ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರವಿ ಪೂಜಾರಿ ಸಹಚರರಿಗಾಗಿ ಶೋಧ; ಕನ್ನಡ ಬರಲ್ಲ ಎಂದು ನ್ಯಾಯಾಲಯದಲ್ಲಿ ಹೇಳಿದ ಪಾತಕಿ

26 ವರ್ಷಗಳ ಬಳಿಕ ಸೆರೆ l ಅಜ್ಞಾತ ಸ್ಥಳದಲ್ಲಿ ವಿಚಾರಣೆ
Last Updated 24 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು:ಭೂಗತ ಪಾತಕಿ ರವಿ ಪೂಜಾರಿಯನ್ನು ನಗರದ ಒಂದನೇ ಎಸಿಎಂಎಂ ನ್ಯಾಯಾಲಯ, ಮಾ.7ರ ವರೆಗೆ ಪೊಲೀಸರ ಕಸ್ಟಡಿಗೆ ನೀಡಿದೆ.

ಸೆನೆಗಲ್ ಪೊಲೀಸರು ಸೆರೆ ಹಿಡಿದಿದ್ದ ಪೂಜಾರಿಯನ್ನು ಸೋಮವಾರ ಬೆಳಿಗ್ಗೆ ಇಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

‘ಮೋಸ್ಟ್ ವಾಂಟೆಡ್’ ಆಗಿರುವ ಭೂಗತ ಪಾತಕಿ ರವಿ ಪೂಜಾರಿಯನ್ನು (59) ಕಸ್ಟಡಿಗೆ ಪಡೆದಿರುವ ಪೊಲೀಸರು, ಅಜ್ಞಾತ ಪ್ರದೇಶದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಆತ ಕಟ್ಟಿರುವ ಗ್ಯಾಂಗ್‌ ರಾಜ್ಯದಲ್ಲಿ ಸಕ್ರಿಯವಾಗಿದ್ದು, ಆತನ ಸಹಚರರ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.

ಮುಂಬೈನಲ್ಲಿ 1994ರಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಪೂಜಾರಿ, ಜಾಮೀನು ಪಡೆದು ಪರಾರಿಯಾಗಿದ್ದ. ಬೆಂಗಳೂರಿನಲ್ಲಿ 2007ರ ಫೆ. 15ರಂದು ಶಬನಂ ಬಿಲ್ಡರ್ಸ್‌ನ ಶೈಲಜಾ ಹಾಗೂ ರವಿ ಹತ್ಯೆ ಆಗಿತ್ತು. ಈ ಪ್ರಕರಣದಲ್ಲಿ ಆರೋಪಿಯಾಗಿದ್ದ ರವಿ ಪೂಜಾರಿ ಬಂಧನಕ್ಕೆ ‘ರೆಡ್ ಕಾರ್ನರ್’ ನೋಟಿಸ್‌ ಹೊರಡಿಸಲಾಗಿತ್ತು.

ಆ ಬಗ್ಗೆ ಮಾಹಿತಿ ಹೊಂದಿದ್ದ ಇಂಟರ್‌ಪೋಲ್‌ ಹಾಗೂ ಸೆನೆಗಲ್ ಪೊಲೀಸರು, ರವಿ ಪೂಜಾರಿ ಮೇಲೆ ನಿಗಾ ಇಟ್ಟಿದ್ದರು. 2019ರ ಜನವರಿ 19ರಂದು ಸಲೂನ್‌ನಲ್ಲಿ ಕೊದಲಿಗೆ ಬಣ್ಣ ಹಾಕಿಸಿಕೊಳ್ಳುತ್ತಿದ್ದ ವೇಳೆಯಲ್ಲೇ ಆತನನ್ನು ಬಂಧಿಸಿದ್ದರು. ಅಂದಿನಿಂದಲೇ ಆತ ನ್ಯಾಯಾಂಗ ಬಂಧನದಲ್ಲಿದ್ದ.

2018ರ ಜುಲೈನಲ್ಲಿ ಪೂಜಾರಿ ಪತ್ತೆ ಜವಾಬ್ದಾರಿ ವಹಿಸಿಕೊಂಡಿದ್ದ ಎಡಿಜಿಪಿ ಅಮರ್‌ ಕುಮಾರ್ ಪಾಂಡೆ ನೇತೃತ್ವದ ತಂಡ ಸೆನೆಗಲ್‌ಗೆ ಹೋಗಿತ್ತು. ‘ನನ್ನನ್ನು ಭಾರತಕ್ಕೆ ಹಸ್ತಾಂತರಿಸಬೇಡಿ’ ಎಂದು ಪೂಜಾರಿ ಅಲ್ಲಿಯ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ಇದೇ ಫೆ. 19ರಂದು ಅರ್ಜಿ ತಿರಸ್ಕೃತಗೊಂಡಿತ್ತು. ‘ಪೂಜಾರಿಯನ್ನು ಭಾರತಕ್ಕೆ ಗಡಿಪಾರು ಮಾಡಿ’ ಎಂದು ಕೋರ್ಟ್ ಆದೇಶಿಸಿತ್ತು.

ಫೆ. 22ರಂದು ಪೂಜಾರಿಯನ್ನು ಗಡಿಪಾರು ಮಾಡಿ ರಾಜ್ಯ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಪಾಂಡೆ, ಸಿಸಿಬಿಯ ಜಂಟಿ ಕಮಿಷನರ್ ಸಂದೀಪ್ ಪಾಟೀಲ, ಇನ್‌ಸ್ಪೆಕ್ಟರ್ ಸಿದ್ದಪ್ಪ ಬೊಳೆತ್ತಿನ್ ಹಾಗೂ ಹೆಡ್‌ ಕಾನ್‌ಸ್ಟೆಬಲ್ ಜಯಪ್ರಕಾಶ್ ನೇತೃತ್ವದ ತಂಡ, ಪೂಜಾರಿಯನ್ನು ಭಾನುವಾರ ರಾತ್ರಿ ನಗರಕ್ಕೆ ಕರೆತಂದಿದೆ.

ಪೂಜಾರಿ ಗ್ಯಾಂಗ್ ಸಕ್ರಿಯ: ‘ರಾಜ್ಯದಲ್ಲಿ ತನ್ನದೇ ಸಹಚರರ ಗ್ಯಾಂಗ್ ಕಟ್ಟಿಕೊಂಡಿರುವ ಪಾತಕಿ, ಅವರ ಮೂಲಕವೇ ಸ್ಥಳೀಯ ಬೆಳವಣಿಗೆಗಳ ಮಾಹಿತಿ ಪಡೆಯುತ್ತಿದ್ದ. ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆ ಆಗುತ್ತಿದ್ದ ವಿಷಯಗಳನ್ನೂ ತಿಳಿದುಕೊಳ್ಳುತ್ತಿದ್ದ’ ಎಂದುಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಮರ್ ಕುಮಾರ್ ಪಾಂಡೆ ‘ಪತ್ರಿಕಾಗೋಷ್ಠಿ’ಯಲ್ಲಿ ಹೇಳಿದರು.

‘ನಟ–ನಟಿಯರು, ನಿರ್ಮಾಪಕರು, ಉದ್ಯಮಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು, ವೈದ್ಯರು ಹಾಗೂ ರಾಜಕಾರಣಿಗಳಿಗೂ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟು ಕೊಲ್ಲುವುದಾಗಿ ಬೆದರಿಸುತ್ತಿದ್ದ. ಮಹಾರಾಷ್ಟ್ರ, ಕೇರಳ ಹಾಗೂ ಗುಜರಾತ್‌ನಲ್ಲೂ ಆರೋಪಿ ವಿರುದ್ಧ ಪ್ರಕರಣಗಳಿವೆ’ ಎಂದರು.

‘ನೇಪಾಳದ ಮೂಲಕ ಪರಾರಿ: ‘1994ರಲ್ಲಿ ಸಹಚರರ ಸಮೇತ ದೇಶದಿಂದ ಪರಾರಿಯಾಗಿದ್ದ ಪೂಜಾರಿ, ನೇಪಾಳಕ್ಕೆ ಹೋಗಿದ್ದ. ಮೈಸೂರು ನಿವಾಸಿ ಎಂದು ಹೇಳಿಕೊಂಡು ಏಜೆಂಟನ ಮೂಲಕ ನಕಲಿ ಪಾಸ್‌ಪೋರ್ಟ್‌ ಪಡೆದು, ಅಲ್ಲಿಂದ ಬ್ಯಾಂಕಾಕ್‌ಗೆ ಹೋಗಿದ್ದ. ನಂತರ, ಉಗಾಂಡಕ್ಕೆ ವಾಸ್ತವ್ಯ ಬದಲಿಸಿದ್ದ. ಅಲ್ಲಿಂದ ಬುರ್ಕಿನಾ ಫಾಸೊ ದೇಶಕ್ಕೆ ಹೋಗಿ 12 ವರ್ಷ ನೆಲೆಸಿದ್ದ. ನಾಲ್ಕು ವರ್ಷಗಳ ಹಿಂದಷ್ಟೇ ಸೆನೆಗಲ್ ದೇಶಕ್ಕೆ ವಾಸ್ತವ್ಯ ಬದಲಿಸಿದ್ದ’ ಎಂದು ಪಾಂಡೆ ವಿವರಿಸಿದರು.

ಕ್ರಿಶ್ಚಿಯನ್ ಆಗಿ ಹೆಸರು ಬದಲಾವಣೆ:

ರವಿ ಪೂಜಾರಿ,ಭೂಗತ ಪಾತಕಿ ಛೋಟಾ ರಾಜನ್ ಸಹಚರ. ಪೂಜಾರಿ ಹೆಸರನ್ನು ‘ತನೀಫ್ ಫರ್ನಾಂಡೀಸ್’ ಎಂದು ರಾಜನ್‌ ಬದಲಿಸಿದ್ದ. ಬುರ್ಕಿನಾ ಫಾಸೊದೇಶದಲ್ಲಿ ನೆಲೆಸಿದ್ದ ಪೂಜಾರಿ, ‘ಅಂಥೋನಿ ಫರ್ನಾಂಡೀಸ್’ ಆಗಿ ಬದಲಾಗಿದ್ದ. ಸೆನೆಗಲ್‌ನಲ್ಲೂ ‘ರಾಕಿ ಫರ್ನಾಂಡೀಸ್‌’ ಆಗಿ ಹೆಸರು ಬದಲಾಯಿಸಿಕೊಂಡಿದ್ದ’ ಎಂದು ಪಾಂಡೆ ಹೇಳಿದರು.

ಪೂಜಾರಿ ನೋಡಿ ಆಶ್ಚರ್ಯ: ‘ಪೂಜಾರಿ ಫೋಟೊವನ್ನು ಮಾಧ್ಯಮಗಳಲ್ಲಿ ನೋಡಿದ್ದೆ. ಆತನನ್ನು ನೇರವಾಗಿ ನೋಡಿದಾಗ, ‘ಇವನೇನಾ ಅಂಡರ್‌ವರ್ಲ್ಡ್ ಡಾನ್ ಹಾಗೂ ಗ್ಯಾಂಗ್‌ಸ್ಟರ್ ರವಿ ಪೂಜಾರಿ’ ಎಂದು ಆಶ್ಚರ್ಯ ಆಯಿತು. 26 ವರ್ಷಗಳ ನಂತರ ಆತನನ್ನು ಕಸ್ಟಡಿಗೆ ಪಡೆದು ರಾಜ್ಯಕ್ಕೆ ಕರೆತಂದಿದ್ದಕ್ಕೆ ಹೆಮ್ಮೆ ಅನಿಸುತ್ತಿದೆ’ ಎಂದು ಪಾಂಡೆ ಹೇಳಿದರು.

ತನಿಖೆಗೆ ವಿಶೇಷ ತಂಡ: ‘ರವಿ ಪೂಜಾರಿ ಭಾಗಿಯಾಗಿರುವ 97 ಪ್ರಕರಣಗಳ ತನಿಖೆಗಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ವಿಶೇಷ ತಂಡವೊಂದನ್ನು ರಚಿಸಿದ್ದಾರೆ’ ಎಂದು ಸಿಸಿಬಿಯ ಜಂಟಿ ಕಮಿಷನರ್ ಸಂದೀಪ್ ಪಾಟೀಲ ಹೇಳಿದರು.

‘ಯಶಸ್ವಿ ಉದ್ಯಮಿ; ದಾನಶೂರ

‘ಟೆಕ್ಸ್‌ಟೈಲ್ಸ್ ಹಾಗೂ ಎಲೆಕ್ಟ್ರಾನಿಕ್ ಉತ್ಪನ್ನಗಳ ಮಾರಾಟ ಕಂಪನಿ ನಡೆಸುತ್ತಿದ್ದ ಪೂಜಾರಿ, ಯಶಸ್ವಿ ಉದ್ಯಮಿ ಎನಿಸಿಕೊಂಡಿದ್ದ. ಸೆನೆಗಲ್‌ನಲ್ಲಿ ‘ಮಹಾರಾಜ್’ ಭಾರತೀಯ ಹೋಟೆಲ್‌ ಪಾಲುದಾರನೂ ಆಗಿದ್ದ’ ಎಂದು ಪಾಂಡೆ ಹೇಳಿದರು.

‘ನವರಾತ್ರಿ ಹಬ್ಬದಂದು ಸ್ಥಳೀಯ ಜನರಿಗೆ ಉಡುಗೊರೆ ನೀಡುತ್ತಿದ್ದ ಪೂಜಾರಿ, ದಾನಶೂರ ಸಮಾಜಸೇವಕ ಆಗಿ ಹೆಸರು ಮಾಡಿದ್ದ. ಸೆನೆಗಲ್‌ನ ಹಲವು ಗ್ರಾಮಗಳಲ್ಲಿ ತನ್ನದೇ ಹಣದಲ್ಲಿ ಬೋರ್‌ವೆಲ್‌ ಕೊರೆಸಿದ್ದ’ ಎಂದರು.

ಅಮೆರಿಕಕ್ಕೂ ಹೋಗಿ ಬರುತ್ತಿದ್ದ

‘ಅಮೆರಿಕ, ಮಲೇಷಿಯಾ, ಇಂಡೋನೇಷ್ಯಾ ಹಾಗೂ ಇತರೆ ದೇಶಗಳಿಗೆ ಪೂಜಾರಿ ಹೋಗಿ ಬರುತ್ತಿದ್ದ. ಬುರ್ಕಿನಾ ಫಾಸೊ ದೇಶದ ಪಾಸ್‌ಪೋರ್ಟ್‌ನ ಹಾಳೆಗಳು ಭರ್ತಿ ಆಗಿದ್ದವು. ಮತ್ತೊಂದು ಪಾಸ್‌ಪೋರ್ಟ್‌ ಸಹ ಪೂಜಾರಿ ಪಡೆದಿದ್ದ. ಎರಡೂ ಪಾಸ್‌ಪೋರ್ಟ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪಾಂಡೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT