ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪನೇ ನನ್ನ ಮೊದಲ ಗುರು: ಅನಿರುದ್ಧ್‌

Last Updated 1 ಏಪ್ರಿಲ್ 2018, 20:04 IST
ಅಕ್ಷರ ಗಾತ್ರ

ಬೆಂಗಳೂರು:  ‘ಕೆಲವು ವರ್ಷಗಳ ಹಿಂದೆ ಅಪ್ಪ ತೀರಿ ಹೋದಾಗ ಕ್ರಿಕೆಟ್‌ ಆಡುವುದನ್ನೇ ಬಿಟ್ಟುಬಿಡಬೇಕು ಎಂದು ನಿರ್ಧರಿಸಿದ್ದೆ. ಆದರೆ ಇದೊಂದು ವರ್ಷ ಆಡು, ರಾಜ್ಯ ತಂಡಕ್ಕೆ ಆಯ್ಕೆಯಾಗುವ ಅವಕಾಶ ಇದೆ ಎಂದು ಅಮ್ಮ ಒತ್ತಾಯಿಸಿದರು. ಅವರ ಮಾತಿಗೆ ಮಣಿದು ಮತ್ತೆ ಬ್ಯಾಟ್ ಹಿಡಿದೆ. ಅದೇ ವರ್ಷ ಉತ್ತಮ ಸ್ಕೋರ್ ಮಾಡಿದೆ. 17 ವರ್ಷದೊಳಗಿನವರ ರಾಜ್ಯ ತಂಡಕ್ಕೆ ಆಯ್ಕೆಯಾದೆ. ಅಲ್ಲಿಂದ ಜೀವನದ ದಿಕ್ಕು ಬದಲಾಯಿತು’–

ಗದುಗಿನ ಬಲಗೈ ಬ್ಯಾಟ್ಸ್‌ಮನ್ ಅನಿರುದ್ಧ್ ಜೋಶಿ ಅವರ ನುಡಿಗಳಿವು. ಇದೇ ಮೊದಲ ಬಾರಿಗೆ ಆರ್‌ಸಿಬಿ ತಂಡದಲ್ಲಿ ಸ್ಥಾನ ಪಡೆದಿರುವ ಅನಿರುದ್ಧ್ ತಾವು ನಡೆದು ಬಂದ ಹಾದಿಯ ಕುರಿತು ಮಾತನಾಡಿದರು.

‘ಅಪ್ಪ ಸುಧೀರ್ ಜೋಶಿಯವರೇ ನನ್ನ ಮೊದಲ ಕೋಚ್. ತಮ್ಮ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಆಟಗಾರರಾಗಿದ್ದವರು. ನಾನು ಒಳ್ಳೆಯ ಕ್ರಿಕೆಟಿಗನಾಗಬೇಕು ಎಂದು ಕನಸು ಕಂಡಿದ್ದರು.  ಆದರೆ ಗದಗಿನಲ್ಲಿ ಹೆಚ್ಚು ಸೌಲಭ್ಯಗಳು ಇರಲಿಲ್ಲ. ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ತರಬೇತಿ ಪಡೆದೆ. 2014ರಲ್ಲಿ ರಾಜ್ಯ ಟ್ವೆಂಟಿ–20 ಟೂರ್ನಿಯಲ್ಲಿ ಆಡುವ ಅವಕಾಶ ಸಿಕ್ಕಿತು. 2015ರಲ್ಲಿ ರಾಜ್ಯದ ಏಕದಿನ ತಂಡದಲ್ಲಿ ಆಡಿದೆ. ಆದರೆ ಕಾಲಿನ ಗಾಯದಿಂದ ಸುಮಾರು ಒಂದು ವರ್ಷ ಆಟದಿಂದ ದೂರ ಉಳಿದಿದ್ದೆ. ಹೋದ ವರ್ಷ ಮತ್ತೆ ಕಣಕ್ಕೆ ಮರಳಿದೆ’ ಎಂದರು.

ಹೋದ ಜನವರಿಯಲ್ಲಿ ನಡೆದಿದ್ದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಬಲಗೈ ಬ್ಯಾಟ್ಸ್‌ಮನ್ ಅನಿರುದ್ಧ್ ಮಿಂಚಿದ್ದರು. ರಾಜಸ್ಥಾನ ತಂಡದ ಎದುರು ಅಜೇಯ 73 ರನ್‌ ಮತ್ತು ಪಂಜಾಬ್ ಎದುರು 40 ರನ್‌ ಗಳಿಸಿದ್ದರು.

‘ಆರ್‌ಸಿಬಿ ತಂಡದಲ್ಲಿ ಆಯ್ಕೆ ಯಾಗಲು ಕಳೆದ ಮೂರು ವರ್ಷಗಳಿಂದ ಟ್ರಯಲ್ಸ್‌ನಲ್ಲಿ ಭಾಗವಹಿಸಿದ್ದೆ. ಈ ಬಾರಿ ಅವಕಾಶ ಸಿಕ್ಕಿತು. ಇಲ್ಲಿ ತಂಡದೊಂದಿಗೆ ಇರುವುದು ಬಹಳ ಉತ್ತಮ ಅನುಭವ ನೀಡುತ್ತಿದೆ. ವೆಟೋರಿ, ನೆಹ್ರಾ ಅವರಂತಹ ಹಿರಿಯರ ಮಾರ್ಗದರ್ಶನ ಸಿಗುತ್ತಿದೆ. ವಿರಾಟ್, ಮೆಕ್ಲಮ್ ಅವರಂತಹ ದಿಗ್ಗಜರೊಂದಿಗೆ ಆಡಲು ಸಿಕ್ಕಿರುವ ಅವಕಾಶ ಬಹಳ ದೊಡ್ಡದು’ ಎಂದರು.

‘ಹಿರಿಯ ಕ್ರಿಕೆಟಿಗ ಸುನಿಲ್ ಜೋಶಿಯವರು ನನ್ನ ಚಿಕ್ಕಪ್ಪ. ಆವರ ಪ್ರೋತ್ಸಾಹ ಬಹಳ ಇದೆ. ನನ್ನ ಕೌಶಲ ಉತ್ತಮಗೊಳಿಸಿಕೊಳ್ಳಲು ಅಮೂಲ್ಯವಾದ ಸಲಹೆಗಳನ್ನು ನೀಡಿದ್ದಾರೆ. ನಾನು ಬೆಂಗಳೂರಿಗೆ ಬಂದ ಹೊಸದರಲ್ಲಿ ಅವರು ತಮ್ಮ  ಬಳಿ ಇದ್ದ ಕ್ರಿಕೆಟ್ ಕಿಟ್, ಬಟ್ಟೆಗಳನ್ನು ಕೊಟ್ಟಿದ್ದರು’ ಎಂದು ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT