ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲಿಗೆ ಸಿಕ್ಕಿ ಕಾಡಾನೆ ಸಾವು

Last Updated 10 ಡಿಸೆಂಬರ್ 2018, 20:45 IST
ಅಕ್ಷರ ಗಾತ್ರ

ಸಕಲೇಶಪುರ: ತಾಲ್ಲೂಕಿನ ಬಾಗೆ ಗ್ರಾ.ಪಂ. ವ್ಯಾಪ್ತಿಯ ಕಾಕನಮನೆ ಗ್ರಾಮದಲ್ಲಿ ಹಾದುಹೋಗಿರುವ ಹಾಸನ-ಸಕಲೇಶಪುರ ರೈಲು ಮಾರ್ಗದಲ್ಲಿ ಸೋಮವಾರ ಬೆಳಿಗ್ಗೆ ಚಲಿಸುತ್ತಿದ್ದ ರೈಲಿಗೆ ಸಿಕ್ಕಿ ಸುಮಾರು 25 ವರ್ಷದ ಕಾಡಾನೆಯೊಂದು ಮೃತಪಟ್ಟಿದೆ. ಮೂರು ತಿಂಗಳಲ್ಲಿ ಈ ಭಾಗದಲ್ಲಿ ನಾಲ್ಕು ಆನೆಗಳು ಮೃತಪಟ್ಟಂತಾಗಿದೆ.

ಸಕಲೇಶಪುರದಿಂದ ಹಾಸನದತ್ತ ಹೋಗುತ್ತಿದ್ದ ಪ್ರಯಾಣಿಕರ ರೈಲಿಗೆ ಸಿಕ್ಕಿರಬಹುದು ಎನ್ನಲಾಗಿದೆ. ಆಲೂರು ಹಾಗೂ ಸಕಲೇಶಪುರ ಭಾಗದಲ್ಲಿ ಇರುವ ಕಾಡಾನೆಗಳ ಗುಂಪಿಗೆ ಸೇರಿದ ಆನೆ ಇದಲ್ಲ. ಮಿಲನಕ್ಕಾಗಿ ಹೆಣ್ಣು ಆನೆ ಹುಡುಕಿಕೊಂಡು ಮೂಡಿಗೆರೆ ಭಾಗದಿಂದ ಒಂಟಿ ಸಲಗ ಇತ್ತ ಬರುತ್ತಿರುವಾಗ ಈ ಘಟನೆ ಸಂಭವಿಸಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಊಹಿಸಿದ್ದಾರೆ. ಸ್ಥಳಕ್ಕೆ ಡಿಎಫ್‍ಒ ಶಿವರಾಂ ಬಾಬು, ಎಸಿಎಫ್‍ ಲಿಂಗರಾಜು, ಆರ್‍ಎಫ್‍ಒ ಮೋಹನ್‍ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಆನೆಯ ಮೈಮೇಲೆ ಅಂತಹ ಗಾಯದ ಗುರುತು ಕಾಣಿಸದೆ ಹೋದರೂ, ರೈಲು ಎಂಜಿನ್‍ ಗುದ್ದಿರುವ ಹೊಡೆತಕ್ಕೆ ದೇಹದ ಒಳಭಾಗದ ಮೂಳೆಗಳು ಪುಡಿಯಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಪಶು ವೈದ್ಯರು ಸ್ಥಳದಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಂತ್ಯಸಂಸ್ಕಾರ ಮಾಡಿದರು.

ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮತ್ತಲಿನ ಗ್ರಾಮಗಳ ಸಾವಿರಾರು ಬಂದಾಗ ಕಳೇಬರದ ಬಳಿ ನೂಕು ನುಗ್ಗಲು ಉಂಟಾಗಿತ್ತು. ಆನೆಯನ್ನು ಹಲವರು ಮುಟ್ಟಿ ನಮಸ್ಕಾರ್ ಮಾಡಿ ಕಂಬನಿ ಮಿಡಿದರು.

ಇತ್ತೀಚೆಗೆ ಯಡಕುಮೇರಿ ಬಳಿ ರೈಲಿಗೆ ಸಿಕ್ಕಿ ಎರಡು ಕಾಡಾನೆಗಳು ಸಾವನ್ನಪ್ಪಿದ್ದವು. ಅದರ ಬೆನ್ನ ಹಿಂದೆಯೇ ತಾಲ್ಲೂಕಿನ ಕಡಗರವಳ್ಳಿ ಗ್ರಾಮದಲ್ಲಿ ಕಾಲು ಮುರಿದುಕೊಂಡಿದ್ದ ಕಾಡಾನೆ ಕೆಸರಿನಲ್ಲಿ ಸಿಕ್ಕಿ ನಿತ್ರಾಣಗೊಂಡಿತ್ತು. ಅರಣ್ಯ ಇಲಾಖೆಯವರು ಸುರಕ್ಷಿತವಾಗಿ ಮೇಲೆ ಎತ್ತಿದ್ದರೂ ಸಹ, ಎರಡು ದಿನಗಳ ನಂತರ ಸಾವನ್ನಪ್ಪಿತ್ತು. ಆ ಆನೆಯ ಮುಂಭಾಗದ ಎಡಗಾಲು ಮುರಿದಿತ್ತು.

ಕಾಡಾನೆಗಳ ನಿರಂತರ ಸಾವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳುವುದು ಅಗತ್ಯ ಎಂಬ ಮಾತುಗಳು ಪರಿಸರವಾದಿಗಳು, ಪ್ರಾಣಿಪ್ರಿಯರಿಂದ ಕೇಳಿ ಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT