ಬುಧವಾರ, ಅಕ್ಟೋಬರ್ 16, 2019
21 °C

ನೆರೆ ಪರಿಹಾರಕ್ಕಾಗಿ ದೇವೇಗೌಡರ ಜತೆ ಧರಣಿಗೆ ನಾನೂ ಸಿದ್ಧ: ಬಿಜೆಪಿ ಸಂಸದ ಬಸವರಾಜು

Published:
Updated:
ಜಿ.ಎಸ್.ಬಸವರಾಜು(ಬಲದಿಂದ ಎರಡನೆಯವರು)

ತುಮಕೂರು: ಲೋಕಸಭಾ ಚುವಾವಣೆಯ ಜಿದ್ಧಾಜಿದ್ಧಿನ ಕಣದಲ್ಲಿ ದೇವೇಗೌಡರನ್ನು ಸೋಲಿಸಿದ ಜಿ.ಎಸ್.ಬಸವರಾಜು ಅವರು ನೆರೆ ಪರಿಹಾರಕ್ಕಾಗಿ ಗೌಡರೊಂದಿಗೆ ಧರಣಿ ಕೂರಲು ಸಿದ್ಧರಾಗಿದ್ದಾರೆ.

ರಾಜ್ಯಕ್ಕೆ ಒಳಿತು ಆಗುವುದಾದರೆ ನಾನೂ ಸಹ ದೇವೇಗೌಡರೊಂದಿಗೆ ಸಂಸತ್ತು ಭವನದ ಮುಂದೆ ಧರಣಿ ಕೂರುತ್ತೇನೆ ಎಂದು ಸಂಸದ ಜಿ.ಎಸ್.ಬಸವರಾಜು ಹೇಳಿದರು.

ರಾಜ್ಯದ ನೆರೆ ಹಾನಿಗೆ ಸಮರ್ಪಕ ಪರಿಹಾರಕ್ಕಾಗಿ ಒತ್ತಾಯಿಸಿ ಸಂಸತ್ತಿನ ಮುಂದೆ ಧರಣಿ ಮಾಡುವುದಾಗಿ ದೇವೇಗೌಡರು ಘೋಷಿಸಿದ್ದಾರೆ. ರಾಜ್ಯದ ಸಂಸದರಾಗಿರುವ ನೀವು ಸಹ ಈ ಧರಣಿಯನ್ನು ಬೆಂಬಲಿಸುವಿರಾ ಎಂದು ಮಾಧ್ಯಮ ಪ್ರತಿನಿಧಿಗಳು ಪತ್ರಿಕಾಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಧರಣಿ, ಪ್ರತಿಭಟನೆ ಮಾಡಲು ಎಲ್ಲರಿಗೂ ಸಮಾನ ಅವಕಾಶ ಇದೆ‌. ಅವರು ಧರಣಿ ಕೂರಲು ಬಂದರೆ ನಾನೇ ವೆಲ್ ಕಮ್ ಮಾಡುತ್ತೇನೆ ಎಂದು ಹೇಳಿದರು.

ಸೂಕ್ತ ಪರಿಹಾರಕ್ಕೆ ಒತ್ತಾಯಿಸುವ ಗಂಡಸ್ತನ ಇರುವ ಸಂಸದರು ಬಿಜೆಪಿಯಲ್ಲಿ ಇಲ್ಲವೆಂದು ಜೆ.ಡಿ.ಎಸ್.ನ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದ್ದಾರಲ್ಲ. ಅದಕ್ಕೆ ನಿಮ್ಮ ಪ್ರತಿಕ್ರಿಯೆ ಎಂದಾಗ, ಗಂಡಸ್ತನ ಇದೇ ಎಂಬ ಕಾರಣಕ್ಕಾಗಿಯೇ ಜನರು ನಮ್ಮನ್ನು ಆಯ್ಕೆ ಮಾಡಿದ್ದಾರೆ. ಹಗಲು ಹೇಳಿದನ್ನು ರಾತ್ರಿ ಮರೆಯುವ, ಮಾನ ಮರ್ಯಾದೆ ಇಲ್ಲದವರು ನೀಡುವ ಕ್ಷುಲ್ಲಕ ಹೇಳಿಕೆಗಳಿಗೆ ನಾನು ಹೆಚ್ಚೇನೂ ಹೇಳಲಾರೆ ಎಂದು ಉತ್ತರ ಮುಗಿಸಿದರು.

ತುಮಕೂರಿನಲ್ಲಿ ಲಿಂಗಾಯತ ಸಮುದಾಯದ ಅಧಿಕಾರಗಳನ್ನು ವರ್ಗಾಯಿಸಿ ತಂದು ಆಯಕಟ್ಟಿನ ಜಾಗದಲ್ಲಿ ಕೂರಿಸುತ್ತಿದ್ದಿರಿ ಎಂಬ ಆರೋಪ ಕೇಳಿ ಬಂದಿದೆಯಲ್ಲ ಎಂಬ ಮಾತಿಗೆ, ಯಾರ್ರಿ ಹೇಳಿದ್ದು. ನೀವು ಪೊಲೀಸ್ ಸ್ಟೇಷನ್ ಗಳನ್ನು ಒಂದು ಸುತ್ತುಹಾಕಿ ಬನ್ನಿ. ಎಲ್ಲ 5 ಎಸ್.ಐ. ಗಳು ಗೌಡರೇ ಇದ್ದಾರೆ. ನಾನು ಇನ್ನೂ ಗುಬ್ಬಿ ಕ್ಷೇತ್ರದ ಅಧಿಕಾರಗಳ ವರ್ಗಾವಣೆಗೆ ಕೈಯೇ ಹಾಕಿಲ್ಲ. ಜಿಲ್ಲಾಡಳಿತದ ಉನ್ನತ ಹುದ್ದೆಗಳಲ್ಲಿ ಹಿಂದುಳಿದ ವರ್ಗ, ದಲಿತ ಸಮುದಾಯದ ಅಧಿಕಾರಿ ಇಲ್ಲ ಎಂಬುದರ ಬಗ್ಗೆ ನನಗೂ ಬೇಸರವಿದೆ ಎಂದರು.

ಕೇಂದ್ರದಿಂದ ನೆರವಿನ ಹರಿವು ಈಗ ಶುರುವಾಗಿದೆ. ರಾಜಕೀಯ ಮಾಡುವುದನ್ನು ಬಿಟ್ಟು, ಅದನ್ನು ಸದಪಯೋಗ ಪಡಿಸಿಕೊಂಡು ಸಂತ್ರಸ್ತರ ನೋವಿಗೆ ಸ್ಪಂದಿಸೋಣ ಎಂದು ಪ್ರತಿಪಕ್ಷಗಳನ್ನು ಉದ್ದೇಶಿಸಿ ಹೇಳಿದರು.

Post Comments (+)