ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೆರೆ: ಕಬ್ಬಿನ ಇಳುವರಿ ಮೇಲೆ ಪರಿಣಾಮ’

‘ಪ್ರವಾಹಪೀಡಿತ ಕಬ್ಬಿನ ನಿರ್ವಹಣೆ’ ವಿಚಾರಸಂಕಿರಣ
Last Updated 27 ಆಗಸ್ಟ್ 2019, 20:25 IST
ಅಕ್ಷರ ಗಾತ್ರ

ಬೆಳಗಾವಿ: ‘ನೆರೆಯಿಂದಾಗಿ ಕಬ್ಬಿನ ಇಳುವರಿಯಲ್ಲಿ ಶೇ 15ರಿಂದ 45ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ’ ಎಂದು ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಡಾ.ಆರ್.ಬಿ. ಖಾಂಡಗಾವೆ ತಿಳಿಸಿದರು.

ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ಸಕ್ಕರೆ ಕಾರ್ಖಾನೆಗಳ ಕಬ್ಬು ವಿಭಾಗದ ಅಧಿಕಾರಿ, ಸಿಬ್ಬಂದಿಗೆ ಆಯೋಜಿಸಿದ್ದ ‘ಪ್ರವಾಹಪೀಡಿತ ಕಬ್ಬಿನ ಬೆಳೆ ನಿರ್ವಹಣೆ’ ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಕಬ್ಬು ಬೆಳೆಯುವ ಪ್ರದೇಶದಲ್ಲೇ ಹೆಚ್ಚಿನ ನೆರೆ ಹಾವಳಿ ಉಂಟಾಗಿದೆ. ಇದು ಕಬ್ಬಿನ ಬೆಳವಣಿಗೆ ಮತ್ತು ಬದುಕುವಿಕೆ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಕಬ್ಬಿನ ಇಳುವರಿ ಪ್ರಮಾಣವು ತಳಿ, ವಾತಾವರಣದ ಸ್ಥಿತಿ, ಬೆಳೆಯ ವಯಸ್ಸು, ಹಂತ, ನೀರು ತಂಗುವ ಅವಧಿ ಮೊದಲಾದವುಗಳ ಮೇಲೆ ಅವಲಂಬಿತವಾಗಿದೆ. ನೆರೆ ಹಾವಳಿ ಕಡಿಮೆಯಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಕಾರ್ಖಾನೆಯ ಸಿಬ್ಬಂದಿಯು ರೈತರಿಗೆ ಮಾರ್ಗದರ್ಶನ ಮಾಡಬೇಕು’ ಎಂದು ಸಲಹೆ ನೀಡಿದರು.

ಕಡಿಮೆಯಾಗುತ್ತದೆ:ಕೃಷಿ ವಿಭಾಗದ ಮುಖ್ಯಸ್ಥ ಎನ್.ಆರ್. ಯಕ್ಕೇಲಿ ಮಾತನಾಡಿ, ‘ಕಬ್ಬಿನ ರಚನಾತ್ಮಕ ಬೆಳವಣಿಗೆ ಹಂತದಲ್ಲಿ ನೆರೆ ಹಾವಳಿ ಉಂಟಾದಾಗ ಎತ್ತರ ಶೇ.13ರಷ್ಟು, ಮರಿ ಉತ್ಪಾದನೆಯಲ್ಲಿ ಶೇ.22ರಷ್ಟು, ಎಲೆಯ ವಿಸ್ತೀರ್ಣದಲ್ಲಿ ಶೇ.27 ಮತ್ತು ಜೈವಿಕ ದ್ರವ್ಯರಾಶಿಯಲ್ಲಿ ಶೇ.43ರಷ್ಟು ಕಡಿಮೆಯಾಗುವುದು ಕಂಡುಬಂದಿದೆ. 5 ದಿನಗಳ ನಂತರ ನೀರಿನಲ್ಲಿ ನಿಂತ ಕಬ್ಬಿನ ಇಳುವರಿ ಶೇ. 15ರಿಂದ 20ರಷ್ಟು ಇಳುವರಿ ಕಡಿಮೆಯಾಗುತ್ತದೆ ಎನ್ನುವುದು ಅಧ್ಯಯನದಿಂದ ತಿಳಿದುಬಂದಿದೆ’ ಎಂದು ಹೇಳಿದರು.

‘ಕಬ್ಬಿನ ಸುಳಿಯು 4 ದಿನಗಳಿಗಿಂತ ಹೆಚ್ಚಿನ ಅವಧಿಗೆ ಮುಳುಗಿದಾಗ ಬೆಳವಣಿಗೆ ಆಗುವುದಿಲ್ಲ. ಒಂದು ವೇಳೆ ಬೆಳವಣಿಗೆ ತುದಿಯು ಕಂದು ಬಣ್ಣಕ್ಕೆ ತಿರುಗದೇ ಹಾಗೆಯೇ ಉಳಿದರೆ ಪುನಃ ಬೆಳೆಯುವ ಸಾಧ್ಯತೆ ಇರುತ್ತದೆ’ ಎಂದರು.

ಪರಿಣಾಮವೇನು?:‘ನೀರು ನಿಂತ ಜಮೀನಿನಲ್ಲಿ ಮಣ್ಣಿನ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ, ಬೇರಿನ ಉಸಿರಾಟ ಹೆಚ್ಚಾಗಿ ಇಂಗಾಲದ ಡೈಆಕ್ಸೈಡ್, ಮಿಥೇನ್ ಮತ್ತು ಸಾರಜನಕ ಅನಿಲಗಳ ಪ್ರಮಾಣ ಹೆಚ್ಚಾಗುವುದರಿಂದ ಬೇರಿನ ಕ್ಷಮತೆ ಕಡಿಮೆಯಾಗುತ್ತದೆ. ಬೇರಿನ ವ್ಯೂಹದಲ್ಲಿ ಜೈವಿಕ ಕ್ರಿಯೆಯು ಗಣನೀಯವಾಗಿ ಇಳಿಕೆಯಾಗುತ್ತದೆ. ಪ್ರವಾಹದಿಂದಾಗಿ ಸಂಪೂರ್ಣವಾಗಿ ಮುಳುಗಿದ ಕಬ್ಬಿನ ಬೆಳೆಯಲ್ಲಿ ದ್ಯುತಿ ಸಂಶ್ಲೇಷಣೆ ಕ್ರಿಯೆಯು ಸ್ಥಗಿತಗೊಳ್ಳುತ್ತದೆ. ಗುಣಮಟ್ಟ ಮತ್ತು ತೂಕ ಇಳಿಯುತ್ತದೆ’ ಎಂದು ಮಾಹಿತಿ ನೀಡಿದರು.

‘ಪ್ರವಾಹ ಮಟ್ಟ ಕಡಿಮೆಯಾದ ನಂತರ ಜಮೀನುಗಳಲ್ಲಿ ಬಸಿಗಾಲುವೆಗಳನ್ನು ನಿರ್ಮಿಸಿ ಹೊಲದಿಂದ ಆದಷ್ಟು ಬೇಗ ನೀರು ಬಸಿದು ಹೋಗುವ ವ್ಯವಸ್ಥೆ ಕಲ್ಪಿಸಬೇಕು. ಹೆಚ್ಚಿನ ಹಾನಿ ಕಂಡುಬಂದಲ್ಲಿ ಕಟಾವು ಮಾಡಿ ಪುನಃ ಕುಳೆ ಕಬ್ಬನ್ನಾಗಿ ಬೆಳೆಯಬಹುದು. ರಂಜಕ ಗೊಬ್ಬರವನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸಬೇಕು. ಇದರಿಂದ ಬೆಳೆಯಲ್ಲಿ ಹೊಸ ಬೇರುಗಳ ಬೆಳವಣಿಗೆಗೆ ಸಹಾಯವಾಗುತ್ತದೆ’ ಎಂದು ಸಲಹೆ ನೀಡಿದರು.

ಸಹಾಯಕ ಪ್ರಾಧ್ಯಾಪಕ ಆರ್.ಬಿ. ಸುತಗುಂಡಿ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕ ಆರ್.ಬಿ. ಸುತಗುಂಡಿ ನಿರೂಪಿಸಿದರು. ಸಿಡಿಇಒ ಎಸ್.ಸಿ. ಘಟಕಾಂಬಳೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT