ಚುನಾವಣಾ ಸಿಬ್ಬಂದಿಗೆ ಮುದ್ರಿತ ಇಡಿಸಿ

ಗುರುವಾರ , ಏಪ್ರಿಲ್ 25, 2019
21 °C
ಕರ್ತವ್ಯ ನಿರತ ಸಿಬ್ಬಂದಿ ಮತಪ್ರಮಾಣ ಹೆಚ್ಚಳಕ್ಕೆ ತಂತ್ರಾಂಶದ ಮೊರೆ ಹೋದ ಹಾವೇರಿ ಜಿಲ್ಲಾಡಳಿತ

ಚುನಾವಣಾ ಸಿಬ್ಬಂದಿಗೆ ಮುದ್ರಿತ ಇಡಿಸಿ

Published:
Updated:

ಹಾವೇರಿ: ಸ್ವ ಕ್ಷೇತ್ರದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡ ಚುನಾವಣಾ ಸಿಬ್ಬಂದಿಗೆ ಕ್ಷಣಾರ್ಧದಲ್ಲಿ ಮುದ್ರಿತ ಚುನಾವಣಾ ಕರ್ತವ್ಯ ಪ್ರಮಾಣ ಪತ್ರ (ಇಡಿಸಿ) ನೀಡುವ ತಂತ್ರಜ್ಞಾನವನ್ನು ರಾಜ್ಯದಲ್ಲೇ ಮೊದಲ ಬಾರಿಗೆ ಹಾವೇರಿ ಜಿಲ್ಲಾಡಳಿತವು ಅಭಿವೃದ್ಧಿ ಪಡಿಸಿದ್ದು, ಜಾರಿಗೆ ತಂದಿದೆ.

ಚುನಾವಣೆಗೆ ನಿಯೋಜನೆಗೊಳ್ಳುವ ಸಿಬ್ಬಂದಿಯು ‘ಇಡಿಸಿ’ ಕೋರಿ, ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸುತ್ತಾರೆ. ಅದನ್ನು ಪರಿಶೀಲಿಸುವ ಸಹಾಯಕ ಚುನಾವಣಾಧಿಕಾರಿಯು, ಸಿಬ್ಬಂದಿ ಸ್ವ ಕ್ಷೇತ್ರ (ಮತದಾನದ ಅರ್ಹತೆ ಹೊಂದಿರುವ ಲೋಕಸಭಾ ಕ್ಷೇತ್ರ)ದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರೆ ‘ಇಡಿಸಿ’ ಅಥವಾ ಬೇರೆ ಕ್ಷೇತ್ರಕ್ಕೆ ನಿಯೋಜನೆಗೊಂಡಿದ್ದರೆ ಅಂಚೆ ಮತದಾನದ ಪತ್ರ (ಪೋಸ್ಟಲ್ ಬ್ಯಾಲೆಟ್)ವನ್ನು ನೀಡುತ್ತಾರೆ.

ಹಾವೇರಿಯ ಎನ್‌ಐಸಿ ಘಟಕವು ಅಭಿವೃದ್ಧಿ ಪಡಿಸಿದ ತಂತ್ರಾಂಶದಲ್ಲಿ ಸಿಬ್ಬಂದಿಯ ಎಪಿಕ್‌ ಕೋಡ್ ದಾಖಲಿಸಿದರೆ, ಇಡಿಸಿ ಕೋರಿ ಸಲ್ಲಿಸುವ ಅರ್ಜಿಯು (ಅರ್ಜಿ 12ಎ) ಪೂರ್ತಿ ವಿವರಗಳೊಂದಿಗೆ ಭರ್ತಿಯಾಗಿ ಮುದ್ರಣಗೊಳ್ಳುತ್ತದೆ. ಅದಕ್ಕೆ ಸಿಬ್ಬಂದಿ ಹಾಗೂ ಸಹಾಯಕ ಚುನಾವಣಾಧಿಕಾರಿ ಸಹಿ ಮಾಡಿದ ಬಳಿಕ, ‘ಮುದ್ರಿತ ಇಡಿಸಿ’ ದೊರೆಯುತ್ತದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದರು.

‘ಹೀಗಾಗಿ, ಸಿಬ್ಬಂದಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಯಾವುದೇ ಕಾಲಂಗಳನ್ನು ಭರ್ತಿ ಮಾಡಬೇಕಾಗಿಲ್ಲ. ಸಂಪೂರ್ಣ ವಿವರನ್ನು ತಂತ್ರಾಂಶವೇ ನೀಡುವ ಕಾರಣ, ಮಾನವ ಸಹಜ ಲೋಪದೋಷಗಳಿಗೆ ಅವಕಾಶವಿಲ್ಲ. ಅಲ್ಲದೇ, ಆ ಸಿಬ್ಬಂದಿ ಮತದಾನದ ಹಕ್ಕು ಹೊಂದಿದ ಮತಗಟ್ಟೆಯ ಮತದಾರರ ಪಟ್ಟಿಯಲ್ಲಿ ‘ಇಡಿಸಿ ನೀಡಲಾಗಿದೆ’ ಎಂದೂ ನಮೂದಾಗುತ್ತದೆ. ತಂತ್ರಾಂಶವೇ ಅರ್ಜಿ ಹಾಗೂ ಇಡಿಸಿಯನ್ನು ಮುದ್ರಿಸಿ ನೀಡುವ ಕಾರಣ, ಇಡಿಸಿ ತಿರಸ್ಕೃತಗೊಳ್ಳುವ ಅಪಾಯವಿಲ್ಲ ಎಂದು ವಿವರಿಸಿದರು.

ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಯ ಮತ ಚಲಾವಣೆ ಪ್ರಮಾಣವು ಕಡಿಮೆಯಾಗದಂತೆ ತಡೆಯಲು ಈ ತಂತ್ರಾಂಶ ಅಭಿವೃದ್ಧಿ ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದರು.

ಅಲ್ಲದೇ, 1040 ಪೊಲೀಸ್, 800 ಇತರ ಸಿಬ್ಬಂದಿ, 283 ಚಾಲಕರಿಗೂ ಇಡಿಸಿ ಅಥವಾ ಅಂಚೆ ಮತಪತ್ರ ನೀಡಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !