ಶನಿವಾರ, ಜನವರಿ 18, 2020
27 °C
ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಸಿದ್ಧಿ

ಅಜ್ಜನ ಜಾತ್ರೆಗೆ ಡಿಜಿಟಲ್‌ ಟಚ್‌: ಹಾಡಿನ ಮೂಲಕ ಆಹ್ವಾನ

ಅನಿಲ್‌ ಬಾಚನಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ‘ದಕ್ಷಿಣ ಭಾರತದ ಕುಂಭಮೇಳ’ ಎಂದು ಪ್ರಸಿದ್ಧಿ ಪಡೆದಿರುವ ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆಗೆ ಟ್ರೇಲರ್‌ ಸಾಂಗ್‌ ನಿರ್ಮಿಸಿ, ಸಾಮಾಜಿಕ ಜಾಲತಾಣಗಳ ಮೂಲಕ ಭಕ್ತರನ್ನು ಆಹ್ವಾನಿಸಲಾಗುತ್ತಿದೆ. ಈ ಮೂಲಕ ಜಾತ್ರೆಗೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಲಾಗಿದೆ.

ಗವಿಸಿದ್ಧೇಶ್ವರ ಜಾತ್ರೆಯು ಜನವರಿ 12, 13 ಹಾಗೂ 14ರಂದು ನಡೆಯಲಿದ್ದು, ಮೂರು ದಿನ ನಡೆಯುವ ಕಾರ್ಯಕ್ರಮಗಳ ಮಾಹಿತಿ ನೀಡಲು, ಟ್ರೇಲರ್‌ ಸಾಂಗ್‌ ಬಿಡುಗಡೆಗೊಳಿಸಲಾಗಿದೆ.

2.10 ನಿಮಿಷಗಳ ಈ ಸಾಂಗ್‌ ಜಾತ್ರೆಯ ವೈಶಿಷ್ಟ್ಯ ಹಾಗೂ ಚಿತ್ರಣವನ್ನು ಸಂಕ್ಷಿಪ್ತವಾಗಿ ಕಣ್ಮುಂದೆ ತರುತ್ತದೆ. ಅಲ್ಲದೆ, ಮಠದ ಅಧ್ಯಾತ್ಮಿಕ, ಅನ್ನ, ಅಕ್ಷರ ದಾಸೋಹದ ಹಿರಿಮೆಯನ್ನು ತಿಳಿಸುತ್ತದೆ.

‘ಭಕ್ತಿಯ ಮನೆ ಮನಗಳಲ್ಲಿ, ಮುಕ್ತಿಯ ಕೆನೆ ನೆನಹಿನಲ್ಲಿ, ಓಂಕಾರವು ಕೋಟೆ ಕಟ್ಟಿ, ಬೆಟ್ಟಗಳು ಧ್ಯಾನದಲಿ, ಸಿದ್ದ ಪುರುಷ ಗವಿಸಿದ್ದನೇ, ಇಷ್ಟ ಪ್ರಾಣ ಭಾವದಲ್ಲಿ ಜಾತ್ರೋತ್ಸವ ನಮ್ಮ ಯಾತ್ರೋತ್ಸವ’ ಎಂಬ ಪೀಠಾಧಿಪತಿ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿಯವರ ಸಾಹಿತ್ಯಕ್ಕೆ ಕೊಪ್ಪಳದ ಗಾಯಕ ಸದಾಶಿವ ಪಾಟೀಲ ಧ್ವನಿಯಾಗಿದ್ದಾರೆ. ಹೊಸಪೇಟೆಯ ಶಶಿಧರ ಚಿತ್ರೀಕರಿಸಿ, ದೃಶ್ಯ ಸಂಯೋಜಿಸಿದ್ದಾರೆ.

ಶ್ರೀಗವಿಸಿದ್ಧೇಶ್ವರ ವಸತಿ ನಿಲಯದ ಮಕ್ಕಳಿಗೆ ಬಲೂನ್ ನೀಡಿ ಇವರನ್ನು ತೊಡಗಿಸಿಕೊಂಡು ‘ಅಜ್ಜನ ಜಾತ್ರೆಗೆ ಬನ್ನಿ’ ಎಂಬ ಕನ್ನಡ ವರ್ಣಮಾಲೆಗಳ ವಾಕ್ಯ ಸಂಯೋಜಿಸಿ, ಆ ದೃಶ್ಯ ಡ್ರೋಣ್ ಕ್ಯಾಮೆರಾ ಮೂಲಕ ಸೆರೆಹಿಡಿದ ವಿಡಿಯೊವನ್ನು ಟ್ರೇಲರ್‌ನಲ್ಲಿ ಬಳಸಲಾಗಿದೆ.

ಈ ಹಾಡಿನಲ್ಲಿ ಭಕ್ತಿ ಸಂಗೀತ, ಶ್ರೀಮಠದ ಜಾತ್ರೆಯ ಚಿತ್ರಿತ ವೈಶಿಷ್ಟ್ಯಪೂರ್ಣ ಪುಣ್ಯಕಾರ್ಯಗಳು, ತೆಪ್ಪೋತ್ಸವ, ಭಕ್ತಿಯ ಸಿಂಚನದ ಚಿತ್ರ, ಇಲ್ಲಿನ ಪ್ರಾಕೃತಿಕ ಬೆಟ್ಟ–ಗುಡ್ಡಗಳು, ಕೆರೆ–ಹಳ್ಳಗಳ ಸಹಜ ವೈಭವವನ್ನು ಚಿತ್ರೀಕರಣ ಮಾಡಲಾಗಿದೆ. ಈ ಸಾಂಗ್‌, ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸ್‌ಆ್ಯಪ್‌, ಯೂಟ್ಯೂಬ್‌ಗಳಲ್ಲಿ ಹರಿದಾಡುತ್ತಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು