ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿ ಲಂಕೇಶ್ ಹತ್ಯೆ: ಮತ್ತೊಬ್ಬನ ಬಂಧನ

ಜಾರ್ಖಂಡ್‌ ರಾಜ್ಯ ಧನಾಬಾದ್‌ ಜಿಲ್ಲೆಯ ಕತ್ರಾಸ್‌ನಲ್ಲಿ ಎಸ್‌ಐಟಿ ಕಾರ್ಯಾಚರಣೆ
Last Updated 9 ಜನವರಿ 2020, 19:08 IST
ಅಕ್ಷರ ಗಾತ್ರ

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಮತ್ತೊಬ್ಬ ಪ್ರಮುಖ ಆರೋಪಿಯನ್ನು ವಿಶೇಷ ತನಿಖಾ ದಳದ (ಎಸ್‌ಐಟಿ) ಅಧಿಕಾರಿಗಳು ಗುರುವಾರ ಜಾರ್ಖಂಡ್‌ನಲ್ಲಿ ಬಂಧಿಸಿದ್ದಾರೆ.

ಮಹಾರಾಷ್ಟ್ರದ ಋಷಿಕೇಶ್ ದೇವ್ಡೆಕರ್ ಅಲಿಯಾಸ್ ಮುರಳಿ (44) ಬಂಧಿತ ಆರೋಪಿ. ಈತನನ್ನು ಈ ಪ್ರಕರಣದಲ್ಲಿ 18ನೇ ಆರೋಪಿಯಾಗಿ ಹೆಸರಿಸಲಾಗಿದೆ.

ಗೌರಿ ಹತ್ಯೆಯಲ್ಲಿ ಮುರಳಿ ಭಾಗಿಯಾಗಿದ್ದ ಬಗ್ಗೆ ಅಮೋಲ್‌ ಕಾಳೆಯ ಡೈರಿಯಲ್ಲಿ ಸುಳಿವು ಸಿಕ್ಕಿತು. ಎರಡೂವರೆ ವರ್ಷಗಳಿಂದ ಆರೋಪಿ ಬೆನ್ನುಬಿದ್ದಿದ್ದ ಎಸ್‌ಐಟಿ ಅಧಿಕಾರಿಗಳು, ಕೊನೆಗೂ ಆತನನ್ನು ಬಂಧಿಸುವಲ್ಲಿ ಯಶಸ್ಸು ಕಂಡಿದ್ದಾರೆ.

ಗೌರಿ ಅವರ ಹತ್ಯೆಯಲ್ಲಿ ಬಳಸಲಾಗಿದ್ದ ಪಿಸ್ತೂಲ್ ನಾಶಗೊಳಿಸುವಲ್ಲಿ ಮುರಳಿ ಪ್ರಮುಖ ಪಾತ್ರ ವಹಿಸಿದ್ದ. ಈ ಕೃತ್ಯ ಬಯಲಿಗೆ ಬಂದ ಬಳಿಕ ತಲೆಮರೆಸಿಕೊಂಡು ಓಡಾಡುತ್ತಿದ್ದ ಆರೋಪಿ ಸಿಕ್ಕಿಬಿದ್ದಿದ್ದಾನೆ ಎಂದು ಎಸ್‌ಐಟಿ ಅಧಿಕಾರಿಗಳು ತಿಳಿದ್ದಾರೆ.

ಬಲಪಂಥಿಯ ವಿಚಾರಧಾರೆಯನ್ನು ವಿರೋಧಿಸುವವರ ಹತ್ಯೆಗೆ ಸಜ್ಜಾಗಿದ್ದ ತಂಡವನ್ನು ಸಂಘಟಿಸುವ ವಿಷಯದಲ್ಲಿ ಮುರಳಿ ಕೆಲಸ ಮಾಡಿದ್ದ. ಅಲ್ಲದೆ, ಸಂಘಟನೆಗೆ ನೇಮಕಗೊಂಡ ಸದಸ್ಯರಿಗೆ ಶಸ್ತ್ರಾಸ್ತ್ರ ತರಬೇತಿ, ಆರ್ಥಿಕ ನೆರವು ಮತ್ತು ವಸತಿ ಸೌಲಭ್ಯ ಕಲ್ಪಿಸಿಕೊಡಲು ಕೂಡಾ ಈತ ಶ್ರಮಿಸಿದ್ದ ಎನ್ನಲಾಗಿದೆ.

ಜಾರ್ಖಂಡ್ ರಾಜ್ಯದ ಧನಾಬಾದ್‌ ಜಿಲ್ಲೆಯ ಕತ್ರಾಸ್‌ನಲ್ಲಿ ಆರೋಪಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಗುರುವಾರ ಸಂಜೆ ಆತನನ್ನು ಬಂಧಿಸಿದ್ದಾರೆ. ಬಳಿಕ, ಆತನ ನೆಲೆಸಿದ್ದ ಮನೆಯಲ್ಲಿ ಕೂಡಾ ಪರಿಶೀಲನೆ ನಡೆಸಲಾಯಿತು. ಶುಕ್ರವಾರ ನ್ಯಾಯಾಲಯದ ಎದುರು ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆಯಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೈದ್ಧಾಂತಿಕ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ನಡೆದಿದ್ದ ವಿಚಾರವಾದಿಗಳ ಹತ್ಯೆಯಲ್ಲಿ ಮುರಳಿ ಪಾತ್ರ ವಹಿಸಿದ್ದಾನೆ. ಈ ಕೊಲೆ ಕೃತ್ಯಗಳಲ್ಲಿ ಮಹಾರಾಷ್ಟ್ರದ ಅಮೋಲ್ ಕಾಳೆ ಹಾಗೂ ಆತನ ಸಹಚರರು ಬಂಧನವಾದ ವಿಚಾರ ತಿಳಿದ ಮುರಳಿ, ಉತ್ತರ ಭಾರತದಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದ.

ಪೊಲೀಸರು ತನ್ನ ಹಿಂದೆ ಬಿದ್ದಿದ್ದಾರೆ ಎಂದು ಗೊತ್ತಾಗಿದ್ದರಿಂದ ಮತ್ತು ಬಂಧನ ಭೀತಿಯಿಂದ ಆತ, ಒಂದೇ ಕಡೆ ನೆಲೆ ನಿಲ್ಲದೆ ಹಲವು ರಾಜ್ಯಗಳನ್ನು ಸುತ್ತಾಡುತ್ತಿದ್ದ ಎಂದೂ ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT