ಶನಿವಾರ, ಫೆಬ್ರವರಿ 27, 2021
31 °C
ಬಹುತೇಕ ಜಿಲ್ಲೆಗಳಲ್ಲಿ ಶಾಲಾ–ಕಾಲೇಜುಗಳಿಗೆ ರಜೆ

‘ಭಾರತ್‌ ಬಂದ್‌’ಗೆ ಬಿಗಿ ಬಂದೋಬಸ್ತ್‌: ಸಾರಿಗೆ ವಾಹನಗಳ ಓಡಾಟ ಸ್ತಬ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಂಧರ್ಭಿಕ ಚಿತ್ರ

ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಖಂಡಿಸಿ ಕಾಂಗ್ರೆಸ್‌ ನೇತೃತ್ವದಲ್ಲಿ ಸೋಮವಾರ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ನಡೆಯಲಿರುವ ‘ಭಾರತ್‌ ಬಂದ್‌’ಗೆ ರಾಜ್ಯದಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಜನರ ಸುರಕ್ಷತೆಗೆ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಜನಸಾಮಾನ್ಯರ ಮೇಲೆ ಬಂದ್‌ ಬಿಸಿ ತಟ್ಟುವ ಸಾಧ್ಯತೆಯಿದೆ.

ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಜೆಡಿಎಸ್‌– ಕಾಂಗ್ರೆಸ್ ಬಹಿರಂಗವಾಗಿಯೇ ಬೆಂಬಲ ಘೋಷಿಸಿರುವುದರಿಂದ ಆಡಳಿತ ಯಂತ್ರ ಸ್ತಬ್ಧವಾಗಲಿದೆ. ಸಿಪಿಐ ಹಾಗೂ ಸಿಐಟಿಯು ನೇತೃತ್ವದಲ್ಲಿ ಎಡಪಕ್ಷ ಸಂಯೋಜಿತ ಕಾರ್ಮಿಕ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು ಬಂದ್‌ಗೆ ಕೈಜೋಡಿಸಿವೆ.

ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಈಶಾನ್ಯ ಮತ್ತು ವಾಯವ್ಯ ನಿಗಮಗಳ ನೌಕರರ ಸಂಘಟನೆಗಳು, ಓಲಾ– ಉಬರ್ ಹಾಗೂ ಐಟಿ–ಬಿಟಿ ಕಂಪನಿಗಳ ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರು ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ. ಆದ್ದರಿಂದ, ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಬೆಳಿಗ್ಗೆ 6ರಿಂದ ರಸ್ತೆಗೆ ಇಳಿದು ಪ್ರತಿಭಟನೆ ನಡೆಸುವುದಾಗಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರು ಹೇಳಿದ್ದಾರೆ. ಅಂಗಡಿ–ಮುಂಗಟ್ಟುಗಳನ್ನು ಮುಚ್ಚಿಸಿ ಬೃಹತ್ ಮೆರವಣಿಗೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಹೀಗಾಗಿ, ಹಾಲು, ಔಷಧಿ, ತರಕಾರಿ ಹೊರತುಪಡಿಸಿ ಉಳಿದೆಲ್ಲ ವಸ್ತುಗಳು ದೊರೆಯುವುದು ಅನುಮಾನ.

ಕನ್ನಡ ಸಂಘಟನೆಗಳ ಒಕ್ಕೂಟ, ಕರ್ನಾಟಕ ರಕ್ಷಣಾ ವೇದಿಕೆ, ರಾಜ್ಯ ಬೀದಿಬದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟ ಸೇರಿ ಹಲವು ಸಂಘಟನೆಗಳು ಬಂದ್‌ ಬೆಂಬಲಿಸಿವೆ.

ಶಾಪಿಂಗ್ ಮಾಲ್‌ಗಳು, ಪೆಟ್ರೋಲ್ ಬಂಕ್‌ಗಳು ಬೆಳಿಗ್ಗೆ ಎಂದಿನಂತೆ ಕಾರ್ಯಾಚರಿಸಲಿವೆ. ಗಲಾಟೆ ನಡೆದರೆ ಬಾಗಿಲು ಬಂದ್‌ ಮಾಡಲು ಅವುಗಳ ಮಾಲೀಕರು ತೀರ್ಮಾನಿಸಿದ್ದಾರೆ. ಬ್ಯಾಂಕ್‌ಗಳು, ಅಂಚೆ ಕಚೇರಿ ಚಟುವಟಿಕೆ ಮೇಲೂ ಬಂದ್‌ ಪರಿಣಾಮ ಬೀರುವುದು ಖಚಿತ.

ಬಿಗಿ ಬಂದೋಬಸ್ತ್‌ : ‘ರಾಜಕೀಯ ಪಕ್ಷಗಳು ಹಾಗೂ ಬಹುತೇಕ ಸಂಘಟನೆಗಳು ಬೆಂಬಲ ನೀಡಿರುವುದರಿಂದ ಬಂದ್‌ ಪರಿಣಾಮ ಬೀರುವ ಲಕ್ಷಣವಿದೆ. ಹೀಗಾಗಿ ರಾಜ್ಯದೆಲ್ಲೆಡೆ ಬಿಗಿ ಭದ್ರತೆ ಕೈಗೊಳ್ಳಲು ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಕಮಲ್ ಪಂತ್‌ ಹೇಳಿದರು.

‘ಬೆಳಿಗ್ಗೆ 5ರಿಂದಲೇ ಪ್ರತಿ ಜಿಲ್ಲೆಯಲ್ಲೂ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಈಗಾಗಲೇ ಹಲವು ಸಂಘಟನೆಗಳ ಮುಖಂಡರ ಜೊತೆ ಮಾತುಕತೆ ನಡೆಸಿ, ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಮನವಿ ಮಾಡಿದ್ದೇವೆ. ಪ್ರತಿಭಟನೆಗಳಿಗೆ ಪ್ರತ್ಯೇಕ ಸ್ಥಳಗಳನ್ನು ನಿಗದಿಪಡಿಸಲಾಗಿದೆ. ಯಾರಾದರೂ ಬಲವಂತವಾಗಿ ಅಂಗಡಿಗಳನ್ನುಮುಚ್ಚಿಸಿದರೆ, ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.  

‘ರೈಲು ನಿಲ್ದಾಣ, ಬಸ್‌ ನಿಲ್ದಾಣ ಹಾಗೂ ಕೇಂದ್ರ ಸರ್ಕಾರದ ಅಧೀನದ ಕಚೇರಿಗಳಿಗೆ ಕೆಲವು ಸಂಘಟನೆಗಳು ಮುತ್ತಿಗೆ ಹಾಕಲಿವೆ ಎಂಬ ಮಾಹಿತಿ ಇದೆ. ಅಲ್ಲೆಲ್ಲ ಭದ್ರತೆಗಾಗಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’ ಎಂದರು.

ಬಂದ್‌ಗೆ ಬೆಂಬಲ ಇಲ್ಲ: ಬಂದ್‌ ಬೆಂಬಲ ನೀಡದಿರಲು ತೀರ್ಮಾನಿಸಿರುವ ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ, ‘ರಾಜಕೀಯ ಪಕ್ಷವು ಕರೆ ನೀಡಿರುವ ಬಂದ್‌ಗೆ ಬೆಂಬಲವಿಲ್ಲ. ಲಾರಿಗಳು ಸೇರಿದಂತೆ ಎಲ್ಲ ಸರಕು ಸಾಗಣೆ ವಾಹನಗಳು ಎಂದಿನಂತೆ ಸಂಚರಿಸಲಿವೆ’ ಎಂದು ಅವರು ತಿಳಿಸಿದರು.

ದಿನದ ವೇತನ ಕಡಿತ: ‌‘ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ನೌಕರರು ಬಂದ್‌ ಬೆಂಬಲಿಸಿ ಕೆಲಸಕ್ಕೆ ಗೈರು ಹಾಜರಾದರೆ, ಒಂದು ದಿನದ ವೇತನ ಕಡಿತಗೊಳಿಸಲಾಗುವುದು’ ಎಂದು ನಿಗಮಗಳ ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
‘ಸಾರಿಗೆ ಸೇವೆ ಅಗತ್ಯ ಸೇವೆಗಳಲ್ಲೊಂದು. ಅದನ್ನು ಬಹಿಷ್ಕರಿಸುವ ನೌಕರರ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶವಿದೆ. ಆ ಬಗ್ಗೆ ಸುಪ್ರೀಂ ಕೋರ್ಟ್ ಆದೇಶಗಳಿವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು. 

ಯಾವುದೆಲ್ಲ ರಸ್ತೆಗೆ ಇಳಿಯಲ್ಲ?

* ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳು

* ಐಟಿ–ಬಿಟಿ ಖಾಸಗಿ ವಾಹನಗಳು

* ವಿಮಾನ ನಿಲ್ದಾಣದ ಟ್ಯಾಕ್ಸಿ

* ನಗರ ಸಂಚಾರದ ಟ್ಯಾಕ್ಸಿ  

ಯಾವುದೆಲ್ಲ ಲಭ್ಯ?

* ವಸತಿಗೃಹ, ಹೋಟೆಲ್‌ಗಳು

* ತರಕಾರಿ, ಔಷಧಿ, ಆಸ್ಪತ್ರೆಗಳು, ತುರ್ತು ಸೇವೆಗಳು

* ಲಾರಿ ಸೇರಿದಂತೆ ಎಲ್ಲ ಬಗೆಯ ಸರಕು ಸಾಗಣೆ ವಾಹನಗಳು

* ಮೆಟ್ರೊ, ಪ್ರವಾಸೋದ್ಯಮ ಟ್ಯಾಕ್ಸಿಗಳು, ಆಟೊಗಳು 

ಬಂದ್‌ಗೆ ಬೆಂಬಲ ಇಲ್ಲ...

* ಹೋಟೆಲ್ ಉದ್ಯಮಿಗಳ ಸಂಘ

* ಲಾರಿ ಚಾಲಕರು ಹಾಗೂ ಮಾಲೀಕರ ಒಕ್ಕೂಟ

* ತೈಲ ಸಾಗಣೆ ವಾಹನಗಳ ಚಾಲಕರ ಸಂಘ

* ಬ್ಯಾಂಕ್ ನೌಕರರ ಸಂಘ

ಹೆಚ್ಚುವರಿ ಕೆಲಸಕ್ಕೆ ನಿರ್ಧಾರ

ಭಾರತ್‌ ಬಂದ್‌ಗೆ ಕರೆ ನೀಡಿದ್ದನ್ನು ವಿರೋಧಿಸಿ ಬೆಂಗಳೂರು ನಗರದ ಹಲವು ಅಂಗಡಿ ಮಾಲೀಕರು, ಒಂದು ಗಂಟೆ ಹೆಚ್ಚುವರಿ ಕೆಲಸ ಮಾಡಲು ನಿರ್ಧರಿಸಿದ್ದಾರೆ.

ಆ ಬಗ್ಗೆ ತಮ್ಮ ಅಂಗಡಿಗಳಲ್ಲಿ ಫಲಕ ಹಾಕಿಕೊಂಡಿರುವ ಮಾಲೀಕರು, ‘ಸೆಪ್ಟೆಂಬರ್ 10ರಂದು ಸಾಮಾನ್ಯ ದಿನಕ್ಕಿಂತ ಒಂದು ಗಂಟೆ ಹೆಚ್ಚುವರಿಯಾಗಿ ಅಂಗಡಿಗಳನ್ನು ತೆರೆಯಲಿದ್ದೇವೆ’ ಎಂದಿದ್ದಾರೆ. ಈ ಫಲಕಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಬಹುತೇಕ ಜಿಲ್ಲೆಗಳಲ್ಲಿ ಶಾಲಾ–ಕಾಲೇಜುಗಳಿಗೆ ರಜೆ

ಪರಿಸ್ಥಿತಿ ಅವಲೋಕಿಸಿ ಶಾಲಾ–ಕಾಲೇಜುಗಳಿಗೆ ರಜೆ ನೀಡುವ ಅಧಿಕಾರವನ್ನು ಆಯಾ ಜಿಲ್ಲಾಡಳಿತಗಳ ವಿವೇಚನೆಗೆ ಬಿಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ. ಬಹುತೇಕ ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದಾರೆ.

ಈ ಜಿಲ್ಲೆಗಳಲ್ಲಿ ರಜೆ: ರಾಯಚೂರು, ಕಲಬುರ್ಗಿ, ಯಾದಗಿರಿ, ಬಳ್ಳಾರಿ, ಕೊಪ್ಪಳ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಾಮರಾಜನಗರ, ದಕ್ಷಿಣ ಕನ್ನಡ, ಉತ್ತಕ ಕನ್ನಡ, ಉಡುಪಿ, ಚಿಕ್ಕಮಗಳೂರು.

ಸೋಮವಾರದ ರಜಾ ಅವಧಿ ಸರಿದೂಗಿಸಲು ಸೆಪ್ಟೆಂಬರ್‌ 15ರ ಶನಿವಾರದಂದು ಪೂರ್ಣಾವಧಿ ತರಗತಿ ನಡೆಸಲು ಧಾರವಾಡ ಜಿಲ್ಲಾಡಳಿತ ನಿರ್ಧರಿಸಿದೆ.

ಖಾಸಗಿ ಶಾಲೆಗಳಿಗೂ ರಜೆ:  ‘ರಾಜಕೀಯ ಪಕ್ಷಗಳ ಪರವಾಗಿ qಬಂದ್‌ಗೆ ನೇರ ಬೆಂಬಲ ನೀಡುತ್ತಿಲ್ಲ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಸೋಮವಾರ ರಜೆ ನೀಡಲು ಆಯಾ ಶಾಲಾ ಮಂಡಳಿಗಳಿಗೆ ಸೂಚಿಸಲಾಗಿದೆ. ರಜೆ ನೀಡುವ ಶಾಲೆಗಳು ಶನಿವಾರ ಪೂರ್ಣಾವಧಿ ತರಗತಿ ನಡೆಸಲಿವೆ’ ಎಂದು ರಾಜ್ಯದ ಖಾಸಗಿ ಅನುದಾನ ರಹಿತ ಶಾಲೆಗಳ ಸಂಘಟನೆ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್‌ ತಿಳಿಸಿದರು.

ಸೋಮವಾರ ನಡೆಯಬೇಕಿದ್ದ ಐಟಿಐ ಕೋರ್ಸ್‌ನ ಥಿಯರಿ ಪರೀಕ್ಷೆಯನ್ನು ಸೆಪ್ಟೆಂಬರ್‌ 19ಕ್ಕೆ ಮುಂದೂಡಲಾಗಿದೆ ಎಂದು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

*****

ತೈಲ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಮೆಜೆಸ್ಟಿಕ್‌ ಬಸ್ ನಿಲ್ದಾಣದಲ್ಲಿ ಎಮ್ಮೆ ಸವಾರಿ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು
– ವಾಟಾಳ ನಾಗರಾಜ್, ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ

ಬಂದ್‌ಗೆ ಬೆಂಬಲ ನೀಡುವ ಬಗ್ಗೆ ಸ್ವಯಂ ನಿರ್ಧಾರ ಕೈಗೊಳ್ಳುವಂತೆ ಆಯಾ ಜಿಲ್ಲಾ ಘಟಕದ ಪದಾಧಿಕಾರಿಗಳಿಗೆ ಹೇಳಿದ್ದೇವೆ. ಬೆಂಗಳೂರಿನಲ್ಲಂತೂ ಬೆಂಬಲ ಇಲ್ಲ. ಗಲಾಟೆ ಸಂಭವಿಸಿದರೆ ವಸತಿಗೃಹ , ಹೋಟೆಲ್ ಮುಚ್ಚುತ್ತೇವೆ.
– ಚಂದ್ರಶೇಖರ್ ಹೆಬ್ಬಾರ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ

16 ಬಾರಿ ತೈಲ ಬೆಲೆ ಏರಿಕೆ ಮಾಡಲಾಗಿದೆ. ಜನಹಿತಕ್ಕಾಗಿ ಬಂದ್‌ ಮಾಡುತ್ತಿದ್ದೇವೆ. ರಾಜ್ಯ ಸರ್ಕಾರವೇ ಸೆಸ್‌ ಕಡಿಮೆ ಮಾಡಲಿ ಎನ್ನುವ ಕೇಂದ್ರ ಸರ್ಕಾರ, ಮೊದಲು ತನ್ನ ತೆರಿಗೆ ಕಡಿಮೆ ಮಾಡಲಿ
– ಜಿ.ಪರಮೇಶ್ವರ, ಉಪಮುಖ್ಯಮಂತ್ರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು