ಸೋಮವಾರ, ನವೆಂಬರ್ 18, 2019
25 °C

ರೈತರಿಂದ ಸಿ.ಎಂ ಮನೆ ಮುತ್ತಿಗೆಗೆ ಯತ್ನ

Published:
Updated:
Prajavani

ಬೆಂಗಳೂರು: ‘ರೈತರ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದ ರಾಜ್ಯ ಸರ್ಕಾರ ಮಾತು ತಪ್ಪಿದೆ’ ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಎದುರು ಸೇರಿದ್ದ ರೈತರು, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಮನೆವರೆಗೂ ಮೆರವಣಿಗೆ ನಡೆಸಿ ಮುತ್ತಿಗೆ ಹಾಕಲು ಸಜ್ಜಾಗಿದ್ದರು.

ಮೆರವಣಿಗೆ ಆರಂಭವಾಗುತ್ತಿದ್ದಂತೆ ಪೊಲೀಸರು ವೃತ್ತದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ರೈತರನ್ನು ತಡೆದರು. ಕೆಲ ಪ್ರತಿಭಟನಕಾರರು ಬ್ಯಾರಿಕೇಡ್‌ ತಳ್ಳಿ ಮುಂದಕ್ಕೆ ಹೋಗಲು ಯತ್ನಿಸಿದರು. ಅದನ್ನು ಪೊಲೀಸರು ವಿಫಲಗೊಳಿಸಿದರು. ಮಾತಿನ ಚಕಮಕಿ ನಡೆದು ತಳ್ಳಾಟವೂ ಉಂಟಾಯಿತು. ನಂತರ, ಸ್ಥಳದಲ್ಲೇ ರೈತರು ಪ್ರತಿಭಟನೆ ಮುಂದುವರಿಸಿದರು.

‘ನೆರೆ ಸಂತ್ರಸ್ತರಿಗೆ ಪರಿಹಾರ ನೀಡಬೇಕು. ಮನೆ ಕಳೆದು ಕೊಂಡಿರುವವರಿಗೆ ಮನೆ ಕಟ್ಟಿಸಿ ಕೊಡಬೇಕು. ಮುಳುಗಡೆ ಪ್ರದೇಶಗಳನ್ನು ಸ್ಥಳಾಂತರಿಸಬೇಕು. ಸಾಲ ಪಾವತಿಸುವಂತೆ ಬ್ಯಾಂಕ್ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದು, ಅವರ ವರ್ತನೆಗೆ ಕಡಿವಾಣ ಹಾಕಬೇಕು’ ಎಂದು ರೈತರು ಆಗ್ರಹಿಸಿದರು. ‘ಕೆಲ ದಿನಗಳ ಹಿಂದಷ್ಟೇ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಸ್ಥಳಕ್ಕೆ ಬಂದಿದ್ದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಇದುವರೆಗೂ ಬೇಡಿಕೆಗಳು ಈಡೇರಿಲ್ಲ’ ಎಂದು ದೂರಿದರು.

ನ. 11ರವರೆಗೆ ಗಡುವು: ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ಸಚಿವ ಆರ್.ಅಶೋಕ ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ಅದಕ್ಕೆ ಒಪ್ಪಿದ ರೈತರು ನ. 11ರವರೆಗೆ ಗಡುವು ನೀಡಿ ಪ್ರತಿಭಟನೆ ಹಿಂಪಡೆದರು. 

ಪ್ರತಿಕ್ರಿಯಿಸಿ (+)