ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್‌ ಬಾಟಲಿ; ಬಳಕೆಯಲ್ಲಿರಲಿ ಎಚ್ಚರ

Last Updated 3 ಜೂನ್ 2018, 19:30 IST
ಅಕ್ಷರ ಗಾತ್ರ

ಇದು ಪ್ಲಾಸ್ಟಿಕ್‌ ಯುಗವೆಂದರೂ ತಪ್ಪಿಲ್ಲ. ಪ್ಲಾಸ್ಟಿಕ್‌ ಇಲ್ಲದೆ ಜೀವನವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಮಾರುಕಟ್ಟೆಗೆ ಹೋದರೂ ಬೇಕು. ಅಡುಗೆ ಮನೆಯಲ್ಲೂ ಅದರದೇ ಪಾರುಪತ್ಯ. ಊಟದ ಬಟ್ಟಲಿಂದ ಹಿಡಿದು ನೀರು ಕುಡಿಯುವ, ಟೀ–ಕಾಫಿ ಕುಡಿಯುವ ಲೋಟಗಳವರೆಗೂ ಪ್ಲಾಸ್ಟಿಕ್‌ ತನ್ನ ಕಬಂಧಬಾಹುವನ್ನು ಚಾಚಿದೆ.

ನಮ್ಮಲ್ಲಿ ಪ್ಲಾಸ್ಟಿಕ್‌ ಬಳಕೆ ಬಗ್ಗೆ ಇನ್ನು ಹೆಚ್ಚಿನ ಜಾಗೃತಿ, ಅರಿವು ಮೂಡಬೇಕಿದೆ. ಈ ವರ್ಷದ ಪರಿಸರ ದಿನಾಚರಣೆಯ ಘೋಷಣೆ ಕೂಡ ‘ಪ್ಲಾಸ್ಟಿಕ್‌ ಮಾಲಿನ್ಯವನ್ನು ತಡೆಗಟ್ಟಿ’ (Beat Plastic Pollution) ಎಂದಿದ್ದು, ಪ್ಲಾಸ್ಟಿಕ್‌ ವಿರುದ್ಧ ಜಾಗೃತಿಯೇ ಆಗಿದೆ. ನಾವು ನೀರು ಕುಡಿಯುವ ಬಾಟಲಿಗಳನ್ನೇ ತೆಗೆದುಕೊಳ್ಳಿ. ಸಿಕ್ಕ ಸಿಕ್ಕ ಬಾಟಲಿಗಳನ್ನು ನೀರು ತುಂಬಿಟ್ಟು ಕುಡಿಯಲು ಬಳಸುತ್ತೇವೆ. ಬಿಸಿ ಬಿಸಿ ಹಾಲು, ಚಹ, ಕಾಫಿಗಳನ್ನು ಕುಡಿಯಲು ಪ್ಲಾಸ್ಟಿಕ್‌ ಮಗ್‌ಗಳನ್ನೇ ಫ್ಯಾಷನ್‌ ಎಂಬಂತೆ ಬಳಸುತ್ತಿದ್ದೇವೆ. ಹೀಗೆ ಮಾಡುತ್ತಿದ್ದಲ್ಲಿ ಸ್ವಲ್ಪ ನಿಲ್ಲಿ.

ವಿಶೇಷವಾಗಿ ಬಳಸುವ ನೀರಿನ ಬಾಟಲಿಗಳ ಬುಡ ಮೇಲೆ ಮಾಡಿ ಕೊಂಚ ಕಣ್ಣಗಲಿಸಿ ನೋಡಿ.. ಏನು ಕಂಡಿತಲ್ಲಿ...? ತ್ರಿಕೋನಾಕಾರದ ಗುರುತಿನ ನಡುವೆ ಇಲ್ಲವೆ ಅಕ್ಕಪಕ್ಕದಲ್ಲಿ PET, PP, PETE, PVC, LDPE ಎಂದು ಬರೆದಿರಲಾಗುತ್ತದೆ. ಅದನ್ನು ಸೂಕ್ಷ್ಮವಾಗಿ ಗ್ರಹಿಸಿ. ಇದರ ಅರ್ಥ ನಿಮಗೆ ಗೊತ್ತಿದೆಯೇ? ಅಸಲಿಗೆ ನನಗೂ ಗೊತ್ತಿರಲಿಲ್ಲ. ನಾನು ಕೂಡ ಅಲ್ಲಿ ಇಲ್ಲಿ ಓದಿ ತಿಳಿದುಕೊಂಡಿದ್ದು. ಅದನ್ನೇ ಇಲ್ಲಿ ಹೇಳುತ್ತಿರುವೆ. ಓದಿ ನೋಡಿ, ಜೊತೆಗೆ ಪಾಲಿಸಿದರೆ ಒಳ್ಳೆಯದು.

ಹೆಚ್ಚಿನ ಪ್ಲಾಸ್ಟಿಕ್‌ ವಸ್ತುಗಳ ಮೇಲೆ PET, PC, PP, PETE, PVC, HDPE, HDP, LDPE ಇವುಗಳಲ್ಲಿ ಯಾವುದಾದರೂ ಒಂದು ಪದ ಕಾಣಬಹುದು. ಈ ಪದ ಅಲ್ಲಿ ಬಳಸಲಾದ ಪ್ಲಾಸ್ಟಿಕ್‌ನ ಗುಣಮಟ್ಟವನ್ನು ತಿಳಿಸಲಿದೆ. ಹೀಗೆ ಬರೆದಿದ್ದರೆ ಅರ್ಥವೇನು? ಆ ಪ್ಲಾಸ್ಟಿಕ್‌ ಬಳಕೆಗೆ ಯೋಗ್ಯವೇ? ಅಯೋಗ್ಯವೇ? ಇದರ ಅರಿವು ಹೊಂದುವುದು ಅತ್ಯವಶ್ಯ.

ನೀರಿನ ಬಾಟಲಿಗಳ ಬುಡದಲ್ಲಿ PET ಅಥವಾ PETE ಬರೆದಿದ್ದರೆ ಹುಷಾರು. ಏಕೆಂದರೆ ಈ ಬಾಟಲಿಗೆ ನೀರು ಹಾಕಿ ಬಳಸಿದರೆ ಅದರಲ್ಲಿ ವಿಷ ಪದಾರ್ಥ ಬಿಡುಗಡೆಯಾಗುತ್ತದೆ. ಆದ್ದರಿಂದ ಇಂಥ ಬಾಟಲಿಗಳ ನೀರು ಆರೋಗ್ಯಕ್ಕೆ ಸುರಕ್ಷಿತವಲ್ಲ. PC ಎಂದಿದ್ದರೆ ಈ ಪ್ಲಾಸ್ಟಿಕ್‌ ತುಂಬಾ ಅಪಾಯಕಾರಿ. ಇಂಥ ಬಾಟಲಿಗಳನ್ನು ಬಳಸಲೇ ಬಾರದು.

PS ಪ್ಲಾಸ್ಟಿಕ್‌ನಿಂದಲೂ ಮಗ್‌ಗಳನ್ನು ತಯಾರಿಸಲು ಬಳಸುತ್ತಾರೆ. ಇಂಥ ಮಗ್‌ಗಳಲ್ಲಿ ಕಾಫಿ,ಟೀ, ಹಾಲಿನಂಥ ಬಿಸಿ ಪದಾರ್ಥಗಳನ್ನು ಹಾಕಿದರೆ ಅವು ಕಾರ್ಸಿನೋಜೆನಿಕ್‌ ಸಂಯುಕ್ತಗಳನ್ನು ಬಿಡುಗಡೆ ಮಾಡುತ್ತವೆ. ಆರೋಗ್ಯಕ್ಕೆ ಒಳ್ಳೆಯದಲ್ಲ. PVC ಅಥವಾ 3V ಎಂದು ಬರೆದಿದ್ದರೆ ಅದು ಅಪಾಯಕಾರಿ ಪ್ಲಾಸ್ಟಿಕ್‌. ಇಂಥ ಪ್ಲಾಸ್ಟಿಕ್‌ ಬಳಕೆ ಹಾರ್ಮೋನ್‌ಗಳ ಅಸಮತೋಲನಕ್ಕೆ ದಾರಿಯಾಗಲಿದೆ. ಕೆಲವು ಪ್ಲಾಸ್ಟಿಕ್‌ಗಳು ಕ್ಯಾನ್ಸರ್‌ ಕಾರಕ ಎಂದು ಹೇಳಲಾಗುತ್ತಿದೆ.

ಎಲ್ಲ ಪ್ಲಾಸ್ಟಿಕ್‌ಗಳೂ ಅಪಾಯಕಾರಿಯಲ್ಲ. ಅಂಥ ಪ್ಲಾಸ್ಟಿಕ್‌ಗಳಲ್ಲಿ PP, HDPE, HDP LDPE ಸೇರಿವೆ. ಟಾನಿಕ್‌, ಸಿರಪ್‌ಗಳನ್ನು ಹಾಕಲು ಬಳಸುವ ಬಾಟಲಿಗಳನ್ನು PP ಪ್ಲಾಸ್ಟಿಕ್‌ ಬಳಸಿ ತಯಾರಿಸಲಾಗುತ್ತದೆ. ಇದು ಸುರಕ್ಷಿತವೆನ್ನಲಾಗಿದೆ.

ಬಾಟಲಿಗಳ ಮೇಲೆ HDPE ಅಥವಾ HDP ಎಂದು ಬರೆದಿದ್ದರೆ ಅವು ಬಳಸಲು ಯೋಗ್ಯ. ಇಂಥ ಬಾಟಲಿಗಳಲ್ಲಿ ನೀರು ಬಳಸಿದರೆ ಅಪಾಯವೆನಿಸದು. LDPE ಎಂದು ಬರೆದಿದ್ದರೂ ಅಂಥ ಪ್ಲಾಸ್ಟಿಕ್‌ನಿಂದ ಯಾವುದೇ ಅಪಾಯವಿಲ್ಲ.

ನಾವು ಬಳಸುವ ಪ್ಲಾಸ್ಟಿಕ್‌ನ ಹಣೆಬರಹ ಹೀಗೆಲ್ಲ ಇದೆ ನೋಡಿ. ಆದ್ದರಿಂದ ಇನ್ನು ಮುಂದಾದರೂ ನಮ್ಮ ಆರೋಗ್ಯ ಕಾಯ್ದುಕೊಳ್ಳಲು ಪ್ಲಾಸ್ಟಿಕ್‌ ಬಾಟಲಿ, ಮಗ್‌, ಪಾತ್ರೆಗಳನ್ನು ಬಳಸುವ ಮೊದಲು ಅದರ ಬುಡ ಮೇಲೆ ಮಾಡಿ. ಬಳಸಲು ಯೋಗ್ಯವೆನಿಸುವಾಗಿದ್ದರೆ ಮಾತ್ರ ಖರೀದಿಸಿ, ಬಳಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT