ಐಐಟಿಯಲ್ಲಿ ಲಿಂಗ ತಾರತಮ್ಯದ ಆರೋಪ

7
ರಾತ್ರಿ 9.30ರ ನಂತರ ಹಾಸ್ಟೆಲ್‌ ಕೊಠಡಿಯಿಂದ ಹೊರಹೋಗುವಂತಿಲ್ಲ! l ವಿದ್ಯಾರ್ಥಿನಿಯರ ಅಸಮಾಧಾನ

ಐಐಟಿಯಲ್ಲಿ ಲಿಂಗ ತಾರತಮ್ಯದ ಆರೋಪ

Published:
Updated:
Deccan Herald

ಧಾರವಾಡ: ಎರಡು ವರ್ಷಗಳ ಹಿಂದೆ ಇಲ್ಲಿ ಆರಂಭವಾದ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಕ್ಯಾಂಪಸ್‌ನಲ್ಲಿ ಲಿಂಗತಾರತಮ್ಯದ ಆರೋಪ ಕೇಳಿ ಬಂದಿದೆ.

‘ರಾತ್ರಿ 9.30ರ ನಂತರ ಅಧ್ಯಯನಕ್ಕಾಗಿ, ಪ್ರಯೋಗಾಲಯ ಹಾಗೂ ಗ್ರಂಥಾಲಯಗಳಂಥ ಸೌಲಭ್ಯ ಪಡೆಯಲು ವಿದ್ಯಾರ್ಥಿನಿಯರಿಗೆ ಅವಕಾಶವಿಲ್ಲ. ಏನಿದ್ದರೂ ಅವುಗಳನ್ನು ತಮ್ಮ ಕೊಠಡಿಯಲ್ಲಿ ಇಲ್ಲವೇ ವಾರಾಂತ್ಯದಲ್ಲಿ ಮಾಡಿಕೊಳ್ಳಬೇಕು’ ಎಂಬ ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪ್ರೊ. ಎಸ್‌.ವಿ.ಪ್ರಭು ಅವರ ನಿರ್ಧಾರ ವಿದ್ಯಾರ್ಥಿನಿಯರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ತಾರತಮ್ಯ ಕುರಿತು ವಿದ್ಯಾರ್ಥಿನಿಯರು ತಮ್ಮ ಗೋಳನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದು, ತಮ್ಮ ಭವಿಷ್ಯದ ದೃಷ್ಟಿಯಿಂದ ಹೆಸರುಬಹಿರಂಗಪಡಿಸಲು ನಿರಾಕರಿಸಿದ್ದಾರೆ.

ಇಲ್ಲಿನ ಹೈಕೋರ್ಟ್ ಪೀಠದ ಬಳಿ ಇರುವ ಕರ್ನಾಟಕ ನೆಲ ಮತ್ತು ನೀರು ನಿರ್ವಹಣಾ ಸಂಸ್ಥೆಯ ಆವರಣದಲ್ಲಿ ಸ್ಥಾಪಿಸಲಾಗಿರುವ ತಾತ್ಕಾಲಿಕ ಕಟ್ಟಡದಲ್ಲಿ ಸದ್ಯ ಐಐಟಿ ಧಾರವಾಡ ಕಾರ್ಯನಿರ್ವಹಿಸುತ್ತಿದೆ. ಮುಖ್ಯ ಕಟ್ಟಡದಿಂದ ತುಸು ದೂರದಲ್ಲಿ ವಿದ್ಯಾರ್ಥಿ ನಿಲಯಗಳಿವೆ. ಮುಖ್ಯ ಕ್ಯಾಂಪಸ್ ಪಕ್ಕದಲ್ಲೇ ಇದ್ದ ವಿದ್ಯಾರ್ಥಿನಿಯರ ನಿಲಯವನ್ನು ಕೆಲವು ದಿನಗಳ ಹಿಂದೆ ಬದಲಿಸಲಾಗಿದೆ. 

ವಿದ್ಯಾರ್ಥಿನಿಯರೇ ಹೇಳುವಂತೆ, ತುರ್ತು ಸಭೆ ಕರೆದ ಡೀನ್‌, ವಿದ್ಯಾರ್ಥಿನಿಯರು ರಾತ್ರಿ 9.30ರ ನಂತರ ಹೊರಹೋಗುವಂತಿಲ್ಲ. ಒಂದೊಮ್ಮೆ ಹೋಗಿದ್ದೇ ಆದಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಕನಿಷ್ಠ ಪಕ್ಷ 50 ಮೀಟರ್ ದೂರದಲ್ಲಿರುವ ಮೆಸ್‌ನಲ್ಲಾದರೂ ಓದಲು ಅವಕಾಶ ಮಾಡಿಕೊಡಿ ಎಂಬ ಕೋರಿಕೆಯನ್ನೂ ಡೀನ್ ಪುರಸ್ಕರಿಸಲಿಲ್ಲ ಎಂದು ಯುವತಿಯರು ಬೇಸರ ವ್ಯಕ್ತಪಡಿಸಿದ್ದಾರೆ.

ಆದರೆ ಇಂಥ ಕಠಿಣ ಕ್ರಮ ಯುವಕರ ಮೇಲೇಕಿಲ್ಲ ಎಂಬ ಪ್ರಶ್ನೆಗೆ, ಕೋಪದಿಂದಲೇ ಡೀನ್‌ ಉತ್ತರಿಸಿದ್ದಾಗಿ ತಿಳಿಸಿದ ಅವರು, ‘ಕ್ಯಾಂಪಸ್‌ನಲ್ಲಿ ರಾತ್ರಿ ವೇಳೆ ಹುಡುಗಿಯರು ಓಡಾಡುವುದು ಅಷ್ಟು ಸುರಕ್ಷಿತವಲ್ಲ. ಜತೆಗೆ ಯುವಕರು ಮತ್ತು ಯುವತಿಯರ ನಡುವೆ ಹೋಲಿಕೆ ಮಾಡುವಂತಿಲ್ಲ. ಸಂಸ್ಥೆಯ ನಿರ್ಧಾರವನ್ನು ಪಾಲಿಸಲೇಬೇಕು ಎಂದು ಖಡಾಖಂಡಿತವಾಗಿ ಹೇಳಿದ್ದು ನಿಜಕ್ಕೂ ದಿಗ್ಭ್ರಮೆ ಉಂಟು ಮಾಡಿತು’ ಎಂದಿದ್ದಾರೆ. ಕ್ಯಾಂಪಸ್‌ನಲ್ಲಿ ಬಿಗಿ ಭದ್ರತೆ ಇದ್ದು, ಇದುವರೆಗೂ ಅಂಥ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ ಎಂದು ವಿದ್ಯಾರ್ಥಿನಿಯರು ವಿವರಿಸಿದ್ದಾರೆ.

‘ಐಐಟಿ ಧಾರವಾಡದ ಪೋಷಕ ಸಂಸ್ಥೆಯಾಗಿರುವ ಐಐಟಿ ಬಾಂಬೆ ಯಿಂದ ಬಹಳಷ್ಟು ಪ್ರಾಧ್ಯಾಪಕರು ಇಲ್ಲಿಗೆ ಬಂದು ಪಾಠ ಮಾಡುತ್ತಿದ್ದಾರೆ. ಕೆಲವು ದಿನ ಸಂಜೆ ಅಥವಾ ರಾತ್ರಿಯವರೆಗೂ ಪಾಠಗಳು ನಡೆಯುತ್ತಲೇ ಇರುತ್ತವೆ. ಆಗ ತಡವಾದರೆ ವಿದ್ಯಾರ್ಥಿನಿಯರು ರಾತ್ರಿ ವೇಳೆಯೂ ನಡೆದುಕೊಂಡು ನಿಲಯಕ್ಕೆ ಹೋಗುತ್ತಾರೆ. ಆಗ, ಸುರಕ್ಷತೆಯ ಪ್ರಶ್ನೆ ಎದುರಾಗದೇ ಇರುವುದು ಸೋಜಿಗದ ಸಂಗತಿ’ ಎನ್ನುತ್ತಾರೆ ಅವರು.

‘ಐಐಟಿ ಇತರ ಕಾಲೇಜುಗಳಿಗಿಂತ ಭಿನ್ನ. ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಒಂದೇ ಕ್ಯಾಂಪಸ್‌ನಲ್ಲಿ ಇರುವುದರಿಂದ ವಿಷಯವಸ್ತು ಆಧರಿಸಿ ಪಾಠ, ಪ್ರಯೋಗಗಳು ರಾತ್ರಿಯವರೆಗೂ ನಡೆಯುತ್ತಲೇ ಇರುತ್ತವೆ. ತರಗತಿಗಳಿಗೆ ಬರಲು ಮತ್ತು ಕ್ಯಾಂಪಸ್‌ ಒಳಗೆ ಓಡಾಡಲು ಹುಡುಗರಂತೆ, ಹುಡುಗಿ ಯರೂ ಸೈಕಲ್‌ನಲ್ಲೇ ತೆರಳಬೇಕು. ಆದರೆ ಅಧ್ಯಯನ ವಿಷಯದಲ್ಲಿನ ತಾರತಮ್ಯದಿಂದ ವಿದ್ಯಾರ್ಥಿನಿಯರ ಕಲಿಕೆಗೆ ಪೆಟ್ಟು ಬಿದ್ದಿದೆ’ ಎಂಬುದು ಅವರ ಆರೋಪ.

‘ವಿದ್ಯಾರ್ಥಿನಿಯರ ಕೊಠಡಿಗೆ ರಾತ್ರಿ 9.30ಕ್ಕೆ ಬರುವ ಭದ್ರತಾ ಸಿಬ್ಬಂದಿ, ಇಲ್ಲಿನ ಭಾವಚಿತ್ರ ತೆಗೆದು ಮೇಲಧಿಕಾರಿಗಳಿಗೆ ಕಳುಹಿಸುತ್ತಾರೆ. ಕ್ಯಾಂಪಸ್‌ನಲ್ಲಿ ಮೊಬೈಲ್ ಸಿಗ್ನಲ್ ಸಮಸ್ಯೆ ಇರುವುದರಿಂದ ಕೊಠಡಿಯಿಂದ ಹೊರಬಂದು ಪೋಷಕರಿಗೆ ಕರೆ ಮಾಡುವುದೂ ಈಗ ಕಷ್ಟವಾಗಿದೆ’ ಎಂದು ಅಲವತ್ತುಕೊಂಡಿರುವ ವಿದ್ಯಾರ್ಥಿನಿಯರು, ಈ ಎಲ್ಲಾ ಸಮಸ್ಯೆಗಳನ್ನು ‘ಆಂತರಿಕ ದೂರು ಸಮಿತಿ’ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರುತ್ತಾರೆ.

ಈ ಕುರಿತಂತೆ ಪ್ರತಿಕ್ರಿಯೆ ಪಡೆಯಲು ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಕಚೇರಿಗೆ ಕರೆ ಮಾಡಿದಾಗ ಇ–ಮೇಲ್ ಮೂಲಕ ಮಾಹಿತಿ ಕೇಳುವಂತೆ ಸೂಚಿಸಲಾಯಿತು. ಇ–ಮೇಲ್ ಕಳುಹಿಸಿದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.

ಡೀನ್‌ಗೆ ಜಾಮೀನಿನ ಚಿಂತೆ

‘ವಿದ್ಯಾರ್ಥಿನಿಯರಿಗೆ ರಾತ್ರಿ ವೇಳೆ ಮೆಸ್‌ಗೆ ಹೋಗಿ ಓದಲು ಅವಕಾಶ ಮಾಡಿಕೊಟ್ಟಲ್ಲಿ ಏನಾದರೂ ಅಹಿತಕರ ಘಟನೆ ನಡೆದರೆ ಅದಕ್ಕೆ ನಾನೇ ಹೊಣೆಯಾಗುತ್ತೇನೆ. ನಾನು ಜೈಲಿಗೆ ಹೋಗಬೇಕಾಗುತ್ತದೆ. ಒಂದೊಮ್ಮೆ ನನ್ನ ಬಂಧನ ಶುಕ್ರವಾರವಾದರೆ, ಸೋಮವಾರದವರೆಗೂ ನನಗೆ ಜಾಮೀನು ಸಿಗುವುದಿಲ್ಲ ಎಂದು ಹೇಳುವ ಡೀನ್‌ಗೆ, ತಮ್ಮ ವೈಯಕ್ತಿಕ ಚಿಂತೆಯೇ ಹೊರತು, ವಿದ್ಯಾರ್ಥಿನಿಯರ ಸಮಸ್ಯೆಗೆ ಸ್ಪಂದಿಸುವ ಕಿಂಚಿತ್ತೂ ಕಾಳಜಿ ಇಲ್ಲ’ ಎಂದು ವಿದ್ಯಾರ್ಥಿಯರು ಬೇಸರ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !