ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಸರ್ಕಾರದ ಅನುಮೋದನೆ: ₹ 26 ಕೋಟಿಯಲ್ಲ 200 ಕೋಟಿ!

ಆರ್ಥಿಕ ಸಂಕಷ್ಟದ ಮಧ್ಯೆ ರಾಜ್ಯ ಸರ್ಕಾರದಿಂದ ತಿರುಮಲದಲ್ಲಿ ಸೌಲಭ್ಯ
Last Updated 10 ಜುಲೈ 2020, 4:55 IST
ಅಕ್ಷರ ಗಾತ್ರ
ADVERTISEMENT
""
""
""

ಬೆಂಗಳೂರು: ತಿರುಪತಿಯ ತಿರುಮಲದಲ್ಲಿ ಕರ್ನಾಟಕ ರಾಜ್ಯ ಛತ್ರಕ್ಕೆ ಸೇರಿದ ಜಾಗದಲ್ಲಿ ನೂತನ ವಸತಿ ಸಮುಚ್ಚಯ ನಿರ್ಮಾಣವೂ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ₹ 200 ಕೋಟಿ ಮೊತ್ತದ ಅಂದಾಜು ಪಟ್ಟಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

ವರ್ಷದ ಹಿಂದೆ (2019ರ ಜುಲೈ 16) ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ತಿರುಮಲದಲ್ಲಿ ವಸತಿ ಸಮುಚ್ಚಯ ನಿರ್ಮಿಸಲು ₹ 26 ಕೋಟಿಯ ಅಂದಾಜು ಪಟ್ಟಿಗೆ ಅನುಮೋದನೆ ನೀಡಿತ್ತು. ಅದನ್ನು ಕೈಬಿಟ್ಟು ಕೊರೊನಾ ಬಿಕ್ಕಟ್ಟು, ಆರ್ಥಿಕ ಸಂಕಷ್ಟದ ನಡುವೆಯೇ ಪರಿಷ್ಕೃತ ಯೋಜನೆಗೆ ಸರ್ಕಾರ ಸಮ್ಮತಿ ಸೂಚಿಸಿದೆ.

ಹೊಸ ಆದೇಶದ ಪ್ರಕಾರ, ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಮಂಡಳಿ ಇಡೀ ಯೋಜನೆಯನ್ನು ಕಾರ್ಯಗತಗೊಳಿಸಲಿದ್ದು, ₹ 200 ಕೋಟಿಯನ್ನು (ತೆರಿಗೆ ಹೊರತುಪ‍ಡಿಸಿ) ಮಂಡಳಿಗೆ ನೀಡಬೇಕಿದೆ. ಗಾಯತ್ರಿ ಆಂಡ್‌ ನಮಿತ್ ಆರ್ಕಿಟೆಕ್ಟ್ಸ್‌ (ಜಿಎನ್‌ಎ) ಮತ್ತು ಡಿಸೈನ್ ವೆಂಚರ್‌ ಕನ್ಸಲ್ಟೆಂಟ್‌ ಕಂಪನಿಗಳು ವಿನ್ಯಾಸ ಮತ್ತು ತಾಂತ್ರಿಕ ಕೆಲಸ ನಿರ್ವಹಿಸಲಿವೆ.

ಹಿಂದಿನ ಸರ್ಕಾರ, ರಾಜ್ಯಕ್ಕೆ ಸೇರಿದ 7 ಎಕರೆ 5ಗುಂಟೆ ಜಾಗದ ಪೈಕಿ, 61,390 ಚದರ ಅಡಿ ಜಾಗದಲ್ಲಿ ವಸತಿ ಸಮುಚ್ಚಯ ನಿರ್ಮಿಸಲು ಒಪ್ಪಿಗೆ ನೀಡಿತ್ತು. ಇಡೀ ಯೋಜನೆಯ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ನಿರ್ವಹಿಸಬೇಕೆಂದು ಷರತ್ತು ಹಾಕಿತ್ತು.

ವೆಚ್ಚ ಹೆಚ್ಚಳದ ಬಗ್ಗೆ ಪ್ರತಿಕ್ರಿಯಿಸಿದ ಮುಜರಾಯಿ ಇಲಾಖೆ ಆಯುಕ್ತರಾದ ರೋಹಿಣಿ ಸಿಂಧೂರಿ, ‘ಈ ಹಿಂದೆ ಮಂಜೂರಾತಿ ನೀಡಿದ್ದ ಯೋಜನೆಯು ಮುಂದುವರಿದಿರಲಿಲ್ಲ. ಈಗ ಹೊಸದಾಗಿ ಏಳು ಎಕರೆ ಭೂಮಿಯಲ್ಲಿ ಮೂರು ಕಾಂಪ್ಲೆಕ್ಸ್, ಕಲ್ಯಾಣ ಮಂಟಪ ನಿರ್ಮಾಣ ಸೇರಿದಂತೆ ಸಂಪೂರ್ಣ ಅಭಿವೃದ್ಧಿಗೆ ಯೋಜನೆ ಸಿದ್ಧಪಡಿಸಲಾಗಿದೆ’ ಎಂದರು.

‘ಕಾಮಗಾರಿಯನ್ನು ನಾವೇ ಮಾಡಿದರೆ ನಮ್ಮ ಗುತ್ತಿಗೆದಾರರು ಬೆಟ್ಟದ ಕೆಳಗಡೆಯಿಂದ ನಿರ್ಮಾಣ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಲು ಟಿಟಿಡಿ ಮಂಡಳಿಯ ಅನುಮತಿ ಬೇಕಾಗುತ್ತದೆ. ಅಲ್ಲದೆ, ವೆಚ್ಚವೂ ಜಾಸ್ತಿಯಾಗುತ್ತದೆ. ಮಂಡಳಿಯಲ್ಲಿ ಕಾಮಗಾರಿ ನಡೆಸುವ ವಿಭಾಗವೇ ಇದೆ. ಹೀಗಾಗಿ ಅವರಿಗೆ ವಹಿಸಲಾಗಿದೆ’ ಎಂದು ಅವರು ಹೇಳಿದರು.

***

ಯೋಜನೆಯನ್ನು ₹ 200 ಕೋಟಿಗೆ ಹೆಚ್ಚಿಸಿ ಪರಿಷ್ಕರಿಸಿರುವುದು ಮತ್ತು ಟಿಟಿಡಿ ಮಂಡಳಿಗೇ ಯೋಜನೆಯ ಜಾರಿಯನ್ನು ವಹಿಸಿರುವುದು ಅನುಮಾನಕ್ಕೆ ಕಾರಣವಾಗುತ್ತದೆ

- ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

***

ಈ ಹಿಂದಿನ ಯೋಜನೆ ಬಗ್ಗೆ ನನಗೆ ಗೊತ್ತಿಲ್ಲ. ಎರಡು ದಶಕಗಳಿಂದ ಯತ್ರಾರ್ಥಿಗಳಿಗೆ ಸೌಲಭ್ಯ ಕಲ್ಪಿಸಲು ಸಾಧ್ಯವಾಗಿಲ್ಲ. ಹೊಸ ಯೋಜನೆಗೆ ಈ ತಿಂಗಳಲ್ಲಿಯೇ ಶಿಲಾನ್ಯಾಸ ನಡೆಯಲಿದೆ

- ಕೋಟ ಶ್ರೀನಿವಾಸ ಪೂಜಾರಿ, ಮುಜರಾಯಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT