ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಒತ್ತಡಕ್ಕೆ ಮಣಿದ ಸಿಎಂ?| ಸುಧಾಕರ್ ಅಧ್ಯಕ್ಷಗಿರಿಗೆ ಕಾನೂನು ಸಂಕಟ

Last Updated 21 ಜೂನ್ 2019, 17:59 IST
ಅಕ್ಷರ ಗಾತ್ರ

ಬೆಂಗಳೂರು:ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಶಾಸಕ ಡಾ.ಕೆ. ಸುಧಾಕರ್‌ ಅವರನ್ನು ನೇಮಕ ಮಾಡುವ ಮೂಲಕ, ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ(ಎನ್‌ಜಿಟಿ) ತೀರ್ಪನ್ನು ಗಾಳಿಗೆ ತೂರಲಾಗಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.

ಪರಿಸರದ ವಿಷಯದಲ್ಲಿ ಶೈಕ್ಷಣಿಕ ಅರ್ಹತೆ ಇಲ್ಲದವರನ್ನು ಮಂಡಳಿಗೆ ನೇಮಕ ಮಾಡುವಂತಿಲ್ಲ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಕಾಯ್ದೆ ಪ್ರತಿಪಾದಿಸುತ್ತದೆ. ಅದನ್ನೂ ಉಲ್ಲಂಘಿಸಲಾಗಿದೆ ಎಂಬ ಆರೋ‍ಪ ಎದುರಾಗಿದೆ.

ರಾಜಕೀಯ ಕಾರಣಕ್ಕಾಗಿ ಈ ರೀತಿಯ ನೇಮಕ ಮಾಡುವಂತಿಲ್ಲ ಎಂದುಎನ್‌ಜಿಟಿ ಎಚ್ಚರಿಸಿದೆ.

ಕಾಂಗ್ರೆಸ್‌ ಅತೃಪ್ತ ಶಾಸಕರ ಗುಂಪಿನಲ್ಲಿದ್ದ ಚಿಕ್ಕಬಳ್ಳಾಪುರ ಡಾ. ಸುಧಾಕರ್ ಅವರು ಈ ಅಧ್ಯಕ್ಷ ಸ್ಥಾನದ ಬೇಡಿಕೆ ಇಟ್ಟಿದ್ದರು. ತಮ್ಮ ಆಪ‍್ತರ ಗುಂಪಿನಲ್ಲಿ ಗುರುತಿಸಿಕೊಂಡಿರುವ ಸುಧಾಕರ್‌ಗೆ ಆಯಕಟ್ಟಿನ ಈ ಹುದ್ದೆ ಕೊಡಬೇಕು ಎಂಬುದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರ ಅಪೇಕ್ಷೆಯಾಗಿತ್ತು.ನಿಯಮಗಳಲ್ಲಿ ಅವಕಾಶ ಇಲ್ಲ ಎಂಬ ಕಾರಣಕ್ಕೆ ಸುಧಾಕರ್‌ಗೆ ನೀಡದೇ, ಸಿ. ಜಯರಾಂ ಅವರನ್ನು ಅಧ್ಯಕ್ಷರಾಗಿ ನೇಮಿಸಲಾಗಿತ್ತು.

‘ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸಿದ್ದರಾಮಯ್ಯನವರು ಒತ್ತಡ ಹಾಕಿದ್ದರು. ಹೀಗಾಗಿ, ಹಾಲಿ ಅಧ್ಯಕ್ಷ ಜಯರಾಂ ಅವರಿಂದ ರಾಜೀನಾಮೆ ಕೊಡಿಸಲಾಯಿತು’ ಎಂದು ಮೂಲಗಳು ಹೇಳಿವೆ.

ನಿಯಮಗಳೇನು?: ಸುಪ್ರೀಂಕೋರ್ಟ್‌ ಮತ್ತು ಉತ್ತರಖಂಡ್‌ ಹೈಕೋರ್ಟ್‌ ನಿರ್ದೇಶನದ ಮೇರೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ರಾಜೇಂದ್ರ ಸಿಂಗ್‌ ವರ್ಸಸ್ ಉತ್ತರಖಂಡ್ ಸರ್ಕಾರದ ನಡುವಿನ ಪ್ರಕರಣದಲ್ಲಿ ಈ ಕುರಿತು ತೀರ್ಪು ನೀಡಿತ್ತು. ಅದರ ಅನುಸಾರ ರೂಪಿಸಿರುವ ಮಾರ್ಗಸೂಚಿ ಪ್ರಕಾರ, ಎಂಬಿಬಿಎಸ್‌ ವೈದ್ಯರೂ ಆಗಿರುವ ಶಾಸಕ ಸುಧಾಕರ್‌ಗೆ ಅವರು ಅಧ್ಯಕ್ಷರಾಗುವ ಅರ್ಹತೆ ಪಡೆದಿಲ್ಲ.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಅಥವಾ ಸದಸ್ಯ ಕಾರ್ಯದರ್ಶಿಯಾಗಿ ನೇಮಕಗೊಳ್ಳುವವರು ಪರಿಸರ ಸಂರಕ್ಷಣೆ ಅಧ್ಯಯನದ ಶೈಕ್ಷಣಿಕ ಅರ್ಹತೆ, ವಿಶೇಷ ಜ್ಞಾನ ಅಥವಾ ಪ್ರಾಯೋಗಿಕ ಅನುಭವ ಹೊಂದಿರಬೇಕು. ಆದರೆ, ವ್ಯಕ್ತಿಯು ಹೊಂದಿರುವ ಹುದ್ದೆ ಅಥವಾ ರಾಜಕೀಯ ಕಾರಣಕ್ಕಾಗಿ ನೇಮಿಸುವಂತಿಲ್ಲ. ಅಂದರೆ, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಪರಿಸರ ಕಾರ್ಯದರ್ಶಿ ಅಥವಾ ರಾಜಕಾರಣಿಗಳಾದ ಮಾಜಿ ಸ್ಪೀಕರ್‌, ಮಂತ್ರಿ, ಶಾಸಕ, ಸಾಹಿತಿಗಳು ಮತ್ತು ತಾಂತ್ರಿಕೇತರ ವ್ಯಕ್ತಿಗಳನ್ನು ನೇಮಿಸುವಂತಿಲ್ಲ.

ಅಧ್ಯಕ್ಷ ಅಥವಾ ಸದಸ್ಯ ಕಾರ್ಯದರ್ಶಿ ಹುದ್ದೆಗಳಿಗೆ ನೇಮಿಸುವುದಕ್ಕೆ ಮುನ್ನ ‘ಜಲ ಮತ್ತು ವಾಯು’ ಕಾಯ್ದೆಯ ಅನ್ವಯ ಪತ್ರಿಕೆಗಳಲ್ಲಿ ಅರ್ಜಿ ಆಹ್ವಾನಿಸಿ ಜಾಹೀರಾತು ಪ್ರಕಟಿಸಬೇಕು. ಪರಿಸರ ವಿಷಯದ ಶೈಕ್ಷಣಿಕ ಅರ್ಹತೆ ಮತ್ತು ಅನುಭವ ಇರುವವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗುತ್ತಾರೆ.ಅಲ್ಲದೆ, ಒಮ್ಮೆ ಅಧ್ಯಕ್ಷ ಅಥವಾ ಸದಸ್ಯ ಕಾರ್ಯದರ್ಶಿಯಾಗಿ ನೇಮಕಗೊಂಡ ಬಳಿಕ ರಾಜಕೀಯ ಕಾರಣಗಳಿಗೆ ಅಂತಹವರ ಅವಧಿಯನ್ನು ಮೊಟಕುಗೊಳಿಸುವಂತಿಲ್ಲ.

ನೇಮಕ ಪ್ರಶ್ನಿಸಿ ನೋಟಿಸ್‌
ಶಾಸಕ ಡಾ. ಸುಧಾಕರ್‌ ಅವರನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಅಕ್ರಮ ಮತ್ತು ಕಾನೂನು ಬಾಹಿರ ಎಂದು ವಕೀಲ ಎಸ್. ಉಮಾಪತಿ ಎಂಬುವರು ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆ ಹೆಚ್ಚುವರಿ ಕಾರ್ಯದರ್ಶಿಯವರಿಗೆ ನೋಟಿಸ್‌ ನೀಡಿದ್ದಾರೆ.

ಈ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಲು ಶಾಸಕ ಸುಧಾಕರ್‌ ಶೈಕ್ಷಣಿಕ ಮತ್ತು ಪ್ರಾಯೋಗಿಕ ಅರ್ಹತೆ ಹೊಂದಿಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT