದೆ ಎಂದು ವೈಜನಾಥ ಪಾಟೀಲ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT