ಸೋಮವಾರ, ಸೆಪ್ಟೆಂಬರ್ 20, 2021
30 °C

ಶರಾವತಿ ಭೂಗತ ಜಲವಿದ್ಯುತ್ ಯೋಜನೆ: ರಾಜ್ಯದ ಪತ್ರಕ್ಕೆ ಪ‍ರಿಸರ ಸಂಘಟನೆಗಳ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ಶರಾವತಿ ಭೂಗತ ಜಲವಿದ್ಯುತ್ ಯೋಜನೆ ಪ್ರದೇಶವನ್ನು ಶರಾವತಿ ಅಭಯಾರಣ್ಯ ವ್ಯಾಪ್ತಿಯಿಂದ ಹೊರಗಿಡುವಂತೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಮನವಿ ಮಾಡಿರುವುದನ್ನು ಪರಿಸರ ಸಂಘಟನೆಗಳು ವಿರೋಧಿಸಿವೆ. ಆ ಮೂಲಕ ಭೂಗತ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಬೆಂಬಲ ನೀಡಿದೆ ಎಂದು ಆರೋಪಿಸಿವೆ.

ಪ್ರಸ್ತಾವಿತ ಭೂಗತ ಜಲ ವಿದ್ಯುತ್ ಯೋಜನೆಯ ಪ್ರದೇಶ ಶರಾವತಿ ಅಭಯಾರಣ್ಯದ ಸುತ್ತಲಿನ ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಯಲ್ಲೇ ಇದೆ. ಈ ಪ್ರದೇಶದ ಅಭಿವೃದ್ಧಿ, ಕಾಳಜಿಯ ಹಿನ್ನೆಲೆಯಲ್ಲಿ  ಈ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ವೃಕ್ಷಲಕ್ಷ ಆಂದೋಲನ ಸೇರಿದಂತೆ ವಿವಿಧ ಪರಿಸರ ಸಂಘಟನೆಗಳು ರಾಜ್ಯ ಸರ್ಕಾರವನ್ನು ವಿನಂತಿಸಿದ್ದವು. ಅರಣ್ಯ, ಪರಿಸರ ರಕ್ಷಣೆ ಕಾಯ್ದೆಗಳ ಪರವಾಗಿ ವರದಿ ಅಭಿಪ್ರಾಯ ನೀಡಬೇಕಾಗಿದ್ದ ರಾಜ್ಯ ಅರಣ್ಯ ಇಲಾಖೆ, ಕಣಿವೆಯಲ್ಲಿ ಯೋಜನೆಗೆ ಅವಕಾಶ ಕಲ್ಪಿಸಬೇಕು ಎಂದು ಕೇಂದ್ರಕ್ಕೆ ಪತ್ರ ಬರೆದಿರುವುದು ಖಂಡನೀಯ ಎಂದು ಪರಿಸರವಾದಿಗಳು ಟೀಕಿಸಿದ್ದಾರೆ.

ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳ ವ್ಯಾಪ್ತಿಗೆ ಬರುವ ಶರಾವತಿ ಕಣಿವೆಯ ಹೃದಯ ಭಾಗದಲ್ಲಿ ಕರ್ನಾಟಕ ಪವರ್ ಕಾರ್ಪೊರೇಷನ್ ಭೂಗತ ಜಲವಿದ್ಯುತ್ ಯೋಜನೆಯ ಪ್ರಸ್ತಾವ ಸಿದ್ಧಪಡಿಸಿದೆ. ಈ ಬಗ್ಗೆ ವೃಕ್ಷಲಕ್ಷ ಆಂದೋಲನ ಸ್ಥಳ ಸಮೀಕ್ಷೆ ನಡೆಸಿ, ಈ ಯೋಜನೆ ಅಸಾಧು ಎಂದು ಹೇಳಿತ್ತು. ಜತೆಗೆ ರಾಜ್ಯ ವನ್ಯಜೀವಿ ಇಲಾಖೆಯ ಎದುರು ಅಹವಾಲು ಸಲ್ಲಿಸಿತ್ತು. ಆದರೆ, ರಾಜ್ಯ ಪರಿಸರ ಅರಣ್ಯ ಇಲಾಖೆ ಕಾರ್ಯದರ್ಶಿ, ಕೇಂದ್ರ ಪರಿಸರ ಅರಣ್ಯ ಮಂತ್ರಾಲಯಕ್ಕೆ ಪತ್ರ ಬರೆಯುವ ಮೂಲಕ ಶರಾವತಿ ಕಣಿವೆಯ ಭೂಗತ ಯೋಜನೆಗೆ ಬೆಂಬಲ ನೀಡಿದಂತಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.