‘ರಂಗ’ ಸಾವು: ವನ್ಯಜೀವಿ ಪ್ರಿಯರಿಗೆ ನೋವು

7
ಗೋಣಿಕೊಪ್ಪಲು: ಮತ್ತಿಗೋಡು ಸಾಕಾನೆ ಸಾವು ಪ್ರಕರಣ

‘ರಂಗ’ ಸಾವು: ವನ್ಯಜೀವಿ ಪ್ರಿಯರಿಗೆ ನೋವು

Published:
Updated:
Deccan Herald

ಗೋಣಿಕೊಪ್ಪಲು: ಮೈಸೂರು, ಕಣ್ಣೂರು ಅಂತರ ರಾಜ್ಯ ಹೆದ್ದಾರಿಯಲ್ಲಿರುವ ಹುಣಸೂರು ವನ್ಯಜೀವಿ ವಿಭಾಗದ ಮತ್ತಿಗೋಡು ಸಾಕಾನೆ ಶಿಬಿರದಲ್ಲಿದ್ದ ಸಾಕಾನೆ ‘ರಂಗ’ ಖಾಸಗಿ ಬಸ್ ಡಿಕ್ಕಿ ಹೊಡೆದು ಮೃತಪಟ್ಟಿರುವುದು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವನ್ಯಜೀವಿ ಪ್ರಿಯರಲ್ಲಿ ನೋವು ತರಿಸಿದೆ.

ತಿತಿಮತಿಯಿಂದ 5 ಕಿ.ಮೀ. ದೂರದಲ್ಲಿ ಅಂತರ ರಾಜ್ಯ ಹೆದ್ದಾರಿ ಬದಿಯಲ್ಲಿಯೇ ಈ ಸಾಕಾನೆ ಶಿಬಿರ ಆರಂಭಗೊಂಡು 10 ವರ್ಷ ಕಳೆದಿದೆ. ಇಷ್ಟು ವರ್ಷಗಳ ಕಾಲ ಇಲ್ಲಿ ವಾಹನಗಳಿಂದ ಸಾಕಾನೆಗಳಿಗೆ ಯಾವುದೇ ಅಪಾಯ ಎದುರಾಗಿರಲಿಲ್ಲ.

ಈ ಹೆದ್ದಾರಿಯನ್ನು 2015ರಲ್ಲಿ ಮೇಲ್ದರ್ಜೆಗೇರಿಸಿ ವಿಸ್ತರಣೆ ಮಾಡಲಾಗಿತ್ತು. ರಸ್ತೆ ದುರಸ್ತಿಗೊಂಡ ಕೇವಲ 2 ತಿಂಗಳ ಅವಧಿಯಲ್ಲಿ ಇದೇ ಮಾರ್ಗದಲ್ಲಿ ಖಾಸಗಿ ಬಸ್‌ವೊಂದು ಕಾಡೆಮ್ಮೆಗೆ ಡಿಕ್ಕಿ ಹೊಡೆದು ಅದು ಸಾವನ್ನಪ್ಪಿತ್ತು. ಇದೀಗ ಸಾಕಾನೆ ಮೃತಪಟ್ಟಿರುವುದು 2ನೇ ಘಟನೆಯಾಗಿದೆ.

ಮತ್ತಿಗೋಡು ಶಿಬಿರದಲ್ಲಿ 31 ಆನೆಗಳಿವೆ. ಇವುಗಳಿಗೆ ಬೆಳಿಗ್ಗೆ ಮತ್ತು ಸಂಜೆ ಆಹಾರ ನೀಡಿ ಬಳಿಕ ಮೇಯಲು ಕಾಡಿಗೆ ಬಿಡಲಾಗುತ್ತದೆ. ಶಿಬಿರದ ಎರಡು ಬದಿಯಲ್ಲಿ ಕಾಡಿದ್ದು ಮಧ್ಯದಲ್ಲಿ ಹೆದ್ದಾರಿ ಇದೆ. ಆನೆಗಳು ಕಾಲಿಗೆ ಕಟ್ಟಿದ ಚೈನು ಎಳೆದುಕೊಂಡು ರಸ್ತೆಯನ್ನು ನಿಧಾನವಾಗಿ ದಾಟುತ್ತವೆ. ಈ ಸಂದರ್ಭದಲ್ಲಿ ಕೆಲವು ವಾಹನ ಚಾಲಕರು ಆನೆ ದಾಟುವವರೆಗೂ ನಿಂತಿದ್ದು ಬಳಿಕ ಮುಂದೆ ಚಲಿಸುತ್ತಾರೆ. ಆದರೆ, ಕೆಲವರು ಕಾಯುವುದೇ ಇಲ್ಲ. ಆನೆಗೆ ಮತ್ತು ಮಾವುತರಿಗೆ ಶಾಪ ಹಾಕುತ್ತಾ ಗೊಣಗಾಡುತ್ತಾರೆ. ಇಂತಹ ಆತುರ ಹಾಗೂ ನಿರ್ಲಕ್ಷ್ಯ ತೋರುವ ಚಾಲಕರಿಂದಲೇ ಇಂತಹ ಅವಘಡ ನಡೆದಿರುವುದು ಎಂದು ಆರೋಪಿಸುತ್ತಾರೆ ಅರಣ್ಯ ಇಲಾಖೆ ಸಿಬ್ಬಂದಿ.

ರಸ್ತೆ ಉಬ್ಬು ಹಾಕಲು 2015ರಿಂದಲೂ ಹಲವು ಬಾರಿ ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಶಿಬಿರದ ಸಿಬ್ಬಂದಿ ದೂರಿದರು.

ರಾತ್ರಿ ವೇಳೆ ಈ ಮಾರ್ಗದಲ್ಲಿ ನೂರಾರು ವಾಹನಗಳು ಬಿಡುವಿಲ್ಲದಂತೆ ಸಂಚರಿಸುತ್ತಿವೆ. ರಸ್ತೆಯಲ್ಲಿ ಉಬ್ಬು ಇಲ್ಲ. ಅಲ್ಲಲ್ಲಿ ವೇಗದ ಮಿತಿ ಫಲಕವನ್ನೂ ಅಳವಡಿಸಿಲ್ಲ ಎಂದು ಶಿಬಿರದ ಸಿಬ್ಬಂದಿಯೊಬ್ಬರು ಆಪಾದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !