ಬಳ್ಳಾರಿ, ಮಂಡ್ಯ ಅಭ್ಯರ್ಥಿ ಇನ್ನೂ ಅನಿಶ್ಚಿತ

6
ವೆಂಕಟೇಶ ಪ್ರಸಾದ್‌, ದೇವೇಂದ್ರಪ್ಪ ಕಡೆಗೆ ಒಲವು

ಬಳ್ಳಾರಿ, ಮಂಡ್ಯ ಅಭ್ಯರ್ಥಿ ಇನ್ನೂ ಅನಿಶ್ಚಿತ

Published:
Updated:

ಬೆಂಗಳೂರು: ಉಪ ಚುನಾವಣೆಯ ನಾಮಪತ್ರ ಸಲ್ಲಿಕೆಯ ಕೊನೆಯ ದಿನ ಹತ್ತಿರ ಬರುತ್ತಿದ್ದರೂ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿಕೂಟದ ನಾಯಕರಿಗೆ ಮಂಡ್ಯ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಖೈರುಗೊಳಿಸಲು ಶುಕ್ರವಾರವೂ
ಸಾಧ್ಯವಾಗಲಿಲ್ಲ.

ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರು ಜಿಲ್ಲೆಯನ್ನು ಪ್ರತಿನಿಧಿಸುವ ತಮ್ಮ ಪಕ್ಷದ ಆರು ಶಾಸಕರ ಜತೆಗೆ ಸುದೀರ್ಘ ಚರ್ಚೆ ನಡೆಸಿದರು. ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ ಅವರ ಸಹೋದರ ವೆಂಕಟೇಶ್‌ ಪ್ರಸಾದ್‌ ಅಥವಾ ಸಚಿವ ರಮೇಶ್ ಜಾರಕಿಹೊಳಿ ಸಂಬಂಧಿ ದೇವೇಂದ್ರಪ್ಪ ಪೈಕಿ ಒಬ್ಬರನ್ನು ಹುರಿಯಾಳುಗಳನ್ನಾಗಿ ಮಾಡಲು ನಿರ್ಧರಿಸಲಾಗಿದೆ.

‘ಆರೂ ಶಾಸಕರೊಂದಿಗೆ ಚರ್ಚಿಸಿದ್ದೇನೆ. ಎಲ್ಲರೂ ಒಗ್ಗಟ್ಟಿನಿಂದ ಪಕ್ಷ ಗೆಲ್ಲಿಸಲು ತೀರ್ಮಾನಿಸಿದ್ದೇವೆ’ ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಶಿವಮೊಗ್ಗ ಕಗ್ಗಂಟು: ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲು ಜೆಡಿಎಸ್‌ ಚಿಂತನೆ ನಡೆಸಿದೆ.

ಆದರೆ, ಕಾಂಗ್ರೆಸ್‌ನ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ ಹಾಗೂ ಮಂಜುನಾಥ ಭಂಡಾರಿ ಸ್ಪರ್ಧೆಯಿಂದ ದೂರ ಉಳಿಯುವ ಇರಾದೆಯಲ್ಲಿದ್ದಾರೆ. ಭದ್ರಾ ಕಾಡಾದ ಮಾಜಿ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಸ್ಪರ್ಧಿಸಲು ಉತ್ಸುಕತೆ ತೋರಿದ್ದಾರೆ. ಆದರೆ, ಅಭ್ಯರ್ಥಿ ಯಾರು ಎಂದು ನಿಶ್ಚಯಿಸಲು ಪಕ್ಷದ ರಾಜ್ಯ ನಾಯಕರಿಗೆ ಸಾಧ್ಯವಾಗಿಲ್ಲ.

ಮಂಡ್ಯಕ್ಕೆ ಲಕ್ಷ್ಮಿ?: ಮಂಡ್ಯ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಅಂತಿಮಗೊಳಿಸಲು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ವಿಶ್ವನಾಥ್‌ ಹಾಗೂ ಮುಖಂಡರೊಂದಿಗೆ ಗುರುವಾರ ತಡರಾತ್ರಿ ತನಕ ಸರಣಿ ಸಭೆಗಳನ್ನು ನಡೆಸಿದರು.

ಲಕ್ಷ್ಮಿ ಅಶ್ವಿನ್‌ ಗೌಡ, ಎಲ್‌.ಆರ್‌.ಶಿವರಾಮೇಗೌಡ ಇಬ್ಬರ ಮಧ್ಯೆ ತೀವ್ರ ಪೈಪೋಟಿ ಇತ್ತು. ಏತನ್ಮಧ್ಯೆ ಮಾಜಿ ಶಾಸಕ ದಿವಂಗತ ಎಸ್.ಡಿ.ಜಯರಾಂ ಅವರ ಪತ್ನಿ ಪ್ರಭಾವತಿ ಅವರ ಹೆಸರು ಚಾಲ್ತಿಗೆ ಬಂದಿದೆ. ಪ್ರಭಾವತಿ ಅವರು ಈ ಹಿಂದೆ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.

ಬಿಜೆಪಿ ಅಭ್ಯರ್ಥಿ ಆಯ್ಕೆಗೆ ಕಸರತ್ತು

ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಲು ಕ್ಷೇತ್ರದ ಚುನಾವಣಾ ಉಸ್ತುವಾರಿ ಡಿ.ವಿ.ಸದಾನಂದ ಗೌಡ ಜಿಲ್ಲಾ ಮುಖಂಡರ ಜತೆಗೆ ಶುಕ್ರವಾರ ಸಮಾಲೋಚನೆ ನಡೆಸಿದರು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರುದ್ರೇಶ್ ಅಥವಾ ವಿಧಾನ ಪರಿಷತ್‌ನ ಕಾಂಗ್ರೆಸ್‌ ಸದಸ್ಯ ಸಿ.ಎಂ. ಲಿಂಗಪ್ಪ ಅವರ ಪುತ್ರ ಎಲ್‌.ಚಂದ್ರಶೇಖರ್‌ ಪೈಕಿ ಒಬ್ಬರು ಕಣಕ್ಕೆ ಇಳಿಯುವುದು ನಿಶ್ಚಿತ. ಚಂದ್ರಶೇಖರ್ ಮೂರು ದಿನಗಳ ಹಿಂದೆ ಬಿಜೆಪಿಗೆ ಸೇರ್ಪಡೆಯಾಗಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !