ಬುಧವಾರ, ಮಾರ್ಚ್ 3, 2021
30 °C

ಗೌರಿ ಲಂಕೇಶ್ ಹತ್ಯೆ; 16ನೇ ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ 16ನೇ ಆರೋಪಿಯನ್ನಾಗಿ ಮಹಾರಾಷ್ಟ್ರದ ಶರದ್‌ ಕಲಾಸ್ಕರ್‌ನನ್ನು ಎಸ್‌ಐಟಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ವಿಚಾರವಾದಿ ಗೋವಿಂದ್ ಪಾನ್ಸರೆ ಹತ್ಯೆ ಸಂಬಂಧ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಅಧಿಕಾರಿಗಳು ವೈಭವ್ ರಾವತ್, ಸುಧನ್ವಾ ಗೊಂಧಲೇಕರ್ ಹಾಗೂ ಶರದ್‌ ಕಲಾಸ್ಕರ್‌ನನ್ನು ಕೆಲವು ದಿನಗಳ ಹಿಂದಷ್ಟೇ ಬಂಧಿಸಿದ್ದರು. ಅವರಿಂದ ಪಿಸ್ತೂಲ್‌ಗಳನ್ನೂ ಜಪ್ತಿ ಮಾಡಿದ್ದರು. ಗೌರಿ ಹತ್ಯೆಗೆ ಬಳಸಿದ್ದ ಪಿಸ್ತೂಲ್‌ ಎಲ್ಲಿದೆ ಎಂಬುದು ಶರದ್‌ ಗೊತ್ತಿದೆ ಎನ್ನಲಾಗಿದೆ.

ಆ ಸಂಬಂಧ ಪುರಾವೆ ಕಲೆಹಾಕಿರುವ ಎಸ್‌ಐಟಿ ಪೊಲೀಸರು, ಮಹಾರಾಷ್ಟ್ರ ನ್ಯಾಯಾಲಯದ ಅನುಮತಿ ಪಡೆದು ಬಾಡಿ ವಾರಂಟ್‌ ಮೂಲಕ ಶರದ್‌ನನ್ನು ವಶಕ್ಕೆ ಪಡೆದು ಗುರುವಾರ ನಗರದ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

‘ಗೌರಿ ಹತ್ಯೆಗೆ ಸಂಚು ರೂಪಿಸಿದ್ದ ಆರೋಪಿಗಳು, ಪಿಸ್ತೂಲ್ ಒದಗಿಸುವ ಹಾಗೂ ಅದನ್ನು ವಿಲೇವಾರಿ ಮಾಡುವ ಜವಾಬ್ದಾರಿಯನ್ನು ಶರದ್‌ಗೆ ಕೊಟ್ಟಿದ್ದರು. ಪಿಸ್ತೂಲ್ ಸಹ ಆತನ ಬಳಿಯೇ ಇದೆ ಎಂಬುದಕ್ಕೆ ಪುರಾವೆಗಳಿವೆ. ಅದನ್ನು ಆಧರಿಸಿ ಆತನನ್ನು ಬಂಧಿಸಿದ್ದೇವೆ. ಆತನನ್ನು ಮತ್ತಷ್ಟು ದಿನ ವಿಚಾರಣೆಗೆ ಒಳಪಡಿಸಬೇಕು. ಹೀಗಾಗಿ, ನಮ್ಮ ಕಸ್ಟಡಿಗೆ ನೀಡಬೇಕು’ ಎಂದು ಎಸ್‌ಐಟಿ ಅಧಿಕಾರಿಗಳು, ನ್ಯಾಯಾಲಯಕ್ಕೆ ಮನವಿ ಮಾಡಿದರು.

ನ್ಯಾಯಾಲಯ, ಶರದ್‌ನನ್ನು 20 ದಿನಗಳವರೆಗೆ ಎಸ್‌ಐಟಿ ಕಸ್ಟಡಿಗೆ ಒಪ್ಪಿಸಿತು.

ಎಸ್‌ಐಟಿ ಕಸ್ಟಡಿಗೆ ಸುಧನ್ವಾ: ಎಸ್‌ಐಟಿ ಕಸ್ಟಡಿಯಲ್ಲಿದ್ದ ಸುಧನ್ವಾ ಗೊಂಧಲೇಕರ್‌ನನ್ನು ಸಹ ವಿಶೇಷ ನ್ಯಾಯಾಲಯಕ್ಕೆ ಗುರುವಾರ ಹಾಜರುಪಡಿಸಲಾಯಿತು.

‘ಬಾಡಿ ವಾರಂಟ್ ಮೂಲಕ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯದ ಅನುಮತಿಯಂತೆ 15 ದಿನ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದೇವೆ. ಇನ್ನಷ್ಟು ಮಾಹಿತಿ ಆತನಿಂದ ಪಡೆಯಬೇಕಿದ್ದು, ಕಸ್ಟಡಿ ಅವಧಿ ವಿಸ್ತರಣೆ ಮಾಡಬೇಕು’ ಎಂದು ಎಸ್‌ಐಟಿ ಅಧಿಕಾರಿಗಳು, ನ್ಯಾಯಾಲಯವನ್ನು ಕೋರಿದರು.

ನ್ಯಾಯಾಲಯ, 10 ದಿನಗಳವರೆಗೆ ಸುಧನ್ವಾನನ್ನು ಎಸ್ಐಟಿ ಕಸ್ಟಡಿಗೆ ನೀಡಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು