ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತ್ರೀಶಕ್ತಿಗೆ ಪೂರ್ಣ ನಿಶ್ಶಕ್ತಿ; ಬಾರದ ಕೇಂದ್ರದ ಹಣ

ಬಡವರ ಪರ ಕಲ್ಯಾಣ ಯೋಜನೆಗಳಿಗೆ ಗ್ರಹಣ
Last Updated 12 ಜನವರಿ 2020, 19:32 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮಗಳ ಅನುದಾನ ಹಾಗೂ ಜಿಎಸ್‌ಟಿ ನಷ್ಟ ಪರಿಹಾರವು ಸಕಾಲಕ್ಕೆ ಬಾರದೇ ಇರುವುದರಿಂದ ರಾಜ್ಯದ ಬಡವರ ಹಾಗೂ ಮಹಿಳಾಪರ ಕಲ್ಯಾಣ ಕಾರ್ಯಕ್ರಮಗಳಿಗೆ ಗರ ಬಡಿದಂತಾಗಿದೆ.

ರಾಜ್ಯ ಸರ್ಕಾರದ 24 ಇಲಾಖೆಗಳಲ್ಲಿ ಕೇಂದ್ರದ ಹಣಕಾಸು ನೆರವಿನ ಯೋಜನೆಗಳು ಚಾಲ್ತಿಯಲ್ಲಿದ್ದು, ಈ ಯೋಜನೆಗಳಿಗೆ ನಿರೀಕ್ಷಿತ ಅನುದಾನ ಬಂದಿಲ್ಲ. ಯಾವ ಇಲಾಖೆಗೆ ಎಷ್ಟು ಅನುದಾನ ಹಂಚಿಕೆಯಾಗಿತ್ತು, ಡಿಸೆಂಬರ್ ಮಧ್ಯಭಾಗದವರೆಗೆ ಎಷ್ಟು ಅನುದಾನ ಬಿಡುಗಡೆಯಾಗಿದೆ ಎಂಬ ಬಗ್ಗೆ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಿದ್ಧಪಡಿಸಿರುವ ವರದಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಆರ್ಥಿಕ ಹಿಂಜರಿತದಿಂದಾಗಿ ತೆರಿಗೆ ಸಂಗ್ರಹದಲ್ಲಿ ಹಿನ್ನಡೆಯಾಗಿದ್ದರೆ, ಇನ್ನೊಂದೆಡೆ ಕೇಂದ್ರದ ಅನುದಾನವೂ ನಿರೀಕ್ಷಿತ ಮಟ್ಟದಲ್ಲಿ ಬಾರದೇ ಇರುವುದರಿಂದಾಗಿ ಹಣ ಹೊಂದಿಸುವ ಇಕ್ಕಟ್ಟು ಹಣಕಾಸು ಇಲಾಖೆ ಅಧಿಕಾರಿಗಳದ್ದಾಗಿದೆ.

ಬಡವರ ಕಲ್ಯಾಣಕ್ಕೆ ಗ್ರಹಣ:ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದಲ್ಲಿ ಬಡವರಿಗೆ ವಸತಿ, ಶಿಕ್ಷಣ, ಕೌಶಲಾಭಿವೃದ್ಧಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣದ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗಿದೆ. ಆದರೆ, ಈ ಆರ್ಥಿಕ ವರ್ಷದಲ್ಲಿ ಬಡವರ ಪರ ಯೋಜನೆಗಳಿಗೆ ಅನುದಾನವನ್ನೇ ಬಿಡುಗಡೆ ಮಾಡಿಲ್ಲ.

ವಸತಿ ಇಲಾಖೆ ವ್ಯಾಪ್ತಿಯಲ್ಲಿರುವ ಕೊಳಚೆ ನಿರ್ಮೂಲನೆ, ಬಸವ, ವಾಜಪೇಯಿ, ಪ್ರಧಾನಮಂತ್ರಿ ಆವಾಸ್‌ ಸೇರಿದಂತೆ ಬಡವರಿಗೆ ಮನೆಗಳನ್ನು ಕಟ್ಟಿಕೊಡುವ ಯೋಜನೆಯಡಿ ₹1,551 ಕೋಟಿ ಅನುದಾನ ಬರಬೇಕಾಗಿತ್ತು. ಆದರೆ, ಈ ಯೋಜನೆಗಳಿಗೆ ಬಂದಿದ್ದು ₹10 ಕೋಟಿ ಮಾತ್ರ.

ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣಕ್ಕೆ ₹292 ಕೋಟಿ ಬರಬೇಕಾಗಿದ್ದು, ₹25.95 ಕೋಟಿಯಷ್ಟೇ ಬಂದಿದೆ. ಉದ್ಯೋಗ ಸೃ‌ಷ್ಟಿಗೆ
ನೆರವಾಗುವ ಕೌಶಲಾಭಿವೃದ್ಧಿ ಇಲಾಖೆಗೆ ₹492 ಕೋಟಿ ಅನುದಾನ ಹಂಚಿಕೆಯಾಗಿದ್ದರೆ, ಬಿಡುಗಡೆಯಾಗಿರುವುದು ಕೇವಲ ₹18ಕೋಟಿ. ಬಡ ಮಹಿಳೆಯರು ಮತ್ತು ಮಕ್ಕಳನ್ನು ಕೇಂದ್ರಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದೆ. ಸಮಗ್ರ ಶಿಶು ಅಭಿವೃದ್ಧಿ, ಸ್ತ್ರೀಶಕ್ತಿ ಯೋಜನೆಗಳಿಗೆ ₹1,887 ಕೋಟಿ ಹಂಚಿಕೆ ಮಾಡಲಾಗಿದೆ. ಆದರೆ, ಈವರೆಗೆಬಂದಿರುವ ಹಣ ಕೇವಲ ₹81 ಕೋಟಿ.

ಜಲಸಂಪನ್ಮೂಲ ಇಲಾಖೆಗಿಲ್ಲ ಅನುದಾನ: ರಾಜ್ಯ ಹಾಗೂ ಕೇಂದ್ರದ ಸಹಭಾಗಿತ್ವದಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿದ್ದು, ಇದಕ್ಕೆ ಅನುದಾನ ನೀಡುವ ಭರವಸೆಯನ್ನು ಬಜೆಟ್ ಪೂರ್ವದಲ್ಲೇ ಕೇಂದ್ರ ಸರ್ಕಾರ ನೀಡಿರುತ್ತದೆ. ಈ ಭರವಸೆ ಆಧರಿಸಿ ರಾಜ್ಯ ಬಜೆಟ್ ಮಂಡಿಸುವಾಗ ಇಲಾಖೆಗಳಿಗೆ ಹಣ ಹಂಚಿಕೆ ಮಾಡಲಾಗುತ್ತದೆ.

24 ಇಲಾಖೆಗಳ ಪೈಕಿ ಕೆಲವು ಇಲಾಖೆಗಳಿಗೆ ನಿರೀಕ್ಷಿತ ಅನುದಾನವನ್ನು ಕೇಂದ್ರ ಸರ್ಕಾರ ನೀಡಿದೆ. ಆದರೆ, ಹೆಚ್ಚು ಮೊತ್ತದ ಅನುದಾನದ ಭರವಸೆಯಲ್ಲಿದ್ದ ಇಲಾಖೆಗಳಿಗೆ ನಿರಾಸೆಯಾಗಿದೆ.

ಸಮಾಜ ಕಲ್ಯಾಣ ಇಲಾಖೆಗೆ ₹415 ಕೋಟಿಯ ಬದಲು ₹196 ಕೋಟಿ ಬಂದಿದೆ. ಜಲಸಂಪನ್ಮೂಲ ಇಲಾಖೆಗೆ ₹457 ಕೋಟಿ ಬರಬೇ
ಕಾಗಿದ್ದರೂ ಈವರೆಗೆ ನಯಾಪೈಸೆಯೂ ಬಂದಿಲ್ಲ. ಲೋಕೋಪಯೋಗಿ ಇಲಾಖೆ ₹528 ಕೋಟಿ ನಿರೀಕ್ಷಿಸಿ
ದ್ದರೆ ಈವರೆಗೆ ಬಂದಿರುವುದು ₹103 ಕೋಟಿ. ಆರೋಗ್ಯ ಇಲಾಖೆಗೆ ₹1,213
ಕೋಟಿ ಪೈಕಿ ₹710 ಕೋಟಿ ಬಿಡುಗಡೆಯಾಗಿದೆ.

ಬಾರದ ಜಿಎಸ್‌ಟಿ ನಷ್ಟ: ಜಿಎಸ್‌ಟಿ ಪರಿಹಾರ ರೂಪದಲ್ಲಿ ₹17,249 ಕೋಟಿ ನಿರೀಕ್ಷಿಸಲಾಗಿದೆ ಎಂದು ಬಜೆಟ್ ಅಂದಾಜಿನಲ್ಲಿ ಹೇಳಲಾಗಿದೆ.

ಸೆಪ್ಟೆಂಬರ್‌ನಿಂದೀಚೆಗೆ ಜಿಎಸ್‌ಟಿ ನಷ್ಟ ಪರಿಹಾರ ಬಂದಿಲ್ಲ. ಈ ಅವಧಿಯಲ್ಲಿ ಗರಿಷ್ಠ ಮೊತ್ತದ ಜಿಎಸ್‌ಟಿ ಸಂಗ್ರಹವಾಗಲಿದ್ದು, ಅದಕ್ಕೆ ಅನುಗುಣವಾಗಿ ನೀಡಬೇಕಾದ ಪರಿಹಾರ ಮೊತ್ತವೂ ಹೆಚ್ಚಾಗಿರುತ್ತದೆ. 2018ರಲ್ಲಿ ಸೆಪ್ಟೆಂಬರ್– ಡಿಸೆಂಬರ್‌ನವರೆಗೆ ಪ್ರತಿ ತಿಂಗಳು ಸರಾಸರಿ ₹3 ಸಾವಿರ ಕೋಟಿಯಿಂದ ₹4 ಸಾವಿರ ಕೋಟಿ ಪರಿಹಾರ ಬಂದಿತ್ತು. ಈ ವರ್ಷ ಆರ್ಥಿಕ ಹಿಂಜರಿತದ ಹೊಡೆತ ಬಿದ್ದಿದೆ ಎಂದುಕೊಂಡರೂ ನಾಲ್ಕು ತಿಂಗಳಿನಲ್ಲಿ ಕನಿಷ್ಠವೆಂದರೂ ₹12 ಸಾವಿರ ಕೋಟಿಯಾದರೂ ಬರಬೇಕಾಗಿದೆ ಎಂದು ಹಣಕಾಸು ಇಲಾಖೆಯಅಧಿಕಾರಿಯೊಬ್ಬರು ತಿಳಿಸಿದರು.

ಕೇಂದ್ರದಿಂದ ನಿರೀಕ್ಷಿಸಲಾಗಿರುವ ಅನುದಾನದ ವಿವರ

₹39,806 ಕೋಟಿ - ಕೇಂದ್ರ ತೆರಿಗೆಯಲ್ಲಿ ರಾಜ್ಯದ ಪಾಲು

₹16,645 ಕೋಟಿ -ಕೇಂದ್ರ ಸರ್ಕಾರದ ಅನುದಾನದ ಮೊತ್ತ

₹17,249 ಕೋಟಿ -ಜಿಎಸ್‌ಟಿ ನಷ್ಟ ಪರಿಹಾರ ಮೊತ್ತ

ಪ್ರಧಾನಮಂತ್ರಿ 15 ಅಂಶ ಕಾರ್ಯಕ್ರಮ (₹ ಕೋಟಿಗಳಲ್ಲಿ)

ಯೋಜನೆ; ಅನುದಾನ; ಬಿಡುಗಡೆ

ಕೊಳಚೆ ನಿರ್ಮೂಲನೆ;75.00;0.00

ಪ್ರಧಾನಮಂತ್ರಿ ಆವಾಸ್ (ಗ್ರಾಮೀಣ);500.00;0.00

ಬಸವ ವಸತಿ;60.70;0.00

ಪ್ರಧಾನಮಂತ್ರಿ ಆವಾಸ್(ನಗರ);250.00;10.00

ವಾಜಪೇಯಿ ವಸತಿ;125.00;0.00


ಸಮಗ್ರ ಶಿಕ್ಷಣ ಕರ್ನಾಟಕ;238.00;17.85

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ;54.00.8.10


ಉದ್ಯೋಗ ತರಬೇತಿ;220.31;16.52

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌; 150.00;0.09

ಕೌಶಲಾಭಿವೃದ್ಧಿ ಮಿಷನ್‌;108.53;2.17

ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್;14.00;0.00


ಭಾಗ್ಯಲಕ್ಷ್ಮೀ;309.42;0.00

ಸಮಗ್ರ ಶಿಶು ಅಭಿವೃದ್ಧಿ ಯೋಜನೆ;1547.45;80.64

ಸ್ತ್ರೀಶಕ್ತಿ;10.79;0.50

ಅಲ್ಪಸಂಖ್ಯಾತರ ಕಲ್ಯಾಣ;1,131.55;775.39


ಒಟ್ಟು: 5,335.75; 911.26

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT