ಬುಧವಾರ, ಏಪ್ರಿಲ್ 8, 2020
19 °C

ಮುಸ್ಲಿಂ ಹೆಂಗಸಿನ ಹಿಂದೆ ಓಡಿ ಹೋದವನು;ದಿನೇಶ್‌ ಬಗ್ಗೆ ಅನಂತಕುಮಾರ ಹೆಗಡೆ ಟ್ವೀಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರನ್ನು ‘ಮುಸ್ಲಿಂ ಹೆಂಗಸಿನ ಹಿಂದೆ ಓಡಿ ಹೋದವನು...’ ಎಂದೆಲ್ಲ ಹೀಯಾಳಿಸಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮಾಡಿರುವ ಟ್ವೀಟ್‌ಗೆ ದಿನೇಶ್‌ ಪ್ರತಿಕ್ರಿಯಿಸಿದ್ದು, ’ಇದು ಅವರಲ್ಲಿನ ಸಂಸ್ಕೃತಿಯ ಅಭಾವವನ್ನು ತೋರುತ್ತದೆ..’ ಎಂದಿದ್ದಾರೆ. 

‘ವೈಯಕ್ತಿಕ ವಿಚಾರಗಳನ್ನು ಚರ್ಚಿಸುವ ಮೂಲಕ ಅನಂತಕುಮಾರ್‌ ಹೆಗಡೆ ಅತ್ಯಂತ ಕೆಳಮಟ್ಟಕೆ ಇಳಿದಿರುವುದನ್ನು ಕಾಣಲು ಬೇಸರವಾಗುತ್ತಿದೆ. ಬಹುಶಃ ಇದು ಅವರಲ್ಲಿನ ಸಂಸ್ಕಾರದ ಕೊರತೆಯುನ್ನು ತೋರುತ್ತದೆ. ಅವರು ಹಿಂದೂ ಧರ್ಮಗ್ರಂಥಗಳಿಂದ ತಿಳಿವಳಿಕೆ ಪಡೆದಂತೆ ಕಾಣುತ್ತಿಲ್ಲ. ಸಮಯ ಇನ್ನೂ ಮೀರಿಲ್ಲ, ಪ್ರಯತ್ನಿಸಿದರೆ ಅವರೂ ಸಹ ಘನತೆಯುಳ್ಳ ವ್ಯಕ್ತಿಯಾಗಲು ಸಾಧ್ಯವಿದೆ’ ಎಂದು ದಿನೇಶ್‌ ಗುಂಡೂರಾವ್‌ ಸೋಮವಾರ ಟ್ವೀಟ್‌ ಮೂಲಕ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆಗೆ ಸಲಹೆ ನೀಡಿದ್ದಾರೆ. 

‘ಹಿಂದೂ ಸಮಾಜದ ಹೆಣ್ಣು ಮಕ್ಕಳನ್ನು ಅನ್ಯಧರ್ಮದ ಯುವಕರು ಮುಟ್ಟಿದರೆ ಅವರ ಕೈ ಇರಬಾರದು. ಹಿಂದೂ ಸಂಘಟನೆಯ ಕಾರ್ಯಕರ್ತರು ಅಂಥವರ ಕೈತೆಗೆದು ಇತಿಹಾಸ ನಿರ್ಮಿಸಬೇಕು’ ಎಂದು ಭಾನುವಾರ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ನೀಡಿದ್ದ ಹೇಳಿಕೆಯ ವರದಿಯೊಂದನ್ನು ಹಂಚಿಕೊಂಡು, ‘ಸಂಸದರಾಗಿ ನಿಮ್ಮ ಸಾಧನೆ ಏನು’ ಎಂದು ದಿನೇಶ್‌ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದರು. 

ಇದನ್ನೂ ಓದಿ: ಹಿಂದೂ ಹೆಣ್ಣು ಮಕ್ಕಳ ಮುಟ್ಟಿದವರ ಕೈ ಇರಬಾರದು: ಅನಂತಕುಮಾರ ಹೆಗಡೆ

‘ಕೇಂದ್ರ ಸಚಿವರಾದ ಬಳಿಕ ಅಥವಾ ಸಂಸದರಾಗಿ ನಿಮ್ಮ ಸಾಧನೆಗಳೇನು? ಕರ್ನಾಟಕದ ಅಭಿವೃದ್ಧಿಗೆ ನಿಮ್ಮ ಕೊಡುಗೆಗಳೇನು?- ಇಂಥ ವ್ಯಕ್ತಿಗಳು ಸಚಿವರಾಗುವುದು ಹಾಗೂ ಸಂಸದರಾಗಿ ಆಯ್ಕೆಯಾಗುವುದು ಶೋಚನೀಯ ಎಂದು ಹೇಳಬಹುದು’– ಹೀಗೆ ದಿನೇಶ್‌ ಮಾಡಿದ್ದ ಟ್ವೀಟ್‌ಗೆ ಪ್ರತಿಯಾಗಿ; ’ದಿನೇಶ್‌ ಗುಂಡೂರಾವ್‌ ಅವರ ಪ್ರಶ್ನೆಗಳಿಗೆ ನಾನು ಖಂಡಿತವಾಗಿ ಉತ್ತರಿಸುತ್ತೇನೆ, ಅದಕ್ಕೂ ಮುನ್ನ ಸಾಧನೆಗಳೊಂದಿಗೆ ಅವರು ಯಾರೆಂದು ನಮಗೆ ತಿಳಿಸಿಕೊಡಲಿ. ಆತ ಮುಸ್ಲಿಂ ಮಹಿಳೆಯ ಹಿಂದೆ ಓಡಿದವನಾಗಿ ಮಾತ್ರ ನನಗೆ ತಿಳಿದಿದೆ’ ಎಂದು ಅನಂತಕುಮಾರ್‌ ಹೆಗಡೆ ಟ್ವೀಟಿಸಿದ್ದರು. 

ಈ ನಾಯಕರ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ ಹಗ್ಗಜಗ್ಗಾಟದಲ್ಲಿ ಪರ–ವಿರೋಧಿಗಳ ತಂಡವೂ ಕೈಜೋಡಿಸಿ, ಸರಣಿ ಚರ್ಚೆಗಳಿಗೆ ನಾಂದಿ ಹಾಡಿದೆ. 

ಇದನ್ನೂ ಓದಿ: ಹಿಂದೂ ಸಮಾಜ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಖಂಡಿತ: ಅನಂತಕುಮಾರ್ ಹೆಗಡೆ

‘ಹಲವು ಬಾರಿ ಪ್ರಚೋದನೆಯ ಹೇಳಿಕೆ ನೀಡಿ ಅನಂತರ ಕ್ಷಮೆ ಬೇಡುವ ಚಾಳಿ ಇರುವ ಈ ವ್ಯಕ್ತಿಗೆ ಯಾಕಿಷ್ಟು ತುರಿಕೆರೋಗ?’ ಎಂದೂ ಅನಂತಕುಮಾರ್‌ ಹೆಗಡೆ ಟ್ವೀಟಿಸಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು