ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಪಟ್ಟಿ ಪರಿಷ್ಕರಣೆ ಇಂದಿನಿಂದ

Last Updated 31 ಆಗಸ್ಟ್ 2019, 19:46 IST
ಅಕ್ಷರ ಗಾತ್ರ

ಬೆಂಗಳೂರು: ‘ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ–2020 ಹಾಗೂ ಮತದಾರರ ನೋಂದಣಿ ಕಾರ್ಯಕ್ರಮವನ್ನು ಭಾನುವಾರದಿಂದ (ಸೆ.1) ಆರಂಭಿಸಲಾಗುವುದು’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಈ ವಿಷಯ ತಿಳಿಸಿದ ಅವರು, ‘2002ರ ಜನವರಿ 1ಕ್ಕಿಂತ ಮೊದಲು ಜನಿಸಿದ ಹಾಗೂ 18 ವರ್ಷ ತುಂಬಿದವರು ಮತದಾರರ ಪಟ್ಟಿ ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು’ ಎಂದು ತಿಳಿಸಿದರು.

‘ಮತದಾರರ ಪಟ್ಟಿಯಲ್ಲಿ ಕೈಬಿಟ್ಟು ಹೋದವರು, ವಿಳಾಸ ಬದಲಾವಣೆ, ಬೇರೆಡೆಗೆ ಮತದಾರರ ಹೆಸರು ವರ್ಗಾಯಿಸಲು ಬಯಸುವವರಿಗೂ ಪರಿಷ್ಕರಣೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಮೃತಪಟ್ಟವರು, ಅನರ್ಹರನ್ನು ಪಟ್ಟಿಯಿಂದ ಕೈಬಿಡಲಾಗುವುದು. ಇತ್ತೀಚಿನ ಲೋಕಸಭಾ ಚುನಾವಣೆ ವೇಳೆ ಹೆಸರು ಪಟ್ಟಿಯಿಂದ ಕೈ ಬಿಟ್ಟು ಹೋಗಿದೆ ಎಂಬ ದೂರುಗಳು ಕೇಳಿ ಬಂದಿದ್ದವು. ಇನ್ನು ಮುಂದೆ ಈ ರೀತಿಯ ದೂರು ವಿರಳವಾಗಲಿವೆ. ಯಾರದಾದರೂ ಹೆಸರು ಕೈಬಿಡಬೇಕೆಂದರೆ ಅದರ ಪ್ರಕ್ರಿಯೆ ಕಠಿಣವಾಗಲಿದೆ’ ಎಂದರು.

‘ಮತದಾರರ ನೋಂದಣಿ ಕಾರ್ಯಕ್ರಮದಲ್ಲಿ ರಾಜಕೀಯ ಪಕ್ಷಗಳ ಪಾತ್ರ ಮಹತ್ವದ್ದಾಗಿದೆ. ಚುನಾವಣಾ ಅಧಿಕಾರಿಗಳ ಜೊತೆಗೆ ರಾಜಕೀಯ ಪಕ್ಷಗಳು ಬೂತ್ ಏಜೆಂಟರನ್ನು ನೇಮಿಸುವ ದಿಸೆಯಲ್ಲಿ ಸಹಕಾರ ನೀಡಬೇಕು. ಎರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿದವರು, ನಕಲಿ ಮತದಾರರು, ಅಕ್ರಮ ಮತದಾರರನ್ನು ಪತ್ತೆ ಹಚ್ಚಲು ಇದರಿಂದ ಅನುಕೂಲವಾಗಲಿದೆ’ ಎಂದು ಅವರು ತಿಳಿಸಿದರು.

‘ಮುಂದಿನ ದಿನಗಳಲ್ಲಿ ಬೆಂಗಳೂರು ಒನ್ ಸೇರಿದಂತೆ ರಾಜ್ಯ ಸರ್ಕಾರದ ಇತರೆ ಏಜೆನ್ಸಿಗಳ ಮೂಲಕವೂ ಮತದಾರರ ನೋಂದಣಿ ಮತ್ತು ಇತರ ಚುನಾವಣಾ ಇಲಾಖೆ ಕೆಲಸಗಳನ್ನು ಕೈಗೊಳ್ಳಬಹುದು’ ಎಂದು ಅವರು ತಿಳಿಸಿದರು.

‘ಅನರ್ಹಗೊಂಡಿರುವ ಶಾಸಕರು ಪ್ರತಿನಿಧಿಸುವ 17 ವಿಧಾನ ಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಸಲು ಆಯೋಗ ಸಿದ್ಧ’ ಎಂದು ತಿಳಿಸಿದರು.

ಮತದಾರರಿಗೆ ಮಾಹಿತಿ

* ನೂತನವಾಗಿ ಮತದಾರರ ಪಟ್ಟಿಗೆ ಅರ್ಜಿ ಸಲ್ಲಿಸುವವರು ರಾಜ್ಯದಲ್ಲಿರುವ 6,151 ನಾಗರಿಕ ಸೇವಾ ಕೇಂದ್ರಗಳು, ಅಟಲ್‌ಜಿ ಜನಸ್ನೇಹಿ ಕೇಂದ್ರ ಹಾಗೂ ಬಾಪೂಜಿ ಕೇಂದ್ರಗಳು, ಜಿಲ್ಲಾ ಚುನಾವಣಾಧಿಕಾರಿ ಕಚೇರಿ, ತಾಲ್ಲೂಕು ಹಾಗೂ ಉಪ ಚುನಾವಣಾಧಿಕಾರಿ ಕಚೇರಿಯಲ್ಲಿ ನೋಂದಣಿಗೆ ಅರ್ಜಿ ಸಲ್ಲಿಸಬಹುದು.

* ಚುನಾವಣಾ ಸಹಾಯವಾಣಿ 1950ಕ್ಕೂ ಕರೆ ಮಾಡಬಹುದು.

* ಮತದಾರರ ಪಟ್ಟಿ ಪರಿಷ್ಕರಣೆ, ದೃಢೀಕರಣ, ಸ್ವಚ್ಛಗೊಳಿಸುವುದು ಎಂಬ ಶಿರೋನಾಮೆಯಲ್ಲಿ (ಇವಿಪಿ) ಕಾರ್ಯಕ್ರಮ ಮಾಡಲಾಗುವುದು.

* ಇಲ್ಲಿ ಮತದಾರರು ಆನ್‌ಲೈನ್ ಮೂಲಕ, ಇಲ್ಲವೇ ‘ನಮ್ಮ ನಾಗರಿಕ ಸೇವಾ ಕೇಂದ್ರ’ದ ಮೂಲಕ ಅರ್ಜಿ ಸಲ್ಲಿಸಬಹುದು.

* ಮತದಾರರು ತಮ್ಮ ‘ವೋಟರ್‌ ಹೆಲ್ಪ್‌ಲೈನ್‌’ ಮೊಬೈಲ್‌ ಆ್ಯಪ್‌ನಿಂದ ತಮ್ಮ ವಿವರಗಳನ್ನು ಪರಿಶೀಲಿಸಿಕೊಳ್ಳಬಹುದು.

* ಆಯೋಗದ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಸಮಗ್ರ ಮಾಹಿತಿ ಅಳವಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT