ಶನಿವಾರ, ನವೆಂಬರ್ 23, 2019
17 °C
ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದ ಕಾಂಗ್ರೆಸ್‌, ಜೆಡಿಎಸ್‌ನ ಒಟ್ಟು 17 ಅನರ್ಹ ಶಾಸಕರು

ಅನರ್ಹ ಶಾಸಕರ ಅರ್ಜಿ ಸಂವಿಧಾನ ಪೀಠಕ್ಕೆ?

Published:
Updated:

ಬೆಂಗಳೂರು: ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಒಟ್ಟು 17 ಅನರ್ಹ ಶಾಸಕರು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ವಿಶೇಷ ಮೇಲ್ಮನವಿ ಸಂವಿಧಾನ ಪೀಠಕ್ಕೆ ವರ್ಗಾವಣೆಯಾಗಲಿದೆಯೇ ಎಂಬ ಜಿಜ್ಞಾಸೆಯ ಜೊತೆಗೆ ಕೆಲವು ಶಾಸಕರು ತಮ್ಮ ಅರ್ಜಿಗಳನ್ನು ಹಿಂಪಡೆಯುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆಯೇ?

ಇಂತಹದೊಂದು ಚರ್ಚೆ ರಾಜಕೀಯ ಹಾಗೂ ವಕೀಲರ ವಲಯದಲ್ಲಿ ನಡೆಯುತ್ತಿದೆ. 17 ಅನರ್ಹ ಶಾಸಕರ ಈ ಅರ್ಜಿಗಳನ್ನು ನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ತ್ರಿಸದಸ್ಯ ನ್ಯಾಯಪೀಠವು ಇದೇ 22ರಂದು ವಿಚಾರಣೆ ನಡೆಸಲಿದೆ. ವಿಚಾರಣೆ ವೇಳೆ ಕೆಲವು ಶಾಸಕರು ತಮ್ಮ ಅರ್ಜಿಗಳನ್ನು ವಾಪಸು ಪಡೆದು ಹೈಕೋರ್ಟ್‌ ಮೆಟ್ಟಿಲೇರುವ ನಿಲುವು ತಳೆದಿದ್ದಾರೆ ಎನ್ನಲಾಗಿದೆ.

ಈ ಕುರಿತಂತೆ ಕಾನೂನು ಅಂಶಗಳ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ವಕೀಲ ಬಿ.ವಿ.ಆಚಾರ್ಯ ಅವರು, ‘ಈ ಪ್ರಕರಣದಲ್ಲಿ ಸಂವಿಧಾನದ ವಿಧಿ 190 (3) ಮತ್ತು 164 (ಬಿ) ನಡುವೆ ಕೆಲವು ಭಿನ್ನತೆಗಳಿರುವ ಕಾರಣ  ಸಂವಿಧಾನ ಪೀಠಕ್ಕೆ ವರ್ಗಾಯಿಸಬಹುದು. ಆದಾಗ್ಯೂ ಇದೆಲ್ಲಾ ನ್ಯಾಯಪೀಠದ ವಿವೇಚನೆಗೆ ಬಿಟ್ಟ ವಿಚಾರ’ ಎನ್ನುತ್ತಾರೆ.

‘ಸಂವಿಧಾನದ 32ನೇ ವಿಧಿಯ ಪ್ರಕಾರ ವ್ಯಕ್ತಿಯೊಬ್ಬನ ಮೂಲಭೂತ ಹಕ್ಕುಗಳ ಉಲ್ಲಂಘನೆಯಾದರೆ ನೇರವಾಗಿ ಸುಪ್ರೀಂ ಕೋರ್ಟ್ ಕದ ತಟ್ಟಬಹುದು. ಅಂತೆಯೇ ಹೈಕೋರ್ಟ್‌, 226ನೇ ವಿಧಿಯ ಪ್ರಕಾರ ಮೂಲಭೂತ ಹಕ್ಕುಗಳ ಉಲ್ಲಂಘನೆ ಸೇರಿದಂತೆ ಶಾಸನೀಯ ಉಲ್ಲಂಘನೆಗಳನ್ನೂ ವಿಚಾರಣೆ ನಡೆಸುವ ಅಧಿಕಾರ ಹೊಂದಿದೆ. ಹೀಗಾಗಿ ಹೈಕೋರ್ಟ್ ವ್ಯಾಪ್ತಿ ದೊಡ್ಡದು’ ಎನ್ನುತ್ತಾರೆ ಆಚಾರ್ಯ.

ಈ ಮಾತಿಗೆ ಪೂರಕವಾಗಿ ಮತ್ತೊಬ್ಬ ಹಿರಿಯ ವಕೀಲ ಅಶೋಕ ಹಾರನಹಳ್ಳಿ ಅವರು, ‘ಶಾಸಕರ ರಾಜೀನಾಮೆ ವಿಚಾರದ ಬಗ್ಗೆ ವಿಧಾನ
ಸಭಾಧ್ಯಕ್ಷರು ಕೈಗೊಳ್ಳುವ ತೀರ್ಮಾನ ಸಾಂವಿಧಾನಿಕ ಅಂಶಗಳನ್ನು ಒಳಗೊಂಡಿರುವುದರಿಂದ ಈ ಪ್ರಕರಣ ಸಂವಿಧಾನಪೀಠಕ್ಕೆ ವರ್ಗಾವಣೆಯಾಗುವ ಅವಕಾಶ ಹೊಂದಿದೆ’ ಎನ್ನುತ್ತಾರೆ.

‘ಅನರ್ಹ ಶಾಸಕರು ಸುಪ್ರೀಂ ಕೋರ್ಟ್‌ನಲ್ಲಿರುವ ಅರ್ಜಿಗಳನ್ನು ಹಿಂಪಡೆದು ಹೈಕೋರ್ಟ್‌ ಮೊರೆ ಹೋಗುತ್ತೇವೆ ಎಂದಾದರೆ ಉಪ ಚುನಾವಣೆ ನಡೆಯುವ ಬಗ್ಗೆ ಅನುಮಾನವಿದೆ. 190 (3) ವಿಧಿಯ ಪ್ರಕಾರ ವಿಧಾನಸಭಾಧ್ಯಕ್ಷರ ಅಧಿಕಾರ, ವಿವೇಚನೆ ಪ್ರಶ್ನಿಸಿದ ಪ್ರಕರಣಗಳು ಸಂವಿಧಾನಪೀಠಕ್ಕೆ ವರ್ಗಾವಣೆಯಾಗಬೇಕು. ಒಂದು ವೇಳೆ 145 (3)ನೇ ವಿಧಿಯ ಅನುಸಾರ ಸಂವಿಧಾನಪೀಠಕ್ಕೆ ವರ್ಗಾವಣೆಯಾದರೆ ಡಿಸೆಂಬರ್ 5ಕ್ಕೆ ನಡೆಯಲಿರುವ ಉಪ ಚುನಾವಣೆಗಳ ಮೇಲೆ ಇದರ ನೇರ ಪರಿಣಾಮ ಉಂಟಾಗಲಿದೆ’ ಎಂದು ಅವರು ಹೇಳುತ್ತಾರೆ.

ಮಾಹಿತಿ ಸಲ್ಲಿಸಲು ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಸೂಚನೆ

‘ಅನರ್ಹ ಶಾಸಕರ 15 ವಿಧಾನಸಭಾ ಕ್ಷೇತ್ರಗಳಲ್ಲಿ ಜಾರಿಗೊಳಿಸಲಾಗಿರುವ ಚುನಾವಣಾ ನೀತಿ ಸಂಹಿತೆ ಕುರಿತಂತೆ ಮಾಹಿತಿ ಸಲ್ಲಿಸಿ’ ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಹೈಕೋರ್ಟ್‌ ಸೂಚಿಸಿದೆ.

ಈ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾ‌ವ್‌ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

‘ಅರ್ಜಿದಾರರು ಈ ಪ್ರಕರಣ ದಾಖಲಿಸಲು ಯಾವ ರೀತಿ ಸಂತ್ರಸ್ತರು’ ಎಂದು ಪ್ರಶ್ನಿಸಿದ ನ್ಯಾಯಪೀಠ, ‘ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವ್ಯಾಪ್ತಿಗೆ ಒಳಪಡುತ್ತದೆಯಲ್ಲವೇ’ ಎಂಬ ಇಂಗಿತ ವ್ಯಕ್ತಪಡಿಸಿತು.

**

‌ಒಟ್ಟಿಗೇ ತೆರಳಲಿದ್ದೇವೆ

‘ಶನಿವಾರ ನಾವು ಒಟ್ಟಾಗಿ ನವದೆಹಲಿಗೆ ತೆರಳುತ್ತಿದ್ದೇವೆ. ಶನಿವಾರ, ಭಾನುವಾರ ಮತ್ತು ಸೋಮವಾರ ನವದೆಹಲಿಯಲ್ಲಿ ನಮ್ಮ ವಕೀಲರ ಜೊತೆ ಮುಂದಿನ ನಡೆ ಬಗ್ಗೆ ಚರ್ಚಿಸಲಿದ್ದೇವೆ’ ಎಂದು ಅನರ್ಹ ಶಾಸಕ ಎಸ್‌.ಟಿ.ಸೋಮಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

 

ಪ್ರತಿಕ್ರಿಯಿಸಿ (+)