ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನು ಸಾಗಣೆ ಲಾರಿಗಳಿಗೆ ದಿಢೀರ್ ನಿಷೇಧ, ಗೋವಾ ಪೊಲೀಸರೊಂದಿಗೆ ಚಾಲಕರ ವಾಗ್ವಾದ

ಸರ್ಕಾರದ ವಿರುದ್ಧ ಆಕ್ರೋಶ
Last Updated 27 ಅಕ್ಟೋಬರ್ 2018, 17:02 IST
ಅಕ್ಷರ ಗಾತ್ರ

ಕಾರವಾರ:ಅನುಮತಿ ಇಲ್ಲದೇ ಗೋವಾದಲ್ಲಿ ಮೀನು ಮಾರಾಟ ಮಾಡುವಂತಿಲ್ಲ ಎಂದು ಅಲ್ಲಿನ ಸರ್ಕಾರ ವಿಧಿಸಿರುವ ಷರತ್ತಿನ ತೀವ್ರ ಪರಿಣಾಮ ರಾಜ್ಯದ ಮೀನು ವ್ಯಾಪಾರಿಗಳ ಮೇಲೂ ಆಗಿದೆ. ತಾಲ್ಲೂಕಿನ ಮಾಜಾಳಿ ಬಳಿಯ ಪೋಳೆಂ ಚೆಕ್‌ಪೋಸ್ಟ್‌ನಲ್ಲಿ ಶುಕ್ರವಾರ ಮಧ್ಯರಾತ್ರಿ ಗೋವಾ ಪೊಲೀಸರು 50ಕ್ಕೂ ಹೆಚ್ಚು ಲಾರಿಗಳನ್ನು ತಡೆದು ನಿಲ್ಲಿಸಿದರು. ಇದರ ವಿರುದ್ಧ ಚಾಲಕರು ಪೊಲೀಸರೊಂದಿಗೆ ವಾಗ್ವಾದ ಮಾಡಿದರು.

ಏನೇನು ಷರತ್ತು?: ಗೋವಾದಲ್ಲಿ ಮೀನು ವ್ಯಾಪಾರಿಗಳು ಆಹಾರ ಮತ್ತು ಔಷಧ ಗುಣಮಟ್ಟ ನಿಯಂತ್ರಣ ನಿರ್ದೇಶನಾಲಯದ ಅಡಿಯಲ್ಲಿ ನೋಂದಣಿ ಮಾಡಿಸಿರಬೇಕು. ಗೋವಾ ಪ್ರವೇಶಿಸುವ ಮೀನು ಸಾಗಣೆ ಲಾರಿಯು ಅದು ಹೊರಡುವ ರಾಜ್ಯ ಅಥವಾ ಗೋವಾದ ಆಹಾರ ಮತ್ತು ಔಷಧ ಗುಣಮಟ್ಟ ನಿಯಂತ್ರಣ ನಿರ್ದೇಶನಾಲಯದಿಂದ ಪ್ರಮಾಣ ಪತ್ರ ಪಡೆದಿರಬೇಕು. ಕಡ್ಡಾಯವಾಗಿ ಮುಚ್ಚಿದ ಲಾರಿಯಲ್ಲೇ ಮೀನು ಸಾಗಣೆ ಮಾಡಬೇಕು. ಇದಕ್ಕೆ ಬದ್ಧರಾಗಿಲ್ಲದವರು ರಾಜ್ಯ ಪ್ರವೇಶಿಸಬಾರದು ಎಂದುಸುತ್ತೋಲೆ ಹೊರಡಿಸಿದೆ. ಇದರ ನೇರ ಪರಿಣಾಮ ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ನೂರಾರು ಮತ್ಸ್ಯೋದ್ಯಮಿಗಳ ಮೇಲಾಗಿದೆ.

‘ನಾವು ಹಗಲು ಎರಡು ಸಲ ಮೀನು ಸಾಗಿಸಿದ್ದೇವೆ. ಆದರೆ, ಈಗ ಗೋವಾ ಪೊಲೀಸರು ರಾತ್ರಿ ಎಂಟು ಗಂಟೆಗೆ ತಮಗೆ ಆದೇಶ ಬಂದಿದೆ ಎಂದು ಹೇಳುತ್ತಿದ್ದಾರೆ. ನಮಗೆ ಒಂದು ದಿನ ಮೊದಲು ತಿಳಿಸಬೇಕಿತ್ತು. ಕಾಸರಗೋಡು, ಮಂಗಳೂರು, ಮಲ್ಪೆ, ಉಡುಪಿ, ಭಟ್ಕಳ, ಸಮೀಪದ ಕಾರವಾರದಿಂದ ಬಂದಿದ್ದೇವೆ. ಈಗ ವಾಪಸ್ ಹೋಗುವುದಾದರೂ ಹೇಗೆ? 24 ತಾಸುಗಳಲ್ಲಿ ಅವುಗಳ ವಿಲೇವಾರಿ ಆಗದಿದ್ದರೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತದೆ’ ಎಂದು ಲಾರಿ ಚಾಲಕ, ಉಡುಪಿಯಗಣೇಶ ಆಕ್ರೋಶ ವ್ಯಕ್ತಪಡಿಸಿದರು.

ಗೋವಾದ ಅಧಿಕಾರಿಗಳು ಬಂದು ತಮಗೆ ಅನುಮತಿ ನೀಡಬಹುದು ಎಂದು ರಾತ್ರಿ ಮೂರು ಗಂಟೆಯವರೆಗೂ ಕಾದು ಕುಳಿತರೂ ಪ್ರಯೋಜನವಾಗಲಿಲ್ಲ. ಬಳಿಕ ಲಾರಿ ಚಾಲಕರು ವಾಪಸ್ ಪ್ರಯಾಣ ಮಾಡಿದರು.

ಈ ನಡುವೆ, ಸ್ಥಳೀಯ ನಗರ ಸಂಸ್ಥೆಗಳಿಂದ ಅನುಮತಿ ಪಡೆಯದ 33 ಮತ್ಸ್ಯೋದ್ಯಮಿಗಳ ನೋಂದಣಿ ಪ್ರಮಾಣ ಪತ್ರವನ್ನು ಗೋವಾ ಸರ್ಕಾರ ಮಂಗಳವಾರ ರದ್ದು ಮಾಡಿತ್ತು. ಎರಡು ತಿಂಗಳ ಹಿಂದೆ ಉತ್ತರ ಗೋವಾದ ಮಾರುಕಟ್ಟೆಗಳ ಮೀನಿನಲ್ಲಿ ವಿಷಕಾರಿ ಫಾರ್ಮಲಿನ್ ಅಂಶ ಪತ್ತೆಯಾಗಿತ್ತು. ಅದಾದ ಬಳಿಕ ಹೊರ ರಾಜ್ಯಗಳಿಂದ ಮೀನು ಆವಕದ ಮೇಲೆ 15 ದಿನ ನಿಷೇಧ ಹೇರಿ ತೆರವು ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT