ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಕೌಂಟರ್: ಬೆಂಗಳೂರಿಗರಿಗೆ ಹೊಸದಲ್ಲ!

1989ರಲ್ಲಿ ಮೊದಲ ಎನ್‌ಕೌಂಟರ್ ಹತ್ಯೆ ನಡೆದಿತ್ತು: ತೆಲಂಗಾಣ ಪೊಲೀಸರ ಕ್ರಮಕ್ಕೆ ಶ್ಲಾಘನೆ
Last Updated 7 ಡಿಸೆಂಬರ್ 2019, 5:52 IST
ಅಕ್ಷರ ಗಾತ್ರ

ಬೆಂಗಳೂರು: ಹೈದರಾಬಾದ್‌ನಲ್ಲಿ ಅತ್ಯಾಚಾರಿ ಆರೋಪಿಗಳ ಮೇಲೆ ನಡೆದ ಎನ್‌ಕೌಂಟರ್‌ ಬಹುತೇಕರಿಗೆ ಶಾಕ್‌ ಆಗಿರಬಹುದು. ಆದರೆ, ಇಂಥ ಘಟನೆಗಳು ಬೆಂಗಳೂಗರಿಗೆ ಹೊಸದಲ್ಲ. ತೀವ್ರ ಸ್ವರೂಪದ ಅಪರಾಧಗಳಲ್ಲಿ ಭಾಗಿಯಾದ ಆರೋಪಿಗಳನ್ನು ಮುಗಿಸಲು (ಪೊಲೀಸರಿಗೆ ತಿರುಗಿಬಿದ್ದ ಸಂದರ್ಭಗಳಲ್ಲಿ) ಈ ಅಸ್ತ್ರ ಪ್ರಯೋಗಿಸಲಾಗಿದೆ.

ನಗರದಲ್ಲಿ ಮೊದಲ ಎನ್‌ಕೌಂಟರ್‌ ನಡೆದಿದ್ದು 1989ರ ಜುಲೈ ತಿಂಗಳಲ್ಲಿ. ಕುಖ್ಯಾತ ರೌಡಿ ಎಂ.ಪಿ. ಜೈರಾಜ್‌ ಬಲಗೈ ಬಂಟ, ಸ್ಟೇಷನ್‌ ಶೇಖರ್‌ ಎಂಬಾತನನ್ನು ಪೊಲೀಸರು ಎನ್‌ಕೌಂಟರ್‌ ಮಾಡಿ ಹತ್ಯೆಗೈದಿದ್ದರು. ಈ ಎನ್‌ಕೌಂಟರ್‌ ಮಾಡಿದ್ದು ಇನ್‌ಸ್ಪೆಕ್ಟರ್‌ ಆಗಿದ್ದ ಅಶೋಕ್‌ ಕುಮಾರ್‌. 30 ವರ್ಷದ ಹಿಂದಿನ ಘಟನೆಯನ್ನು ನಿವೃತ್ತ ಅಧಿಕಾರಿ ಅಶೋಕ್‌ ಕುಮಾರ್‌ ‘ಪ್ರಜಾವಾಣಿ’ ಜೊತೆ ಹಂಚಿಕೊಂಡರು.

‘ಅದೊಂದು ಅತ್ಯಂತ ಕಠಿಣ ತೀರ್ಮಾನವಾಗಿತ್ತು. ಈ ಘಟನೆ ಬಳಿಕ ಯಾವ ಸೆಕ್ಷನ್‌ ಅಡಿ ಪ್ರಕರಣ ದಾಖಲಿಸಬೇಕೊ ಎಂಬ ಗೊಂದಲವಿತ್ತು. ಆನಂತರ, ಮುಂಬೈ ಪೊಲೀಸರ ಸಲಹೆ ಪಡೆದಿದ್ದೆವು. ಆದರೂ ನಾನು ಕೊಲೆ ಆರೋಪ ಎದುರಿಸಬೇಕಾಯಿತು’ ಎಂದು ಟೈಗರ್‌ ಎಂದೇ ಹೆಸರಾಗಿರುವಅಶೋಕ್‌ ಕುಮಾರ್ ಮೆಲಕು ಹಾಕಿದರು.

‘ಪೊಲೀಸರಿಗೆ ಪಿಸ್ತೂಲಿನ ಗುಂಡಿ ಎಳೆಯುವುದು ಕೊನೆಯ ಆಯ್ಕೆ. ನಮ್ಮ ಪ್ರಾಣಕ್ಕೇ ಕುತ್ತು ಬಂದಾಗ ಬೇರೆ ದಾರಿ ಇರುವುದಿಲ್ಲ. ಕೊಲೆ ಆರೋಪದಿಂದ ಪೊಲೀಸರು ವಿಚಲಿತರಾಗಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.

ಇದಾದ ಬಳಿಕವೂ ಅನೇಕ ಎನ್‌ಕೌಂಟರ್‌ಗಳು ನಡೆದಿವೆ. ಅತ್ಯಾಚಾರಿ ಆರೋಪಿಗಳ ಮೇಲೆ ನಡೆದಿರುವ ಎನ್‌ಕೌಂಟರ್‌ ಎಂದಾಕ್ಷಣ ನೆನಪಿಗೆ ಬರುವುದು ಮುನಿಯ ಮತ್ತು ನಟರಾಜನ ಮೇಲೆ ಅಬ್ದುಲ್‌ ಅಜೀಂ ಮಾಡಿದ ಎನ್‌ಕೌಂಟರ್‌. ಇಬ್ಬರೂ ಆರೋಪಿಗಳು ಎಂಟು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ಕಸದ ರಾಶಿಯೊಳಗೆ ಸುಟ್ಟು ಹಾಕಿದ್ದರು. ಇದಾದ ಮೂರು ತಿಂಗಳಲ್ಲೇ ಪೀಣ್ಯದ ಮನೆಯೊಂದಕ್ಕೆ ನುಗ್ಗಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ, ಆಕೆಯ ಮಗುವನ್ನು ಸೀಲಿಂಗ್‌ ಫ್ಯಾನ್‌ಗೆ ನೇಣು ಹಾಕಿದ್ದರು.

‘ಈ ಘಟನೆ ನಗರದಲ್ಲಿ ತೀವ್ರ ಪ್ರತಿಭಟನೆಗೆ ಕಾರಣವಾಗಿತ್ತು. ಪೀಣ್ಯದ ಬಹಳಷ್ಟು ನಾಗರಿಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದನ್ನು ನಿಲ್ಲಿಸಿದ್ದರು. ಈ ಇಬ್ಬರೂ ಆರೋಪಿಗಳು ಯಶವಂತಪುರ ಮಾರುಕಟ್ಟೆಯಲ್ಲಿ ಪೊಲೀಸ್‌ ಅಧಿಕಾರಿ ಮೇಲೆ ಮುಗಿಬಿದ್ದು ಇರಿಯಲುಯತ್ನಿಸಿದ್ದರು. ಆ ಸಮಯದಲ್ಲಿ ನೂರಾರು ಜನರ ಎದುರೇ ಎನ್‌ಕೌಂಟರ್‌ ಮಾಡಿ ಕೊಲ್ಲಲಾಯಿತು’ ಎಂದು ಅಜೀಂ ನೆನಪಿನ ಬುತ್ತಿ ಬಿಚ್ಚಿದರು. ಅಜೀಂ ಎಸಿಪಿ ಆಗಿ ನಿವೃತ್ತಿ ಹೊಂದಿದ್ದಾರೆ.

ಎನ್‌ಕೌಂಟರ್ ಹತ್ಯೆಗಳನ್ನು ಬಲವಾಗಿ ಸಮರ್ಥಿಸುವ ಅಶೋಕ್‌ ಕುಮಾರ್‌, ‘ಉದ್ದೇಶಪೂರ್ವಕವಾಗಿ ಯಾರೂ ಇಂಥ ಕೆಲಸ ಮಾಡುವುದಿಲ್ಲ. ಎನ್‌ಕೌಂಟರ್‌ ಮಾಡುವುದರ ಹಿಂದಿನ ಕೆಲಸ ಸುಲಭವಲ್ಲ. ಆನಂತರ, ಪೊಲೀಸರು ಅದನ್ನು ಸಮರ್ಥಿಸಿಕೊಳ್ಳುವುದು ಇನ್ನೂ ಕಷ್ಟ’ ಎಂದರು.

‘ಕುಖ್ಯಾತ ನರಹಂತಕ ವೀರಪ್ಪನ್‌ ಹತ್ಯೆ ಬಳಿಕ ನ್ಯಾಯಮೂರ್ತಿ ಸದಾಶಿವ ಆಯೋಗ ವಿಚಾರಣೆ ನಡೆಸಿತು. ಸತತ ಮೂರು ದಿನಗಳ ಕಾಲ ತಮ್ಮನ್ನು ಪ್ರಶ್ನಿಸಲಾಯಿತು. ತಪ್ಪು ಮಾಡುವ ಪೊಲೀಸರಿಗೆ ಅದರಿಂದ ಎದುರಾಗುವ ಪರಿಣಾಮದ ಅರಿವಿರುತ್ತದೆ’ ಎಂದು ವಿವರಿಸಿದರು.

‘ತೆಲಂಗಾಣ ಪೊಲೀಸರು ಪ್ರಶಂಸೆಗೆ ಅರ್ಹರು’ ಎಂದೂ ಅಶೋಕ್‌ ಕುಮಾರ್ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT