ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಂಎ: ಮತ್ತೆ ₹200 ಕೋಟಿ ಆಸ್ತಿ ಪತ್ತೆ!

ದೆಹಲಿ, ಉತ್ತರ ಪ್ರದೇಶದಲ್ಲೂ ಜಪ್ತಿಗೆ ಯತ್ನ
Last Updated 26 ಜುಲೈ 2019, 19:51 IST
ಅಕ್ಷರ ಗಾತ್ರ

ಬೆಂಗಳೂರು: ಐಎಂಎ (ಐ ಮಾನಿಟರಿ ಅಡ್ವೈಸರಿ) ಕಂಪನಿಗೆ ಸೇರಿದ ಇನ್ನೂ ₹200 ಕೋಟಿ ಮೌಲ್ಯದ ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಪತ್ತೆ ಹಚ್ಚಿದ್ದು, ‘ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ’ಯಡಿ ಅವುಗಳ ಜಪ್ತಿಗೆ ಪ್ರಕ್ರಿಯೆ ಆರಂಭಿಸಿದ್ದಾರೆ.

ಕಳೆದ ಶುಕ್ರವಾರ ಅಂದರೆ, ಜುಲೈ 19ರಂದು ಬಂಧಿತರಾಗಿ ಇ.ಡಿ ವಶದಲ್ಲಿದ್ದ ಈ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಮಹಮ್ಮದ್‌ ಮನ್ಸೂರ್ ಖಾನ್‌ ವಿಚಾರಣೆಯ ವೇಳೆ ಕರ್ನಾಟಕ ಮಾತ್ರವಲ್ಲದೆ, ದೆಹಲಿ ಹಾಗೂ ಉತ್ತರ ಪ್ರದೇಶದಲ್ಲೂ ಆಸ್ತಿ ಹೊಂದಿರುವುದಾಗಿ ಹೇಳಿದ್ದಾನೆ ಎಂದು ಉನ್ನತ ಮೂಲಗಳು‘ಪ್ರಜಾವಾಣಿ’ಗೆ ತಿಳಿಸಿವೆ.

‘ಸ್ಥಿರಾಸ್ತಿಗಳು ವಿವಿಧ ರಾಜ್ಯಗಳಲ್ಲಿ ಇರುವುದರಿಂದ ಪ್ರಕ್ರಿಯೆ ಮುಗಿಯಲು ಒಂದು ತಿಂಗಳು ಹಿಡಿಯಬಹುದು. ಈಗಾಗಲೇ ಜಪ್ತಿ ಮಾಡಿರುವ ₹ 209 ಕೋಟಿ ಮೌಲ್ಯದ ಆಸ್ತಿ ಕರ್ನಾಟಕದಲ್ಲೇ ಇದ್ದುದ್ದರಿಂದ ಪ್ರಕ್ರಿಯೆ ಪೂರ್ಣಗೊಳ್ಳಲು ಸಮಯ ಬೇಕಾಗಲಿಲ್ಲ’ ಎಂದು ಮೂಲಗಳು ವಿವರಿಸಿವೆ.

ಈಗ ಪತ್ತೆ ಹಚ್ಚಲಾದ ಆಸ್ತಿಗಳೂ ಸೇರಿದರೆ ಅಂದಾಜು ₹ 410 ಕೋಟಿಗೂ ಅಧಿಕ ಮೊತ್ತದ ಆಸ್ತಿ ಜಪ್ತಿ ಆದಂತಾಗುತ್ತದೆ. ಆದರೆ, ಈ ಆಸ್ತಿಗಳ ಮಾರುಕಟ್ಟೆ ಮೌಲ್ಯ ಎಷ್ಟೆಂಬುದು ನಿಖರವಾಗಿ ಗೊತ್ತಾಗಿಲ್ಲ. ಈ ಪ್ರಕ್ರಿಯೆ ಮುಗಿದ ಬಳಿಕ ಮಾರುಕಟ್ಟೆ ಮೌಲ್ಯವನ್ನು ನಿರ್ಧರಿಸಲಾಗುವುದು ಎಂದು ಮೂಲಗಳು ಹೇಳಿವೆ.

‘ಜಪ್ತಿ ಮಾಡಿರುವ ಸ್ಥಿರಾಸ್ತಿ ಮತ್ತು ಚಿನ್ನಾಭರಣಗಳನ್ನು ಮಾರಾಟ ಮಾಡಿ ಬಂದ ಹಣವನ್ನು ಷೇರುದಾರರಿಗೆ ಹಂಚಲಾಗುವುದು. ಪೂರ್ಣವಾಗಿ ಅಲ್ಲದಿದ್ದರೂ, ಅಲ್ಪಸ್ವಲ್ಪ ಪ್ರಮಾಣದಲ್ಲಾದರೂ ವಾಪಸ್‌ ಕೊಡುವ ಚಿಂತನೆಯಿದೆ’ ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.

ಐಎಂಎ ಜ್ಯುವೆಲ್ಸ್‌ 17 ಅಧೀನ ಕಂಪನಿಗಳನ್ನು ಹೊಂದಿದ್ದು, ಲಕ್ಷಕ್ಕೂ ಹೆಚ್ಚು ಷೇರುದಾರರು ₹ 4,087 ಕೋಟಿ ಹೂಡಿದ್ದರು. ಇವರಲ್ಲಿ 40 ಸಾವಿರಕ್ಕೂ ಅಧಿಕ ಷೇರುದಾರರಿಗೆ ₹3,298 ಕೋಟಿ ಹಿಂತಿರುಗಿಸಲಾಗಿತ್ತು. ಉಳಿದವರಿಗೆ ₹ 1,410 ಕೋಟಿ ವಂಚಿಸಿದ ಆರೋಪ ಕಂಪನಿ ಮೇಲಿದೆ.

ದೆಹಲಿ ಹಾಗೂ ಚೆನ್ನೈನಿಂದ ಬಂದಿದ್ದ ಇ.ಡಿ ಅಧಿಕಾರಿಗಳ ತಂಡ ಮನ್ಸೂರ್‌ ಖಾನ್‌ನನ್ನು ಕಳೆದ ಮೂರು ದಿನಗಳಿಂದ ಸತತವಾಗಿ ವಿಚಾರಣೆ ನಡೆಸಿದೆ. ಆರೋಪಿ ಬಹಳಷ್ಟು ಸ್ಪೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾನೆ. ಮಾಹಿತಿ ಆಧರಿಸಿ ತನಿಖೆಯನ್ನು ಮುಂದುವರಿಸಲಾಗುವುದು ಎಂದೂ ಅಧಿಕಾರಿ ವಿವರಿಸಿದರು.

ವಿಸ್ತರಣೆ: ಜಾರಿ ನಿರ್ದೇಶನಾಲಯ ವಶದಲ್ಲಿರುವ ಮೊಹಮದ್‌ ಮನ್ಸೂರ್ ಖಾನ್‌ ಅವರ ಕಸ್ಟಡಿ ಅವಧಿಯನ್ನು ನಗರದ ಸೆಷನ್ಸ್ ಕೋರ್ಟ್‌ ಇದೇ 31ರವರೆಗೆ ಮತ್ತೆ ವಿಸ್ತರಿಸಿದೆ.

‘ಹುಣಸೆ ಬೀಜದಂತೆ ಹಣ ಚೆಲ್ಲಿದ್ದ’

‘ಷೇರುದಾರರಿಗೆ ವಂಚಿಸಿದ ಹಣವನ್ನುಮನ್ಸೂರ್‌ ಖಾನ್‌ ಹುಣಸೆ ಬೀಜದಂತೆ ಖರ್ಚು ಮಾಡಿದ್ದಾನೆ’ ಎಂಬ ಸಂಗತಿಯನ್ನು ಇ.ಡಿ ಬಯಲಿಗೆ ಎಳೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT