ಶನಿವಾರ, ಮಾರ್ಚ್ 6, 2021
31 °C
ಆಸ್ತಿ ಮಾಹಿತಿ ವ್ಯವಸ್ಥೆ: ರಾಜ್ಯ ಸಚಿವ ಸಂಪುಟ ಒಪ್ಪಿಗೆ

ಸ್ಥಳೀಯ ಸಂಸ್ಥೆಗಳಲ್ಲಿ ಜಿಐಎಸ್‌ ವ್ಯವಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್‌) ಆಧಾರಿತ ಆಸ್ತಿ ಮಾಹಿತಿ ವ್ಯವಸ್ಥೆ ಜಾರಿಗೊಳಿಸಲು ರಾಜ್ಯ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದೆ.

‘ಬಿಬಿಎಂಪಿ ಹಾಗೂ ಕೆಲವು ಸ್ಥಳೀಯ ಸಂಸ್ಥೆಗಳಲ್ಲಿ ಇದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿತ್ತು. ಅದು ಅತ್ಯುತ್ತಮ ಫಲಿತಾಂಶ ನೀಡಿದೆ. ಹೀಗಾಗಿ, ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ವಿಸ್ತರಿಸಲು ನಿರ್ಧರಿಸಲಾಗಿದೆ’ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂಪುಟದ ಪ್ರಮುಖ ನಿರ್ಧಾರಗಳು:

* ದಕ್ಷಿಣ ಕನ್ನಡ ಜಿಲ್ಲೆಯ ಕುಳಾಯಿಯಲ್ಲಿ ₹196.50 ಕೋಟಿ ವೆಚ್ಚದಲ್ಲಿ ಮೀನುಗಾರಿಕಾ ಬಂದರು ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ. ಇದಕ್ಕೆ ಕೇಂದ್ರ ಬಂದರು ಸಚಿವಾಲಯ ₹98.40 ಕೋಟಿ, ಎನ್‌ಎಂಪಿಟಿ ₹88.40 ಕೋಟಿ ಹಾಗೂ ರಾಜ್ಯ ಸರ್ಕಾರ ₹9.82 ಕೋಟಿ ಭರಿಸಲಿವೆ.

* ರಾಜ್ಯದ ನಗರ ಪ್ರದೇಶಗಳಲ್ಲಿ ₹17.50 ಕೋಟಿ ವೆಚ್ಚದಲ್ಲಿ 250 ಅಂಗನವಾಡಿ ಕೇಂದ್ರಗಳನ್ನು ಆರಂಭಿಸಲು ಒಪ್ಪಿಗೆ.

* ಹಾಸನ ವೈದ್ಯಕೀಯ ಸಂಸ್ಥೆಯ ಆವರಣದಲ್ಲಿ ₹141.20 ಕೋಟಿ ವೆಚ್ಚದಲ್ಲಿ 450 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ.

* ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಮಹಿಳಾ ಸದಸ್ಯರ ನೇಮಕಕ್ಕೆ ಒಪ್ಪಿಗೆ.

* ಶೂನ್ಯ ಬಂಡವಾಳ ಕೃಷಿಗೆ ₹50 ಕೋಟಿ.

* ಪ್ರತ್ಯೇಕ ಹುಬ್ಬಳ್ಳಿ–ಧಾರವಾಡ ನಗರ ಸಾರಿಗೆ ಸೇವೆ ರಚನೆ. ಅದಕ್ಕೆ ₹35 ಕೋಟಿ ಮಂಜೂರು.

ಡಿಸೆಂಬರ್‌ನಲ್ಲಿ ಬೆಳಗಾವಿ ಅಧಿವೇಶನ

ಡಿಸೆಂಬರ್‌ ಮೊದಲ ಅಥವಾ ಎರಡನೇ ವಾರದಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ 10 ದಿನಗಳ ಅಧಿವೇಶನ ನಡೆಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ದಿನ ನಿಗದಿಯ ಹೊಣೆಯನ್ನು ಮುಖ್ಯಮಂತ್ರಿ ಅವರಿಗೆ ಬಿಡಲಾಗಿದೆ.

ಬಡ್ತಿ ಮೀಸಲಾತಿ: ಮತ್ತೆ ಕಾಯಲು ನಿರ್ಧಾರ

ಹಿಂಬಡ್ತಿಗೆ ಗುರಿಯಾಗಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರಿಗೆ ಸಮಾನಾಂತರ ಹುದ್ದೆ ಕಲ್ಪಿಸಿ, ನ್ಯಾಯ ಕೊಡಿಸುವ ಬಡ್ತಿ ಮೀಸಲಾತಿ ಕಾಯ್ದೆಯನ್ನು ಸದ್ಯಕ್ಕೆ ಜಾರಿಗೊಳಿಸದಿರಲು ಸಚಿವ ಸಂಪುಟ ನಿರ್ಧರಿಸಿದೆ.

ಈ ವಿಷಯದ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಅನೌಪಚಾರಿಕ ಚರ್ಚೆ ನಡೆಯಿತು. ಆದಷ್ಟು ಬೇಗ ಬಡ್ತಿ ಮೀಸಲಾತಿ ಕಾಯ್ದೆ ಜಾರಿಗೊಳಿಸಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಪಟ್ಟು ಹಿಡಿದರು.

‘ಕಳೆದ ಮೂರು ದಿನಗಳಿಂದ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಸರ್ಕಾರದ ಪ್ರತಿ ನಿರ್ಧಾರದ ಬಗ್ಗೆ ‍ಪ್ರತಿವಾದಿಗಳು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡುತ್ತಿದ್ದಾರೆ. ಒಂದು ವೇಳೆ ತರಾತುರಿಯಲ್ಲಿ ಜಾರಿಗೊಳಿಸಿದರೆ ಇಕ್ಕಟ್ಟಿಗೆ ಸಿಲುಕಬೇಕಾಗುತ್ತದೆ. ಈಗಿನ ವಿಚಾರಣೆ ಮುಗಿಯ ವರೆಗೆ ಕಾಯೋಣ’ ಎಂದು ಹಿರಿಯ ಸಚಿವರು ಸಲಹೆ ನೀಡಿದರು. ಇದಕ್ಕೆ ಉಳಿದವರು ಸಹಮತ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು