ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಉಚಿತ ‘ಹೇರ್‌ಕಟ್‌’; ಸರ್ಕಾರಿ ಶಾಲೆಯ ಉಳಿವಿಗೆ ಕ್ಷೌರಿಕನ ಅಳಿಲು ಸೇವೆ

Last Updated 23 ಅಕ್ಟೋಬರ್ 2018, 17:39 IST
ಅಕ್ಷರ ಗಾತ್ರ

ಮಂಗಳೂರು: ಬಾಲಕರು ನೇರವಾಗಿ ಇಲ್ಲಿಗೆ ಬಂದವರೇ ತಮ್ಮ ಶಾಲೆಯ ಗುರುತಿನ ಚೀಟಿ ತೋರಿಸುತ್ತಾರೆ. ಕುರ್ಚಿಯಲ್ಲಿ ಕುಳಿತು ತಮಗೆ ಬೇಕಾದ ರೀತಿಯಲ್ಲಿ ಕ್ಷೌರ ಮಾಡಿಸಿಕೊಳ್ಳುತ್ತಾರೆ. ಕಾಸು ನೀಡದೆ ಹೋಗಿಬಿಡುತ್ತಾರೆ!

ನಗರದ ಬಿಕರ್ನಕಟ್ಟೆಯ ಕುಡ್ಲ ಮೆನ್ಸ್‌ ಪ್ರೊಫೆಷನಲ್‌ ಸಲೂನ್‌ನಲ್ಲಿ ಇಂತಹ ವಿಶಿಷ್ಟ ಸೇವೆಯನ್ನು ಮಾಲೀಕ ಸಂಜಯ್‌ ಮಹಾಲೆ ನೀಡುತ್ತಿದ್ದಾರೆ. ಸರ್ಕಾರಿ ಶಾಲೆಯ ಉಳಿವಿಗೆ ಸಂಜಯ್‌ ಅವರ ಅಳಿಲು ಸೇವೆ ಇದು.

‘ನನ್ನ ಅಂಗಡಿಯ ಪಕ್ಕದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಯಾವ ವಿದ್ಯಾರ್ಥಿ ಬಂದರೂ, ಉಚಿತವಾಗಿ ಹೇರ್‌ಕಟ್ ಮಾಡುತ್ತೇನೆ. ಅವರು ತಮ್ಮ ಶಾಲೆಯ ಗುರುತಿನ ಪತ್ರ ತೋರಿಸಬೇಕಷ್ಟೇ’ ಎನ್ನುತ್ತಾರೆ ಸಂಜಯ್‌.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಸಂಜಯ್‌ ಮಹಾಲೆ, ಉದ್ಯೋಗ ಅರಸಿ 23 ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ನಂತರ ಇಲ್ಲಿ ಸಲೂನ್‌ ಆರಂಭಿಸಿ, ಜೀವನ ನಡೆಸುತ್ತಿದ್ದಾರೆ. ಈ ಮೊದಲು ಅಂಗವಿಕಲ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಕ್ಷೌರ ಮಾಡುತ್ತಿದ್ದರು.

‘ರಿಯಾಯಿತಿ ದರದಲ್ಲಿ ಹೇರ್‌ಕಟ್‌ ಮಾಡುವುದು ಅಷ್ಟು ಸಮಾಧಾನ ತಂದಿರಲಿಲ್ಲ. ಅದಕ್ಕಾಗಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಹೇರ್‌ಕಟ್‌ ಮಾಡುವ ನಿರ್ಧಾರ ಮಾಡಿದೆ’ ಎಂದು ಸಂಜಯ್‌ ಹೆಮ್ಮೆಯಿಂದ ಹೇಳುತ್ತಾರೆ.

ಸಂಜಯ್‌ ಅವರ ನಿರ್ಧಾರವನ್ನು ಮುಕ್ತ ಕಂಠದಿಂದ ಶ್ಲಾಘಿಸುವ ಬಿಕರ್ನಕಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕಿ ರಾಜೀವಿ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷ ಮೋಹನ್‌ ಬಂಗೇರ, ’ಇದೊಂದು ಮಹತ್ತರವಾಗಿ ಕೆಲಸ. ಶಾಲೆಯ ಮಕ್ಕಳಿಗೆ ಉಚಿತವಾಗಿ ಹೇರ್‌ಕಟ್‌ ಮಾಡುವ ಮೂಲಕ ಸಂಜಯ್‌ ಮರೆಯಲಾಗದಂತ ಕೊಡುಗೆ ನೀಡುತ್ತಿದ್ದಾರೆ’ ಎಂದು ಹೇಳುತ್ತಾರೆ.

‘ಸರ್ಕಾರಿ ಶಾಲೆಯ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಕರಿಗೆ ಅಲ್ಪ ಸಹಾಯ ಮಾಡುತ್ತಿದ್ದೇನೆ’ ಎಂದು ಸಂಜಯ್‌ ವಿನಮ್ರವಾಗಿ
ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT