ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧೀಜಿಯವರನ್ನು ಉಲ್ಲೇಖಿಸಿ ನಾನು ಏನನ್ನೂ ಹೇಳಿಲ್ಲ: ಅನಂತಕುಮಾರ ಹೆಗಡೆ

Last Updated 4 ಫೆಬ್ರುವರಿ 2020, 9:49 IST
ಅಕ್ಷರ ಗಾತ್ರ

ಬೆಂಗಳೂರು:‘ಕೆಲವರದ್ದು ಬ್ರಿಟಿಷರ ಜೊತೆಗೆ ಹೊಂದಾಣಿಕೆಯ ಹೋರಾಟ, ಉಪವಾಸಕ್ಕೆ ಹೆದರಿ ಬ್ರಿಟಿಷರು ಸ್ವಾತಂತ್ರ ಕೊಟ್ಟದ್ದಲ್ಲ,’ ಎಂಬ ತಮ್ಮ ಹೇಳಿಕೆ ಗಾಂಧೀಜಿ ಅವರನ್ನು ಕುರಿತಾದದ್ದು ಎಂಬ ವಾದ, ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿಈಬಗ್ಗೆ ಸ್ಪಷ್ಟನೆ ನೀಡಿರುವ ಸಂಸದ ಅನಂತಕುಮಾರ ಹೆಗಡೆ, ‘ನನ್ನ ಭಾಷಣದಲ್ಲಿ ನಾನು ಯಾವುದೇ ವ್ಯಕ್ತಿ, ಪಕ್ಷವನ್ನು ಉಲ್ಲೇಖಿಸಿಲ್ಲ,’ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್‌ಐ ಜೊತೆಗೆ ಮಂಗಳವಾರ ಮಾತನಾಡಿರುವ ಅನಂತಕುಮಾರ ಹೆಗಡ ‘ನನ್ನ ಹೇಳಿಕೆಯಲ್ಲಿ ಯಾವುದೇ ರಾಜಕೀಯ ಪಕ್ಷವನ್ನಾಗಲಿ, ಮಹಾತ್ಮಾ ಗಾಂಧೀಜಿ ಅವರನ್ನಾಗಲಿ ಅಥವಾ ಯಾವುದೇ ವ್ಯಕ್ತಿಯನ್ನಾಗಲಿ ಉಲ್ಲೇಖಿಸಿಲ್ಲ. ಸ್ವಾತಂತ್ರ್ಯ ಹೋರಾಟದ ಬಗೆಗಳನ್ನು ನಾನು ವಿಭಾಗಿಸಿ ಹೇಳಿದ್ದೆ. ನಾನು ಅಂದು ಏನು ಮಾತನಾಡಿದ್ದೆ ಎಂಬುದು ಎಲ್ಲೆಡೆ ಲಭ್ಯವಿದೆ. ನನ್ನ ವೆಬ್‌ಸೈಟ್‌ನಲ್ಲಿಯೂ ಇದೆ. ಅಂದಿನ ಭಾಷಣದಲ್ಲಿ ನಾನು ಗಾಂಧೀಜಿ ಅವರನ್ನಾಗಲಿ, ನೆಹರೂ ಅವರನ್ನಾಗಲಿ ಟೀಕಿಸಿಲ್ಲ. ದೇಶದ ಸ್ವಾತಂತ್ರ್ಯ ಹೋರಾಟದ ಕುರಿತು ಚರ್ಚೆ ಮಾಡಿದ್ದೆ,’ ಎಂದು ಹೇಳಿದ್ದಾರೆ.

‘ನನ್ನ ಹೇಳಿಕೆ ಕುರಿತಂತೆ ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳು, ವಿಶ್ಲೇಷಣೆಗಳೆಲ್ಲವೂ ಸುಳ್ಳು. ಈಗ ಚರ್ಚೆಯಾಗುತ್ತಿರುವಂತೆ ನಾನು ಏನೂ ಹೇಳಿಲ್ಲ. ಇದು ಅನಗತ್ಯ ವಿವಾದ,’ ಎಂದು ಅವರು ಹೇಳಿದ್ದಾರೆ. ‌

ಸಮೃದ್ಧ ಸಾಹಿತ್ಯ ಹಾಗೂ ಸಾವರ್ಕರ್ ಸಾಹಿತ್ಯ ಸಂಘ ಜ.1 ಶನಿವಾರ ಬೆಂಗಳೂರಿನಲ್ಲಿ ಆಯೋಜಿಸಿದ್ದ ‘ಮತ್ತೆ ಮತ್ತೆ ಸಾವರ್ಕರ್’ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅನಂತ ಕುಮಾರ ಹೆಗಡೆ ‘ಈ ದೇಶದಲ್ಲಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಮೂರು ವಿಧವಿದೆ. ಚಂದ್ರಶೇಖರ ಆಜಾದ್, ಭಗತ್ ಸಿಂಗ್‌ ಅಂತಹ ಕ್ರಾಂತಿಕಾರಿಗಳು ಶಸ್ತ್ರಸಜ್ಜಿತರಾಗಿ ಹೋರಾಟ ಮಾಡಿದರು. ಇನ್ನೊಂದು ವರ್ಗ ಅತ್ಯಂತ ಪ್ರಖರ ರಾಷ್ಟ್ರೀಯ ವಿಚಾರಗಳೊಂದಿಗೆ ಶಿವಾಜಿ, ಹುಕ್ಕ–ಬುಕ್ಕರಂತಹ ನೂರಾರು ಮಂದಿಯನ್ನು ಮುಂದೆ ತಂದರು. ಇನ್ನೊಂದು ರೀತಿಯ ಸ್ವಾತಂತ್ರ್ಯ ಹೋರಾಟಗಾರರು ಹೇಗೆ ಹೋರಾಟ ಮಾಡಬೇಕು ಎಂದು ಬ್ರಿಟಿಷರ ಬಳಿಯೇ ಕೇಳಿ, ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡರು. ಒಳಗಡೆ (ಜೈಲಿನಲ್ಲಿ) ನಮ್ಮನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಮನವಿ ಮಾಡಿಕೊಂಡರು. ಪರಿಣಾಮ ಲಾಠಿ ನೋಡದ, ಏಟು ತಿನ್ನದವರನ್ನು ಇತಿಹಾಸದ ಪುಟಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಎಂದು ಬಿಂಬಿಸಲಾಯಿತು. ಇತಿಹಾಸದ ಪ್ರಕಾರ ಬ್ರಿಟಿಷರು ಉಪವಾಸಕ್ಕೆ ಹೆದರಿ, ಸ್ವಾತಂತ್ರ್ಯ ಕೊಟ್ಟು ಓಡಿ ಹೋದರು ಎಂಬುದನ್ನು ಕೇಳಿದರೆ ತಣ್ಣಗಿರುವ ರಕ್ತ ಹೆಪ್ಪುಗಟ್ಟಿ ಹೋಗುತ್ತದೆ’ ಎಂದು ಹೇಳಿದ್ದರು.

ಅನಂತಕುಮಾರ ಅವರ ಹೇಳಿಕೆಯು ಸ್ವಾತಂತ್ರ್ಯಕ್ಕಾಗಿ ಉಪವಾಸ ಸತ್ಯಾಗ್ರಹ ಮಾಡಿದ್ದ ಗಾಂಧೀಜಿ ಅವರ ಹೋರಾಟವನ್ನು ಪ್ರಶ್ನಿಸುವಂತಿದೆ ಎಂಬ ಟೀಕೆಗಳು ರಾಜಕೀಯ, ಸಾಮಾಜಿಕ ವಲಯದಿಂದ ಕೇಳಿ ಬಂದಿತ್ತು.

ಇದೇ ವಿಚಾರವಾಗಿ ಬಿಜೆಪಿ ಕೇಂದ್ರ ಶಿಸ್ತುಪಾಲನ ಸಮಿತಿಯು ಅನಂತಕುಮಾರ ಹೆಗಡೆ ಅವರಿಗೆ ನೋಟಿಸ್‌ ಜಾರಿ ಮಾಡಿ ವಿವರಣೆ ಕೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT