ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಂದಲ್ಲ ನಾಳೆ ಮನೆಗೆ ಬಂದೇ ಬರುತ್ತಾರೆ’

50 ದಿನಗಳು ಕಳೆದರೂ ‘ಸುವರ್ಣ ತ್ರಿಭುಜ’ ದೋಣಿಯಲ್ಲಿದ್ದವರ ಸುಳಿವಿಲ್ಲ: ಕುಟುಂಬದವರ ಕಣ್ಣೀರು
Last Updated 7 ಫೆಬ್ರುವರಿ 2019, 14:10 IST
ಅಕ್ಷರ ಗಾತ್ರ

ಕಾರವಾರ:ಮೀನುಗಾರಿಕಾ ದೋಣಿ ‘ಸುವರ್ಣ ತ್ರಿಭುಜ’ ನಾಪತ್ತೆಯಾಗಿ 50 ದಿನಗಳು ಕಳೆದವು. ಆದರೆ, ದೋಣಿ ಹಾಗೂ ಅದರಲ್ಲಿದ್ದ ಮೀನುಗಾರರ ಬಗ್ಗೆ ಇನ್ನೂ ಯಾವುದೇ ಸುಳಿವು ಸಿಕ್ಕಿಲ್ಲ. ಅವರ ಕುಟುಂಬ ಸದಸ್ಯರು ಕಣ್ಣೀರು ಇನ್ನೂ ನಿಂತಿಲ್ಲ.

ಉಡುಪಿ ಜಿಲ್ಲೆಯ ಮಲ್ಪೆಯಿಂದ ಡಿ.13ರಂದು ಮೀನುಗಾರಿಕೆಗೆ ಹೊರಟ ದೋಣಿಯಲ್ಲಿ ಏಳು ಮೀನುಗಾರರಿದ್ದರು.ದೋಣಿಯ ಮಾಲೀಕ ಮಲ್ಪೆಯಚಂದ್ರಶೇಖರ (40), ಉಡುಪಿಯ ದಾಮೋದರ (40), ಕುಮಟಾ ತಾಲ್ಲೂಕಿನ ಹೊಲನಗದ್ದೆಯ ಲಕ್ಷ್ಮಣ (45), ಮಾದನಗೇರಿಯ ಸತೀಶ (34), ಅದೇ ತಾಲ್ಲೂಕಿನ ಹರೀಶ (28), ರಮೇಶ್ (30) ಹಾಗೂ ಹೊನ್ನಾವರ ತಾಲ್ಲೂಕಿನಮಂಕಿಯ ರವಿ (27) ಎಲ್ಲಿದ್ದಾರೆ ಎನ್ನುವುದೇ ತಿಳಿಯುತ್ತಿಲ್ಲ.

‘ನನ್ನ ಅಣ್ಣ (ಚಿಕ್ಕಪ್ಪನ ಮಗ) ಇಂದು ಬರ್ತಾನೆ, ನಾಳೆ ಬರ್ತಾನೆ ಅಂತ ಕಾಯುತ್ತಾ ಕುಳಿತಿದ್ದೇನೆ.ಕ್ಷೇಮವಾಗಿ ಬರುತ್ತಾನೆ ಎಂಬ ನಂಬಿಕೆಯೂ ನನಗಿದೆ. ಆದರೆ, ಮನೆಯವರನ್ನು ಸಮಾಧಾನ ಮಾಡುವುದೇ ದೊಡ್ಡ ಸವಾಲಾಗಿದೆ. ಅವನಿಗೆ ಎರಡು ವರ್ಷಗಳ ಹಿಂದೆಯಷ್ಟೇ ಮದುವೆಯಾಗಿತ್ತು. ಅವನ ಒಂಬತ್ತು ತಿಂಗಳ ಮಗಳ ಮುಖ ನೋಡಿದಾಗ ಅಳು ಬರುತ್ತದೆ’ ಎನ್ನುತ್ತಾರೆ ಸತೀಶ ಅವರ ತಮ್ಮ ಸಂಜೀವ.

‘ಮನೆಗೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ರಾಜ್ಯ ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ, ಶಾಸಕ ದಿನಕರ ಶೆಟ್ಟಿ, ವಿವಿಧ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಧೈರ್ಯಹೇಳಿದ್ದಾರೆ. ತನಿಖೆ ನಡೆದಿದೆ,ನಾಪತ್ತೆಯಾದವರನ್ನು ಹುಡುಕಲಾಗುತ್ತಿದೆ ಎಂದಷ್ಟೇ ಹೇಳುತ್ತಾರೆ. ಇಸ್ರೋ, ಗೂಗಲ್ ನೆರವಿನಿಂದ ಪತ್ತೆ ಹಚ್ಚುವುದಾಗಿ ಸಚಿವರುಹೇಳಿದ್ದರು. ಆದರೆ, ಅದರ ಬಗ್ಗೆಈಗ ಸುದ್ದಿಯಿಲ್ಲ’ಎಂದುದುಃಖಿಸಿದರು.

ಲಕ್ಷ್ಮಣ ಅವರ ಮನೆಯ ವಾತಾವರಣದಲ್ಲೂ ವ್ಯತ್ಯಾಸವಿಲ್ಲ. ಪತ್ನಿ, ನಾಲ್ವರು ಮಕ್ಕಳಿರುವ ಕುಟುಂಬ ಅವರು ಬರುವ ದಾರಿಯನ್ನೇ ಕಾಯುತ್ತಿದೆ. ಸದ್ಯ ಅವರ ಭಾವ ರವಿ ನಾರಾಯಣ ಹರಿಕಂತ್ರ ಈ ಕುಟುಂಬವನ್ನು ನೋಡಿಕೊಳ್ಳುತ್ತಿದ್ದಾರೆ.

‘ಮನೆಯವರು ಕೇಳಿದಾಗಲೆಲ್ಲ ನಾಳೆ ಬರ್ತಾರೆ ಎಂದು ಹೇಳಿ ಸಮಾಧಾನ ಮಾಡುತ್ತಿದ್ದೇವೆ. ಆದರೆ, ಎಷ್ಟು ದಿನಈ ರೀತಿ ಹೇಳಲು ಸಾಧ್ಯ? 15– 20 ವರ್ಷಗಳಿಂದ ಮೀನುಗಾರಿಕೆಯಲ್ಲಿ ತೊಡಗಿದ್ದ ಭಾವನ ಬಗ್ಗೆಇದೇ ಮೊದಲ ಬಾರಿಗೆ ಇಷ್ಟೊಂದು ಆತಂಕ ಕಾಡುತ್ತಿದೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ವದಂತಿಗಳಿಂದ ಆತಂಕ:ನಾಪತ್ತೆಯಾದ ದೋಣಿಯು ಶ್ರೀಲಂಕಾದಲ್ಲಿ ಪತ್ತೆಯಾಗಿದೆ, ಮಾಲ್ವಾನ್ ಬಳಿಕಂಡಿದೆ,ಬೇರೆ ರಾಜ್ಯದವರು ಅಪಹರಿಸಿರಬಹುದು.. ಮುಂತಾದ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪದೇಪದೇ ಬರುತ್ತಿವೆ. ಇದರಿಂದ ಕುಟುಂಬ ಸದಸ್ಯರು ಮತ್ತಷ್ಟು ಆತಂಕಗೊಂಡಿದ್ದಾರೆ. ಇದರ ನಿಯಂತ್ರಣಕ್ಕೆ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಮೀನುಗಾರರು ಒತ್ತಾಯಿಸಿದ್ದಾರೆ.

ಮೂವರು ಅಧಿಕಾರಿಗಳ ಸಮಿತಿ:ಪ್ರಕರಣದ ಸತ್ಯಾಸತ್ಯತೆಯನ್ನು ತನಿಖೆ ಮಾಡಲು ಮೂವರು ಅಧಿಕಾರಿಗಳ ಸಮಿತಿಯೊಂದನ್ನು ನೇಮಕ ಮಾಡಲಾಗಿದೆ. ಆಂತರಿಕ ಭದ್ರತೆ ವಿಭಾಗದ ಡಿಐಜಿ ಸಿದ್ದರಾಮಪ್ಪ ಅವರ ನೇತೃತ್ವದಲ್ಲಿ ಕರಾವಳಿ ಕಾವಲು ಪೊಲೀಸ್‌ನ ಎಸ್‌ಪಿ ಪ್ರಮೋದ್ ರಾವ್, ನಕ್ಸಲ್ ನಿಗ್ರಹ ದಳದ ಎಸ್‌ಪಿ ಅರುಣ್ ಗಿರಿ ಒಳಗೊಂಡಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಪ್ರಮೋದ್ ರಾವ್, ‘ಫೆ.3ರಂದು ರತ್ನಗಿರಿ ಸಮೀಪ ದೋಣಿಯೊಂದರ ಅವಶೇಷ ಕಂಡಿದ್ದಾಗಿ ಮೀನುಗಾರರು ತಿಳಿಸಿದ್ದರು. ಅದರಂತೆ ಪರಿಶೀಲನೆಗೆ ನಮ್ಮ ತಂಡ ತೆರಳಿದೆ. ಎಲ್ಲ ರೀತಿಯಲ್ಲೂ ತನಿಖೆ ಕೈಗೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ಮುಷ್ಕರ ನಡೆಸುವ ಎಚ್ಚರಿಕೆ:‘ನಾಪತ್ತೆಯಾಗಿರುವ ಮೀನುಗಾರರನ್ನು ಪತ್ತೆ ಹಚ್ಚಲು ಶೀಘ್ರವೇ ಸಭೆ ಕರೆಯಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಮುಷ್ಕರ ಹಮ್ಮಿಕೊಳ್ಳಲಾಗುವುದು’ ಎಂದು ನಾಪತ್ತೆಯಾದ ಮೀನುಗಾರರ ಕುಟುಂಬಗಳ ಸದಸ್ಯರು ಹಾಗೂ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರನ್ನು ಗುರುವಾರ ಭೇಟಿ ಮಾಡಿ ಅವರು ಅಳಲು ತೋಡಿಕೊಂಡರು.

‘ಮೀನುಗಾರರನ್ನು ಯಾರೋ ಅಕ್ರಮವಾಗಿ ಬಂಧನದಲ್ಲಿ ಇಟ್ಟಿರಬಹುದು. ಈ ನಿಟ್ಟಿನಲ್ಲಿ ಇಲ್ಲಿನ ಹಾಗೂ ಮಹಾರಾಷ್ಟ್ರದ ಪೊಲೀಸರು ಸೂಕ್ತ ಕ್ರಮ ಕೈಗೊಂಡಿಲ್ಲ. ಆದ್ದರಿಂದ, ಸಾಧ್ಯವಿರುವ ಎಲ್ಲ ಇಲಾಖೆಗಳು ಒಂದಾಗಿ ರಕ್ಷಣಾ ಕಾರ್ಯಾಚರಣೆ ನಡೆಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT