ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6,867ರಲ್ಲಿ ಹತ್ತು ಪ್ರಕರಣಗಳಲ್ಲಷ್ಟೇ ಶಿಕ್ಷೆ!

‘ವರದಕ್ಷಿಣೆ ಕಿರುಕುಳ’ ವಿಚಾರಣೆ ವಿಳಂಬ, ಸಂಧಾನ ಕೇಂದ್ರಗಳಾದ ಠಾಣೆಗಳು
Last Updated 15 ಮಾರ್ಚ್ 2019, 20:17 IST
ಅಕ್ಷರ ಗಾತ್ರ

ಬೆಂಗಳೂರು: 3 ವರ್ಷಗಳಲ್ಲಿ ವರದಕ್ಷಿಣೆ ಕಿರುಕುಳ ಸಂಬಂಧ ರಾಜ್ಯದಲ್ಲಿ 6,867 ಪ್ರಕರಣಗಳು ದಾಖಲಾಗಿದ್ದರೆ, ಶಿಕ್ಷೆ ಆಗಿರುವುದು ಹತ್ತರಲ್ಲಿ ಮಾತ್ರ!

ಕ್ರಮ ಜರುಗಿಸಬೇಕಾದ ಪೊಲೀಸ್ ಠಾಣೆಗಳೇ, ಸಂಧಾನ ಕೇಂದ್ರಗಳಾಗಿ ‌ಬದಲಾಗಿರುವುದರಿಂದ ಪ್ರಕರಣಗಳು ರಾಜಿಯಲ್ಲೇ ಬಗೆಹರಿಯುತ್ತಿವೆ.ಒಂದು ವೇಳೆ ಪ್ರಕರಣ ನ್ಯಾಯಾಲಯದ ಮೆಟ್ಟಿಲು ಏರಿದರೂ, ಹಲವು ವರ್ಷಗಳವರೆಗೆ ನಡೆಯುವ ವಿಚಾರಣೆಯಿಂದಾಗಿ ಸಂತ್ರಸ್ತೆಯೂ ತಾಳ್ಮೆ ಕಳೆದುಕೊಳ್ಳುತ್ತಾಳೆ. ಈ ಕಾರಣಗಳಿಂದಾಗಿ ಶಿಕ್ಷೆ ಪ್ರಮಾಣ ಕಡಿಮೆಯಾಗುತ್ತಿದೆ ಎಂಬುದು ಪೊಲೀಸರು ಹಾಗೂ ಕೌಟುಂಬಿಕ ದೌರ್ಜನ್ಯ ಪ್ರಕರಣಗಳಪರ ವಾದ ಮಂಡಿಸುವ ವಕೀಲರ ಅಭಿಪ್ರಾಯ.

‘ವರದಕ್ಷಿಣೆ ಕಿರುಕುಳ ಸಂಬಂಧ 2013ರಲ್ಲಿ 3,187 ಪ್ರಕರಣಗಳು ದಾಖಲಾಗಿದ್ದವು. ಕ್ರಮೇಣ ವರ್ಷದಿಂದ ವರ್ಷಕ್ಕೆ ಆ ಸಂಖ್ಯೆ ಇಳಿಯುತ್ತಲೇ ಬಂತು. ಹಾಗಂತ ದೌರ್ಜನ್ಯ ಕಡಿಮೆ ಆಯಿತು ಎಂದು ಅರ್ಥವಲ್ಲ. ದೂರು ದಾಖಲಿಸಿಕೊಳ್ಳುವ ಹಾಗೂ ಸಂತ್ರಸ್ತೆಗೆ ಮಾರ್ಗದರ್ಶನ ಮಾಡುವವರು ಕಡಿಮೆ ಆಗಿದ್ದಾರೆ. ವಿಪರ್ಯಾಸವೆಂದರೆ, ಐದು ವರ್ಷದ ಹಿಂದಿನ 1,373 ಪ್ರಕರಣಗಳು, ವಿಚಾರಣಾ ಹಂತದಲ್ಲೇ ಇವೆ’ ಎನ್ನುತ್ತಾರೆ ವಕೀಲೆಯೊಬ್ಬರು.

ಸಾವಿನ ಹಾದಿ: ಪೊಲೀಸ್ ಇಲಾಖೆ ಅಂಕಿ ಅಂಶಗಳ ಪ್ರಕಾರ 2018ರಲ್ಲಿ ವರದಕ್ಷಿಣೆ ಕಿರುಕುಳದಿಂದ 197 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದರೆ, 11 ಮಹಿಳಾ ಹತ್ಯೆಗಳು ನಡೆದಿವೆ. ಇನ್ನೂ 61 ಕೊಲೆ ಯತ್ನವೂ ನಡೆದಿವೆ. ಈ ಪೈಕಿ ಶೇ 40ರಷ್ಟುಪ್ರಕರಣಗಳಲ್ಲಿ ಪೊಲೀಸರು ತನಿಖೆ ಪೂರ್ಣಗೊಳಿಸಿ ಆರೋಪಪಟ್ಟಿ ಸಲ್ಲಿಸಿದ್ದಾರೆ.

‘ಎನ್‌ಸಿಆರ್‌ಬಿ ದಾಖಲೆ ಪ್ರಕಾರ ರಾಜ್ಯದಲ್ಲಿ ಪ್ರತಿ 15 ನಿಮಿಷಕ್ಕೆ ಒಬ್ಬ ಮಹಿಳೆ ಕುಟುಂಬ ಸದಸ್ಯರಿಂದ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾಳೆ. ಆದರೆ, ನಿತ್ಯ ಲಕ್ಷಾಂತರ ಮಹಿಳೆಯರು ಹಿಂಸೆ ಅನುಭವಿಸುತ್ತಿರುವುದು ವರದಿಯೇ ಆಗುವುದಿಲ್ಲ. ಸದ್ಯದ ವ್ಯವಸ್ಥೆಯಲ್ಲಿ ಯಾವುದು ಹಿಂಸೆ, ಯಾವುದು ಹಿಂಸೆಯಲ್ಲ ಎಂದು ಸಂತ್ರಸ್ತೆಗೆ ಹೇಳುವವರೂ ಇಲ್ಲ. ಮುಂದೆ ಏನು ಮಾಡಬೇಕು ಎಂದು ಆಕೆಗೆ ಮಾರ್ಗದರ್ಶನ ಮಾಡುವವರೂ ಇಲ್ಲ’ ಎಂದು ವಕೀಲೆ ಎಸ್.ಅಂಬಿಕಾ ಹೇಳಿದರು.

‘ಸಂತ್ರಸ್ತೆ ಠಾಣೆ ಮೆಟ್ಟಿಲೇರಿದರೆ ಪೊಲೀಸರೇ ಆಕೆಯ ಚಾರಿತ್ರ್ಯವಧೆ ಮಾಡುವ ಪ್ರವೃತ್ತಿ ಬೆಳೆದಿದೆ. ಗಂಡನೀಡಿದ ಹಿಂಸೆಯ ಬಗ್ಗೆ ತನಿಖೆ ನಡೆಸುವುದನ್ನು ಬಿಟ್ಟು, ಆಕೆಯ ನಡತೆ ಬಗ್ಗೆ ತನಿಖೆ ನಡೆಸಲುಹೋಗುತ್ತಾರೆ.ಕೊನೆಗೆ, ’ದೂರು ಕೊಟ್ಟರೆ ಗಂಡ ಜೈಲಿಗೆ ಹೋಗುತ್ತಾನೆ. ಅದರಿಂದ ನಿನಗೆ ಬೇರೆ ಲಾಭವೇನಿದೆ? ಐಪಿಸಿ 498ಎ ಪ್ರಕರಣದಲ್ಲಿ ಪರಿಹಾರವಂತೂ ಸಿಗಲ್ಲ. ಸುಮ್ಮನೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಜೀವನಾಂಶ ಪಡೆದುಕೊ‘ ಎಂದು ಸಲಹೆ ಕೊಟ್ಟು ಕಳುಹಿಸುತ್ತಿದ್ದಾರೆ. ಆ ಮಾತನ್ನೂ ಮೀರಿ ಆಕೆ ದೂರು ಕೊಟ್ಟರೆ, ಬೇಕಾಬಿಟ್ಟಿ ತನಿಖೆ ನಡೆಸಿ ಕೈತೊಳೆದುಕೊಂಡು ಬಿಡುತ್ತಾರೆ’ ಎಂದುವಿವರಿಸಿದರು.

‘ಪದೇ ಪದೇ ನ್ಯಾಯಾಧೀಶರು ಬದಲಾವಣೆ ಆಗುವುದೂ ಶಿಕ್ಷೆಯ ಪ್ರಮಾಣ ಕಡಿಮೆ ಆಗುತ್ತಿರುವುದಕ್ಕೆ ಪ್ರಮುಖ ಕಾರಣ. ಒಬ್ಬರು ವಿಚಾರಣೆ ಪ್ರಾರಂಭಿಸಿದರೆ, ಇನ್ನೊಬ್ಬರು ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಳ್ಳುತ್ತಾರೆ. ಕೊನೆಗೆ ಮತ್ತೊಬ್ಬರು ಬಂದು ವಿಚಾರಣೆ ಮುಂದುವರಿಸುತ್ತಾರೆ. ಹೀಗೆ ಒಂದು ಪ್ರಕರಣ ಇತ್ಯರ್ಥವಾಗುವಷ್ಟರಲ್ಲಿ ಮೂರ್ನಾಲ್ಕು ನ್ಯಾಯಾಧೀಶರು ಬದಲಾಗಿರುತ್ತಾರೆ’ ಎಂದೂ ಅವರು ಹೇಳಿದರು.

**

ತನಿಖಾ ಹಂತದಲ್ಲಿರುವಾಗಲೇ ದಂಪತಿ ವಿಚ್ಛೇದನ ಪಡೆದುಕೊಳ್ಳುವುದು ಹೆಚ್ಚಾಗುತ್ತಿದೆ. ಪ್ರತ್ಯೇಕವಾದ ನಂತರ ಯಾರೂ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ.
-ಎಂ.ಎ.ಸಲೀಂ, ಎಡಿಜಿಪಿ, ಅಪರಾಧ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT