ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊರೆಸ್ವಾಮಿ ಅವಹೇಳನ: ವಿಧಾನ ಪರಿಷತ್‌ನಲ್ಲಿ ಭಾರಿ ಗದ್ದಲ, ಕಲಾಪ ಮುಂದೂಡಿಕೆ

Last Updated 2 ಮಾರ್ಚ್ 2020, 7:08 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಎಚ್. ಎಸ್ ದೊರೆಸ್ವಾಮಿ ಕುರಿತಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೀಡಿರುವ ಅವಹೇಳನಕಾರಿ ಹೇಳಿಕೆ‌ ಕುರಿತಂತೆ ಮುಖ್ಯಮಂತ್ರಿ ಅವರೇ ಸದನಕ್ಕೆ ಬಂದು ಹೇಳಿಕೆ ನೀಡಬೇಕು ಎಂದು ಪಟ್ಟು ಹಿಡಿದ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದ್ದರಿಂದ ವಿಧಾನ ಪರಿಷತ್ ಕಲಾಪವನ್ನು ಒಂದು ಗಂಟೆ ಮುಂದೂಡಲಾಯಿತು.

ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ಕೆ.ಪ್ರತಾಪ ಚಂದ್ರ ಶೆಟ್ಟಿ ಅವರು ಅಗಲಿಗ ಮೂವರು ಗಣ್ಯರಾದ ಸಿ.ಚನ್ನಿಗಪ್ಪ, ಆರ್ ಎಸ್ ಭಾಗ್ವತ್ ಮತ್ತು ಪ್ರೊ.ಷ.ಶೆಟ್ಟರ್ ಅವರಿಗೆ ಸಂತಾಪ ಸೂಚಿಸಿದರು. ಸಭಾನಾಯಕ, ವಿರೋಧ ಪಕ್ಷದ ನಾಯಕರು ಕಂಬನಿ ಸೂಚಿಸಿದ ಬಳಿಕ ಸದನ ಮೌನ ಆಚರಿಸಿತು.

ಬಳಿಕ ಸಭಾಪತಿ ಅವರು ಪ್ರಶ್ನೋತ್ತರ ಅವಧಿ ಆರಂಭಿಸುವುದೋ, ರಾಜ್ಯಪಾಲರ ಭಾಷಣಕ್ಕೆ ವಂದನೆ ಸೂಚಿಸುವ ಗೊತ್ತುವಳಿ ಮೇಲೆ ಚರ್ಚೆ ಮುಂದುವರಿಸುವುದೋ ಎಂದು ಕೇಳುತ್ತಿದ್ದಂತೆಯೇ ಎದ್ದುನಿಂತ ವಿರೋಧ ಪಕ್ಷದ ನಾಯಕ ಎಸ್ ಆರ್ ಪಾಟೀಲ, ಮಹಾತ್ಮ ಗಾಂಧಿ ಕಾಲದ ಕೊನೆಯ ಕೊಂಡಿ ದೊರೆಸ್ವಾಮಿ ಬಗ್ಗೆ ಯತ್ನಾಳ್‌ ಅವಹೇಳನಕಾರಿಯಾಗಿ ಮಾತನಾಡಿದ್ದು ಸರಿಯಲ್ಲ ಎಂದರು.

ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಆಕ್ಷೇಪ ವ್ಯಕ್ತಪಡಿಸಿದರು. ಆಗ ಆಡಳಿತ ಮತ್ತು ವಿರೋಧ ಪಕ್ಷಗಳ ಹಲವರು ಎದ್ದುನಿಂತು ಗದ್ದಲ ಎಬ್ಬಿಸಿದರು.

ಸರ್ಕಾರದಿಂದ ಉತ್ತರ ಕೊಡುವಂತೆ ಸಭಾಪತಿ ಆಹ್ವಾನಿಸಿದಾಗ ಸಭಾನಾಯಕರು ಕುತ್ತರ ಕೊಡಲು ಸಜ್ಜಾದರು.

ಇದು ಗಂಭೀರ ವಿಚಾರ, ಮುಖ್ಯಮಂತ್ರಿ ಅವರೇ ಉತ್ತರ ನೀಡಬೇಕು ಎಂದು ಪಟ್ಟು ಹಿಡಿದ ಎಸ್ ಆರ್ ಪಾಟೀಲ ಅವರು ಸಭಾವತಿ ಅವರ ಪೀಠದ ಮುಂಭಾಗಕ್ಕೆ ಬಂದು ಪ್ರತಿಭಟನೆ ನಡೆಸಿದರು.

ಇತರರೂ ಜತೆಗೂಡಿ ಘೋಷಣೆ ಕೂಗಿದರು. ಸಭಾಪತಿ ಅವರು ಕಲಾಪವನ್ನುಒಂದು ಗಂಟೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT