ಸೋಮವಾರ, ಸೆಪ್ಟೆಂಬರ್ 20, 2021
28 °C
ಸಹಜ ನ್ಯಾಯ ಪಾಲಿಸಿ: ಡಿಸಿಗಳಿಗೆ ರಾಜ್ಯ ಸರ್ಕಾರ ಸೂಚನೆ

ಅರಣ್ಯ ಹಕ್ಕು: ಜೂನ್‌ 30ರೊಳಗೆ ಮಧ್ಯಂತರ ವರದಿಗೆ ತಾಕೀತು

ವಿಜಯಕುಮಾರ್ ಸಿಗರನಹಳ್ಳಿ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕು ಮಂಡಿಸಿ ಅರ್ಜಿ ತಿರಸ್ಕೃತಗೊಂಡಿರುವ ಅರಣ್ಯವಾಸಿಗಳಿಗೆ ‘ಸಹಜ ನ್ಯಾಯ’ದಡಿ ಮತ್ತೆ ಹಕ್ಕು ಕೊಡಿಸಲು ರಾಜ್ಯ ಸರ್ಕಾರ ಕಸರತ್ತು ಮುಂದುವರಿಸಿದೆ. ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಲು ಕೂಲಂಕಷವಾಗಿ ಅರ್ಜಿಗಳ ಮರು ಪರಿಶೀಲನೆ ನಡೆಸುತ್ತಿದೆ. 

‘ತಿರಸ್ಕೃತಗೊಂಡಿರುವ ಅರ್ಜಿಗಳ ಮರು ಪರಿಶೀಲನೆ ನಡೆಸಬೇಕು. ಜುಲೈ 24ರಂದು ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಬೇಕಿದೆ. ಹೀಗಾಗಿ, ಜೂನ್ ಅಂತ್ಯದೊಳಗೆ ಮಧ್ಯಂತರ ವರದಿ ಸಲ್ಲಿಸಿ’ ಎಂದು ಎಲ್ಲ ಜಿಲ್ಲಾಧಿಕಾರಿಗಳಿಗೆ ಸರ್ಕಾರ ನಿರ್ದೇಶನ ನೀಡಿದೆ.

ಏಪ್ರಿಲ್‌ 30ರಂದು ರಾಜ್ಯ ಮಟ್ಟದ ಮೇಲುಸ್ತುವಾರಿ ಸಮಿತಿ ಸಭೆ ನಡೆಸಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರು, ಬಳಿಕ ನಡೆಸಿದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಜಿಲ್ಲಾಧಿಕಾರಿಗಳಿಗೆ ಈ ಕುರಿತು ತಾಕೀತು ಮಾಡಿದ್ದಾರೆ. 

‘ಕರ್ನಾಟಕ ಸೇರಿ ಒಟ್ಟು 21 ರಾಜ್ಯಗಳಲ್ಲಿ ಪರಿಶಿಷ್ಟ ಪಂಗಡ (ಆದಿವಾಸಿ) ಮತ್ತು ಇತರ ಪಾರಂಪರಿಕ ಅರಣ್ಯ ನಿವಾಸಿಗಳು ಅರಣ್ಯದಲ್ಲಿ ವಾಸಿಸುವ ಹಕ್ಕಿಗಾಗಿ ಸಲ್ಲಿಸಿದ್ದ 11 ಲಕ್ಷಕ್ಕೂ ಹೆಚ್ಚು ಮಂದಿಯ ಅರ್ಜಿಗಳು ತಿರಸ್ಕೃತವಾಗಿವೆ. ಇವರೆಲ್ಲರನ್ನೂ ಅರಣ್ಯ ಪ್ರದೇಶ
ದಿಂದ ತೆರವು ಮಾಡಬೇಕು’ ಎಂದು ಸುಪ್ರೀಂ ಕೋರ್ಟ್‌ ಫೆ.13ರಂದು ಆದೇಶಿಸಿತ್ತು. ಅರ್ಜಿ ತಿರಸ್ಕೃತರಾದ ಎಲ್ಲರನ್ನೂ ಅಷ್ಟರೊಳಗೆ ಒಕ್ಕಲೆಬ್ಬಿಸಬೇಕು. ಇದು ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳ ಹೊಣೆ ಎಂದು ಪೀಠ ಹೇಳಿತ್ತು.‌ ಈ ತೀರ್ಪು ಪ್ರಶ್ನಿಸಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಮೇಲ್ಮನವಿ ಪರಿಗಣಿಸಿ ಹಿಂದಿನ ಆದೇಶಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.

ಮರು ಪರಿಶೀಲನೆ: ರಾಜ್ಯದಲ್ಲಿ ಸಲ್ಲಿಕೆಯಾಗಿದ್ದ 2.84 ಲಕ್ಷ ಅರ್ಜಿಗಳ ಪೈಕಿ 2.14 ಲಕ್ಷ ಅರ್ಜಿಗಳು ತಿರಸ್ಕೃತವಾಗಿವೆ.

‘ವೈಯಕ್ತಿಕವಾಗಿ ಅಹವಾಲು ಸಲ್ಲಿಸಲು ಅರ್ಜಿದಾರನಿಗೆ ಅವಕಾಶ ಕಲ್ಪಿಸಿಲ್ಲ. ಅರ್ಜಿ ಸ್ವೀಕಾರದ ಬಗ್ಗೆ ಹಿಂಬರಹ ನೀಡಿಲ್ಲ. ಗ್ರಾಮಸಭೆಗಳಲ್ಲಿ ಹಕ್ಕುಗಳ ಮಾನ್ಯತೆ ನೀಡಲು ಶಿಫಾರಸು ಮಾಡಿದ್ದರೂ, ಉಪವಿಭಾಗ ಮಟ್ಟದ ಸಮಿತಿಯಲ್ಲಿ ಯಾವುದೇ ಸಕಾರಣಗಳನ್ನು ನೀಡದೇ ತಿರಸ್ಕರಿಸಲಾಗಿದೆ. ಈಗ ಆ ರೀತಿ ಆಗದಂತೆ ಎಚ್ಚರಿಕೆ ವಹಿಸಿ’ ಎಂದು ಜಿಲ್ಲಾಧಿಕಾರಿಗಳಿಗೆ ಸುತ್ತೋಲೆಯಲ್ಲಿ ಸರ್ಕಾರ ತಿಳಿಸಿದೆ.

‘ಅರಣ್ಯದೊಳಗಿನ, ಅರಣ್ಯದ ಅಂಚಿನ ಜನರ ಜೀವನದ ಪ್ರಶ್ನೆ ಇದಾಗಿದೆ. ಹೀಗಾಗಿ, ಅರಣ್ಯ ಇಲಾಖೆಯ ಸಲಹೆಯನ್ನಷ್ಟೇ ಪರಿಗಣಿಸದೆ ಎಲ್ಲಾ ಆಯಾಮಗಳಿಂದಲೂ ಪರಿಶೀಲನೆ ನಡೆಸಬೇಕು. ಈ ಹಿಂದೆ ಅರಣ್ಯ ಹಕ್ಕು ಕಾಯ್ದೆಯನ್ನು ಅರ್ಥಮಾಡಿಕೊಳ್ಳದೆ ಏಕಪಕ್ಷೀಯವಾಗಿ ಅರ್ಜಿಗಳನ್ನು ತಿರಸ್ಕಾರ ಮಾಡಿದಂತಿದೆ’ ಎಂದು ಹೆಸರು ಹೇಳಬಯಸದ ಹಿರಿಯ ಅಧಿಕಾರಿಯೊಬ್ಬರು ಅನುಮಾನ ವ್ಯಕ್ತಪಡಿಸಿದರು.

ಅರಣ್ಯ ಇಲಾಖೆಯು ಉಪಗ್ರಹ ಹಾಗೂ ಮತ್ತಿತರ ಆಧುನಿಕ ತಂತ್ರಜ್ಞಾನದ ನೆರವಿನಿಂದ ಪಡೆಯಲಾದ ಚಿತ್ರಗಳನ್ನು ಅರ್ಜಿ
ದಾರರ ಸಾಕ್ಷ್ಯಗಳಿಗೆ ಹೋಲಿಸದೇ ಕೂಲಂಕಷವಾಗಿ ಪರಿಶೀಲಿಸಬೇಕು ಎಂದು ತಿಳಿಸಲಾಗಿದೆ.

‘ತಿರಸ್ಕಾರ ಆಗಿರುವ ಪ್ರತಿಯೊಂದು ಅರ್ಜಿಯನ್ನೂ ನಿರ್ದಿಷ್ಟವಾಗಿ ಪರಿಶೀಲಿಸಬೇಕು. ಅರಣ್ಯವಾಸಿಗಳ ಅಹವಾಲುಗಳನ್ನು ಆಲಿಸಬೇಕು. ತಿರಸ್ಕಾರ ಮಾಡುವುದಿದ್ದರೆ ಅದಕ್ಕೆ ಸಕಾರಣ ನೀಡಬೇಕು. ಅರ್ಜಿದಾರನಿಗೆ ತನ್ನ ಅರ್ಜಿ ಏಕೆ ತಿರಸ್ಕಾರವಾಗುತ್ತಿದೆ ಎಂಬುದರ ಪೂರ್ಣ ಮಾಹಿತಿ ಒದಗಿಸಬೇಕು. ಅವರು ಮೇಲ್ಮನವಿ ಸಲ್ಲಿಸಲು ಅವಕಾಶಗಳನ್ನು ಕಲ್ಪಿಸಬೇಕು’ ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಿ.ಕುಮಾರ ನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು.

ಅರ್ಜಿ ಸರಿಯಾಗಿದ್ದರೆ ಅವುಗಳನ್ನು ಪುರಸ್ಕೃತಗೊಳಿಸಿ ಅವರಿಗೆ ಅರಣ್ಯದಲ್ಲಿ ವಾಸಿಸಲು ಹಕ್ಕು ಕಲ್ಪಿಸಲಾಗುವುದು ಎಂದು ಹೇಳಿದರು.

ಅಂಕಿ ಅಂಶ

ಸ್ವೀಕೃತವಾದ ಅರ್ಜಿಗಳು: 2,84,625

ಪುರಸ್ಕೃತಗೊಂಡ ಅರ್ಜಿಗಳು: 16,130

ತಿರಸ್ಕೃತಗೊಂಡ ಅರ್ಜಿಗಳು: 2,14,710

ವಿಲೇವಾರಿಗೆ ಬಾಕಿ ಇರುವ ಅರ್ಜಿಗಳು: 53,785

ಯಾವ ಜಿಲ್ಲೆಯಲ್ಲಿ ಎಷ್ಟು ಅರ್ಜಿ?

ಜಿಲ್ಲೆ – ಅರ್ಜಿ ಸಂಖ್ಯೆ

ಉತ್ತರ ಕನ್ನಡ– 89,167

ಶಿವಮೊಗ್ಗ– 85,518

ಚಿಕ್ಕಮಗಳೂರು–  24,659

ಬೆಳಗಾವಿ– 17,424

ಬಾಗಲಕೋಟೆ– 12,479

ದಾವಣಗೆರೆ– 12,059

ಮೈಸೂರು– 7,275

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು