ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್‌: ಗದ್ದಲ ಎಬ್ಬಿಸಿದ ‘ಬ್ರಿಟಿಷರಿಗೆ ಧನ್ಯವಾದ’

ವಿಧಾನ ಪರಿಷತ್‌ನಲ್ಲಿ ಸಂವಿಧಾನ ಕುರಿತು ಚರ್ಚೆ
Last Updated 17 ಮಾರ್ಚ್ 2020, 21:31 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶದಲ್ಲಿ ಬ್ರಿಟಿಷರು ಆಡಳಿತ ನಡೆಸಿದ್ದರಿಂದಾಗಿ ಹಲವು ಪ್ರಾಂತಗಳು ಒಗ್ಗೂಡಿ, ದೇಶ ಅಖಂಡವಾಗಿ ರೂಪುಗೊಂಡಿತು, ಅದಕ್ಕಾಗಿ ಅವರಿಗೆ ಧನ್ಯವಾದ ಹೇಳಬೇಕು’ ಎಂಬ ಕಾಂಗ್ರೆಸ್‌ ಸದಸ್ಯ ಪಿ.ಆರ್‌.ರಮೇಶ್‌ ಅವರ ಮಾತು ಮಂಗಳವಾರ ವಿಧಾನ ಪರಿಷತ್‌ನಲ್ಲಿ ಗದ್ದಲಕ್ಕೆ ಕಾರಣವಾಯಿತು.

ಸಂವಿಧಾನ ಕುರಿತು ಚರ್ಚೆಯಲ್ಲಿ ಪಾಲ್ಗೊಂಡು ರಮೇಶ್‌ ಈ ಮಾತು ಹೇಳುತ್ತಿದ್ದಂತೆಯೇ ಆಕ್ಷೇಪಿಸಿದ ಬಿಜೆಪಿಯ ಎಂ.ಕೆ.ಪ್ರಾಣೇಶ್‌, ‘ದೇಶವನ್ನು ಕೊಳ್ಳೆ ಹೊಡೆದ ಬ್ರಿಟಿಷರಿಗೆ ಧನ್ಯವಾದ ಹೇಳುವುದಕ್ಕೆ ಈ ಸದನವನ್ನು ಬಳಸಿಕೊಳ್ಳಬೇಕೇ, ಸಂವಿಧಾನ ಕುರಿತ ಚರ್ಚೆ ಇರುವುದು ಇದಕ್ಕಾಗಿಯೇ?’ ಎಂದರು.

‘ಯಾರು ನಮ್ಮ ಮೇಲೆ ಆಕ್ರಮಣ ನಡೆಸಿದ್ದಾರೋ, ಅವರಿಗೆ ಧನ್ಯವಾದ ಹೇಳುವುದಕ್ಕೆ ನಾಚಿಕೆಯಾಗಬೇಕು, ಗಾಂಧಿ ಫೋಟೊ ತೆಗೆದು ರಾಬರ್ಟ್ ಕ್ಲೈವ್‌ ಫೋಟೊ ಇಟ್ಟುಬಿಡಿ‘ ಎಂದು ಸಿ.ಟಿ.ರವಿ ಚುಚ್ಚಿದರು.

ಬಿಜೆಪಿ ಸದಸ್ಯರಾದ ಹಣಮಂತ ನಿರಾಣಿ, ಎನ್‌.ರವಿಕುಮಾರ್ ಮೊದಲಾದವರೂ ಏರು ಧ್ವನಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು. ಕಾಂಗ್ರೆಸ್‌ನ ಆರ್‌.ಬಿ.ತಿಮ್ಮಾಪೂರ ಅವರು ಬ್ರಿಟಿಷರಿಂದ ಜಾತಿ ವ್ಯವಸ್ಥೆಗೆ ಒಂದಿಷ್ಟು ಸುಧಾರಣೆ ಬಂದುದು ನಿಜ ಎಂದರು.

ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಅವರು ಸದಸ್ಯರನ್ನು ಸಮಾಧಾನಪಡಿಸಲು ಯತ್ನಿಸಿದರು. ‘ರಮೇಶ್‌ ಅವರು ತಮ್ಮ ಹೇಳಿಕೆಯ ಬಗ್ಗೆ ಸ್ಪಷ್ಟೀಕರಣ ನೀಡಬೇಕು’ ಎಂದು ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಂತೇಶ ಕವಟಗಿಮಠ ಆಗ್ರಹಿಸಿದರು.

‘ಬ್ರಿಟಿಷರು ಹಾಕಿದ ವಿಷಬೀಜ ಅಮೃತವಾಗಿ ಬಂತು ಎಂಬ ಅರ್ಥದಲ್ಲಿ ನಾನು ಮಾತನಾಡಿದ್ದೆ, ನೀವು ಸರಿಯಾಗಿ ಕೇಳಿಸಿಕೊಳ್ಳುವ ತಾಳ್ಮೆ ವಹಿಸಲಿಲ್ಲ’ ಎಂದು ರಮೇಶ್‌ ಹೇಳಿದ ಬಳಿಕ ಗದ್ದಲ ಕೊನೆಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT