ಸೋಮವಾರ, ಮಾರ್ಚ್ 1, 2021
24 °C

ಕಲ್ಮಡ್ಕ: ಮಕ್ಕಳಲ್ಲಿ ವಿಚಿತ್ರ ಜ್ವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಸುಬ್ರಹ್ಮಣ್ಯ: ಪ್ರಾಣಿಗಳಲ್ಲಿ ಕಂಡು ಬರುವ ಕಾಲು ಬಾಯಿ ರೋಗ ಲಕ್ಷಣ ಪಂಜ ಸಮೀಪದ ಕಲ್ಮಡ್ಕ ಪರಿಸರದಲ್ಲಿ ಮಕ್ಕಳಲ್ಲೂ ಕಂಡುಬಂದಿದೆ. ಇದರಿಂದ ಪೋಷಕರು ಆತಂಕಗೊಂಡಿದ್ದಾರೆ.

ಕಲ್ಮಡ್ಕದ ಬೊಮ್ಮೆಟ್ಟಿ, ಮಾಲಪ್ಪಮಕ್ಕಿ ಕಾಚಿಲಬ ಪರಿಸರದ ಮಕ್ಕಳಲ್ಲಿ ಈ ಜ್ವರ ಕಾಣಿಸಿಕೊಂಡಿದೆ. ಈ ಪರಿಸರದ 11 ವಯಸ್ಸಿನ ಒಳಗಿನ ಆರೇಳು ಮಂದಿ ಮಕ್ಕಳಲ್ಲಿ ಇದೀಗ ಪತ್ತೆಯಾಗಿದೆ. ಇನ್ನೂ ಹಲವೆಡೆ ಮಕ್ಕಳಲ್ಲಿ ಇಂತಹ ಜ್ವರ ಕಾಣಿಸಿಕೊಂಡಿದ್ದು, ಪೋಷಕರು ಮಕ್ಕಳನ್ನು ಸ್ಥಳೀಯ ವೈದ್ಯರ ಬಳಿ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಜ್ವರ ಹಬ್ಬುತ್ತಿದ್ದು, ಕೆಲವರು ಗಿಡಮೂಲಿಕೆ ಚಿಕಿತ್ಸೆ ಪಡೆದಿದ್ದಾರೆ.

ಮಕ್ಕಳ ಶರೀರದಲ್ಲಿ ಬಿಸಿಯ ತಾಪದ ಅನುಭವ ಆಗಿ ಬಳಿಕ ಜ್ವರ ಕಾಣಿಸಿಕೊಳ್ಳುತ್ತದೆ. ಬಳಿಕ ಪಾದ, ಕಾಲು ಮತ್ತು ಬಾಯಿಯಲ್ಲಿ ನೀರು ಬೊಬ್ಬೆಗಳು ಕಾಣಿಸಿಕೊಳ್ಳುತ್ತವೆ. ಪಾದ ಬೆರಳಿನ ನಡುವೆ ಗುಳ್ಳೆಗಳು ಕಾಣಿಸಿಕೊಂಡು ಅದು ಒಡೆದು ಮೇಲ್ಪದರ ಕಿತ್ತು ಗಾಯಗಳಾಗಿ ಕೀವು ಬಂದು ಸೋರಿಕೆ ಉಂಟಾಗುತ್ತದೆ, ಮಕ್ಕಳಿಗೆ ತಿನ್ನಲು ಸಾಧ್ಯವಾಗುವುದಿಲ್ಲ.

ತಾಯಿ ಮೊಲೆ ಹಾಲು ಸೇವಿಸುವ ಮಗುವಿನಿಂದ ಹಿಡಿದು ಅಂಗನವಾಡಿ ತನಕದ ಮಕ್ಕಳಲ್ಲಿ ಈ ಜ್ವರ ಇದುವರೆಗೆ ಕಾಣಿಸಿದೆ. ಇದು ವಿಸ್ತರಿಸುತ್ತಿರುವ ಕುರಿತು ಅನುಮಾನವಿದೆ. ಗ್ರಾಮದಲ್ಲಿ ಜ್ವರ ಕಾಣಿಸಿಕೊಂಡಿರುವುದು ಆರೋಗ್ಯ ಇಲಾಖೆಯ ಗಮನಕ್ಕೆ ಬಂದಿಲ್ಲ. ಇಂತಹದೇ ಜ್ವರ ವರ್ಷದ ಹಿಂದೆ ಕಟೀಲು ಸಮೀಪದ ಕಿನ್ನಿಮೂಲ್ಕಿ ಪರಿಸರದಲ್ಲಿ ಕಂಡು ಬಂದಿತ್ತು ಎನ್ನುವ ಮಾಹಿತಿ ಇದೆ.

ಇಂತಹ ಯಾವುದೇ ಪ್ರಕರಣಗಳು ಇದುವರೆಗೆ ತಾಲ್ಲೂಕಿನಲ್ಲಿ ಪತ್ತೆಯಾಗಿಲ್ಲ. ಕಾಲು ಬಾಯಿ ರೋಗ ಮನುಷ್ಯರಲ್ಲಿ ಕಂಡು ಬರುವುದಕ್ಕೆ ಸಾಧ್ಯವಿಲ್ಲ. ಸಾಮಾನ್ಯವಾಗಿ ವಾತಾವರಣದಲ್ಲಿನ ಬದಲಾವಣೆಯಿಂದ ಇಂತಹ ಜ್ವರ ಮಕ್ಕಳಲ್ಲಿ ಕಾಣಿಸಿಕೊಂಡಿರುವ ಸಾದ್ಯತೆ ಇದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಸುಬ್ರಹ್ಮಣ್ಯ ರಾವ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

**

‘ಭೀತಿ ಪಡಬೇಕಿಲ್ಲ’

ಪ್ರಾಣಿಗಳಿಗೆ ಬರುವ ಕಾಲು ಬಾಯಿ ರೋಗದ ತರಹದೆ ಜ್ವರ ಇದು. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಈ ಜ್ವರ ಮಾರಣಾಂತಿಕ ಅಲ್ಲ. ಹೀಗಾಗಿ ಭಯ ಭೀತಿ ಬೇಡ. ಇದಕ್ಕೆ ಸಾಮಾನ್ಯ ಜ್ವರದ ಚಿಕಿತ್ಸೆ ನೀಡಲಾಗುತ್ತಿದೆ. ಅನೇಕ ಮಂದಿ ಮಕ್ಕಳು ತನ್ನಲ್ಲಿ ಬಂದು ಚಿಕಿತ್ಸೆ ಪಡೆದು ತೆರಳಿದ್ದು ಗುಣಮುಖರಾಗುತ್ತಿದ್ದಾರೆ ಎಂದು ಬೆಳ್ಳಾರೆ ಖಾಸಗಿ ವೈದ್ಯರು. ಡಾ. ಈಶ್ವರಯ್ಯ ಜಿ ಎಸ್ ಗೋಳ್ತಾಡಿ ಹೇಳಿದರು.

**

ಜ್ವರ, ಮೈಗೆ ಹರಡುವ ಗುಳ್ಳೆ

ಮಗುವಿಗೆ ಆರಂಭದಲ್ಲಿ ಜ್ವರ ಕಾಣಿಸಿಕೊಂಡಿತ್ತು.ಬಳಿಕ ಮೈಮೇಲೆಲ್ಲ ಗುಳ್ಳೆಗಳು. ಪಾದ, ಬೆರಳುಗಳ ಮಧ್ಯೆ ಬೊಕ್ಕೆಗಳು ಕಾಣಿಸಿಕೊಂಡವು. ಅವು ಮೈಮೇಲೆಲ್ಲ ಹಬ್ಬುತ್ತಿವೆ. ಸ್ಥಳಿಯ ವೈದ್ಯರ ಬಳಿ ಪರಿಶೀಲಿಸಿ ಔಷಧಿ ಪಡೆದಿದ್ದು ಸಾಮಾನ್ಯ ಜ್ವರದ ಚಿಕಿತ್ಸೆ ನೀಡಿದ್ದಾರೆ. ಇದೇ ರೀತಿ ಪರಿಸರದ ಇನ್ನು ಅನೇಕ ಮಕ್ಕಳಲ್ಲಿ ಕಾಣಿಸಿಕೊಂಡಿದೆ‌ ಎಂದು ಜ್ವರ ಪೀಡಿತ ಮಗುವಿನ ಪೋಷಕ ವಿಘ್ನೇಶ್ ಭಟ್ ಕಲ್ಮಡ್ಕ ಹೇಳುತ್ತಾರೆ.

**

ಗಾಬರಿ ಬೇಡ. ನಾಳೆಯೇ ಸ್ಥಳಕ್ಕೆ ವೈದ್ಯಾಧಿಕಾರಿಗಳ ತಂಡವನ್ನು ಕಳುಹಿಸಿಕೊಡುತ್ತೇನೆ. ವರದಿ ಅಧಾರದಲ್ಲಿ ಮುಂದೆ ಆರೋಗ್ಯ ಇಲಾಖೆ ಕ್ರಮ ಜರುಗಿಸುತ್ತದೆ.
-ಡಾ| ರಾಮಕೃಷ್ಣ ರಾವ್, ಜಿಲ್ಲಾ ಆರೋಗ್ಯ ಅಧಿಕಾರಿ ಮಂಗಳೂರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು