ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡತನ ನಿರ್ಮೂಲನೆ ಮಾಡಿ; ಬಡವರನ್ನಲ್ಲ: ದೇವನೂರ ಮಹಾದೇವ ಚಾಟಿ

ಆರ್‌ಸಿಇಪಿ ಒಪ್ಪಂದಕ್ಕೆ ವಿರೋಧ; ಪ್ರಧಾನಿಗೆ
Last Updated 25 ಅಕ್ಟೋಬರ್ 2019, 4:13 IST
ಅಕ್ಷರ ಗಾತ್ರ

ಮೈಸೂರು: ‘ದಡ್ಡನಿಗೆ ಧೈರ್ಯ ಜಾಸ್ತಿ ಎಂಬಂತೆ, ಪ್ರಧಾನಿ ನರೇಂದ್ರ ಮೋದಿ ಅವರು ವಿವೇಚನೆ ಇಲ್ಲದೇ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ)ದ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಬಾರದು’ ಎಂದು ಸಾಹಿತಿ ದೇವನೂರ ಮಹಾದೇವ ಚಾಟಿ ಬೀಸಿದರು.

ಒಪ್ಪಂದ ವಿರೋಧಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ಗುರುವಾರ ಇಲ್ಲಿ ನಡೆದ ಬೃಹತ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಬಡತನ ನಿರ್ಮೂಲನೆ ಎಂದರೆ ಬಡವರ ನಿರ್ಮೂಲನೆ ಅಲ್ಲ. ಒಪ್ಪಂದಕ್ಕೆ ಸಹಿ ಹಾಕಿದರೆ ಬಡ ಜನರನ್ನು ಸಾವಿನ ದವಡೆಗೆ ನೂಕಿದಂತೆ. ಇದು ವಿವೇಕ ಮತ್ತು ವಿವೇಚನೆ ಇದ್ದವರು ಮಾಡುವ ಕೆಲಸ ಅಲ್ಲ’ ಎಂದರು.

‘ನಮ್ಮ ಮಾತು ಕೇಳದಿದ್ದರೂ ಪರವಾಗಿಲ್ಲ. ಕನಿಷ್ಠ ಪಕ್ಷ ಆರ್‌ಎಸ್‌ಎಸ್‌ನ ಸೋದರ ಸಂಘಟನೆಯಾದ ಸ್ಪದೇಶಿ ಜಾಗರಣ್‌ ಮಂಚ್‌ನ ಮಾತನ್ನಾದರೂ ಕೇಳಿ. ಸ್ವಾತಂತ್ರ್ಯಾನಂತರ ಇಂತಹ ಆತ್ಮಹತ್ಯಾ ನಡೆಯನ್ನು ಯಾವ ಸರ್ಕಾರವೂ ಕೈಗೊಂಡಿರಲಿಲ್ಲ ಎಂದು ಅದು ಹೇಳಿದೆ. ಇದನ್ನಾದರೂ ಕೇಳಿ, ಒಪ್ಪಂದಕ್ಕೆ ಸಹಿ ಹಾಕದಿರಿ’ ಎಂದು ಅವರು ಮನವಿ ಮಾಡಿದರು.

‘ಜಾಗತೀಕರಣದ ನಂತರ ವ್ಯಾಪಾರವು ದ್ರೋಹವೇ ಆಗಿ ಕುಣಿದು ಕುಪ್ಪಳಿಸುತ್ತಿದೆ. ವ್ಯಾಪಾರಕ್ಕೆ ಈಗ ಬುದ್ಧಿಯೂ ಕೂಡಿಕೊಂಡು ಇದೇ ಜ್ಞಾನ ಎನಿಸಿದೆ. ಕುತಂತ್ರವೇ ತಂತ್ರಗಾರಿಕೆಯಾಗಿದೆ. ಇಂದು ಆಳ್ವಿಕೆಯೇ ವ್ಯಾಪಾರದ ಕೈಯಲ್ಲಿದೆ. ದ್ರೋಹ ಮತ್ತು ಕುತಂತ್ರಗಳೇ ಆಳುತ್ತಿವೆ. ವ್ಯಾಪಾರವೇ ಯುದ್ಧವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಇಂತಹ ವಿಷಮ ಪರಿಸ್ಥಿತಿಯಲ್ಲಿ ಭಾರತವು 16 ದೇಶಗಳ ಮುಕ್ತ ವ್ಯಾಪಾರಕ್ಕೆ ಸಹಿ ಮಾಡಿದರೆ ಕುಸಿಯುತ್ತಿರುವ ಉದ್ಯೋಗಗಳು ಮತ್ತಷ್ಟು ಕುಸಿಯುತ್ತವೆ ಎಂದು ಎಚ್ಚರಿಸಿದರು.

‘ದುಡಿಯುವ ವರ್ಗ ಎಂದರೆ ಇಂದು ಉಂಡು ಎಸೆಯುವ ಬಾಳೆಲೆ ಎಂತಾಗಿದೆ. ಇದುವರೆಗೂ ಜುಟ್ಟಿಗೆ ಮಲ್ಲಿಗೆ ಹೂ ಸಿಕ್ಕಿಸಿಕೊಂಡು ದೇಶಗಳನ್ನು ಸುತ್ತಿದ್ದು ಸಾಕು. ಇನ್ನಾದರೂ, ಹೊಟ್ಟೆಗೆ ಹಿಟ್ಟು ಕೊಡುವ ಕೆಲಸ ಆಗಬೇಕು’ ಎಂದು ಆಗ್ರಹಿಸಿದರು.

ರಾಮಸ್ವಾಮಿ ವೃತ್ತದಿಂದ ಹಸುಗಳೊಂದಿಗೆ ಮೆರವಣಿಗೆ ಹೊರಟ 500ಕ್ಕೂ ಹೆಚ್ಚು ರೈತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT