ಹಳಿ ತಪ್ಪಿರುವ ಗಂಗಾ ಕಲ್ಯಾಣ: ನೀರಿಗಿಂತ ಹಣದ ಹರಿವೇ ಹೆಚ್ಚು

ಭಾನುವಾರ, ಮಾರ್ಚ್ 24, 2019
31 °C
ಬಡವರ ಹೆಸರಲ್ಲಿ ಲೂಟಿ

ಹಳಿ ತಪ್ಪಿರುವ ಗಂಗಾ ಕಲ್ಯಾಣ: ನೀರಿಗಿಂತ ಹಣದ ಹರಿವೇ ಹೆಚ್ಚು

Published:
Updated:

ಕಲಬುರ್ಗಿ: ಕೃಷಿಯನ್ನೇ ಅವಲಂಬಿ ಸಿರುವ ‘ಅಹಿಂದ’ ವರ್ಗಗಳ ಕಲ್ಯಾಣ ಕ್ಕಾಗಿ ರಾಜ್ಯ ಸರ್ಕಾರ ಆರಂಭಿಸಿರುವ ಗಂಗಾ ಕಲ್ಯಾಣ ಯೋಜನೆಯಲ್ಲಿ ನೀರಿ ಗಿಂತ ಹಣವೇ ಹೆಚ್ಚು ಹರಿದಿದೆ.

ಯೋಜನೆ ಸಾಫಲ್ಯಗೊಂಡು ಅದರ ಸಂಪೂರ್ಣ ಲಾಭ ನೈಜ ಫಲಾನುಭವಿಗಳಿಗೆ ದೊರೆತಿದ್ದರೆ ಅವರ ಜಮೀನು ನೀರಾವರಿಗೊಳಪಟ್ಟು ನಳನಳಿಸಬೇಕಿತ್ತು. ಆರ್ಥಿಕ ಮಟ್ಟ ಸುಧಾರಿಸಿ ಬಡತನ ನಿವಾರಣೆಯಾಗಬೇಕಿತ್ತು. ಆದರೆ, ಆಗುತ್ತಿರುವುದೇ ಬೇರೆ. ಭ್ರಷ್ಟಾಚಾರ, ಅವೈಜ್ಞಾನಿಕ ವಿಧಾನ, ವಿಳಂಬ ನೀತಿ, ಹಣದ ಆಸೆಗೆ ಕೆಲ ಫಲಾನುಭವಿಗಳೇ ಅಕ್ರಮಕ್ಕೆ ಸಾಥ್‌ ನೀಡುವುದು-ಹೀಗೆ ಈ ಯೋಜನೆಯ ಲೋಪಗಳ ಪಟ್ಟಿ ದೊಡ್ಡದು. ಅರ್ಜಿ ಸಲ್ಲಿಕೆಯಿಂದ ‘ನೀರು ಚಿಮ್ಮಿಸುವ’ವರೆಗೆ ಪ್ರತಿ ಹಂತದಲ್ಲೂ ‘ಭ್ರಷ್ಟಾಚಾರ ಪೋಷಿಸುತ್ತಿರುವುದು’ ದುರಂತ.

ಫಲಾನುಭವಿಗಳ ಆಯ್ಕೆ ಅಧಿಕಾರ ಇರುವುದು ಶಾಸಕರಿಗೆ. ಬಹುತೇಕ ಕಡೆಗಳಲ್ಲಿ ಶಾಸಕರ ಹಿಂಬಾಲಕರು ಆಡಿದ್ದೇ ಆಟ. ಅರ್ಜಿ ಸಲ್ಲಿಸಿದವರ ಹಿರಿ ತನದ ಪಟ್ಟಿ ಇಲ್ಲಿ ಗಣನೆಗೆ ಬರುವುದಿಲ್ಲ. ತಮಗೆ ಬೇಕಾದವರನ್ನು ಪಟ್ಟಿಯಲ್ಲಿ ಸೇರಿಸುತ್ತಾರೆ. ಕೆಲವೆಡೆ ಈ ಕೆಲಸ ಮಾಡಿ ಸುವ ಏಜೆಂಟರೂ ಇದ್ದು, ಅವರು ಫಲಾನುಭವಿಗಳಿಂದ ₹10 ಸಾವಿರದಿಂದ ₹25 ಸಾವಿರ ಕಮಿಷನ್‌ ಪಡೆದುಕೊಳ್ಳುತ್ತಾರೆ.

ಕೊಳವೆಬಾವಿ ಕೊರೆಯುವುದು, ನೀರೆತ್ತುವ ಪಂಪ್, ಪೈಪ್‌ ಅಳವಡಿಸು ವುದು, ವಿದ್ಯುತ್‌ ಸಂಪರ್ಕ ಕಲ್ಪಿಸುವುದು ಹೀಗೆ ಪ್ರತಿ ಹಂತದಲ್ಲಿಯೂ ಅಕ್ರಮ ನಡೆಯುತ್ತದೆ. ಇಲ್ಲಿ ಪೂರೈಕೆದಾರರ ಲಾಬಿಯೂ ದೊಡ್ಡಮಟ್ಟದಲ್ಲಿ ಕೆಲಸ ಮಾಡುತ್ತದೆ.

ಇದನ್ನೂ ಓದಿ: ಫಲಾನುಭವಿ ಸತ್ತರೂ ಸಿಕ್ಕಿಲ್ಲ ವಿದ್ಯುತ್ ಸಂಪರ್ಕ!

ಹಳ್ಳಿಗರ ಜಮೀನಿನಲ್ಲಿ ಅನುಷ್ಠಾನಗೊಳ್ಳುವ ಈ ಯೋಜನೆಯ ಟೆಂಡರ್‌ ಪ್ರಕ್ರಿಯೆ ನಡೆಯುವುದು ರಾಜ್ಯಮಟ್ಟದಲ್ಲಿ. 300 ಅಡಿ ಆಳ ಕೊರೆದರೂ 500 ಅಡಿ ಕೊರೆದಿದ್ದಾಗಿ ದಾಖಲೆ ಸೃಷ್ಟಿಸಿ ಹಣ ಪಡೆಯಲಾಗುತ್ತದೆ. ಫಲಾನುಭವಿಗಳನ್ನು ಹೆದರಿಸಿಯೋ ಅಥವಾ ಅವರಿಗೂ ಆಮಿಷ ಒಡ್ಡಿಯೋ ಅವರಿಂದ ಸಹಿ ಪಡೆದು ಪಂಚನಾಮೆಯ ಶಾಸ್ತ್ರವನ್ನು ಮುಗಿಸಲಾಗುತ್ತದೆ. ‘ಇದು ರಾಜ್ಯಮಟ್ಟದಲ್ಲಿ ಆಗಿರುವ ಟೆಂಡರ್‌, ಏಜೆನ್ಸಿ ಮೇಲೆ ನಮ್ಮ ನಿಯಂತ್ರಣ ಇಲ್ಲ’ ಎಂಬ ಸಬೂಬು ಹೇಳಿ ಸ್ಥಳೀಯ ಅಧಿಕಾರಿಗಳು ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಾರೆ. ಇಲ್ಲಿ ಉತ್ತರದಾಯಿತ್ವವೇ ಇಲ್ಲ!

ಕಳಪೆ ಉಪಕರಣಗಳನ್ನು ಅಳವ ಡಿಸುವುದು ಈ ಯೋಜನೆಯ ಭ್ರಷ್ಟಾ ಚಾರದ ಇನ್ನೊಂದು ಮುಖ. ಅಕ್ರಮದ ಕಬಂಧಬಾಹು ರಾಜಧಾನಿಯಿಂದ ಹಳ್ಳಿಯವರೆಗೂ ಚಾಚಿದೆ. ಐಎಸ್‌ಐ ಗುರುತು ಇಲ್ಲದ ಸಾಮಗ್ರಿಗಳನ್ನು ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆಯಲ್ಲಿ ಸಂಗ್ರಹಿಸಲಾಗಿತ್ತು. ಅದನ್ನು ಗಮನಿಸಿದ್ದ ಸ್ಥಳೀಯ ಶಾಸಕ ನಾರಾಯಣಗೌಡ ಸಾರ್ವಜನಿಕರ ಸಮ್ಮುಖದಲ್ಲೇ ಗುತ್ತಿಗೆದಾರರಿಗೆ ಛೀಮಾರಿ ಹಾಕಿ ಎಲ್ಲವನ್ನು ವಾಪಸ್ ಕಳುಹಿಸಿದ್ದರು. ಇಂತಹ ಅಕ್ರಮಗಳ ಸದ್ದು ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲೂ ಮಾರ್ದನಿಸಿತ್ತು.

‘ಕೊಳವೆಬಾವಿ ಕೊರೆಯುವುದು, ಪಂಪ್‌ಸೆಟ್‌ ಅಳವಡಿಸುವುದು ಹಾಗೂ ವಿದ್ಯುತ್‌ ಸಂಪರ್ಕ ಕಲ್ಪಿಸುವುದು–ಹೀಗೆ ಈ ಕಾಮಗಾರಿ ನಿರ್ವಹಿಸಲು ಪ್ರತ್ಯೇಕ ಏಜೆನ್ಸಿಗಳಿಗೆ ಟೆಂಡರ್‌ ನೀಡಿರುತ್ತಾರೆ. ಕೊಳವೆಬಾವಿ ಕೊರೆದಾತ ತನ್ನ ಬಿಲ್‌ ಪಾಸ್‌ ಮಾಡಿಸಿಕೊಂಡು ಹೋಗಿಬಿಡುತ್ತಾನೆ. ಪಂಪ್‌ ಅಳವಡಿಸುವ ಏಜೆನ್ಸಿಯವರು ವಿಳಂಬ ಮಾಡುತ್ತಾರೆ. ಇವೆರಡೂ ಆಗಿದ್ದರೆ ವಿದ್ಯುತ್‌ ಸಂಪರ್ಕ ಕಲ್ಪಿಸುವವರ ಸಮಸ್ಯೆ. ಹೀಗಾಗಿ ಫಲಾನುಭವಿಯ ಜಮೀನಿಗೆ ನೀರು ಚಿಮ್ಮಲು ಕನಿಷ್ಠ ಎಂದರೂ ಎರಡು–ಮೂರು ವರ್ಷಗಳೇ ಬೇಕಾಗುತ್ತದೆ,ಅದು ಅದೃಷ್ಟ ನೆಟ್ಟಗಿದ್ದರೆ ಮಾತ್ರ’ ಎನ್ನುತ್ತಾರೆ ಹೆಸರು ಬಹಿರಂಗ ಪಡಿಸಲು ಬಯಸದ ಶಾಸಕರೊಬ್ಬರು.

ಇದನ್ನೂ ಓದಿ: ಗಂಗಾ ಕಲ್ಯಾಣ ಯೋಜನೆ: ಅಧಿಕಾರಿಗಳದ್ದೇ ಅಟಾಟೋಪ

ಕೊಳವೆಬಾವಿ ಕೊರೆದ ತಿಂಗಳೊ ಳಗಾಗಿ ನೀರೆತ್ತುವ ಕಾರ್ಯ ನಡೆಯ ಬೇಕು. ಇಲ್ಲದಿದ್ದರೆ ಮಣ್ಣು ಕುಸಿದು ಕೊಳವೆ ಮುಚ್ಚಿಕೊಳ್ಳುವ ಸಾಧ್ಯತೆ ಇರುತ್ತದೆ. ಬಹುತೇಕ ಪ್ರಕರಣಗಳಲ್ಲಿ ಮಣ್ಣು ಕುಸಿದು ಅವುಗಳ ಸೆಲೆಯೇ ಬತ್ತಿ ಹೋಗಿರುತ್ತದೆ. ಎಲ್ಲ ಪ್ರಕ್ರಿಯೆ ಮುಗಿದು ಪಂಪ್ ಅಳವಡಿಸಿದರೂ ನೀರು ಸಿಗದ ಉದಾಹರಣೆಗಳೂ ಇವೆ. ಹೀಗಾಗಿ ಹಣ ವೆಚ್ಚವಾಗುತ್ತದೆಯೇ ಹೊರತು, ನೀರು ದೊರೆಯುವುದಿಲ್ಲ.  ಸರ್ಕಾರದ ಉದ್ದೇಶವೂ ಈಡೇರುವುದಿಲ್ಲ.

ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಸಣ್ಣ ಹಿಡುವಳಿದಾರರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು ಯೋಜನೆ ಉದ್ದೇಶವಾದರೂ ಯಾರದ್ದೋ ಹೆಸರಿನಲ್ಲಿ ಯೋಜನೆ ಮಂಜೂರು ಮಾಡಿಸಿಕೊಂಡು ಇನ್ನಾರದ್ದೋ ಪ್ರಭಾವಿಗಳ ಜಮೀನಿನಲ್ಲಿ ಕೊಳವೆಬಾವಿ ಕೊರೆಸಿಕೊಂಡಿರುವ, ಒಂದೇ ಕುಟುಂಬದವರು ನಾಲ್ಕಾರು ಕೊಳವೆಬಾವಿಗಳ ಫಲ ಉಣ್ಣುತ್ತಿರುವ ಉದಾಹರಣೆಗಳಿಗೇನೂ ಕೊರತೆ ಇಲ್ಲ.

‘ನೀರು ಲಭ್ಯವಾಗದಿದ್ದರೆ ಹಣ ಪಾವತಿ ಇಲ್ಲ ಎಂಬ ಷರತ್ತನ್ನು ಇತ್ತೀಚೆಗೆ ವಿಧಿಸಲಾಗಿದೆ. ಕೊಳವೆಬಾವಿ ವಿಫಲವಾದ ಬಹುತೇಕ ಪ್ರಕರಣಗಳಲ್ಲಿ ಫಲಾನುಭವಿಗಳಿಗೆ ಹಣ ನೀಡಿ ನೀರು ಲಭ್ಯವಾಗಿದೆ ಎಂದು ದಾಖಲೆ ಸೃಷ್ಟಿಸಿ ಬಿಲ್‌ ಪಡೆಯಲಾಗುತ್ತದೆ. ನೀರಂತೂ ಬರಲಿಲ್ಲ; ಬಂದಷ್ಟು ಹಣ ಬರಲಿ ಎಂದು ಫಲಾನುಭವಿಗಳೂ ಅಕ್ರಮಕ್ಕೆ ಸಾಥ್‌ ನೀಡುತ್ತಾರೆ. ನಂತರ ಅವರು ಪಂಪ್‌, ವಿದ್ಯುತ್‌ ಉಪಕರಣ ಅಷ್ಟೇ ಏಕೆ, ವಿದ್ಯುತ್‌ ಕಂಬಗಳನ್ನೂ ಮಾರಿಕೊಳ್ಳುತ್ತಾರೆ’ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಸದಸ್ಯರೊಬ್ಬರು.

ಯೋಜನೆ ಜಾರಿಯಾಗಿ 25 ವರ್ಷ ಕಳೆದರೂ ಈ ವರೆಗೆ ಆಗಿರುವ ನೀರಾವರಿ ಪ್ರದೇಶ ಎಷ್ಟು? ಎಷ್ಟು ಯೋಜನೆಗಳು ಸಫಲವಾಗಿವೆ ಎಂಬ ಮೌಲ್ಯಮಾಪನವೇ ನಡೆದಿಲ್ಲ!

‘ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಇರುವುದು ಅಲ್ಪಸ್ವಲ್ಪ ಜಮೀನು. ಅಂಥವರು ಅರ್ಜಿ ಸಲ್ಲಿಸಿದರೆ ಅವರನ್ನು ಆಯ್ಕೆ ಮಾಡಲೇಬೇಕು. ಒಂದು ಕೊಳವೆಬಾವಿಯಿಂದ ಇನ್ನೊಂದು ಕೊಳವೆಬಾವಿಗೆ ಇಂತಿಷ್ಟು ಅಂತರ ಇರಬೇಕು ಎಂಬ ನಿಯಮ ಇಲ್ಲಿ ಪಾಲನೆಯಾಗುವುದೇ ಇಲ್ಲ. ಈ ಫಲಾನುಭವಿ ತನ್ನ ಜಮೀನಿನಲ್ಲಿ ಕೊಳವೆಬಾವಿ ಕೊರೆದರೆ ಪಕ್ಕದ ಜಮೀನುಗಳಲ್ಲಿರುವ ಕೊಳವೆಬಾವಿಗಳಿಗೆ ನೀರಿನ ಲಭ್ಯತೆ ಕಡಿಮೆಯಾಗುತ್ತದೆ. ಅಗತ್ಯದಷ್ಟು ನೀರು ದೊರೆಯದ ಕಾರಣ ಎರಡೂ ವಿಫಲವಾಗುತ್ತವೆ. ಅಂತರ್ಜಲ ಕುಸಿತ ಮತ್ತು ಅವೈಜ್ಞಾನಿಕ ನೀತಿ ಈ ಯೋಜನೆಯ ವೈಫಲ್ಯಕ್ಕೆ ಬಹುದೊಡ್ಡ ಕಾರಣ’ ಎನ್ನುತ್ತಾರೆ ಆಳಂದ ಕ್ಷೇತ್ರದ ಮಾಜಿ ಶಾಸಕ ಬಿ.ಆರ್‌.ಪಾಟೀಲ.

‘ಫಲಾನುಭವಿ ಆಯ್ಕೆಯಿಂದ ಹಿಡಿದು ನೀರು ಹರಿಸುವವರೆಗೆ ಎಲ್ಲವೂ ಗೋಲ್‌ಮಾಲ್‌ ಎಂಬಂತಾಗಿದೆ. ಗುತ್ತಿಗೆ ಮಾಫಿಯಾ ದೊಡ್ಡಮಟ್ಟದಲ್ಲಿ ಕೆಲಸ ಮಾಡುತ್ತಿದೆ. ವಿಧಾನಸೌಧದಲ್ಲಿ ಸಚಿವ ಪುಟ್ಟರಂಗಶೆಟ್ಟಿ ಅವರ ಕಚೇರಿ ಸಿಬ್ಬಂದಿ ಹಣದೊಂದಿಗೆ ಸಿಕ್ಕಿಹಾಕಿಕೊಂಡಿದ್ದರು. ಇದಕ್ಕೆ ಸರ್ಕಾರ ಮತ್ತು ಗುತ್ತಿಗೆದಾರರ ಮಧ್ಯೆ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ತಿಕ್ಕಾಟವೇ ಕಾರಣ ಎಂಬುದು ಜಗಜ್ಜಾಹೀರಾಗಿದೆ. ಈ ಯೋಜನೆಯೂ ಅದಕ್ಕೆ ಹೊರತಾಗಿಲ್ಲ’ ಎಂದು ರೈತ ಮುಖಂಡ ಮಾರುತಿ ಮಾನ್ಪಡೆ ಹೇಳುತ್ತಾರೆ.

ಇದನ್ನೂ ಓದಿ: ಗಂಗಾ ಕಲ್ಯಾಣ ಯೋಜನೆ ಬಗ್ಗೆ ಜನ ಏಂತಾರೆ

ಘಟಕ ವೆಚ್ಚ ₹4.50 ಲಕ್ಷ

ನಿಗಮಗಳಿಂದ ನೇರವಾಗಿ ಕೊಳವೆಬಾವಿ ಕೊರೆಯುವುದು ಅಥವಾ ತೆರೆದಬಾವಿ ತೋಡಿಸುವುದು. ಅದಕ್ಕೆ ಪಂಪ್‌ ಅಳವಡಿಸಿ ವಿದ್ಯುತ್‌ ಸಂಪರ್ಕ ಕಲ್ಪಿಸಿ, ಫಲಾನುಭವಿಗಳ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದು ಈ ಯೋಜನೆಯ ಉದ್ದೇಶ.

ಬೆಂಗಳೂರು ವಿಭಾಗದಲ್ಲಿ ಘಟಕ ವೆಚ್ಚ ₹4.5 ಲಕ್ಷ ಇದ್ದರೆ, ಉಳಿದ ಜಿಲ್ಲೆಗಳಿಗೆ ₹3.50 ಲಕ್ಷ ಇದೆ. ಈ ವೆಚ್ಚವನ್ನು ಸರ್ಕಾರವೇ ಭರಿಸುತ್ತಿದ್ದು, ಇದರಲ್ಲಿ ₹50 ಸಾವಿರವನ್ನು ಫಲಾನುಭವಿ 10 ಅರ್ಧ ವಾರ್ಷಿಕ ಕಂತುಗಳಲ್ಲಿ ನಿಗಮಗಳಿಗೆ ಮರುಪಾವತಿಸಬೇಕು. ಇದಕ್ಕೆ ಶೇಕಡ 6ರ ಬಡ್ಡಿ ದರ ವಿಧಿಸಲಾಗುತ್ತದೆ.

‘ಆಮೂಲಾಗ್ರ ಬದಲಾವಣೆ ತರುತ್ತಿದ್ದೇವೆ’

ಗಂಗಾ ಕಲ್ಯಾಣ ಯೋಜನೆಯಡಿ ಒಂದು ಕ್ಷೇತ್ರದಲ್ಲಿ ವರ್ಷಕ್ಕೆ 4–5 ಫಲಾನುಭವಿಗಳಿಗಷ್ಟೇ ಪ್ರಯೋಜನ ದೊರೆಯುತ್ತಿತ್ತು. ವಿಶೇಷ ಘಟಕ ಮತ್ತು ಗಿರಿಜನ ಉಪ ಯೋಜನೆ (ಎಸ್‌ಸಿಪಿ, ಟಿಎಸ್‌ಪಿ) ಕಾಯ್ದೆ ಜಾರಿಯಾದ ನಂತರ ಹೆಚ್ಚಿನ ಫಲಾನುಭವಿಗಳಿಗೆ ಪ್ರಯೋಜನ ಸಿಗುತ್ತಿದೆ.

ರಾಜ್ಯಮಟ್ಟದ ಬದಲು ವಿಭಾಗಾವಾರು ಟೆಂಡರ್‌ ಪ್ರಕ್ರಿಯೆ ನಡೆಸುತ್ತಿದ್ದೇವೆ. ಕಳಪೆ ಪಂಪ್‌, ಉಪಕರಣ ಪೂರೈಕೆಗೆ ಕಡಿವಾಣ ಹಾಕಿದ್ದೇವೆ. ‘ನೀರು ಲಭ್ಯವಾಗದಿದ್ದರೆ ಹಣ ಪಾವತಿ ಇಲ್ಲ’ ನೀತಿ ಜಾರಿಗೊಳಿಸಿದ್ದೇವೆ. ಪಂಪ್ ಅಳವಡಿಸಿ ವರ್ಷ ಗತಿಸಿದರೂ ವಿದ್ಯುತ್‌ ಸಂಪರ್ಕ ಕಲ್ಪಿಸುತ್ತಿರಲಿಲ್ಲ. ಇದನ್ನು ಬದಲಿಸಿ ತಕ್ಷಣವೇ ವಿದ್ಯುತ್‌ ಸಂಪರ್ಕ ಕಲ್ಪಿಸುವ ನೀತಿ ಜಾರಿಗೆ ತರುತ್ತಿದ್ದೇವೆ.

ಭೂ ಒಡೆತನ ಯೋಜನೆಯಲ್ಲಿ ಭೂಮಿ ಪಡೆದುಕೊಳ್ಳುವ ಎಲ್ಲ ಫಲಾನುಭವಿಗಳಿಗೂ ಗಂಗಾ ಕಲ್ಯಾಣ ಯೋಜನೆಯಡಿ ನೀರಾವರಿ ಸೌಲಭ್ಯ ದೊರೆಯಬೇಕು. ಕೃಷಿ–ತೋಟಗಾರಿಕೆ ಇಲಾಖೆಗಳಿಂದ ಹನಿ–ತುಂತುರು ನೀರಾವರಿ ಸೌಲಭ್ಯವನ್ನೂ ಅವರು ಪಡೆಯಬಹುದಾಗಿದೆ. ಭೂಮಿ ಜತೆ ನೀರಾವರಿ ಸೌಲಭ್ಯವನ್ನೂ ಕಲ್ಪಿಸಿಕೊಡುವ ಸಮಗ್ರ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದ್ದೇವೆ.

–ಪ್ರಿಯಾಂಕ್‌ ಖರ್ಗೆ, ಸಮಾಜ ಕಲ್ಯಾಣ ಸಚಿವ

ಏನು ಆಗಬೇಕು?

*ಕಾಲಮಿತಿಯಲ್ಲಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು.

*ಅಂತರ್ಜಲ ಗಣನೀಯವಾಗಿ ಕುಸಿದಿರುವೆಡೆ ಕೊಳವೆಬಾವಿ ಕೊರೆಯುವುದನ್ನು ಬಿಟ್ಟು ಪರ್ಯಾಯ ಮಾರ್ಗೋಪಾಯ ಕಂಡುಕೊಳ್ಳಬೇಕು.

*ಯೋಜನೆ ಆರಂಭವಾದಾಗಿನಿಂದ ಈ ವರೆಗಿನ ಸಾಫಲ್ಯತೆಯ ಬಗ್ಗೆ ಸಮೀಕ್ಷೆ ನಡೆಯಬೇಕು.

*ಫಲಾನುಭವಿಗಳ ಆಯ್ಕೆ ಹೊಣೆಯನ್ನು ಶಾಸಕರ ಬದಲು ಸಮಿತಿಗೆ ವಹಿಸಬೇಕು.

*ಅರ್ಜಿ ಸಲ್ಲಿಸಿ ಕಾಯುತ್ತಿರುವ ರೈತರ ಪಟ್ಟಿ ಮಾಡಿ, ಹಿರಿತನದ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಸಬೇಕು.

*ಪ್ರತಿ ಹಂತದಲ್ಲೂ ಪಾರದರ್ಶಕತೆ ಇರಬೇಕು.

*ಎಸ್‌ಸಿ, ಎಸ್‌ಟಿ ಜನಾಂಗದವರ ಕಲ್ಯಾಣಕ್ಕಾಗಿ ಸಾಕಷ್ಟು ಹಣವಿದ್ದು, ಇಂತಹ ರೈತರಿಗೆ ಒಂದೇ ಬಾರಿಗೆ ಅರ್ಜಿ ಆಹ್ವಾನಿಸಿ ಒಂದೆರಡು ವರ್ಷಗಳಲ್ಲಿ ಅವರ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕು.

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 2

  Frustrated
 • 3

  Angry

Comments:

0 comments

Write the first review for this !