ಗೋಕರ್ಣ ದೇವಸ್ಥಾನ ಮಠಕ್ಕೆ ವಹಿಸಲು ಆದೇಶ

7
ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಆಡಳಿತ

ಗೋಕರ್ಣ ದೇವಸ್ಥಾನ ಮಠಕ್ಕೆ ವಹಿಸಲು ಆದೇಶ

Published:
Updated:

ನವದೆಹಲಿ: ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಆಡಳಿತವನ್ನು ಮುಂದಿನ ಸೋಮವಾರದೊಳಗೆ ರಾಮಚಂದ್ರಾಪುರ ಮಠಕ್ಕೆ ವಹಿಸುವಂತೆ ಗುರುವಾರ ರಾಜ್ಯ ಸರ್ಕಾರಕ್ಕೆ ಸೂಚಿಸಿರುವ ಸುಪ್ರೀಂ ಕೋರ್ಟ್‌, ದೇವಸ್ಥಾನದ ಆಭರಣ ಸೇರಿದಂತೆ ಎಲ್ಲ ಚರಾಸ್ತಿ ಮತ್ತು ದಾಖಲೆಗಳನ್ನು ಹಿಂದಿರುಗಿಸುವಂತೆ ಆದೇಶಿಸಿದೆ.

‘ಮುಂದಿನ ಆದೇಶದವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು’ ಎಂಬ ಈ ಹಿಂದಿನ ಆದೇಶದ ಕುರಿತು ಸ್ಪಷ್ಟನೆ ಕೋರಿ ರಾಜ್ಯ ಸರ್ಕಾರದ ವತಿಯಿಂದ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್ ನೇತೃತ್ವದ ಪೀಠ, ಕಳೆದ ಸೆಪ್ಟೆಂಬರ್‌ 7 ಮತ್ತು ಅಕ್ಟೋಬರ್‌ 3ರಂದು ನೀಡಿರುವ ಆದೇಶ ಸ್ಪಷ್ಟವಾಗಿದೆ. ದೇವಸ್ಥಾನದ ಆಡಳಿತವು ಮಠದ ಬಳಿಯೇ ಇರಲಿದೆ. ಹಸ್ತಾಂತರ ಪ್ರಕ್ರಿಯೆ ಸೋಮವಾರದೊಳಗೆ ಪೂರ್ಣಗೊಳ್ಳಬೇಕು ಎಂದು ಹೇಳಿದೆ.

ದೇವಸ್ಥಾನದ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಕಳೆದ ಆಗಸ್ಟ್‌ 30ರಂದೇ ಹಾಲಪ್ಪ ಅವರು ಅಧಿಕಾರ ಸ್ವೀಕರಿಸಿದ್ದು, ಸೆಪ್ಟೆಂಬರ್‌ 7ರ ಆದೇಶದ ಪ್ರಕಾರ ಯಥಾ ಸ್ಥಿತಿ ಕಾಯ್ದುಕೊಳ್ಳಬೇಕಾದರೆ ಅವರೇ ಮುಂದುವರಿಯಲಿದ್ದಾರೆ. ಸೆಪ್ಟೆಂಬರ್‌ 19ರಂದು ಅವರಿಗೆ ಆಭರಣ ಮತ್ತಿತರ ವಸ್ತುಗಳನ್ನು ಮಠವು ಹಸ್ತಾಂತರಿಸಿದ್ದು, ಅವನ್ನು ಹಿಂದಿರುಗಿಸಬೇಕೇ ಎಂದು ಸರ್ಕಾರದ ಪರ ವಕೀಲರಾದ ರಂಜಿತ್‌ಕುಮಾರ್ ಹಾಗೂ ಜೋಸೆಫ್‌ ಅರಿಸ್ಟಾಟಲ್ ನ್ಯಾಯಪೀಠವನ್ನು ಪ್ರಶ್ನಿಸಿದರು.

ಆದರೆ, ಕೋರ್ಟ್‌ ಆದೇಶ ಪಾಲಿಸಲಾಗಿಲ್ಲ ಎಂದು ದೂರಿ ಮಠದ ವತಿಯಿಂದ ಸಾಲಿಸಿಟರ್ ಜನರಲ್‌ ತುಷಾರ್ ಮೆಹ್ತಾ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನೂ ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಎ.ಎಂ. ಖನ್ವಿಲ್ಕರ್ ಹಾಗೂ ಡಿ.ವೈ. ಚಂದ್ರಚೂಡ್ ಅವರಿದ್ದ ಪೀಠವು, ಮುಂದಿನ ಆದೇಶದವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ತಿಳಿಸಿತು.

‘ನಾವು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಗೆ ಬದಲಾಗಿ ಸರ್ಕಾರ ಆದೇಶದ ಸ್ಪಷ್ಟನೆ ಕೋರಿ ಅರ್ಜಿ ಸಲ್ಲಿಸಿತ್ತು. ನ್ಯಾಯಪೀಠವು ದೇವಸ್ಥಾನದ ಆಡಳಿತವನ್ನು ಮಠಕ್ಕೆ ವಹಿಸುವಂತೆ ಮತ್ತೆ ಸ್ಪಷ್ಟಪಡಿಸಿದೆ’ ಎಂದು ಮಠದ ಪರ ವಕೀಲ ಇಜಾಜ್ ಮಕಬೂಲ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿದ್ದ ಮಹಾಬಲೇಶ್ವರ ದೇಗುಲವನ್ನು 2008ರಲ್ಲಿ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿದ್ದು ಕಾನೂನುಬಾಹಿರ’ ಎಂದು ತಿಳಿಸಿದ್ದ ಹೈಕೋರ್ಟ್‌, ಸರ್ಕಾರದ ನಿರ್ಧಾರ ರದ್ದುಪಡಿಸಿ ಕಳೆದ ಆ.10ರಂದು ಆದೇಶ ನೀಡಿತ್ತು. ಇದಕ್ಕೆ ತಡೆ ನೀಡಲು ಸೆ. 7ರ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ನಿರಾಕರಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !