ಮಂಗಳವಾರ, ನವೆಂಬರ್ 19, 2019
29 °C
₹ 80 ಕೋಟಿ ವೆಚ್ಚದಲ್ಲಿ ನಿರ್ಮಾಣ ವಾಗಲಿರುವ ‘ಕಮಾಂಡ್ ಸೆಂಟರ್'

ಪೊಲೀಸ್‌ ಆಧುನೀಕರಣಕ್ಕೆ ಆದ್ಯತೆ: ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ

Published:
Updated:
Prajavani

ಬೆಂಗಳೂರು: ‘ಪೊಲೀಸ್‌ ಇಲಾಖೆಯ ಆಧುನೀಕರಣಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಲಿದೆ. ರಾಜ್ಯವನ್ನು ಅಪರಾಧ ಮುಕ್ತವಾಗಿಸುವ ನಿಟ್ಟಿನಲ್ಲಿ ಪೊಲೀಸರು ಶ್ರಮಿಸಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಜನರಲ್‌ ತಿಮ್ಮಯ್ಯ ರಸ್ತೆಯಲ್ಲಿರುವ ಕೆಎಸ್‌ಆರ್‌ಪಿ 1ನೇ ಬೆಟಾಲಿಯನ್ ಪ್ರದೇಶದಲ್ಲಿ ₹ 80 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ‘ಪೊಲೀಸ್‌ ಕಮಾಂಡ್ ಸೆಂಟರ್’ ಕಟ್ಟಡಕ್ಕೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

‘ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಸರ್ಕಾರ ₹ 15 ಕೋಟಿ ಬಿಡುಗಡೆ ಮಾಡಿದೆ. ಬಾಕಿ ಹಣವನ್ನೂ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಎರಡು ವರ್ಷಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಪ್ರಕೃತಿ ವಿಕೋಪ ತಡೆಗಟ್ಟುವುದು ಮತ್ತು ಗಂಭೀರ ಪ್ರಕರಣಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಹೊಸತಾಗಿ ಆರಂಭವಾಗಲಿರುವ ಈ ಸೆಂಟರ್‌ ಹೆಚ್ಚು ಸಹಕಾರಿಯಾಗುವ ನಿರೀಕ್ಷೆ ಇದೆ’ ಎಂದರು.

‘ಈ ಕೇಂದ್ರದ ಜೊತೆ ಕಂದಾಯ ಸೇರಿದಂತೆ ಬೇರೆ ಬೇರೆ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಲಿದೆ. ಅಷ್ಟೇ ಅಲ್ಲ, ಪೊಲೀಸ್‌ ಬಲ ಕೂಡಾ ಹೆಚ್ಚಲಿದೆ. ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಪೊಲೀಸರ ಪಾತ್ರ ಅತಿಮುಖ್ಯ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ತೆಗೆದುಕೊಳ್ಳುವ ನಿರ್ಧಾರಗಳು ಸರ್ಕಾರದ ಘನತೆಯನ್ನು ಹೆಚ್ಚಿಸುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಮೈಸೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ–ಧಾರವಾಡ ಮತ್ತು ಕಲಬುರ್ಗಿಯಲ್ಲಿಯೂ ಇದೇ ಮಾದರಿಯ ಸೆಂಟರ್‌ ಆರಂಭಿಸುವ ಉದ್ದೇಶವಿದೆ’ ಎಂದೂ ಮುಖ್ಯಮಂತ್ರಿ ಹೇಳಿದರು.

‘ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪೊಲೀಸರ ವೇತನ ಸೇರಿದಂತೆ ಹಲವು ದಿನಗಳಿಂದ ಬಾಕಿ ಇದ್ದ ಕೆಲವು ಬೇಡಿಕೆಗಳನ್ನು ಈಡೇರಿಸಲಾಗಿದೆ. ಈಗಾಗಲೇ ಬೆಂಗಳೂರು ಸೇರಿದಂತೆ ವಿವಿಧ ಕಡೆ 8285 ವಸತಿಗೃಹಗಳನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ’ ಎಂದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ, ಶಾಸಕ ಎನ್‌.ಎ. ಹ್ಯಾರಿಸ್‌ ಕೂಡಾ ಇದ್ದರು.

ಏನಿದು ‘ಕಮಾಂಡ್ ಸೆಂಟರ್‌’?
ಏಳು ಅಂತಸ್ತುಗಳ ಕಮಾಂಡ್ ಸೆಂಟರ್‌, ಪೊಲೀಸ್ ಇಲಾಖೆಯ ವಿವಿಧ ವಿಭಾಗಗಳಿಗೆ ಸಂಬಂಧಿಸಿದಂತೆ ತುರ್ತು ಸೇವೆಗಳನ್ನು ಒದಗಿಸುವ ಸಂಯೋಜನೆ ಕೇಂದ್ರವಾಗಿ ಕೆಲಸ ಮಾಡಲಿದೆ.

ಪ್ರತಿಕ್ರಿಯಿಸಿ (+)