ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸ್ತಪ್ರತಿಗಳಿಗೆ ಡಿಜಿಟಲ್ ರೂಪ

ಮೈಸೂರು ವಿಶ್ವವಿದ್ಯಾಲಯಕ್ಕೆ ಪ್ರಸ್ತಾವ ಸಲ್ಲಿಸಿದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ
Last Updated 22 ಫೆಬ್ರುವರಿ 2020, 20:38 IST
ಅಕ್ಷರ ಗಾತ್ರ

ಮೈಸೂರು: ಹಸ್ತಪ್ರತಿ ವಿಭಾಗದಲ್ಲಿರುವ ತಾಳೆಗರಿ ಹಾಗೂ ಕಾಗದಗಳನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸಲು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ಧರಿಸಿದೆ. ಈ ಬಗ್ಗೆ ಮೈಸೂರು ವಿಶ್ವವಿದ್ಯಾಲಯಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಸ್ಪಂದನೆ ಸಿಕ್ಕಿದೆ.

ಮೈಸೂರಿನ ಓರಿಯಂಟಲ್ ಸಂಶೋಧನಾ ಸಂಸ್ಥೆಯಲ್ಲಿ ಹಳಗನ್ನಡ, ಸಂಸ್ಕೃತ, ದೇವನಾಗರಿ, ನಂದಿನಾಗರಿ, ಬ್ರಾಹ್ಮಿ, ಖರೋಷ್ಠಿ, ತಿಗಳಾರಿ, ತಮಿಳು, ತೆಲುಗು ಲಿಪಿಯ ಹಸ್ತಪ್ರತಿಗಳನ್ನು ಸಂರಕ್ಷಿಸಲಾಗಿತ್ತು. ಇವುಗಳಲ್ಲಿ ಹಳಗನ್ನಡದ ಹಸ್ತಪ್ರತಿಗಳನ್ನು 1968ರಲ್ಲಿ ಕನ್ನಡ ಅಧ್ಯಯನ ಸಂಸ್ಥೆಗೆ ಹಸ್ತಾಂತರಿಸಲಾಗಿತ್ತು. ಇದೀಗ ಇಲ್ಲಿ 8 ಸಾವಿರ ಶೀರ್ಷಿಕೆಗಳ 3,923 ಹಸ್ತಪ್ರತಿಗಳಿದ್ದು, ಈ ಪೈಕಿ 2,482 ತಾಳೆಗರಿ ಹಾಗೂ 1,441 ಕಾಗದ ಪ್ರತಿಗಳಿವೆ.

ಹಸ್ತಪ್ರತಿಗಳ ಸಂರಕ್ಷಣಾ ಕಾರ್ಯದ ಜೊತೆಗೆ, ಇವುಗಳನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸಿ ಸಾಹಿತ್ಯಾಸಕ್ತರು ಹಾಗೂ ಸಂಶೋಧಕರಿಗೆ ಸುಲಭವಾಗಿ ಸಿಗುವಂತೆ ಮಾಡುವ ಉದ್ದೇಶದಿಂದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎನ್.ಎಂ.ತಳವಾರ ಅವರು ಮೂರು ತಿಂಗಳ ಹಿಂದೆ ಮೈಸೂರು ವಿಶ್ವವಿದ್ಯಾಲಯದ ಕುಲಸಚಿವರಿಗೆ ಪ್ರಸ್ತಾವ ಸಲ್ಲಿಸಿದ್ದರು. ಹಸ್ತಪ್ರತಿಗಳ ಡಿಜಿಟಲೀಕರಣಕ್ಕೆ ಆಸಕ್ತಿ ತೋರಿ, ಬೆಂಗಳೂರಿನ ಸಂಸ್ಥೆಯೊಂದರ ಪ್ರತಿನಿಧಿಗಳೂ ಇತ್ತೀಚೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇಲ್ಲಿ ಸಾಹಿತ್ಯ ಕೃತಿಗಳಲ್ಲದೆ, ವೈದ್ಯಶಾಸ್ತ್ರ, ಅಶ್ವಶಾಸ್ತ್ರ, ಗಜಶಾಸ್ತ್ರಕ್ಕೆ ಸಂಬಂಧಿಸಿದ ಹಸ್ತಪ್ರತಿಗಳೂ ಇವೆ. ಎಷ್ಟು ಜಾತಿಯ ಕುದುರೆಗಳಿವೆ, ಅವುಗಳ ಲಕ್ಷಣಗಳೇನು, ಆಹಾರ ಕ್ರಮವೇನು ಎಂಬೆಲ್ಲ ಮಾಹಿತಿ ಅಶ್ವಶಾಸ್ತ್ರದಲ್ಲಿದೆ. ಕೆಲ ಹಸ್ತಪ್ರತಿಗಳು ಸಚಿತ್ರ ರೂಪದಲ್ಲಿವೆ. ಶೈವ ಧರ್ಮಕ್ಕೆ ಸಂಬಂಧಿಸಿದಂತೆ ಉದ್ಧರಣ ಪಟಲಗಳಿದ್ದು, ನೈಸರ್ಗಿಕ ಬಣ್ಣಗಳನ್ನು ಬಳಸಿ ಚಿತ್ರಗಳನ್ನು ಬಿಡಿಸ
ಲಾಗಿದೆ. ಅದೇ ರೀತಿ, ಲೆಕ್ಕಪತ್ರಗಳಿಗೆ ಸಂಬಂಧಿಸಿದ ‘ಕಡತ’ಗಳೂ ಇವೆ. ಒಂದೇ ಕೃತಿಯನ್ನು 2-3 ಹಸ್ತಪ್ರತಿಗಳಲ್ಲಿ ಬರೆದಿದ್ದರೆ, ಒಂದೇ ಹಸ್ತಪ್ರತಿಯಲ್ಲಿ 2-3 ಕೃತಿಗಳನ್ನು ರಚಿಸಿರುವುದನ್ನೂ ಕಾಣಬಹುದು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿರುವಷ್ಟು ಹಸ್ತಪ್ರತಿಗಳು ರಾಜ್ಯದ ಯಾವ ವಿಶ್ವವಿದ್ಯಾಲಯದಲ್ಲೂ ಇಲ್ಲ. ಅಮೂಲ್ಯ ಸಂಪತ್ತಾಗಿರುವ ಇವುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕಾಪಿಡುವುದು ತುರ್ತು ಅಗತ್ಯವಾಗಿದೆ. ಹೀಗಾಗಿ, ಡಿಜಿಟಲೀಕರಣ ಮಾಡಲು ಪ್ರಸ್ತಾವ ಸಲ್ಲಿಸಲಾಗಿದೆ. ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಹಾಗೂ
ಕುಲಸಚಿವ ಪ್ರೊ.ಆರ್‌.ಶಿವಪ್ಪ ಅವರು ಹಸ್ತಪ್ರತಿಗಳನ್ನು ಡಿಜಿಟಲ್ ರೂಪಕ್ಕೆ ತರಲು ಉತ್ಸುಕರಾಗಿದ್ದಾರೆ ಎಂದು ಪ್ರೊ.ತಳವಾರ ತಿಳಿಸಿದರು.

ಹಸ್ತಪ್ರತಿ ವಿಭಾಗದಲ್ಲಿ ಸಿಬ್ಬಂದಿ ಕೊರತೆ
‘ಈ ವಿಭಾಗದಲ್ಲಿ 8ರಿಂದ 10 ಸಂಶೋಧನಾ ಸಹಾಯಕರಿದ್ದರು. ಈಗ ಮೂವರು ಇದ್ದಾರೆ. ಈ ವಿಭಾಗಕ್ಕೆಂದೇ ಉಪನಿರ್ದೇಶಕ ಹುದ್ದೆಯೂ ಇದ್ದು, ಈಗ ಅದು ಖಾಲಿ ಇದೆ. ಇದೇ ವಿಭಾಗದಲ್ಲಿ ಕೆಲಸ ಮಾಡಿ ನಿವೃತ್ತರಾಗಿರುವ ಡಾ.ವೈ.ಸಿ.ಭಾನುಮತಿ ಅವರ ಸಹಾಯವನ್ನು ಪಡೆಯುತ್ತಿದ್ದೇವೆ. ಅದೇ ರೀತಿ, ನಿವೃತ್ತ ಪ್ರಾಧ್ಯಾಪಕರಾದ ಡಾ. ತಾರಾನಾಥ್, ಕೆ.ಜಿ.ನಾರಾಯಣಪ್ರಸಾದ್, ಜಿ.ಜಿ.ಮಂಜುನಾಥ್ ಅವರೂ ಹಸ್ತಪ್ರತಿ ಸಂಪಾದನೆಗೆ ಕೈಜೋಡಿಸಿದ್ದಾರೆ. ಭಾನುಮತಿ ನೇತೃತ್ವದಲ್ಲಿ ಒಟ್ಟು 5 ಕೃತಿಗಳು ಸಿದ್ಧವಾಗಿದ್ದು, ಖಾಸಗಿ ಪ್ರಕಾಶನದ ಮೂಲಕ ಪ್ರಕಟಿಸಲು ಉದ್ದೇಶಿಸಲಾಗಿದೆ. ಸಿಬ್ಬಂದಿ ಕೊರತೆ ನೀಗಿಸಿದರೆ ಮತ್ತಷ್ಟು ರಚನಾತ್ಮಕ ಕೆಲಸಗಳು ಆಗುತ್ತವೆ’ ಎಂದು ಪ್ರೊ.ಎನ್.ಎಂ.ತಳವಾರ ತಿಳಿಸಿದರು.

*
ಹಸ್ತಪ್ರತಿಗಳನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸುವುದರಿಂದ ಅವುಗಳ ಸಂರಕ್ಷಣೆ ಜತೆಗೆ ಎಲ್ಲರಿಗೂ ಸುಲಭವಾಗಿ ಸಿಗಲಿವೆ.
–ಪ್ರೊ.ಎನ್.ಎಂ.ತಳವಾರ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ

*
ಹಸ್ತಪ್ರತಿಗಳ ಡಿಜಿಟಲೀಕರಣಕ್ಕಾಗಿ ಕನ್ನಡ ಅಧ್ಯಯನ ಸಂಸ್ಥೆ ಪ್ರಸ್ತಾವ ಸಲ್ಲಿಸಿದೆ. ಇದಕ್ಕೆ ಅಗತ್ಯವಿರುವ ಹಣಕಾಸಿನ ವ್ಯವಸ್ಥೆ ಮಾಡಲಾಗುವುದು.
–ಪ್ರೊ.ಆರ್‌.ಶಿವಪ್ಪ, ಕುಲಸಚಿವ, ಮೈಸೂರು ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT