ಕಟ್ಟಡ ದುರಂತ ಪ್ರಕರಣ: ಪುತ್ರಿ ಶವದ ಜತೆ 36 ತಾಸು ಕಳೆದ ತಾಯಿ

ಗುರುವಾರ , ಏಪ್ರಿಲ್ 25, 2019
29 °C
ಮೃತ್ಯು ಕಟ್ಟಡದಲ್ಲಿ ಸಾವಿನೊಂದಿಗೆ ಸೆಣಸಿ ಗೆದ್ದರೂ, ಮಗಳು ಉಳಿಯಲಿಲ್ಲ

ಕಟ್ಟಡ ದುರಂತ ಪ್ರಕರಣ: ಪುತ್ರಿ ಶವದ ಜತೆ 36 ತಾಸು ಕಳೆದ ತಾಯಿ

Published:
Updated:
Prajavani

ಹುಬ್ಬಳ್ಳಿ: ಕಟ್ಟಡದ ಅವಶೇಷಗಳಡಿ 36 ತಾಸು ಸಾವು– ಬದುಕಿನ ನಡುವೆ ಹೋರಾಡಿ ಗೆದ್ದ ಆ ತಾಯಿಗೆ, ತನ್ನ ಬಗಲಿನಲ್ಲಿದ್ದ ಮುದ್ದಿನ ಮಗಳನ್ನು ಉಳಿಸಿಕೊಳ್ಳಲಾಗಲಿಲ್ಲ. ಕಣ್ಣೆದುರಿಗೆ ಕೊನೆಯುಸಿರೆಳೆದ ಮಗಳ ಚಹರೆ ನೆನಪಾದಾಗೆಲ್ಲ ಬೆಚ್ಚಿ ಬೀಳುವ ತಾಯಿ, ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿಕೊಂಡೇ ವಿಧಿಯನ್ನು ಶಪಿಸುತ್ತಿದ್ದಾರೆ.

ಧಾರವಾಡದಲ್ಲಿ ಮಾರ್ಚ್ 19ರಂದು ಕುಸಿದ ಬಹುಮಹಡಿ ಕಟ್ಟಡದ ಅವಶೇಷಗಳಡಿ ಸಿಲುಕಿ, ಸಾವು ಗೆದ್ದ ಧಾರವಾಡದ ಶಿವಾನಂದನಗರದ ನಿವಾಸಿ ಪ್ರೇಮಾ ಉಣಕಲ್ ಅವರ ಕರುಣಾಜನಕ ಸ್ಥಿತಿ ಇದು.

ಮುದ್ದಿನ ಮಗಳು ದಿವ್ಯಾ ಉಣಕಲ್ (8) ರಕ್ತಸಿಕ್ತ ಮೃತದೇಹದೊಂದಿಗೆ ಸಾವಿನೊಂದಿಗೆ ಸೆಣಸುತ್ತಿದ್ದ ಅವರನ್ನು ರಕ್ಷಣಾ ಕಾರ್ಯಾಚರಣೆ ಸಿಬ್ಬಂದಿ ಒಂದೂವರೆ ದಿನದ (ಮಾ.20ರ ರಾತ್ರಿ 11.45) ಬಳಿಕ ರಕ್ಷಿಸಿದರು. ಮಗಳ ಮೃತದೇಹವನ್ನು 45 ತಾಸಿನ ಬಳಿಕ ಗುರುವಾರ ಮಧ್ಯಾಹ್ನ 1.30ಕ್ಕೆ ಹೊರ ತೆಗೆಯಲಾಯಿತು.

ವೆಸ್ಟೇಜ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ಎಂಬ ನೆಟ್‌ವರ್ಕಿಂಗ್‌ ಬಿಸಿನೆಸ್ ಕಂಪನಿಯ ಪ್ರತಿನಿಧಿಯಾಗಿದ್ದ ಪ್ರೇಮಾ, ಅಂದು ಕಟ್ಟಡದ ಮೊದಲ ಮಹಡಿಯಲ್ಲಿದ್ದ ಪ್ರತಿನಿಧಿಗಳ ಸಭೆಗೆ ಕೊನೆಯ ಮಗಳಾದ ದಿವ್ಯಾಳನ್ನು ಕರೆದೊಯ್ದಿದ್ದರು. ಇದೀಗ, ಮಗಳು ಬಾರದ ಲೋಕಕ್ಕೆ ಹೋದರೆ, ಕೈ– ಕಾಲು ಆಡಿಸಲಾಗದ ಸ್ಥಿತಿಯಲ್ಲಿರುವ ಪ್ರೇಮಾ ನವನಗರದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಗಳ ಮೇಲೆ ಬಿದ್ದ ಪಿಲ್ಲರ್: ‘ನನ್ನ ಬಗಲಿನಲ್ಲೇ ಅವಶೇಷಗಳಡಿ ಸಿಲುಕಿದ್ದ ಮಗಳು, ನೋವಿನಿಂದ ಚೀರಿಕೊಳ್ಳುತ್ತಿದ್ದಳು. ನನ್ನ ತಲೆ ಹೊರತುಪಡಿಸಿ ದೇಹದ ಪೂರ್ಣಭಾಗ ಅವಶೇಷಗಳಡಿ ಸಿಲುಕಿತ್ತು. ಮೂರ್ನಾಲ್ಕು ತಾಸಿನ ಬಳಿಕ, ಕಷ್ಟಪಟ್ಟು ಕೈಯನ್ನು ಅವಶೇಷಗಳಡಿಯಿಂದ ಮೇಲಕ್ಕೆತ್ತಿಕೊಂಡೆ.

‘ಬಳಿಕ, ಪ್ರಜ್ಞೆ ತಪ್ಪಿದಂತಿದ್ದ ಮಗಳನ್ನು ಎಚ್ಚರಿಸಿದೆ. ನೋವು ತಡೆಯದೆ ಅಳುತ್ತಿದ್ದ ಅವಳ ಕೈ ಹಿಡಿದು ಬಲ ಮಾಡಿ ತನ್ನತ್ತ ಎಳೆದುಕೊಂಡೆ. ಇದ್ದಕ್ಕಿದ್ದಂತೆ ಮೇಲಿದ್ದ ಸ್ಲ್ಯಾಬ್ ಮತ್ತು ಪಿಲ್ಲರ್ ಅವಳ ಮೇಲೆ ಜಾರಿತು. ಕೆಲ ಕ್ಷಣಗಳಲ್ಲೇ ಮಗಳ ಅಳು ನಿಂತಿತು..’ ಎಂದು ಪ್ರೇಮಾ ಅವರು ಆ ಕರಾಳ ದೃಶ್ಯವನ್ನು ನೆನೆಪಿಸಿಕೊಳ್ಳುತ್ತಾರೆ.

ಮಗಳನ್ನು ಬದುಕಿಸಿ ಎಂದು ಗೋಗರೆದರು: ‘ತೀವ್ರ ಹಸಿವು, ಬಾಯಾರಿಕೆ ನೋವಿನಿಂದಾಗಿ ಪ್ರಜ್ಞೆ ತಪ್ಪಿದೆ. ಕೆಲ ತಾಸುಗಳ ಬಳಿಕ ಎಚ್ಚರವಾದಾಗ ಜನರ ಕೂಗು, ಜೆಸಿಬಿ, ಕ್ರೇನ್‌ ಶಬ್ದ ಕೇಳಿತು. ಕೂಡಲೇ ನೆರವಿಗೆ ಕೂಗಿಕೊಳ್ಳತೊಡಗಿದೆ. ಕೆಲ ನಿಮಿಷಗಳ ಬಳಿಕ, ರಕ್ಷಣಾ ಕಾರ್ಯಾಚರಣೆ ಸಿಬ್ಬಂದಿ ನನ್ನತ್ತ ಬಂದರು. ಮಗಳು ಅಲ್ಲಿ ಸಿಲುಕಿದ್ದಾಳೆ. ಮೊದಲು ಅವಳನ್ನು ಮೇಲೆತ್ತಿ ಬದುಕಿಸಿ ಎಂದು ಗೋಗರೆದೆ. ಆದರೆ, ಅವರು ಮೊದಲಿಗೆ ನನ್ನನ್ನು ರಕ್ಷಿಸಿದರು’ ಎನ್ನುವಾಗ ಪುತ್ರಿ ಇನ್ನೂ ಬದುಕಿಯೇ ಇದ್ದಾಳೆ ಎಂಬ ವಿಶ್ವಾಸ ಅವರ ಕಣ್ಣುಗಳಲ್ಲಿ ಎದ್ದು ಕಾಣುತ್ತಿತ್ತು.

ಸಾವಿನ ಸುದ್ದಿ ತಿಳಿಸಿಲ್ಲ: ‘ಆಸ್ಪತ್ರೆಗೆ ಸೇರಿದಾಗಿನಿಂದಲೂ ಪ್ರೇಮಾ ಮಗಳ ಕನವರಿಕೆಯಲ್ಲಿದ್ದಾಳೆ. ಮಗಳು ದಿವ್ಯಾ ಮೃತಪಟ್ಟಿರುವ ವಿಷಯ ನಮಗೆ ಮಧ್ಯಾಹ್ನ ಗೊತ್ತಾಯಿತು. ಆ ವಿಷಯವನ್ನು ಪ್ರೇಮಾಗೆ ಇನ್ನೂ ತಿಳಿಸಿಲ್ಲ’ ಎಂದು ಪ್ರೇಮಾ ಅವರ ಚಿಕ್ಕಮ್ಮ ಸಿದ್ದವ್ವ ಹೇಳಿದರು.

ಮೃತರ ಸಂಖ್ಯೆ 13ಕ್ಕೆ ಏರಿಕೆ

ಬಹುಮಹಡಿ ಕಟ್ಟಡ ಕುಸಿತ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಎಂಟು ವರ್ಷದ ಬಾಲಕಿ ಸೇರಿದಂತೆ ಒಟ್ಟು ಏಳು ಮೃತ ದೇಹಗಳನ್ನು ಗುರುವಾರ ಹೊರತೆಗೆಯಲಾಯಿತು. ಈವರೆಗೆ 56 ಮಂದಿಯನ್ನು ರಕ್ಷಿಸಲಾಗಿದೆ.

ಕಟ್ಟಡದೊಳಗೆ ಇನ್ನೂ 11 ಜನರು ಸಿಲುಕಿರುವ ಶಂಕೆ ಇದೆ. ಸ್ಥಳದಲ್ಲಿ ದುರ್ವಾಸನೆ ಬರಲಾರಂಭಿಸಿದ್ದು, ಸಾವಿನ ಸಂಖ್ಯೆ ಹೆಚ್ಚಾಗಬಹುದೇ ಎಂಬ ಅನುಮಾನ ಕಾಡಲಾರಂಭಿಸಿದೆ. ಕಟ್ಟಡದ ವಿನ್ಯಾಸ ಮಾಡಿದ್ದ ಎಂಜಿನಿಯರ್ ವಿವೇಕ ಪವಾರ್ ಎಂಬಾತನನ್ನು ಬಂಧಿಸಲಾಗಿದೆ.

ಅವಶೇಷ ಸಂಪೂರ್ಣ ತೆರವಿಗೆ ಇನ್ನೂ ಮೂರು ದಿನ ಬೇಕಾಗಲಿದೆ. 12ಕ್ಕೂ ಹೆಚ್ಚು ಯುವತಿಯರು ಸಿಲುಕಿದ್ದಾರೆ ಎನ್ನಲಾದ ಕಂಪ್ಯೂಟರ್ ಕೆಫೆಯಲ್ಲಿ ಯಾರೂ ಇರಲಿಲ್ಲ.

ಸ್ಥಳಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭೇಟಿ ನೀಡಿದ್ದರು.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 22

  Sad
 • 2

  Frustrated
 • 4

  Angry

Comments:

0 comments

Write the first review for this !