ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿದಿರಕ್ಕಿ ತಿನ್ನಲು ಹಕ್ಕಿಗಳ ಹಿಂಡು:ಜೀವ ಕಳೆದುಕೊಳ್ಳುವ ಮುನ್ನ ಪಕ್ಷಿಗಳಿಗೆ ಆಹಾರ

Last Updated 22 ಮಾರ್ಚ್ 2019, 4:32 IST
ಅಕ್ಷರ ಗಾತ್ರ

ಶಿರಸಿ: ಬಿದಿರು ಹೂ ಬಿಟ್ಟರೆ ಅದು ಸಂಭ್ರಮವಲ್ಲ, ಸೂತಕದ ಮುನ್ಸೂಚನೆ. ಹೂ ಅರಳಿಸಿ, ಬಿದಿರಕ್ಕಿ ಉದುರಿಸುವ ಬಿದಿರು ಮೆಳೆಗಳು ಸಾಯುವ ಮುನ್ನ ಹಲವಾರು ಜೀವಿಗಳನ್ನು ಬದುಕಿಸುತ್ತವೆ. ಮುಗಿಲಿಗೆ ಮುಖ ಮಾಡಿ, ಒಣಗಿ ನಿಂತ ಬಿದಿರು ಹಿಂಡಿನ ಮೇಲೆ ಕುಳಿತುಕೊಳ್ಳುವ ನೂರಾರು ಹಕ್ಕಿಗಳು ಅಕ್ಕಿಯನ್ನು ಹೆಕ್ಕಿ ತಿನ್ನುತ್ತವೆ.

ಪ್ರತಿ 60 ವರ್ಷಗಳಿಗೊಮ್ಮೆ ಬಿದಿರಿಗೆ ಕಟ್ಟೆ (ಹೂ ಬಿಡುವ ಕ್ರಿಯೆ) ಬರುತ್ತದೆ. ಎರಡು ವರ್ಷಗಳಿಂದ ಶಿರಸಿ, ಸಿದ್ದಾಪುರ, ಯಲ್ಲಾಪುರ, ಜೊಯಿಡಾ ತಾಲ್ಲೂಕುಗಳ ಅಲ್ಲಲ್ಲಿ ಬಿದಿರು ಹಿಂಡು ಒಣಗಿರುವ ದೃಶ್ಯ ಕಾಣುತ್ತಿದೆ. ನಿರ್ಜೀವ ಬಿದಿರು ಮೆಳೆಗಳು ರಸ್ತೆಯ ಮೇಲೆ ಚಾಚಿ ಬೀಳುತ್ತವೇನೋ ಎಂಬ ಭಯದಲ್ಲೇ ವಾಹನ ಸವಾರರು ಸಾಗಬೇಕಾದಷ್ಟು, ವ್ಯಾಪಕವಾಗಿ ಈ ದೃಶ್ಯ ಕಾಣಸಿಗುತ್ತಿದೆ.

ಕಾಡಿನ ಅಧ್ಯಯನಕ್ಕೆ ಹೋಗುವ ಇಲ್ಲಿನ ಅರಣ್ಯ ಕಾಲೇಜಿನ ವಿದ್ಯಾರ್ಥಿಗಳು, ಒಣಗಿದ ಬಿದಿರು ಹಿಂಡಿಗೆ ನೂರಾರು ಹಕ್ಕಿಗಳು ಬರುವುದನ್ನು ಗುರುತಿಸಿದ್ದಾರೆ. ‘ಬಿದಿರಕ್ಕಿ ತಿನ್ನುವ ಹಕ್ಕಿಗಳಲ್ಲಿ ಹೆಚ್ಚಿನವು ದಪ್ಪ ಕೊಕ್ಕನ್ನು ಹೊಂದಿರುತ್ತವೆ. ಒಂದೊಂದು ಹಿಂಡಿನಲ್ಲಿ 60ಕ್ಕೂ ಹೆಚ್ಚು ಹಕ್ಕಿಗಳು ಇರುತ್ತವೆ. ಜನವರಿಯಿಂದ ಮಾರ್ಚ್‌ವರೆಗೆ ಅತಿ ಹೆಚ್ಚು ಹಕ್ಕಿಗಳನ್ನು ಕಂಡಿದ್ದೇವೆ. ತಾಯಿ ಹಕ್ಕಿಯ ಜತೆಗೆ ಮರಿ ಹಕ್ಕಿಗಳು ಸ್ವತಂತ್ರವಾಗಿ ಅಕ್ಕಿಯನ್ನು ಹೆಕ್ಕಿ ತಿನ್ನುತ್ತವೆ. ರೋಸ್‌ಪಿಂಚ್ ಹಿಂಡಿನ ಹೊರ ಆವರಣದಲ್ಲಿ ಕುಳಿತರೆ, ಇನ್ನುಳಿದವು ಒಳ ನುಗ್ಗಿ ಕುಳಿತುಕೊಳ್ಳುತ್ತವೆ’ ಎನ್ನುತ್ತಾರೆ ವಿದ್ಯಾರ್ಥಿ ಕೇಶವಮೂರ್ತಿ.

‘500 ಮೀಟರ್ ಅಳತೆಯಲ್ಲಿ 100ಕ್ಕೂ ಹೆಚ್ಚು ಹಕ್ಕಿಗಳು ಕಾಣುತ್ತವೆ. ಕೆಂದಲೆ ಗಿಳಿ, ಕೆಂಪು ರಾಟಿವಾಳ, ಕಪ್ಪು ತಲೆಯ ಮುನಿಯಾ, ದಪ್ಪಕೊಕ್ಕಿನ ಬದನಿಕೆ, ಪೇಲವ ಬದನಿಕೆ, ಬಿಳಿ ಪೃಷ್ಠದ ಮುನಿಯಾ, ಚುಕ್ಕಿ ರಾಟವಾಳ, ಹಳದಿ ಕತ್ತಿನ ಗುಬ್ಬಿ, ಬಿಳಿ ಬೆನ್ನಿನ ಮುನಿಯಾ, ಕಪ್ಪು ಕತ್ತಿನ ಮುನಿಯಾ, ಸಿಲ್ವರ್ ಬಿಲ್, ಕಾಮನ್ ರೋಸ್‌ಫಿಂಚ್ ಸೇರಿದಂತೆ 12ಕ್ಕೂ ಹೆಚ್ಚು ಜಾತಿಯ ಹಕ್ಕಿಗಳನ್ನು ಗುರುತಿಸಿದ್ದೇವೆ’ ಎನ್ನುತ್ತಾರೆ ಅವರು.

‘ಈ ಹಕ್ಕಿಗಳಿಗೆ ನಿರ್ದಿಷ್ಟ ವೇಳೆ ಎಂಬುದಿಲ್ಲ. ಇಡೀ ದಿನವನ್ನು ಬಿದಿರು ಮೆಳೆಗಳ ನಡುವೆಯೇ ಕಳೆಯುತ್ತವೆ’ ಎನ್ನುತ್ತಾರೆ ವಿದ್ಯಾರ್ಥಿಗಳಾದ ಚಂದನ್, ತೇಜಸ್.

**

ಇಷ್ಟೆಲ್ಲ ಹಕ್ಕಿಗಳಿಗೆ ಬಿದಿರಕ್ಕಿ ಆಹಾರ ಎಂಬುದು ಗಮನಿಸಿರಲಿಲ್ಲ. ಬೀಜ ಬಲಿತ ಮೇಲೆ ಇನ್ನಷ್ಟು ಹಕ್ಕಿಗಳು ಬರಲಾರಂಭಿಸಿವೆ
- ಶ್ರೀಧರ ಭಟ್ಟ, ಸಹಾಯಕ ಪ್ರಾಧ್ಯಾಪಕ, ವನ್ಯಜೀವಿ ಸಂರಕ್ಷಣೆ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT