ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ ಕಾಯ್ದೆಗೆ ತಿದ್ದುಪಡಿ: ರಾಜ್ಯದಲ್ಲೂ ಬೇಕು ರೈತ ಬಜಾರ್

Last Updated 22 ಮೇ 2020, 20:00 IST
ಅಕ್ಷರ ಗಾತ್ರ

ಎಪಿಎಂಸಿ ಕುರಿತು ಇದುವರೆಗಿನ ಚರ್ಚೆಯ ಆಳ–ಅಗಲ ನೋಡಿದಾಗ ಒಂದಂಶ ಸ್ಪಷ್ಟ. ಎಪಿಎಂಸಿಯ ಮೊದಲಿನ ಸ್ವರೂಪದಿಂದಾಗಲಿ,ಕಾಯ್ದೆಗೆ ಮಾಡಿದ ತಿದ್ದುಪಡಿ ನಂತರದಸ್ವರೂಪದಿಂದಾಗಲಿ ರೈತರಿಗೆ ಹೆಚ್ಚಿನ ಪ್ರಯೋಜನವಿಲ್ಲ. ಹಾಗಾದರೆ, ಕೃಷಿ ಲಾಭದಾಯಕ ವೃತ್ತಿ ಎನಿಸಲು ಏನು ಮಾಡಬೇಕು?

ದೇಶದ ಯಶಸ್ವಿ ಪ್ರಯೋಗಗಳಲ್ಲಿ ಈ ಪ್ರಶ್ನೆಗೆ ಉತ್ತರ ಹುಡುಕಬೇಕು. ಆಂಧ್ರ ಪ್ರದೇಶದಲ್ಲಿ ‘ರೈತ ಬಜಾರ್‌’ ರೂಪದಲ್ಲಿ ಅಂತಹ ಯಶಸ್ವಿ ಮಾದರಿಯೊಂದು ನಮ್ಮ ಮುಂದಿದೆ.

ವಿಶಾಖಪಟ್ಟಣದ ನರಸಿಂಹನಗರದ ರೈತ ಬಜಾರಕ್ಕೆ ನಾನೊಮ್ಮೆ ಭೇಟಿ ನೀಡಿದ್ದೆ. ಕೊಂಚವೂ ಗಲೀಜು, ಗದ್ದಲವಿಲ್ಲದ ಮಾರುಕಟ್ಟೆಯಲ್ಲಿ, ತಾಜಾ ತರಕಾರಿ ಕೊಳ್ಳಲು ಗ್ರಾಹಕರ ದೊಡ್ಡ ದಂಡೇ ನೆರೆದಿತ್ತು.

ರೈತ ಮತ್ತು ಗ್ರಾಹಕರನ್ನು ಒಳಗೊಂಡ ಬೆಲೆ ನಿಗದಿ ಸಮಿತಿಯ ಸದಸ್ಯರು ವಿಶಾಖಪಟ್ಟಣದ ಮಾರುಕಟ್ಟೆಗಳನ್ನು ಸಂದರ್ಶಿಸಿ, ಬೆಲೆಗಳನ್ನು ಸಂಗ್ರಹಿಸಿಕೊಂಡು ಬಂದು, ಮುಖ್ಯದ್ವಾರದ ಬಳಿ ಇದ್ದ ದರಪಟ್ಟಿ ಫಲಕದಲ್ಲಿ ಅಂದಿನ ಬೆಲೆಗಳನ್ನು ನಮೂದಿಸುತ್ತಿದ್ದರು. ಮಾರಾಟದ ಬೆಲೆ ತಿಳಿಯುವ ಕುತೂಹಲದಿಂದ ಹಲವಾರು ತಲೆಗಳು ಗುಂಪಿನಲ್ಲಿ ಇಣುಕುತ್ತಿದ್ದವು.

ರೈತ ಗುಂಪುಗಳು ಮತ್ತು ಮಹಿಳಾ ಸ್ವಸಹಾಯ ಸಂಘಗಳು ಮಾತ್ರ ಮಾರಾಟ ಮಾಡುವ ರೈತ ಬಜಾರಲ್ಲಿ ಮಧ್ಯವರ್ತಿಗಳು ಮತ್ತು ವ್ಯಾಪಾರಗಾರರಿಗೆ ಅವಕಾಶವಿಲ್ಲ.‌ ಬಗೆಬಗೆಯ ತರಕಾರಿ, ಹಣ್ಣು ಹಂಪಲು, ಗೆಡ್ಡೆ ಗೆಣಸು, ಧಾನ್ಯ, ಮೊಟ್ಟೆ, ಕಾಳು ಮಾರಾಟಕ್ಕೆ ಬಂದಿದ್ದವು. ಸಂಘದ ಮಹಿಳೆಯರು ವ್ಯಾಪಾರ ಮಾಡುತ್ತಾ, ಗ್ರಾಹಕರೊಂದಿಗೆ ಹುಸಿಮುನಿಸು ತೋರುತ್ತಾ, ನಗೆ ಕೇಕೆ, ಹಾಸ್ಯ ಚಟಾಕಿ ಹಾರಿಸುತ್ತಿದ್ದರಿಂದ ಅಲ್ಲೊಂದು ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.

ಗಿರಿಜನರಿಗೆ ಪ್ರತ್ಯೇಕ ಸಾಲು. ಅವರ ಉತ್ಪನ್ನಗಳಿಗೆ ಶೇಕಡ 5ರ ಹೆಚ್ಚುವರಿ ಪ್ರೀಮಿಯಂ. ಪ್ರತಿ ರೈತ ಮಾರಾಟಗಾರರಿಗೂಗುರುತಿನ ಚೀಟಿ. ಮೋಸ ತಡೆಯಲು ಬಯೋ ಮೆಟ್ರಿಕ್ ಬಳಕೆ. ರಾತ್ರಿ ತಂಗಲು ಪುರುಷ, ಮಹಿಳೆಯರಿಗೆ ಪ್ರತ್ಯೇಕ ವಸತಿಗೃಹ. ಉಳಿದ ತರಕಾರಿ, ಹಣ್ಣು- ಹಂಪಲು ಕಾಪಿಡಲು ಶೀತಲ ಘಟಕ. ಮಾರುಕಟ್ಟೆಯ ತ್ಯಾಜ್ಯ ಅಲ್ಲಿನದೇ ಎರೆಹುಳು ಘಟಕಕ್ಕೆ ರವಾನೆ – ಹೀಗೆ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಬೇಕಾದ ಸಕಲ ವ್ಯವಸ್ಥೆಯೂ ಅಲ್ಲಿತ್ತು.

‘ರೈತ ಬಜಾರಿನ ಉತ್ಪನ್ನಗಳನ್ನು ಹೊರಗಿನ ಮಾರುಕಟ್ಟೆ ಬೆಲೆಗಿಂತ ಶೇ 10ರಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡುತ್ತೇವೆ. ಗ್ರಾಹಕ ನೀಡುವ ಶೇ 85 ರಷ್ಟು ಹಣ ನೇರವಾಗಿ ರೈತನಿಗೆ ಹೋಗುತ್ತದೆ‌. ಮಾರಾಟವಾಗದೆ ಉತ್ಪನ್ನ ಉಳಿದರೆ, ಪರಸ್ಪರ ಚರ್ಚಿಸಿ ಹೊರಗಿನ ಸಗಟು ಖರೀದಿದಾರರನ್ನು ಆಹ್ವಾನಿಸುತ್ತೇವೆ. ಮದುವೆ ಮೊದಲಾದ ಸಮಾರಂಭಗಳಿಗೆ ಬಜಾರಲ್ಲಿ ಸರಕು ಕೊಳ್ಳಲು ಅನುಮತಿ ನೀಡುತ್ತೇವೆ. ರೈತರಿಗೆ ಯಾವುದೇ ಕಿರುಕುಳವಾಗದಂತೆ ನೋಡಿಕೊಳ್ಳುತ್ತೇವೆ’ ಎಂದು ರೈತ ಬಜಾರಿನ ಎಸ್ಟೇಟ್ ಆಫೀಸರ್ ಪ್ರಸಾದ್ ಹೇಳುತ್ತಾರೆ. ಪ್ರತಿ ಹದಿನೈದು ದಿನಗಳಿಗೊಮ್ಮೆ ಲಾಟರಿ ಎತ್ತುವ ಮೂಲಕ ಮಳಿಗೆಗಳ ಬದಲಾವಣೆ ಮಾಡುತ್ತಾರೆ. ಪ್ರತಿ ಮಹಿಳಾ ಸಂಘ ವಾರದಲ್ಲಿ ಮೂರುದಿನ ಮಾರುಕಟ್ಟೆಗೆ ಬರಬಹುದು. ಉಳಿದ ಮೂರುದಿನ ಇನ್ನೊಂದು ಸಂಘದ ಸರದಿ. ಎಳೆಯ ಹಲಸು, ಬಿದಿರು ಕಳಲೆ, ಬೇವಿನ ಕಡ್ಡಿ, ನಾಟಿ ಮದ್ದು... ಹೀಗೆ ಹಳ್ಳಿಯ ಸಮಸ್ತವೂ ಇಲ್ಲಿ ಮಾರಾಟಕ್ಕೆ ಬರುತ್ತದೆ.

‘ಪೋಲೀಸರು, ದಲ್ಲಾಳಿಗಳು, ರೌಡಿಗಳ ಕಾಟದ ಮುಕ್ತಿ ಸಿಕ್ಕಿದೆ. ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗ್ತಿದೆ. ಇನ್ನೇನು ಬೇಕು ಸರ್‍ರು...’ ಎಂದು ಅರಕುವ್ಯಾಲಿಯ ಕಾಸಲಮ್ಮ ಕೇಳುತ್ತಾರೆ. ರೈತ ಬಜಾರನ್ನೇ ಹೋಲುವ ತಮಿಳುನಾಡಿನ ‘ಉಳವರ್ ಸಂತೈ’ ಕೂಡ ಯಶಸ್ವಿಯಾಗಿದೆ.

ಘನತೆ ಮತ್ತು ಹೆಮ್ಮೆಯಿಂದ ರೈತ ತಾನು ಬೆಳೆದಿದ್ದನ್ನು ಮಾರುಕಟ್ಟೆಗೆ ತರುವ ‘ರೈತ ಬಜಾರ್’ ಕರ್ನಾಟಕದಲ್ಲೂ ನೆಲೆಯೂರಬೇಕಿದೆ.‌

ಬೇಕಿವೆ ಸಹಕಾರಿ ಸಂಸ್ಥೆಗಳು!

ಕಂಪನಿಗಳು ರೈತನ ಹೊಲಕ್ಕೇ ಹೋಗಿ ಕೊಳ್ಳುವ ಅವಕಾಶ ಇರುವುದರಿಂದ ರೈತನ ಭಾಗ್ಯದ ಬಾಗಿಲು ತೆರೆಯುತ್ತದೆ ಎಂದು ಹೇಳಲಾಗುತ್ತಿದೆ. ಒಪ್ಪಂದ ಕೃಷಿಯ ಮೂಲಕ ಉತ್ಪನ್ನಗಳನ್ನು ಕೊಳ್ಳುವ ಕಂಪನಿಗಳು ಕೈಕೊಟ್ಟ ನೂರಾರು ಪ್ರಸಂಗಗಳನ್ನು ನೋಡಿದ್ದೇವೆ. ಇಂಥ ಸಂದರ್ಭಗಳಲ್ಲಿ ಸರ್ಕಾರ ನೆರವಿಗೆ ಬಂದ ಉದಾಹರಣೆ ಬೆರಳೆಣಿಕೆಯಷ್ಟು. ಭ್ರಷ್ಟ ಅಧಿಕಾರಿಗಳು ಕಾರ್ಪೊರೇಟ್ ಶಕ್ತಿಗಳ ಜೊತೆ ಕೈಗೂಡಿಸಿದರೆ ರೈತನ ಅಳಲು ಕೇಳುವವರು ಇಲ್ಲದಂತಾಗುತ್ತದೆ.

ಎಪಿಎಂಸಿಯ ಹೊರಗೆ ವ್ಯಾಪಾರ ಮಾಡುತ್ತಿದ್ದ ಸಹಕಾರ ಸಂಘಗಳು, ಉತ್ಪಾದಕರ ಕಂಪನಿಗಳಿಗೆ ಕಾನೂನು ಉಲ್ಲಂಘನೆಯ ನೆಪವೊಡ್ಡಿ ಅಧಿಕಾರಿಗಳು ದೊಡ್ಡ ಮೊತ್ತದ ದಂಡವನ್ನು ಕೊಡುವಂತೆ ಒತ್ತಾಯಿಸುತ್ತಿದ್ದರು. ಅವರು ಕೇಳಿದಷ್ಟು ಲಂಚ ಕೊಟ್ಟು ದಂಡದ ಹೊರೆಯಿಂದ ತಪ್ಪಿಸಿಕೊಳ್ಳ ಬೇಕಾಗುತ್ತಿತ್ತು. ಈಗ ಈ ಸಮಸ್ಯೆ ಬಗೆಹರಿದಿದ್ದರೂ ಕಾರ್ಪೊರೇಟ್ ಕಂಪನಿಗಳಿಗೆ ಅವಕಾಶ ಮಾಡಿಕೊಡುವುದು ಬಾಣಲೆಯಿಂದ ಬೆಂಕಿಗೆ ರೈತರನ್ನು ದೂಡಿದಂತಾಗುತ್ತದೆ.

ಸರ್ಕಾರ ಮತ್ತು ನಬಾರ್ಡ್‌ ಬೆಂಬಲದೊಂದಿಗೆ ಹುಟ್ಟಿಕೊಂಡಿರುವ ನೂರಾರು ಉತ್ಪಾದಕರ ಕಂಪನಿಗಳು ಕರ್ನಾಟಕದಲ್ಲಿವೆ. ಸಗಟು ಖರೀದಿದಾರರಿಗೆ ಅಗತ್ಯವಿರುವ ದೊಡ್ಡ ಪ್ರಮಾಣದ ಉತ್ಪನ್ನಗಳನ್ನು ಸರಬರಾಜು ಮಾಡಲು ಇವರನ್ನು ಬಳಸಿಕೊಳ್ಳಬಹುದು. ಕಂಪನಿಗಳ ಜೊತೆ ಚೌಕಾಸಿ ಮಾಡುವ ಶಕ್ತಿ ಇವಕ್ಕೆ ಇರುತ್ತದೆ. ರೈತನಿಗೆ ಅಗತ್ಯವಿರುವಬೆಳೆ ಸಾಲ ನೀಡುವಲ್ಲಿ ಕೂಡ ಈ ರೈತ ಕಂಪನಿಗಳ ಸೇವೆಯನ್ನು ಬಳಸಿಕೊಳ್ಳಬಹುದು.

ದೇಶದ ಸಹಕಾರಿ ರಂಗದ ಯಶಸ್ವಿ ಮಾದರಿ ಕೆಎಂಎಫ್ ರೂಪದಲ್ಲಿ ಕಣ್ಣ ಮುಂದಿದೆ. ಹಾಪ್‌ಕಾಮ್ಸ್‌ ಕೂಡ ಒಂದು ಕಾಲಕ್ಕೆ ರೈತ ಪರ ಮಾರುಕಟ್ಟೆಯನ್ನು ಸೃಷ್ಟಿಸಿದ ಸಹಕಾರಿ ಸಂಸ್ಥೆ. ಕೊಂಚ ಶ್ರಮಪಟ್ಟರೆ ಈಗಲೂ ಹಾಪ್‌ಕಾಮ್ಸ್‌ಅನ್ನು ಸರಿದಾರಿಗೆ ತರಬಹುದು.

ಅಡಿಕೆ ಬೆಳೆಗಾರರ ಸಹಕಾರ ಸಂಘ ‘ಕ್ಯಾಂಪ್ಕೊ’ ಅಡಿಕೆಯ ಶೇ 30ರಷ್ಟು ವಹಿವಾಟು ಮಾತ್ರ ಮಾಡುತ್ತದೆ. ಬೆಲೆ ಕುಸಿತದಂತಹ ಸಂಕಷ್ಟದ ಸಮಯದಲ್ಲಿ ಅಡಿಕೆಯ ಬೆಲೆಯನ್ನು ಏರಿಸುವ ಮೂಲಕ ತೀವ್ರ ಕುಸಿತದಿಂದ ರೈತರನ್ನು ಪಾರುಮಾಡುತ್ತದೆ. ಇಂಥ ಸಹಕಾರಿ (ಸರ್ಕಾರಿ ಅಲ್ಲ!) ಸಂಸ್ಥೆಗಳನ್ನು ಇನ್ನಷ್ಟು ಹುಟ್ಟುಹಾಕುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ.

ರೈತ ಸಂತೆಗಳಿಗೆ ಜೀವ ತುಂಬಿ

ಸರ್ಕಾರದ ಬೆಂಬಲವಿಲ್ಲದೆ ಹಲವು ಕೃಷಿಕರ ಗುಂಪುಗಳು ರೈತ ಮಾರುಕಟ್ಟೆಗಳನ್ನು (ಫಾರ್ಮರ್ಸ್‌ ಮಾರ್ಕೆಟ್) ರೂಪಿಸಿಕೊಂಡಿವೆ. ಮೈಸೂರು, ಧಾರವಾಡ, ಮಂಡ್ಯ, ಮಂಗಳೂರು, ದಾವಣಗರೆ ಮೊದಲಾದ ನಗರಗಳಲ್ಲಿ ಸಾವಯವ ಸಂತೆಗಳು ಸಹ ಯಶಸ್ವಿಯಾಗಿವೆ. ಗ್ರಾಹಕರ ಜೊತೆ ನೇರ ಬಾಂಧವ್ಯ ಬೆಸೆಯುವ ‘ರೈತ ಸಂತೆ’ಗಳನ್ನು ಇನ್ನಷ್ಟು ಹೆಚ್ಚಿಸಬೇಕಿದೆ.

‘ಲಾಕ್‌ಡೌನ್ ಸಂದರ್ಭದಲ್ಲಿ ಗ್ರಾಹಕರ ಜೊತೆ ನೇರ ಸಂಪರ್ಕ ಇದ್ದುದರಿಂದ ಗ್ರಾಹಕರ ಮನೆ ಬಾಗಿಲಿಗೇ ಉತ್ಪನ್ನಗಳನ್ನುತಲುಪಿಸಿದೆವು’ ಎಂದು ಮಂಡ್ಯದ ಬಯಲುಸೀಮೆ ಬೆಳೆಗಾರರ ಸಂಘದ ಹೇಮಂತ್ ಹೇಳುತ್ತಾರೆ.

ಕಚ್ಚಾಮಾಲನ್ನು ಸಿಕ್ಕಷ್ಟು ಬೆಲೆಗೆ ಎಪಿಎಂಸಿಯಲ್ಲಿ ಮಾರಿ ಸಪ್ಪೆ ಮುಖ ಮಾಡಿಕೊಂಡು ಮನೆ ಸೇರುವ ರೈತನಿಗೆ, ಮೌಲ್ಯವರ್ಧನೆಯ ಮೂಲಕ ತಾನೇ ಬೆಲೆ ನಿಗದಿಮಾಡುವ ಅವಕಾಶವನ್ನು ‘ರೈತ ಸಂತೆ’ ತೆರೆದಿಡುತ್ತದೆ.

ಬಯಲು ಸೀಮೆಯ ರೈತರು ತಮ್ಮ ದವಸ ಧಾನ್ಯವನ್ನು ಮಾರಲು ಇವತ್ತಿಗೂ ನೆಚ್ಚಿಕೊಂಡಿರುವುದು ಎಪಿಎಂಸಿಗಳನ್ನೇ. ರಾಜಕಾರಣಿಗಳ ಹಿಂಬಾಲಕರು, ಮಧ್ಯವರ್ತಿಗಳನ್ನು ಹೊರಗಿಟ್ಟು ಎಪಿಎಂಸಿಗಳನ್ನು ಮತ್ತಷ್ಟು ರೈತಸ್ನೇಹಿ ಮತ್ತು ಗ್ರಾಹಕರ ವಿಶ್ವಾಸದ ತಾಣವಾಗಿ ಮಾಡಬೇಕಿದೆ.

ಆಂಧ್ರದ ರೈತ ಬಜಾರಿನ ಮಾದರಿಯಲ್ಲಿ ನಗರಗಳ ವಿವಿಧ ಬಡಾವಣೆಗಳಲ್ಲಿ ‘ರೈತ ಬಜಾರು’ಗಳನ್ನು ಎಪಿಎಂಸಿಗಳ ಅಡಿಯಲ್ಲಿ ಆರಂಭಿಸಬಹುದಾಗಿದೆ. ಗ್ರಾಹಕರು ತಮ್ಮ ಸಮೀಪದ ಮಾರುಕಟ್ಟೆಗೆ ಹೋಗಿಬರಲು ಅನುಕೂಲ. ಬೆಂಗಳೂರುನಗರವೊಂದರಲ್ಲೇ 100ಕ್ಕೂ ಹೆಚ್ಚು ರೈತ ಬಜಾರಗಳನ್ನು ಆರಂಭಿಸಲು ಅವಕಾಶವಿದೆ.

ಕೊರೊನಾ ಅವಾಂತರದಿಂದ ಹಳ್ಳಿಗಳಿಗೆ ವಾಪಸ್ ಬರುತ್ತಿರುವ ಸಾವಿರಾರು ಯುವಕರನ್ನು ಮಾರುಕಟ್ಟೆ ಮತ್ತು ಮೌಲ್ಯವರ್ಧನೆಯ ಕಾರ್ಯಕ್ಕೆ ಬಳಸಿಕೊಳ್ಳಬಹುದು. ಗ್ರಾಮ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಮೂಲಕ ಮೌಲ್ಯವರ್ಧನೆಯ ಎಲ್ಲ ಅವಕಾಶಗಳನ್ನು ತೆರೆದಿಡಬೇಕು. ಥಾಯ್ಲೆಂಡ್‌ ದೇಶದ ಮಾದರಿಯಲ್ಲಿ ಹೆದ್ದಾರಿಯ ಉದ್ದಕ್ಕೂ, ಆಸ್ಪತ್ರೆ, ಸರ್ಕಾರಿ ಕಚೇರಿ ಆವರಣಗಳಲ್ಲಿ ‘ರೈತರ ಸಂತೆ’, ಹಳ್ಳಿಗರ ಅಂಗಡಿಗಳು ತಲೆ ಎತ್ತಬೇಕು. ರೈತರನ್ನು ಮಾರುಕಟ್ಟೆಗೆ ಇಳಿಸದ ಹೊರತು ಉಳಿಗಾಲವಿಲ್ಲ.

ಲಾಭದ ಕೃಷಿಗಾಗಿ ಹತ್ತು ಸೂತ್ರಗಳು

*ಸದ್ಯ ರಾಜ್ಯದಲ್ಲಿ ಹಣ್ಣು–ತರಕಾರಿ ಬೆಳೆ ಮಾರಾಟಕ್ಕಾಗಿ ಹಾಪ್‌ಕಾಮ್ಸ್‌ ಇದೆ. ಅದಕ್ಕೆ ಮತ್ತಷ್ಟು ಶಕ್ತಿ ತುಂಬಿ ಕ್ರಿಯಾಶೀಲಗೊಳಿಸಬೇಕು. ಇತರ ಕೃಷಿ ಉತ್ಪನ್ನಗಳನ್ನೂ ಅಲ್ಲಿ ಮಾರಾಟ ಮಾಡುವ ವ್ಯವಸ್ಥೆ ಮಾಡಬೇಕು

*ಕೆಎಂಎಫ್ ಮಾದರಿಯಲ್ಲೇ ಸ್ಥಳೀಯ ಕೃಷಿ ತೋಟಗಾರಿಕಾ ಉತ್ಪನ್ನಗಳನ್ನು ಸಂಗ್ರಹಿಸಿ, ನೇರವಾಗಿ ಗ್ರಾಹಕರಿಗೆ ತಲುಪಿಸುವಂತಹ ವ್ಯವಸ್ಥೆ ಮಾಡಬೇಕು. ಇದಕ್ಕೆ ಸ್ವಸಹಾಯ ಸಂಘಗಳ ನೆರವು ಪಡೆಯುವ ಮೂಲಕ ಅವುಗಳಿಗೂಉದ್ಯೋಗ ಒದಗಿಸಬೇಕು

*ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ‘ಬೆಳೆ ಯೋಜನೆ’ ತಯಾರಿಸಬೇಕು. ಪ್ರತಿ ಕಾಲಘಟ್ಟದಲ್ಲೂ ಗ್ರಾಮದ ಎಲ್ಲ ರೈತರೂ ಸೇರಿ ಯಾವ ಬೆಳೆ, ಎಷ್ಟು ಬೆಳೆಯಬೇಕೆಂದು ನಿರ್ಧರಿಸಿಯೇ ಕೃಷಿ ಆರಂಭಿಸಬೇಕು. ಕೃಷಿ–ತೋಟಗಾರಿಕೆ ಇಲಾಖೆ ಇದಕ್ಕೆ ಸಹಕಾರ ನೀಡಬೇಕು

*ದೂರದ ಮಾರುಕಟ್ಟೆಯ ಅಗತ್ಯ ಪೂರೈಸಲು ರಿಸ್ಕ್ ತೆಗೆದುಕೊಂಡು ಬೆಳೆ ಬೆಳೆಯುವುದು ಬಹಳ ಅಪಾಯ. ಈ ಕುರಿತು ಎಚ್ಚರಿಕೆ ಇರಬೇಕು

*ಸಹಕಾರ ತತ್ವದ ಕೃಷಿ – ಈ ಹೊತ್ತಿನ ಅನಿವಾರ್ಯ. ಊರಿನ ಪ್ರತಿ ರೈತನೂ ಬೆಳೆದ ಬೆಳೆಯನ್ನು ಮಾರುಕಟ್ಟೆ ಮಾಡಲು ಸಂತೆಗೆ ಕೊಂಡೊಯ್ಯುವ ಬದಲು, ಕೆಲವರಿಗಷ್ಟೆ ಮಾರುಕಟ್ಟೆಯ ಜವಾಬ್ದಾರಿ ಕೊಡಬೇಕು

*ಸ್ವಸಹಾಯ ಸಂಘಗಳು / ರೈತ ಉತ್ಪಾದಕ ಸಂಘಗಳನ್ನು ರಚಿಸಿಕೊಂಡು, ಸ್ಥಳೀಯವಾಗಿ ಬೆಳೆಯುವ ಬೆಳೆಗಳನ್ನು ಮೌಲ್ಯವರ್ಧನೆ ಮಾಡಬೇಕು. ಪ್ಯಾಕ್ ಮಾಡಿ, ಬ್ರ್ಯಾಂಡ್‌ ಮಾಡಿ ಮಾರಾಟ ಮಾಡಬೇಕು

*ಆಯಾ ನೆಲಕ್ಕೆ / ಹವಾಮಾನಕ್ಕೆ ಹೊಂದುವಂತಹ ಬೆಳೆಗಳನ್ನಷ್ಟೇ ಬೆಳೆಯಬೇಕು. ಇದಕ್ಕೆ ‘ಸುಸ್ಥಿರ ಕೃಷಿ’ ಪದ್ಧತಿಯ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು

*ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು, ಮೌಲ್ಯವರ್ಧಿತ ಉತ್ಪನ್ನಗಳನ್ನು ನಗರಗಳ ಗ್ರಾಹಕರಿಗೆ ನೇರವಾಗಿ ತಲುಪಿಸುವ ದಾರಿಯನ್ನು ರೈತರು ಕಂಡುಕೊಳ್ಳಬೇಕು

*ಕೊರೊನಾ ಬಿಕ್ಕಟ್ಟಿನ ಬಳಿಕ ಲಕ್ಷಾಂತರ ಜನ ಹಳ್ಳಿಗಳಿಗೆ ಮರಳಿದ್ದಾರೆ. ಮೌಲ್ಯವರ್ಧನೆ, ನೇರ ಗ್ರಾಹಕನ ಮನೆಬಾಗಿಲಿಗೆ ಕೃಷಿ ಉತ್ಪನ್ನ ತಲುಪಿಸುವ ಕಾರ್ಯದಲ್ಲಿ ಅವರನ್ನು ಬಳಸಿಕೊಂಡರೆ ಉದ್ಯೋಗ ಸೃಷ್ಟಿಸಾಧ್ಯ. ಧಾರವಾಡ, ರಾಮನಗರ, ಕೊಪ್ಪಳ ಮತ್ತಿತರ ಜಿಲ್ಲೆಗಳ ರೈತರು ವಾಟ್ಸ್‌ ಆ್ಯಪ್‌ ಗುಂಪು ಮಾಡಿಕೊಂಡು ಮಾರುಕಟ್ಟೆ ಸೃಷ್ಟಿಸಿಕೊಂಡಿದ್ದು ಉಳಿದವರಿಗೂ ಮಾದರಿಯಾಗಬೇಕು

*ರೈತ ಸಂತೆಗಳಿಗೆ ಮರುಜೀವ ತುಂಬಿ, ರೈತ–ಗ್ರಾಹಕನ ನೇರ ಸಂಪರ್ಕಕ್ಕೆ ಸೌಲಭ್ಯ ಕಲ್ಪಿಸಬೇಕು

ಲೇಖಕ: ರೈತ ಮಾರುಕಟ್ಟೆ ಪ್ರತಿಪಾದಕ, ದೇಸಿ ಕೃಷಿ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT