ಮಂಗಳವಾರ, ಆಗಸ್ಟ್ 4, 2020
24 °C
ಕೆಪಿಎಸ್‌ಸಿ: ‘ಸ್ಥಾನ ಪಲ್ಲಟ’ಗೊಳ್ಳುವ 140 ಅಧಿಕಾರಿಗಳಲ್ಲಿ 8 ಮಂದಿ ಸಹಾಯಕ ಆಯುಕ್ತರು

ಐಎಎಸ್‌: ಏಳು ಅಧಿಕಾರಿಗಳಿಗೆ ಹಿಂಬಡ್ತಿ?

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಗೆಜೆಟ್‌ನಲ್ಲಿ ಪ್ರಕಟಿಸಿದ 1998ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಪರಿಷ್ಕೃತ ಆಯ್ಕೆ ಪಟ್ಟಿಯನ್ನು ಜಾರಿಗೊಳಿಸಿ ಅನುಸರಣಾ ವರದಿಯನ್ನು ಇದೇ 15ರಂದು ಸಲ್ಲಿಸುವಂತೆ ಹೈಕೋರ್ಟ್‌ ನೀಡಿದ ನಿರ್ದೇಶನದಿಂದ ಏಳು ಅಧಿಕಾರಿಗಳ ‘ಐಎಎಸ್‌’ ಹುದ್ದೆಗೆ ಕುತ್ತು ಎದುರಾಗಿದೆ.

ಕೆಪಿಎಸ್‌ಸಿ ಪರಿಷ್ಕೃತ ನೇಮಕಾತಿ ಪಟ್ಟಿ ಪ್ರಕಾರ 140 ಅಧಿಕಾರಿಗಳ ಹುದ್ದೆಗಳಲ್ಲಿ ಸ್ಥಾನ ಪಲ್ಲಟ ಆಗಲಿದೆ. ಆ ಪೈಕಿ, ಎಂಟು ಕೆಎಎಸ್‌ (ಸಹಾಯಕ ಆಯುಕ್ತ) ಅಧಿಕಾರಿಗಳೂ ಇದ್ದಾರೆ. ಈ ಅಧಿಕಾರಿಗಳಲ್ಲಿ ಐಎಎಸ್‌ಗೆ ಬಡ್ತಿ ಪಡೆದ ಏಳು ಅಧಿಕಾರಿಗಳು ಸೇರಿದ್ದಾರೆ.

ಅಧಿಕಾರಿಗಳ ಸ್ಥಾನ ಪಲ್ಲಟ ಪ್ರಕ್ರಿಯೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಚಾಲನೆ ನೀಡಿದೆ. ಈ ಸಂಬಂಧ ಹಿರಿಯ ಅಧಿಕಾರಿಗಳು ಶುಕ್ರವಾರ (ಏ. 5) ಸಭೆ ನಡೆಸಿದ್ದಾರೆ. ಹೈಕೋರ್ಟ್‌ಗೆ ಮಾಹಿತಿ ನೀಡಲೇಬೇಕಾಗಿರುವುದರಿಂದ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಡಿಪಿಎಆರ್‌ ಅಧಿಕಾರಿಯೊಬ್ಬರು ತಿಳಿಸಿದರು.

1998, 1999, 2004ನೇ ಕೆಎಎಸ್‌ ಅಧಿಕಾರಿಗಳಲ್ಲಿ 34 ಮಂದಿಗೆ ಸೇವಾ ಹಿರಿತನ ಆಧರಿಸಿ 2018ರ ಫೆಬ್ರುವರಿಯಲ್ಲಿ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಆಯ್ಕೆ ಸಮಿತಿ ಐಎಎಸ್‌ಗೆ ಬಡ್ತಿ ನೀಡಿತ್ತು. ಬಡ್ತಿ ನೀಡುವ ಸಂದರ್ಭದಲ್ಲಿ ಈ ಸಾಲಿನ ನೇಮಕಾತಿ ಪ್ರಕರಣ ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿ ಇತ್ತು. ಹೀಗಾಗಿ, ಬಡ್ತಿಯು ಕೋರ್ಟ್‌ ನೀಡುವ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂಬ ಷರತ್ತು ವಿಧಿಸಲಾಗಿತ್ತು. ಇದೀಗ ಏಳು ಅಧಿಕಾರಿಗಳು ಸಹಾಯಕ ಆಯುಕ್ತ ಹುದ್ದೆಯಿಂದ ಬೇರೆ ಹುದ್ದೆಗಳಿಗೆ ‘ಸ್ಥಾನ ಪಲ್ಲಟ’ಗೊಳುವುದರಿಂದ ಐಎಎಸ್‌ ಶ್ರೇಣಿ ಕಳೆದುಕೊಳ್ಳುವ ಭೀತಿ ಇದೆ.

ಅಭಿಪ್ರಾಯ ಕೇಳಿದ್ದ ಸರ್ಕಾರ!: ಸ್ಥಾನ ಪಲ್ಲಟಗೊಳ್ಳುವ ಎಲ್ಲ ಅಧಿಕಾರಿ ಗಳಿಗೂ ‘ನೀವು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆಯಲ್ಲಿಯೇ ಮುಂದುವರಿಯಲು ಬಯಸುತ್ತೀರಾ ಅಥವಾ ಪರಿಷ್ಕೃತ ಆಯ್ಕೆ ಪಟ್ಟಿ ಪ್ರಕಾರ ಹುದ್ದೆ ಬದಲಾವಣೆ ಬಯ ಸುತ್ತೀರಾ’ ಎಂದು ಅಭಿಪ್ರಾಯ ಕೇಳಿತ್ತು. ಈ ಪ್ರಕ್ರಿಯೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಹೈಕೋರ್ಟ್‌, ತೀರ್ಪು ಅನುಷ್ಠಾನಗೊಳಿಸುವಂತೆ ಇದೇ 4ರಂದು ತಾಕೀತು ಮಾಡಿತ್ತು.

ಅಭಿಪ್ರಾಯ ಕೇಳಿದ ಸರ್ಕಾರದ ಕ್ರಮಕ್ಕೆ ಅಧಿಕಾರಿಗಳ ವಲಯ ದಲ್ಲೂ ಆಕ್ಷೇಪ ವ್ಯಕ್ತವಾಗಿತ್ತು. ‘ಸಹಾಯಕ ಆಯುಕ್ತ ಹುದ್ದೆ ಯಿಂದ ಐಎಎಸ್‌ ಹುದ್ದೆಗೆ ಬಡ್ತಿ ಪಡೆ ದವರು ಪರಿಷ್ಕೃತ ಪಟ್ಟಿಯಂತೆ ಸ್ವಇಚ್ಚೆಯಿಂದ ಹುದ್ದೆ ಬದಲಿಸಿ ಕೊಂಡು ‘ಹಿಂಬಡ್ತಿ’ ಪಡೆಯಲು ಮುಂದಾಗುತ್ತಾರೆಯೇ’ ಎಂದು ಪರಿಷ್ಕೃತ ಪಟ್ಟಿಯಂತೆ ಸಹಾಯಕ ಆಯುಕ್ತ ಹುದ್ದೆಗೆ ನೇಮಕಗೊಂಡು ಐಎಎಸ್‌ ಬಡ್ತಿಗೆ ಅರ್ಹತೆ ಪಡೆಯಲಿರುವ ಅಧಿಕಾರಿಯೊಬ್ಬರು ಪ್ರಶ್ನಿಸಿದರು.

ಅಷ್ಟೇ ಅಲ್ಲ, ಪರಿಷ್ಕೃತ ಪಟ್ಟಿಯನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ವಿಳಂಬ ಮಾಡುತ್ತಿರುವ ಬಗ್ಗೆ ಕೇಂದ್ರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಓಪಿಟಿ) ಕಾರ್ಯದರ್ಶಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು.  ಹೈಕೋರ್ಟ್‌ ನೀಡಿದ್ದ ಆದೇಶದಂತೆ ಪರಿಷ್ಕೃತ ಪಟ್ಟಿ ಜಾರಿಗೊಳಿಸುವ ಸಂಬಂಧ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎಂದು 2018ರ ಏಪ್ರಿಲ್‌ನಲ್ಲಿ ರಾಜ್ಯ ಸರ್ಕಾರಕ್ಕೆ ಯುಪಿಎಸ್‌ಸಿ ಪತ್ರ ಬರೆದಿತ್ತು. ಆದರೆ, ಈ ಪತ್ರಕ್ಕೆ ಸರ್ಕಾರ ಈವರೆಗೂ ಉತ್ತರಿಸಿಲ್ಲ.

1998, 1999, 2004 ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ನೇಮ ಕಾತಿ ಪ್ರಕ್ರಿಯೆಯೇ ಅಸಂವಿಧಾನಿಕ ಎಂದು ತೀರ್ಪು ನೀಡಿದ್ದ ಹೈಕೋರ್ಟ್‌, ಅನರ್ಹರನ್ನು ಕೈಬಿಟ್ಟು ಅರ್ಹರಿಗೆ ಹುದ್ದೆ ನೀಡುವಂತೆ ಹೇಳಿತ್ತು. ಇದೇ ತೀರ್ಪು ಅನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. ಇದೀಗ ಈ ತೀರ್ಪು ಅನ್ವಯ ಸಿದ್ಧಪಡಿಸಿದ್ದ ಪರಿಷ್ಕೃತ ಪಟ್ಟಿಯಲ್ಲಿ ಹೊಸತಾಗಿ ಅರ್ಹರಾದ 27 ಅಭ್ಯರ್ಥಿಗಳಿಗೆ ಸರ್ಕಾರ ನೇಮಕಾತಿ ಆದೇಶ ನೀಡಿದೆ. ಅನರ್ಹರೆಂದು ಗುರುತಿಸಿಕೊಂಡು ಹುದ್ದೆ ಕಳೆದುಕೊಳ್ಳುವ ಭೀತಿಯಲ್ಲಿರುವ 28 ಅಧಿಕಾರಿಗಳಿಗೆ ‘ಸೇವಾ ಭದ್ರತೆ’ ನೀಡುವ ಉದ್ದೇಶದಿಂದ ನೇಮಕಾತಿ ನಿಯಮಕ್ಕೆ ತಿದ್ದುಪಡಿ ತರಲು ಕೂಡಾ ಸರ್ಕಾರ ಮುಂದಾಗಿತ್ತು. ಆದರೆ, ಇದೀಗ ಈ ವಿಷಯದಲ್ಲಿ ಸರ್ಕಾರ ಗೊಂದಲದಲ್ಲಿದೆ ಎಂದು ಡಿಪಿಎಆರ್‌ ಮೂಲಗಳು ಹೇಳಿವೆ.

ಮತ್ತೆ ‘ನ್ಯಾಯಾಂಗ ನಿಂದನೆ’ ಅರ್ಜಿ

ಹೈಕೋರ್ಟ್‌ ರಚಿಸಿದ ಸತ್ಯಶೋಧನ ತಂಡದ ಸಲಹೆಯಂತೆ 1998ನೇ ಸಾಲಿನ ಗೆಜೆಟೆಡ್‌ ನೇಮಕಾತಿಯಲ್ಲಿ 91 ಅಭ್ಯರ್ಥಿಗಳ ಪ್ರಶ್ನೆಪತ್ರಿಕೆಗಳನ್ನು ಮೂರನೇ ಮೌಲ್ಯಮಾಪನ ಮಾಡಲಾಗಿದೆ. ಈ ಅಭ್ಯರ್ಥಿಗಳ ಅಂಕಗಳನ್ನೂ ಪರಿಗಣಿಸಿ ಪಟ್ಟಿ ಪರಿಷ್ಕರಿಸುವಂತೆ ಕೋರ್ಟ್‌ ತೀರ್ಪು ನೀಡಿತ್ತು. ಆದರೆ, ಈ ಪ್ರಕ್ರಿಯೆ ನಡೆಸದೆ ಪಟ್ಟಿ ಪ್ರಕಟಿಸಿ, ಅನುಷ್ಠಾನಕ್ಕೆ ಮುಂದಾಗಿರುವ ಕೆಪಿಎಸ್‌ಸಿ ಮತ್ತು ರಾಜ್ಯ ಸರ್ಕಾರದ ನಡೆಯ ವಿರುದ್ಧ ಕೆಲವು ಅಭ್ಯರ್ಥಿಗಳು ಮತ್ತೆ ಹೈಕೋರ್ಟ್‌ಗೆ ‘ನ್ಯಾಯಾಂಗ ನಿಂದನೆ’ ಅರ್ಜಿ ಸಲ್ಲಿಸಿದ್ದಾರೆ. 91 ಅಭ್ಯರ್ಥಿಗಳ ಮೂರನೇ ಮೌಲ್ಯಮಾಪನ ಅಂಕಗಳನ್ನು ಪರಿಗಣಿಸಿದರೆ, ಪರಿಷ್ಕೃತ ಪಟ್ಟಿಯಲ್ಲಿ ಮತ್ತೆ ಕೆಲವು ಬದಲಾವಣೆ ಆಗಲಿದೆ. ಅಷ್ಟೇ ಅಲ್ಲ, ಐಎಎಸ್‌ಗೆ ಬಡ್ತಿ ಪಡೆದ ಇನ್ನೂ ಇಬ್ಬರು ಹಿಂಬಡ್ತಿ ಪಡೆಯಲಿದ್ದಾರೆ ಎನ್ನಲಾಗಿದೆ.

***

ಕೋರ್ಟ್‌ ತೀರ್ಪು ಪ್ರಕಾರ ಪರಿಷ್ಕೃತ ಪಟ್ಟಿಯಂತೆ ನೇಮಕಾತಿಗೆ ಪರಿಶೀಲನೆ ನಡೆಸುತ್ತಿದ್ದೇವೆ. ಏ. 15ರ ಒಳಗೆ ಕ್ರಮ ಜರುಗಿಸುತ್ತೇವೆ.

–ಟಿ.ಎಂ. ವಿಜಯಭಾಸ್ಕರ, ಮುಖ್ಯ ಕಾರ್ಯದರ್ಶಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು