ಸೋಮವಾರ, ಜೂಲೈ 13, 2020
25 °C

200 ದಿನ ಕೆಲಸ ನೀಡಲು ಆಗ್ರಹ

ಪ್ರಾಜವಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿಕಾರ್ಮಿಕರಿಗೆ ವರ್ಷಕ್ಕೆ ತಲಾ 200 ದಿನಗಳ ಕೆಲಸ ಕೊಡಬೇಕು’ ಎಂದು ಆಗ್ರಹಿಸಿ ಜಾಗೃತ ಮಹಿಳಾ ಒಕ್ಕೂಟ ಮತ್ತು ಗ್ರಾಮೀಣ ಕೂಲಿಕಾರರ ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲೆಯ ಹಲವೆಡೆ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

‘ಪ್ರಸ್ತುತ ಕುಟುಂಬಕ್ಕೆ 100 ದಿನಗಳ ಕೆಲಸ ನೀಡಲಾಗುತ್ತಿದೆ. ಇದು ಸಾಲುತ್ತಿಲ್ಲ. ಕೋವಿಡ್–19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬಹಳಷ್ಟು ಮಂದಿ ವಲಸೆ ಕಾರ್ಮಿಕರು ಗ್ರಾಮಗಳಿಗೆ ವಾಪಸಾಗಿದ್ದಾರೆ. ಅವರಿಗೆ ಉದ್ಯೋಗ ಖಾತ್ರಿ ಯೋಜನೆ ಆಸರೆಯಾಗಿದೆ. ಆದರೆ, ಹಲವು ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಜನರ ಹಾಜರಿಯು ಬೇಗನೆ ನೂರು ದಿನಗಳನ್ನು ತಲುಪುತ್ತಿದೆ. ಬೇಡಿಕೆಯು ಹೆಚ್ಚಾಗುತ್ತಿದೆ. ಹೀಗಾಗಿ, ಉದ್ಯೋಗ ಚೀಟಿ ಹೊಂದಿರುವ ಎಲ್ಲರಿಗೂ ತಲಾ 200 ದಿನಗಳ ಉದ್ಯೋಗ ನೀಡಬೇಕು’ ಎಂದು ಆಗ್ರಹಿಸಿದರು.

‘ಪ್ರಸ್ತುತ ನೀಡುತ್ತಿರುವ ₹ 275 ಕೂಲಿಯಲ್ಲಿ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಹೀಗಾಗಿ, ರಾಷ್ಟ್ರೀಯ ಕನಿಷ್ಠ ಕೂಲಿ ₹ 600 ಕೊಡಬೇಕು. ಆಯಾ ಗ್ರಾಮಗಳ ವ್ಯಾಪ್ತಿಯಲ್ಲಿ ಯಾವ್ಯಾವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎನ್ನುವುದು ಗ್ರಾಮಸಭೆಗಳಲ್ಲೇ ನಿರ್ಧಾರವಾಗಬೇಕು. ಜಿಲ್ಲಾ ಅಥವಾ ಹಾಗೂ ತಾಲ್ಲೂಕು ಪಂಚಾಯಿತಿಗಳಿಂದ ಕಾಮಗಾರಿಗಳ ನಿರ್ದೇಶನ ನೀಡುವುದು ಸಮಂಜಸವಲ್ಲ’ ಎಂದು ತಿಳಿಸಿದರು.

‘ದೇಶದಾದ್ಯಂತ ನರೇಗಾ ಹಕ್ಕಿನ ದಿನದ ಅಂಗವಾಗಿ ಹೋರಾಟ ನಡೆಸಲಾಯಿತು. ಈ ಕೂಲಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು ಎನ್ನುವುದು ಸೇರಿದಂತೆ ಹಲವು ಬೇಡಿಕೆಗಳ ಮನವಿಯನ್ನು ಪಿಡಿಒಗಳ ಮೂಲಕ ಪ್ರಧಾನ ಮಂತ್ರಿಗೆ ಸಲ್ಲಿಸಲಾಗಿದೆ’ ಎಂದು ಜಾಗೃತ ಮಹಿಳಾ ಒಕ್ಕೂಟದ ಶಾರದಾ ಗೋಪಾಲ ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.