ಶುಕ್ರವಾರ, ನವೆಂಬರ್ 15, 2019
23 °C
ತಿರುಪತಿಯಲ್ಲಿ ಮಡಿಕೇರಿಯ ದಾಮೋದರ್‌ ಸಾವು

ಮಗಳ ಮದುವೆ ನೋಡದೇ ಪ್ರಾಣ ಬಿಟ್ಟ ಅಪ್ಪ; ವಿಷಯ ಮುಚ್ಚಿಟ್ಟು ವಿವಾಹ ಮಾಡಿದ ಕುಟುಂಬ

Published:
Updated:
Prajavani

ಮಡಿಕೇರಿ: ಬಹುದಿನಗಳಿಂದ ಪುತ್ರಿಯ ಮದುವೆ ನೋಡಬೇಕೆಂಬ ತಂದೆಯ ಕನಸು ಕೊನೆಗೂ ಈಡೇರಲಿಲ್ಲ. ಇನ್ನೇನು ಮಗಳು ದಾಂಪತ್ಯ ಜೀವನಕ್ಕೆ ಕಾಲಿಡಬೇಕು ಎಂಬ ಕ್ಷಣದಲ್ಲಿ ತಂದೆಯ ಪ್ರಾಣವೇ ಹೋಗಿತ್ತು. ಮಗಳ ಸಂತಸವನ್ನು ಕಣ್ಣಾರೆ ಕಾಣಬೇಕೆಂದು ಆಸೆ ಪಟ್ಟಿದ್ದ ತಂದೆಯ ಬಾಳಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ.

ಇದು ಯಾವುದೋ ಸಿನಿಮಾದ ಕಥೆಯಲ್ಲ; ಇದು ನ.3ರಂದು ದೂರದ ತಿರುಪತಿಯಲ್ಲಿ ನಡೆದ ನಿಜ ಘಟನೆ.

ಮಡಿಕೇರಿಯ ಚಾಮುಂಡೇಶ್ವರಿ ನಗರ ನಿವಾಸಿ ವಿ.ಕೆ.ಧಾಮೋದರ್‌ ಅವರ ಪುತ್ರಿ ಹರ್ಷಿತಾ ಅವರ ಮದುವೆ ಮೈಸೂರಿನ ವಿಷ್ಣುವರ್ಧನ್‌ ಜತೆಗೆ ನಿಶ್ಚಯವಾಗಿತ್ತು. ತಿಮ್ಮಪ್ಪನ ಸನ್ನಿಧಿಯಲ್ಲಿ ಮದುವೆ ನೆರವೇರಿಸಲು ಎರಡು ಕುಟುಂಬಸ್ಥರು ನಿರ್ಧರಿಸಿದ್ದರು. ಎರಡು ಕಡೆಯ ಕುಟುಂಬಸ್ಥರು ನ.2ರಂದೇ ತಿರುಪತಿಗೆ ತೆರಳಿದ್ದರು. ಅಂದು ರಾತ್ರಿ ಕೊಠಡಿ ಪಡೆದು ಅಲ್ಲೇ ವಾಸ್ತವ್ಯ ಮಾಡಿದ್ದರು. ಮರು ದಿವಸ ಬೆಳಿಗ್ಗೆ 8.30ಕ್ಕೆ ಮುಹೂರ್ತ ನಿಗದಿಗೊಂಡಿತ್ತು. ಆದರೆ, ಅದಕ್ಕೂ ಮೊದಲು ತಂದೆ ಮಲಗಿದ ಕೊಠಡಿಯಲ್ಲೇ ಸಾವನ್ನಪ್ಪಿದ್ದರು. ವಿಷಯ ಮುಚ್ಚಿಟ್ಟ ಕುಟುಂಬಸ್ಥರು ವಿವಾಹ ನಡೆಸಿದ್ದಾರೆ. ಬಳಿಕ ಹೇಗೋ ಮಗಳಿಗೆ ವಿಷಯ ಗೊತ್ತಾಗಿದೆ. ಆಗ ಪುತ್ರಿಯ ದುಃಖದ ಕಟ್ಟೆ ಒಡೆದಿದೆ.

ಮದುವೆಯ ಸಂತಸದಲ್ಲಿದ್ದ ಹರ್ಷಿತಾಳಿಗೆ ತನ್ನಪ್ಪ ಇನ್ನಿಲ್ಲ ಎಂಬುದು ನೋವಾಗಿ ಕಾಡಿದೆ. ನ. 4ರಂದು ಮಡಿಕೇರಿಯಲ್ಲಿ ಧಾಮೋದರ್ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ದುಃಖದಲ್ಲಿಯೇ ಪತಿ ಮನೆಯ ಹೊಸ್ತಿಲು ತುಳಿದ ಹರ್ಷಿತಾ, ಕೊನೆಗೆ ತಂದೆಯ ಅಂತ್ಯಕ್ರಿಯಲ್ಲಿ ಪಾಲ್ಗೊಂಡಿದ್ದರು. ಧಾಮೋದರ್ ಆಟೋ ಚಾಲಕ ವೃತ್ತಿ ಮಾಡುತ್ತಿದ್ದರು.

ಪ್ರತಿಕ್ರಿಯಿಸಿ (+)